ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ತಿಪ್ಪನಹಳ್ಳಿ

Last Updated 28 ನವೆಂಬರ್ 2017, 9:55 IST
ಅಕ್ಷರ ಗಾತ್ರ

ಶಹಾಪುರ: ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಒದಗಿಸುವ ಸರ್ಕಾರದ ಬಹು ನಿರೀಕ್ಷೆಯ ಶುದ್ಧ ಕುಡಿಯುವ ನೀರಿನ ಘಟಕ ಕಣ್ಣು ಮುಚ್ಚಿವೆ. ತಾಲ್ಲೂಕಿನಿಂದ ಕೇವಲ 6 ಕಿ.ಮೀ ದೂರದಲ್ಲಿರುವ ತಿಪ್ಪನಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ ನೀರಿನ ಘಟಕ ಹಾಳಾಗುತ್ತಿದೆ. ಗ್ರಾಮದಲ್ಲಿ 1,500 ಜನ ಸಂಖ್ಯೆ ಇದ್ದು, ಕನ್ಯಾಕೊಳ್ಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.

‘ಗ್ರಾಮದಲ್ಲಿ ವರ್ಷದ ಹಿಂದೆ ಸ್ಥಾಪಿಸಿದ ನೀರಿನ ಘಟಕದ ಸುತ್ತಲು ಜಾಲಿ ಗಿಡ ಬೆಳೆದಿದೆ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಾಮಾಣಿಕವಾಗಿ ಒಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ. ಸಾರ್ವಜನಿಕರ ಹಣ ಅನವಶ್ಯಕವಾಗಿ ಪೋಲಾಗುತ್ತಿದೆ. ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಿಸಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮಧ್ಯದಲ್ಲಿಯೇ ನೀರು ಸಂಗ್ರಹವಾಗಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ’ ಎಂದು ಆರೋಪಿಸುತ್ತಾರೆ ಗ್ರಾಮದ ನಿವಾಸಿ ನಿಂಗಣ್ಣ ನಾಟೇಕಾರ.

‘ಗ್ರಾಮದಲ್ಲಿ 1ರಿಂದ 5ನೇ ತರಗತಿಯವರೆಗೆ ಶಾಲೆ ಇದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮೂವರು ಶಿಕ್ಷಕರಿದ್ದಾರೆ. ಅದರಲ್ಲಿ ಒಬ್ಬ ಶಿಕ್ಷಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಇಬ್ಬರು ಸರಿಯಾಗಿ ಶಾಲೆಗೆ ಬರುವುದಿಲ್ಲ. ಅಲ್ಲದೆ, ಶಾಲೆಯಲ್ಲಿಯೂ ಮೂಲ ಸೌಲಭ್ಯಗಳಿಲ್ಲದೆ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ’ ಎಂದು ಪಾಲಕರು ದೂರಿದರು.

‘ಗ್ರಾಮಕ್ಕೆ ಕುಡಿಯುವ ನೀರು, ಮಹಿಳಾ ಶೌಚಾಲಯ, ಸಿ.ಸಿ.ರಸ್ತೆ ನಿರ್ಮಿಸುವಂತೆ ತಾಲ್ಲೂಕು ಕಾನೂನು ಸೇವಾ ಸಮಿತಿ ಕೆಲ ವರ್ಷದ ಹಿಂದೆ ಗ್ರಾಮಸ್ಥರು ದೂರು ಸಲ್ಲಿಸಿದಾಗ ತ್ವರಿತವಾಗಿ ಕೆಲಸ ನಿರ್ವಹಿಸುವುದಾಗಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ತಿಳಿಸಿದ್ದರು.

ಆದರೆ, ಇಂದಿಗೂ ಕ್ರಮ ಕೈಗೊಂಡಿಲ್ಲ. ಎರಡು ಮಹಿಳಾ ಶೌಚಾಲಯಗಳ ಸುತ್ತ ಜಾಲಿಗಿಡ ಆಕ್ರಮಿಸಿಕೊಂಡಿದೆ. ಮಹಿಳೆಯರು ಅಗತ್ಯ ಕ್ರಿಯೆಗಳನ್ನು ಪೂರೈಸಿಕೊಳ್ಳಲೂ ಪರದಾಡುವಂತಾಗಿದೆ. ಬಡಜನರಿಗೆ ಸಿಗಬೇಕಿದ್ದ ಅಂಬೇಡ್ಕರ್‌ ಆಶ್ರಯ ಮನೆಗಳು ಉಳ್ಳವರ ಪಾಲಾಗಿವೆ’ ಎಂದು ಸೂರು ವಂಚಿತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮಸ್ಥರು ಆಸಕ್ತಿವಹಿಸಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ನಿರ್ಮಾಣ ಬಗ್ಗೆ ಮತ್ತು ಸಹಾಯ ಧನ ನೀಡುವಂತೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಅಲೆದು ಸುಸ್ತಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮದ ಕಡೆ ಮುಖ ಮಾಡಿಲ್ಲ’ ಎಂದು ಪಂಚಾಯಿತಿ ಸದಸ್ಯ ಮಲ್ಲಣ್ಣಗೌಡ ಮಾಲಿಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

* * 

ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಮಾಹಿತಿ ಇಲ್ಲ. ಗ್ರಾಮದಲ್ಲಿ 6 ಜನ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಗ್ರಾಮದ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.
ಅಣ್ಣರಾವ
ಪಿಡಿಒ, ಕನ್ಯಾಕೊಳ್ಳೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT