ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರ‍್ಯಾಲಿ

Last Updated 28 ನವೆಂಬರ್ 2017, 7:31 IST
ಅಕ್ಷರ ಗಾತ್ರ

ಧಾರವಾಡ: ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಸಚಿವರಾದ ವಿನಯ ಕುಲಕರ್ಣಿ ಹಾಗೂ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮಹಾನಗರ ಜಿಲ್ಲಾ ಹಾಗೂ ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರು ರ‍್ಯಾಲಿ ನಡೆಸಿದರು.

ಇಲ್ಲಿನ ಕಡಪಾ ಮೈದಾನದಿಂದ ಆರಂಭವಾದ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಾವಣೆಗೊಂಡಿತು. ‘ಗೂಂಡಾ ಪ್ರವೃತ್ತಿಯ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪುಟದಿಂದ ಕೈಬಿಡವಂತೆ’ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಯೋಗೀಶಗೌಡ ಕೊಲೆ ಆರೋಪದಲ್ಲಿ ತಮ್ಮ ಕೈವಾಡ ಇಲ್ಲ ಎಂಬುದು ಇವರ ವಾದವಾದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಜತೆಗೆ ಸಂಧಾನಕ್ಕೆ ಯತ್ನಿಸಿದ ಡಿವೈಎಸ್‌ಪಿ ತುಳಜಪ್ಪ ಸುಲ್ಫಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಹೀಗಾದಲ್ಲಿ ಮಾತ್ರ ಸತ್ಯ ತಿಳಿಯುತ್ತದೆ’ ಎಂದರು.

‘ಕಿಮ್ಸ್ ಶೂಟೌಟ್ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಯೋಗೀಶಗೌಡ ಗೌಡರ ಪ್ರಕರಣದಲ್ಲಿ ಅನಗತ್ಯವಾಗಿ ಸಂಧಾನಕ್ಕೆ ವಿನಯ ಕುಲಕರ್ಣಿ ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ‌’ ಎಂದರು.

‘ಅತ್ಯಂತ ಕೀಳುಮಟ್ಟದ ಭಾಷೆ ಬಳಸುವ ಇವರು ಎಲ್ಲರಿಗಿಂತ ದೊಡ್ಡವರು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ಅದೃಷ್ಟವಶಾತ್‌ ತಮ್ಮನ್ನು ಸೋನಿಯಾಗಾಂಧಿ ಅವರಿಗಿಂಥ ದೊಡ್ಡವರು ಎಂದು ಹೇಳಿಕೊಂಡಿಲ್ಲ. ಆದರೆ, ರಾಹುಲ್‌ ಗಾಂಧಿಗಿಂತ ನಾಲ್ಕು ಪಟ್ಟು ದೊಡ್ಡವರಂತೆ ಮಾತನಾಡುವ ವಿನಯ ಕುಲಕರ್ಣಿ ‘ದೊಡ್ಡ ಪಪ್ಪು’ ಎಂದು ಛೇಡಿಸಿದರು.

‘ಎಲ್ಲರನ್ನೂ ಏಕವಚನದಲ್ಲೇ ಕರೆದು ಅತ್ಯಂತ ಕೀಳು ಭಾಷೆ ಬಳಸುವ ವಿನಯ ಕುಲಕರ್ಣಿ ಸಭ್ಯತೆ ಹಾಗೂ ಸಂಸ್ಕೃತಿಯನ್ನು ನಂಬಿರುವ ನಮಗೆ ಪಾಠ ಹೇಳುವ ಅಗತ್ಯವಿಲ್ಲ. ಇವರಿಗೆ ಶೀಘ್ರದಲ್ಲಿ ರಾಜಕೀಯ ಹಾಗೂ ಕಾನೂನಿ ಪಾಠ ಕಲಿಸಲಾಗುವುದು’ ಎಂದು ಜೋಷಿ ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ರಾಜಕೀಯದಲ್ಲಿ ಪರ ವಿರೋಧ ಇದ್ದದ್ದೇ. ಆದರೆ, ಅದನ್ನು ದ್ವೇಷ ಸಾಧನೆಗೆ ಬಳಸುವವರು ಈ ಕ್ಷೇತ್ರದಲ್ಲಿ ಮುಂದುವರೆಯಲು ಅನರ್ಹರು’ ಎಂದರು.

‘ತಮಗೆ ಬೇಕಾಗಿರುವ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯ ಸರ್ಕಾರ ತನಿಖೆ ಮಾಡಿಸುವುದೇ ಆದಲ್ಲಿ ಅದು ಸಿಬಿಐನಿಂದ ಆಗಬೇಕು. ಅದಕ್ಕೂ ಮೊದಲು ವಿನಯ ಕುಲಕರ್ಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಯೋಗೀಶಗೌಡ ಕೊಲೆ ನಡೆದ ಅರ್ಧಗಂಟೆಯ ಒಳಗಾಗಿ ಗೃಹ ಸಚಿವರು ಇದೊಂದು ಆಸ್ತಿಗಾಗಿ ನಡೆದ ಕೊಲೆ ಎಂದು ಹೇಳಿಕೆ ನೀಡಿರುವುದರ ಹಿಂದೆ ಯಾರ ಷಡ್ಯಂತ್ರ ಅಡಗಿದೆ ಎಂಬುದನ್ನು ಪತ್ತೆ ಮಾಡಬೇಕು. ಜತೆಗೆ ಕೊಲೆ ಆದ ದಿನದಿಂದ ಸಚಿವರ ಮನೆ ಮುಂದೆ ಭಾರೀ ಪೊಲೀಸ್ ಬಂದೊಬಸ್ತ್‌ ಮಾಡಿದ್ದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದರು.

ಯೋಗೀಶಗೌಡರ ಹಿರಿಯ ಸಹೋದರ ಗುರುನಾಥಗೌಡ ಮಾತನಾಡಿ, ‘ಈ ಹಿಂದೆ, ಕೇಕ್‌ನಲ್ಲಿ ಪಿಸ್ತೂಲ್‌ ಇಟ್ಟು ಕೊಲೆ ಪ್ರಕರಣದ ಆರೋಪಿಗಳ ಹತ್ಯೆಗೆ ಸಂಚು ರೂಪಿಸಿದ್ದೇನೆ ಎಂಬ ಆರೋಪ ಹೊರಿಸಿ ನನ್ನನ್ನು ಆರು ತಿಂಗಳು ಜೈಲಿನಲ್ಲಿ ಇರಿಸಿದ್ದರು. ಅಲ್ಲದೇ, ತಮಗೆ ಎರಡು ಪತ್ರಗಳು ಬಂದಿವೆ ಎಂದು ತಲೆ ಕೆಡಿಸಿಕೊಂಡಿರುವ ವಿನಯ ಕುಲಕರ್ಣಿಗೆ ನಮಗೆ ಬಂದಿರುವ ಹತ್ತಾರು ಪತ್ರಗಳ ವಿಷಯವೇ ತಿಳಿದಿಲ್ಲ’ ಎಂದು ತಮಗೆ ಬಂದಿದ್ದ ಪತ್ರಗಳನ್ನು ತಂದು ಸುರಿದರು.

ಮಾಜಿ ಶಾಸಕರಾದ ಸೀಮಾ ಮಸೂತಿ, ಎಸ್.ಐ. ಚಿಕ್ಕನಗೌಡರ, ವೀರಭದ್ರಪ್ಪ ಹಾಲಹರವಿ, ಶಂಕರಪಾಟೀಲ ಮುನೇನಕೊಪ್ಪ, ಅಶೋಕ ಕಾಟವೆ, ಮುಖಂಡರಾದ ಅಮೃತ ದೇಸಾಯಿ, ಸಂಜಯ ಕಪಟಕರ, ಶಿವು ಹಿರೇಮಠ, ಸಿ.ಎಂ.ಲಿಂಬಣ್ಣವರ, ಶಿವಾನಂದ ಮುತ್ತಣ್ಣವರ, ಎಂ.ನಾಗರಾಜ, ಎಂ.ಆರ್‌.ಪಾಟೀಲ, ಷಣ್ಮುಖ ಗುರಿಕಾರ, ಜಯತೀರ್ಥ ಕಟ್ಟಿ, ಸಂಜಯ ಕಪಟಕರ್‌ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT