7

ರಸ್ತೆ ನಡುವೆ ತೆರೆದ ಚರಂಡಿ: ಸವಾರರ ಪರದಾಟ

Published:
Updated:
ರಸ್ತೆ ನಡುವೆ ತೆರೆದ ಚರಂಡಿ: ಸವಾರರ ಪರದಾಟ

ಹುಬ್ಬಳ್ಳಿ: ನಗರದ ಕೊಯಿನ್‌ ರಸ್ತೆಯ ‘ಯು’ ಮಾಲ್‌ ಮುಂಭಾಗ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಗಬ್ಬು ನಾರುತ್ತಿದೆ. ತೆರೆದ ಚರಂಡಿ ಸುತ್ತಲೂ ಕಲ್ಲು ಅಥವಾ ಬ್ಯಾರಿಕೇಡ್‌ ಇರಿಸಿ, ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದರಿಂದ ವಾಹನ ಸವಾರರು ಚರಂಡಿಗೆ ಬೀಳುವ ಅಪಾಯ ಎದುರಾಗಿದೆ.

ಅಲ್ಲದೆ, ಜನನಿಬಿಡ ಸ್ಥಳವಾಗಿರುವ ಕೊಯಿನ್‌ ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಾದಚಾರಿಗಳು ಓಡಾಡುತ್ತಾರೆ. ರಾತ್ರಿ ಹೊತ್ತು ರಸ್ತೆ ನಡುವೆ ಇರುವ ತೆರೆದ ಚರಂಡಿಗೆ ಕಾಲು ಜಾರಿ ಬಿದ್ದು, ಸಣ್ಣಪುಟ್ಟ ಗಾಯಮಾಡಿಕೊಂಡಿರುವ ಘಟನೆಗಳು ನಡೆದಿವೆ.

ಕೊಯಿನ್‌ ರಸ್ತೆಯ ಫುಟ್‌ಪಾತ್‌ನಲ್ಲಿ ಪೇವರ್ಸ್ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿಯಲ್ಲಿ ತೊಡಗಿರುವವರು ತೆರೆದ ಚರಂಡಿಯನ್ನು ನೋಡಿಯೂ ನೋಡದಂತೆ ಸುಮ್ಮನಿದ್ದಾರೆ. ಚರಂಡಿಯನ್ನು ಮುಚ್ಚಿ, ಗಲೀಜು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಪೈಪ್‌ಗಳನ್ನು ಸ್ಥಳದಲ್ಲಿ ಹಾಕಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

‘ಅನೇಕ ದಿನಗಳಿಂದ ರಸ್ತೆ ಮಧ್ಯೆ ಬಾಯ್ತೆರೆದಿರುವ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಹತ್ತಿರ ಹೋದರೆ ಸಾಕು ಗಬ್ಬು ನಾರುತ್ತದೆ. ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಎಚ್ಚರಿಕೆಯಿಂದ ಓಡಾಡಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪಾಲಿಕೆ ಅಧಿಕಾರಿಗಳು ಮತ್ತು ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿ ಅದೇ ರಸ್ತೆಯಲ್ಲಿ ಓಡಾಡಿದರೂ ಅದರತ್ತ ಗಮನ ಹರಿಸಿ, ಸರಿ ಮಾಡಿಲ್ಲ. ತಕ್ಷಣ ಚರಂಡಿ ಕಾಮಗಾರಿ ಪೂರ್ಣಗೊಳಿಸಿ ನಾಗರಿಕರು ನಿಶ್ಚಿಂತೆಯಿಂದ ಓಡಾಡಲು ಅನುವು ಮಾಡಿಕೊಡಬೇಕು’ ಎಂದು ಗೋಕುಲ ರೋಡ್‌ ಬಸವೇಶ್ವರ ನಗರ ನಿವಾಸಿ ಸಾವಿತ್ರಿ ಪಾಟೀಲ ಒತ್ತಾಯ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry