7

‘ಇಬ್ಬರು ಸಚಿವರು ರಾಜೀನಾಮೆ ನೀಡಲಿ’

Published:
Updated:

ಹಾವೇರಿ: ‘ಧಾರವಾಡ ಜಿಲ್ಲಾ  ಪಂಚಾಯ್ತಿ ಸದಸ್ಯ ಯೋಗೀಶ ಗೌಡ ಹತ್ಯೆ ಹಾಗೂ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವರಾದ ವಿನಯ ಕುಲಕರ್ಣಿ ಹಾಗೂ ಕೆ.ಜೆ.ಜಾರ್ಜ್‌ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ‘ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಬೇಕು. ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ ಗೌಡ ಅವರನ್ನು ಹಾಡ ಹಗಲಲ್ಲೇ ಹತ್ಯೆ ಮಾಡಲಾಗಿದೆ. ಈ ಪ್ರಕರಣವನ್ನು ಡಿವೈಎಸ್ಪಿ ಮೂಲಕ ಸಂಧಾನ ಮಾಡಲು ಯತ್ನಿಸಿದ ಸಚಿವ ವಿನಯ ಕುಲಕರ್ಣಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಠಿಣ ಕ್ರಮ ಕೈಗೊಳ್ಳದೇ, ಅಶಾಂತಿ ಉಂಟಾಗಲು ಕಾರಣವಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಬರೀ ಕಳಂಚಿತ ಸಚಿವರೇ ಹೆಚ್ಚಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಸಿಬಿಐ ವಿಶೇಷ ತನಿಖಾ ದಳದಿಂದ ತನಿಖೆ ನಡೆಯುತ್ತಿದೆ. ಆದಾಗ್ಯೂ, ಸಚಿವ ಕೆ.ಜೆ.ಜಾರ್ಜ್‌ ಅವರಿಂದ ಮುಖ್ಯಮಂತ್ರಿಗಳು ರಾಜೀನಾಮೆ ಪಡೆಯುತ್ತಿಲ್ಲ’ ಎಂದು ದೂರಿದರು.

ಪ್ರತಿಭಟನಾ ಮೆರವಣಿಗೆ ಪಿ.ಬಿ.ರಸ್ತೆಯ ಜಿಲ್ಲಾ ಕಚೇರಿಯಿಂದ ಆರಂಭವಾಗಿ ಹೊಸಮನಿ ಸಿದ್ಧಪ್ಪ ವೃತ್ತದ ವರೆಗೆ ಬಂತು. ಬಳಿಕ ವೃತ್ತದಲ್ಲಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ಶಿವರಾಜ ಹರಿಜನ, ನಗರಸಭೆ ಸದಸ್ಯರಾದ ನಿರಂಜನ ಹೇರೂರ, ಹನುಮಂತ ರಮೇಶನಾಯಕ ಬಾದಾಮಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಸತೀಶ ಸಂದಿಮನಿ ಹಾಗೂ ಪಕ್ಷದ ಮುಖಂಡರಾದ ಮೋಹನ ನಾಗಮ್ಮನವರ, ಪರಮೇಶಪ್ಪ ಮೇಗಳಮನಿ, ಈರಪ್ಪ ಲಮಾಣಿ, ಕಲ್ಯಾಣಕುಮಾರ ಶೆಟ್ಟರ್, ಸುರೇಶ ಹೊಸಮನಿ, ಶಿವಬಸವ ವನಳ್ಳಿ, ಹನುಮಂತ ಬದಾಮಿ ನಾಯಕ, ಸುರೇಶ ದೊಡ್ಡಮನಿ ಇದ್ದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಎಲ್ಲ ಕಳಂಕಿತ ಸಚಿವರನ್ನು ಕೂಡಲೇ ವಜಾಗೊಳಿಸಬೇಕು

ಶಿವರಾಜ ಸಜ್ಜನರ

ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry