ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗಳ ಜಾಗೃತಿ ಮೂಡಿಸಿ: ವೆಂಕಟೇಶ

Last Updated 28 ನವೆಂಬರ್ 2017, 9:18 IST
ಅಕ್ಷರ ಗಾತ್ರ

ಕೊಪ್ಪಳ: ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದಿಂದ ಸ್ವಚ್ಛತಾ ಕಾರ್ಮಿಕರ/ ಪೌರಕಾರ್ಮಿಕರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಾಲಯದ ನಿರ್ದೇಶನದಂತೆ ಪೌರಕಾರ್ಮಿಕರು/ ಸ್ವಚ್ಛತಾ ಕಾರ್ಮಿಕರಿಗೆ ಕಡ್ಡಾಯವಾಗಿ ಕನಿಷ್ಠ ವೇತನ ನೀಡಬೇಕು. ಈಗಾಗಲೇ ಗುತ್ತಿಗೆ ಪದ್ಧತಿ ರದ್ದುಪಡಿಸಲಾಗಿದೆ. ಪಿಎಫ್ಇಎಸ್ಐಗಳ ನಂಬರ್ ಕುರಿತು 15 ದಿನಗಳ ಒಳಗೆ ದಾಖಲೆಗಳನ್ನು ಸಲ್ಲಿಸಬೇಕು. ಕಾರ್ಮಿಕ ಅಧಿಕಾರಿಗಳು ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ಅವರಿಗೆ 2013ರ ಕಾಯ್ದೆ ಪ್ರಕಾರ ವೇತನ ನೀಡಲಾಗುತ್ತಿದೆಯೇ ಇಲ್ಲವೇ ಎಂಬುದರ ಕುರಿತು ಪರಿಶೀಲಿಸಬೇಕು.

ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾರ್ಮಿಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ಸುರಕ್ಷತಾ ಪರಿಕರಗಳಾದ ಮಾಸ್ಕ್, ಕೈಗವಸು, ಟೋಪಿ, ಶೂ ಇವುಗಳನ್ನು ಕಡ್ಡಾಯವಾಗಿ ನೀಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕಾರ್ಮಿಕರ ಕಾಲೊನಿಗಳಿಗೆ ಭೇಟಿ ನೀಡಿ, ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ಜಾಹೀರಾತು ಫಲಕ ಅಳವಡಿಸಬೇಕು. ಜಿಲ್ಲೆಯ ಪ್ರತಿ ತಾಲ್ಲೂಕು ಪಂಚಾಯಿತಿಗೆ ಒಂದರಂತೆ ಸಕ್ಕಿಂಗ್ ಮತ್ತು ಜೆಟ್ ಯಂತ್ರಗಳನ್ನು ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಕೂಡಲೇ ಖರೀದಿಸಬೇಕು ಎಂದರು.

ಗೃಹಭಾಗ್ಯ ಯೋಜನೆಯ ಅಡಿ ನಗರಸಭೆಯ ಪೌರಕಾರ್ಮಿಕರಿಗೆ 30x40 ಅಳತೆಯ ನಿವೇಶನ ಒದಗಿಸಿ, ಮನೆ ನಿರ್ಮಿಸಿಕೊಡಲು ಅವಕಾಶ ಮಾಡಿಕೊಟ್ಟಿರುವ ಜಿಲ್ಲಾಧಿಕಾರಿಯ ಕಾರ್ಯ ಶ್ಲಾಘನೀಯ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಇನ್-ಸ್ಯಾನಿಟರಿ ಲ್ಯಾಟರೀನ್ ವ್ಯವಸ್ಥೆ ಇಂದಿಗೂ ಬಳಕೆಯಲ್ಲಿದೆ.

ಈ ವ್ಯವಸ್ಥೆಯನ್ನು ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳ ಆವರಣಗಳಲ್ಲಿ ಸ್ವಚ್ಛತೆ ಕಾಪಾಡಲು ಗೋಡೆಗಳ ಮೇಲೆ ಸೂಚನಾ ಫಲಕ ಅಳವಡಿಸಬೇಕು. ಬಸ್‍ನಿಲ್ದಾಣ, ಆಸ್ಪತ್ರೆ, ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ದುರಸ್ತಿ ಮಾಡಿಸಿ, ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಬೇಕು. ಬಯಲು ಬಹಿರ್ದೆಸೆ ತಡೆಗಟ್ಟಿ, ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮತ್ತು ಅದರ ಬಳಕೆ ಕುರಿತು ನಗರಸಭೆಯ ಕಸ ವಿಲೇವಾರಿ ವಾಹನಗಳ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಿ ನೈರ್ಮಲ್ಯ ಸಮಾಜ ನಿರ್ಮಿಸಿ ಎಂದರು.

ಆಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್‌ಶೆಟ್ಟಿ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಉಪನಿರ್ದೇಶಕ ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಕುಮಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಇದ್ದರು.

ಜಿಲ್ಲಾಸ್ಪತ್ರೆ ಅಸ್ವಚ್ಛತೆಗೆ ಅಸಮಾಧಾನ
ಜಿಲ್ಲಾಸ್ಪತ್ರೆಯಲ್ಲಿನ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ಕೇವಲ 30 ಜನ ಸ್ವಚ್ಛತಾ ಕಾರ್ಮಿಕರು ಇದ್ದಾರೆ. ಇಲ್ಲಿಗೆ 150 ಜನರ ಅವಶ್ಯಕತೆ ಇದೆ. ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಇದೆ ಎಂದು ಆಯೋಗದ ಅಧ್ಯಕ್ಷ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ, ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಅವರು ಕೆಲಸ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ ವೈದ್ಯಕೀಯ ಕಾಲೇಜಿನ ಕಾರ್ಮಿಕರೇ ಇಲ್ಲಿಯೂ ಬರುತ್ತಾರೆ ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಕೆಲಸಗಾರರು ಸಿಗದಿದ್ದರೆ ಟೆಂಡರ್‌ ರದ್ದುಗೊಳಿಸಿ ಹೊಸದಾಗಿ ಟೆಂಡರ್‌ ಕರೆಯಿರಿ ಎಂದು ಸಲಹೆ ಮಾಡಿದರು

* * 

ಜಿಲ್ಲೆಯ ಪ್ರತಿ ತಾಲ್ಲೂಕು ಪಂಚಾಯಿತಿಗೆ ಒಂದರಂತೆ ಸಕ್ಕಿಂಗ್ ಮತ್ತು ಜೆಟ್ ಯಂತ್ರ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಕೂಡಲೇ ಖರೀದಿಸಬೇಕು
.ಎಂ.ಆರ್‌.ವೆಂಕಟೇಶ,
ಅಧ್ಯಕ್ಷ, ರಾಜ್ಯ ಸಫಾರಿ ಕರ್ಮಚಾರಿಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT