3

ಅದಿರು ಕಂಪೆನಿ ನೌಕರರ ಹಿಂದಕ್ಕೆ ಕಳುಹಿಸಿದ ಗ್ರಾಮಸ್ಥರು

Published:
Updated:

ಹರಪನಹಳ್ಳಿ: ವಟ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಅದಿರು ಸಾಗಿಸಲು ಮುಂದಾಗಿದ್ದ ಕಾರ್ಮಿಕರಿಗೆ ಗ್ರಾಮಸ್ಥರು ಬೆದರಿಕೆ ಹಾಕಿ, ಮರಳಿ ಕಳಿಸಿದ್ದಾರೆ.ವಟ್ಲಹಳ್ಳಿ ಗ್ರಾಮದ ಕೂಗಳತೆಯಲ್ಲಿರುವ ಬೆಟ್ಟದಲ್ಲಿ ಬಳ್ಳಾರಿಯ ಎರ್ರಿತಾತ ಮೈನಿಂಗ್‌ ಕಂಪೆನಿಗೆ ಮ್ಯಾಂಗನೀಸ್‌ ಅದಿರು ಸಾಗಿಸಲು ಸರ್ಕಾರ ಪರವಾನಗಿ ನೀಡಿದೆ. ಸೋಮವಾರ ಬೆಳಗಿನ ಜಾವ ಕಂಪೆನಿ ನೌಕರರು ಗ್ರಾಮಕ್ಕೆ ಬಂದು,

ಗುಡ್ಡದಲ್ಲಿ ಅದಿರಿನ ನಿಕ್ಷೇಪವಿರುವ ಗಡಿಯನ್ನು ಗುರ್ತಿಸಲು ಮತ್ತು ತಾತ್ಕಾಲಿಕ ಟೆಂಟ್‌ ನಿರ್ಮಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಗ್ರಾಮಸ್ಥರು ಕೆಲಸಕ್ಕೆ ತಡೆಯೊಡ್ಡಿದರು. ‘ಇಲ್ಲಿ ಮೈನಿಂಗ್‌ ಮಾಡಲು ಅವಕಾಶವಿಲ್ಲ. ಅದಿರು ಸಾಗಿಸಲು ಶಾಸಕ, ಸಂಸದ, ಗಣಿ ಸಚಿವರು, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

‘ನೆರೆ ಹಾವಳಿಗೆ ತುತ್ತಾಗಿ ಇಲ್ಲಿಗೆ ವಲಸೆ ಬಂದು ಜೀವನ ಕಟ್ಟಿಕೊಂಡಿದ್ದೇವೆ. ಪರಿಸರ ಮಾಲಿನ್ಯದಿಂದ ಪುನಃ ವಲಸೆ ಹೋಗಲು ಆಗುವುದಿಲ್ಲ. ಭರವಸೆ ನೀಡಿರುವ ಅಧಿಕಾರಿಗಳು, ಶಾಸಕ, ಸಂಸದರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು’ ಎಂದು ಒತ್ತಾಯಿಸಿದ್ದಾರೆ.

ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿದ ಕಾರ್ಮಿಕರು, ಅಧಿಕಾರಿಗಳನ್ನು ಕರೆದುಕೊಂಡು ಬರುವುದಾಗಿ ಹೇಳಿ ಗ್ರಾಮದಿಂದ ನಡೆದರು. ಮುಂಜಾಗ್ರತಾ ಕ್ರಮವಾಗಿ ಹಲವಾಗಲು ಠಾಣೆ ಪೊಲೀಸರು ಬಂದಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ಮುಖಂಡರಾದ ಕಡತಿ ಮಲ್ಲಣ್ಣ, ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜಪ್ಪ, ಮಲ್ಲಿಕಾರ್ಜುನ, ಚಿಕ್ಕಪ್ಪ, ವಾಸಪ್ಪ ರಾಜಕುಮಾರ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry