7

ಜನರ ಪಾಲಿಗೆ ಇಲ್ಲವಾದ ನಗರಸಭೆ

Published:
Updated:

ಕೋಲಾರ: ‘ನಗರಸಭೆ ಜನರ ಪಾಲಿಗೆ ಸತ್ತು ಹೋಗಿದ್ದು, ಅಭಿವೃದ್ಧಿ ಕುಂಠಿತಗೊಂಡಿವೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಅಸಮಾಧಾನ ವ್ಯಕ್ತಪಡಿಸಿದರು. ಈದ್ ಮಿಲಾದ್ ಆಚರಣೆ ಕಾರಣ ನಗರದಲ್ಲಿ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದೆ. ಈ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಚುನಾಯಿತ ಆಡಳಿತ ಮಂಡಳಿ ವಿಫಲವಾಗಿದೆ. ಸ್ವಚ್ಛತೆ ವಿಷಯದಲ್ಲಿ ಜನರಿಗೂ ಶಿಸ್ತಿಲ್ಲ ಎಂದರು.

ಯಾವುದೇ ಹಬ್ಬ, ಸಮಾರಂಭಕ್ಕೆ ರಾಜಕೀಯ ಪಕ್ಷಗಳು ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರು ಬ್ಯಾನರ್ ಕಟ್ಟಲು ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರೆ, ಇದರ ಅರಿವಿಲ್ಲದೆ ಮನಬಂದಂತೆ ಎಲ್ಲೆಡೆ ಬ್ಯಾನರ್‌ ಕಟ್ಟಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಅನಧಿಕೃತವಾಗಿ ಬ್ಯಾನರ್ ಕಟ್ಟುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ ಕೆಲಸಗಾರರು ರಸ್ತೆ ಬದಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಹಲವೆಡೆ ಕಸ ರಾಶಿಯಾಗಿ ಬಿದ್ದಿದ್ದು, ಪೌರ ಕಾರ್ಮಿಕರು ಅದನ್ನು ವಿಲೇವಾರಿ ಮಾಡುತ್ತಿಲ್ಲ. ಇದರಿಂದ ನಗರ ಗಬ್ಬೆದ್ದು ನಾರುತ್ತಿದೆ. ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬರು ಸಹಕರಿಸಿ: ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹರ್ದಯುತವಾಗಿ ಆಚರಿಸಲು ಪ್ರತಿಯೊಬ್ಬರು ಸಹಕರಿಸಬೇಕು. ಹಬ್ಬದ ಹಿನ್ನೆಲೆಯಲ್ಲಿ ಶುಭಾಷಯ ಕೋರಲು ಬ್ಯಾನರ್‌ ಹಾಕುವವರು ನಗರಸಭೆಯಿಂದ ಅನುಮತಿ ಪಡೆಯಬೇಕು. ಯಾವ ಸ್ಥಳದಲ್ಲಿ ಬ್ಯಾನರ್‌ ಕಟ್ಟುತ್ತೇವೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಹಬ್ಬ ಮುಗಿದ ದಿನ ಸಂಜೆಯೇ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.

ಕಿವಿಗೊಡಬಾರದು: ಹಬ್ಬದ ದಿನ ಯವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗುತ್ತದೆ. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಮನವಿ ಮಾಡಿದರು.

ಮೆರವಣಿಗೆ: ಈದ್‌ ಮಿಲಾದ್‌ ಹಬ್ಬದಂದು ಬೆಳಿಗ್ಗೆ 10.30ಕ್ಕೆ ನಗರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದವರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ನಂತರ ಅಂಜುಮಾನ್ ಸಂಸ್ಥೆ ಬಳಿ ರಾತ್ರಿ 7.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸರ್ವ ಧರ್ಮ ಗುರುಗಳು ಹಿತವಚನ ನೀಡುತ್ತಾರೆ ಎಂದು ಜಿಲ್ಲಾ ಅಂಜುಮಾನ್ ಸಂಸ್ಥೆ ಅಧ್ಯಕ್ಷ ಜಮೀರ್ ಪಾಷಾ

ಹೇಳಿದರು.

ಹಬ್ಬದ ದಿನ ವಿದ್ಯುತ್‌ ಸಮಸ್ಯೆ ಎದುರಾಗದಂತೆ ಬೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕು. ಅಂತರಗಂಗೆ ಬೆಟ್ಟದಲ್ಲಿ ಡಿ.2ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜನೆಯಾಗಿದೆ. ಅದೇ ದಿನ ಸಂಜೆ ಬೆಟ್ಟದ ತಪ್ಪಲಿನ ದರ್ಗಾದಲ್ಲಿ ಸಂಜೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಅಲ್ಪಸಂಖ್ಯಾತರು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಪೊಲೀಸ್‌ ಭದ್ರತೆ ನೀಡಬೇಕು ಎಂದು ಶಾಂತಿ ಸಮಿತಿ ಸದಸ್ಯ ಇಮ್ರಾನ್ ಕೋರಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಡಿವೈಎಸ್ಪಿ ಅಬ್ದುಲ್ ಸತ್ತಾರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry