ಶೇರ್‌ಚಾಟ್‌ನಲ್ಲಿ ಕನ್ನಡದ ಕಂಪು

7

ಶೇರ್‌ಚಾಟ್‌ನಲ್ಲಿ ಕನ್ನಡದ ಕಂಪು

Published:
Updated:
ಶೇರ್‌ಚಾಟ್‌ನಲ್ಲಿ ಕನ್ನಡದ ಕಂಪು

ದೀಪಾವಳಿ ಸಂದರ್ಭದಲ್ಲಿ ಹುತಾತ್ಮ ಸೈನಿಕರ ನೆನಪಿನಲ್ಲಿ ಒಂದು ದೀಪ ಹಚ್ಚಿ ಎನ್ನುವ ಸಲಹೆ ಹಿಂದಿ ಭಾಷಿಕರಲ್ಲಿ ತುಂಬ ಜನಪ್ರಿಯವಾಗಿತ್ತು. ತಮ್ಮ ಸುತ್ತಲಿನ ಕೆರೆ ಕಂಟಿ ಸ್ವಚ್ಛಗೊಳಿಸಲು ಮಲಯಾಳಿ ಭಾಷಿಕರು ನೀಡಿದ್ದ ಸಲಹೆಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತ್ತು. ಪಂಢರಪುರದ ವಿಠ್ಠಲನ ದರ್ಶನಕ್ಕೆ ತೆರಳುವ ಭಕ್ತಾದಿಗಳು ತಮ್ಮ ಯಾತ್ರೆಯ ವಿವರಗಳನ್ನೆಲ್ಲ ಇಲ್ಲಿ ಮರಾಠಿಯಲ್ಲಿಯೇ ಹಂಚಿಕೊಂಡಿದ್ದಾರೆ. ಕೆಲ ಭಾಷೆಗಳ ಬರಹಗಾರರು ಕತೆ, ಕವನ ಬರೆದು ಓದುಗರನ್ನು ಸುಲಭವಾಗಿ ತಲುಪುತ್ತಿದ್ದಾರೆ. ಹೀಗೆ ಫೇಸ್‌ಬುಕ್‌, ವಾಟ್ಸ್ಆ್ಯಪ್‌ ಮತ್ತು ಟ್ವೀಟರ್‌ನಲ್ಲಿ ಕಾಣದ ಹಲವಾರು ವೈಶಿಷ್ಟ್ಯಗಳು ಈ ಆ್ಯಪ್‌ನಲ್ಲಿ ಇವೆ. ಇದೊಂದು ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಿರುವ ವಿಶಿಷ್ಟ ಸಾಮಾಜಿಕ ಜಾಲ ತಾಣವಾಗಿದೆ.

ಪ್ರಾದೇಶಿಕ ಭಾಷೆಗಳಲ್ಲಿಯೂ ಸಾಮಾಜಿಕ ಜಾಲ ತಾಣಗಳು ಮತ್ತು ವೈವಿಧ್ಯಮಯ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕಿರುತಂತ್ರಾಂಶಗಳ ಬಳಕೆಯು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಕನ್ನಡವೂ ಸೇರಿದಂತೆ 10 ಸ್ಥಳೀಯ ಭಾಷೆಗಳಲ್ಲಿ ಜನಪ್ರಿಯತೆಯ ಹಾದಿಯಲ್ಲಿ ಇರುವ ‘ಶೇರ್‌ಚಾಟ್‌’ (Sharechat) ಆ್ಯಪ್‌  ಸಾಕ್ಷಿಯಾಗಿದೆ. ಸ್ಥಳೀಯ ಭಾಷೆಗಳಲ್ಲಿನ ಇಂತಹ ಆ್ಯಪ್‌ಗಳ ವಹಿವಾಟು 2020ರ ಹೊತ್ತಿಗೆ ₹ 650 ಕೋಟಿಗಳಷ್ಟಾಗುವ ಅಂದಾಜು ಇದೆ. ಹೀಗಾಗಿ ಹೂಡಿಕೆದಾರರು ಇಲ್ಲಿ ಹಣ ತೊಡಗಿಸಲು ಮುಂದಾಗುತ್ತಿದ್ದಾರೆ. ಸ್ಥಳೀಯ ಭಾಷೆಗಳಲ್ಲಿ ಸಂವಹನ ನಡೆಸುತ್ತಲೇ ವಿಶ್ವದ ಇತರ ಮೂಲೆಗಳಲ್ಲಿ ನೆಲೆಸಿರುವವರನ್ನೂ ಸಂಪರ್ಕಿಸುವ ವಿಶಿಷ್ಟ ಆ್ಯಪ್‌ ಇದಾಗಿದೆ.

ಆರೋಗ್ಯ ಸಲಹೆ, ತಮಾಷೆಯ ವಿಡಿಯೊ, ನಗೆಹನಿ ಇಲ್ಲಿ ಹೆಚ್ಚು ಜನಪ್ರಿಯವಾಗಿವೆ. ಬಳಕೆದಾರರು ತಮ್ಮ ಮಾತೃಭಾಷೆಯಲ್ಲಿಯೇ ತಮಗೆ ಇಷ್ಟದ ವಿಷಯ, ಆಲೋಚನೆ ಮತ್ತಿತರ ಸಂಗತಿಗಳನ್ನು  ಇತರರ ಜತೆ ಹಂಚಿಕೊಳ್ಳುವ ವಿಶಿಷ್ಟ ವೇದಿಕೆ ಇದಾಗಿದೆ. ಇಂತಹ ಸಂಗತಿಗಳನ್ನು ಇತರರು ಇಷ್ಟಪಡುವ, ಮಾಹಿತಿ ಹಂಚಿಕೊಂಡವರನ್ನು ಅನುಸರಿಸುವ ಮತ್ತು ಅವರ ಜತೆ ಹರಟೆ ಹೊಡೆಯಲೂ ಮುಂದಾಗಬಹುದು.

ಸಣ್ಣ ನಗರ, ಗ್ರಾಮೀಣ ಪ್ರದೇಶದ ಹಾಸ್ಯ ಕಲಾವಿದರು, ಕವಿಗಳು, ಗಾಯಕರು ಸೇರಿದಂತೆ ವಿಶಿಷ್ಟ ಪ್ರತಿಭೆಯ ಕಲಾವಿದರು ಡಿಜಿಟಲ್‌ ಲೋಕದಲ್ಲಿ ತಮ್ಮ ಕಲೆ ಅಭಿವ್ಯಕ್ತಿಸಲು ಮತ್ತು ಹೆಚ್ಚೆಚ್ಚು ಕಲಾಭಿಮಾನಿಗಳನ್ನು ತಲುಪಲೂ ಇದು ನೆರವಾಗುತ್ತಿದೆ.  ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮರಾಠಿ, ಗುಜರಾತಿ, ಪಂಜಾಬಿ, ಮಲಯಾಳಂ, ಬಂಗಾಳಿ ಮತ್ತು ಒಡಿಯಾ ಭಾಷೆಗಳಲ್ಲಿ ಈ ಆ್ಯಪ್‌ ಲಭ್ಯ ಇದೆ

.

ಐಐಟಿ ಕಾನ್ಪುರದ ಪದವೀಧರರಾದ ಫರೀದ್ ಅಹಸಾನ್‌, ಅಂಕುಶ್ ಸಚದೇವ್‌ ಮತ್ತು ಭಾನು ಸಿಂಗ್‌ ಅವರು ಷೇರ್‌ಚಾಟ್‌ನ ಸಹ ಸ್ಥಾಪಕರು. ಆ್ಯಪ್‌ ಲೋಕದಲ್ಲಿ ಏನಾದರೂ ಹೊಸತನ್ನು ಮಾಡುವ ಉಮೇದಿನಿಂದ ಅವರು ನವೋದ್ಯಮ ಆರಂಭಿಸಲು ಮುಂದಾಗಿದ್ದರು. ಅವರ ಚಿಂತನೆಯು ಕೊನೆಗೆ ‘ಶೇರ್‌ಚಾಟ್‌’ ಅಭಿವೃದ್ಧಿಪಡಿಸುವಲ್ಲಿ ಅಂತ್ಯ ಕಂಡಿತ್ತು. ಆರಂಭದಲ್ಲಿ ಕೆಲವರು ಇವರ ಸಾಹಸ ಕಂಡು   ನಕ್ಕಿದ್ದರಂತೆ. ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ಮಾಧ್ಯಮವಾಗಿ ಇಂಟರ್‌ನೆಟ್‌ ಬಳಕೆಯು ಜನಪ್ರಿಯಗೊಳ್ಳಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದರು. ಈಗ ಅವರೆಲ್ಲ ಬೆರಳು ಕಚ್ಚಿಕೊಳ್ಳುವ ರೀತಿಯಲ್ಲಿ ಈ ಆ್ಯಪ್‌ ಜನಪ್ರಿಯಗೊಂಡಿದೆ. ಆರಂಭದಲ್ಲಿ ಈ ಆ್ಯಪ್‌, ಸದ್ಯದ ಸ್ವರೂಪದಲ್ಲಿ ಇದ್ದರಿಲಿಲ್ಲ. ಕ್ರಮೇಣ ಅದನ್ನು ಅಭಿವೃದ್ಧಿಪಡಿಸಲಾಗಿದೆ. ಈಗಲೂ ಗ್ರಾಹಕರ ಸಲಹೆ ಆಧರಿಸಿ ನಿರಂತರವಾಗಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಈ ಆ್ಯಪ್‌ನಲ್ಲಿ ಲಾಗಿನ್‌ನಿಂದ ಹಿಡಿದು ಎಲ್ಲವೂ ಕನ್ನಡದಲ್ಲಿಯೇ ಇರಲಿದೆ. ತಮ್ಮ ಮಾತೃಭಾಷೆಯಲ್ಲಿಯೇ ಸಾಮಾಜಿಕ ಜಾಲ ತಾಣದಲ್ಲಿ ಸಂವಹನ ನಡೆಸಲು ಈ ಆ್ಯಪ್‌ ಕನ್ನಡಿಗರ ನೆರವಿಗೆ ಬಂದಿದೆ. ವಾಟ್ಸ್‌ಆ್ಯಪ್‌ಗಿಂತ ಇದು ಭಿನ್ನವಾಗಿದೆ. ಅಲ್ಲಿ ಒಬ್ಬರಿಗೊಬ್ಬರು ಸಂದೇಶಗಳನ್ನು ಕಳಿಸಬಹುದು. ಈ ಆ್ಯಪ್‌ನ ಬಳಕೆದಾರರು ತಮಗೆ ಅನಿಸಿದ್ದನ್ನು ಇಲ್ಲಿ ಹೇಳಿಕೊಳ್ಳಬಹುದು (ಪೋಸ್ಟ್‌ ಮಾಡಬಹುದು). ಉಳಿದವರು ಅದನ್ನು ಅನುಸರಿಸಬಹುದು (ಫಾಲೋ ಮಾಡಬಹುದು).  ಚಿತ್ರ, ವಿಡಿಯೊ ಅಪ್‌ಲೋಡ್‌ ಮಾಡಬಹುದು. ಇಲ್ಲಿಂದ ನೇರವಾಗಿ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ಗೆ ಮಾಹಿತಿ ಹಂಚಿಕೊಳ್ಳಬಹುದು. ವಿವಿಧ ಹಬ್ಬಗಳ ಆಚರಣೆಯನ್ನೂ ಇಲ್ಲಿ ಪೋಸ್ಟ್‌ ಮಾಡಬಹುದು.

‘ಇಲ್ಲಿ ಪ್ರಾದೇಶಿಕ ಭಾಷೆಗಳದ್ದೇ ದರ್ಬಾರು. ಇಲ್ಲಿ ಇನ್ನೂ ಸಾಕಷ್ಟು ಸುಧಾರಣೆಗೆ ಅವಕಾಶ ಇದೆ. ಪ್ರತಿಭೆ ಅಭಿವ್ಯಕ್ತಿಗೆ ಸೂಕ್ತ ವೇದಿಕೆಯಾಗಿದೆ. ತಾಂತ್ರಿಕ ಪರಿಭಾಷೆಯನ್ನು ಕನ್ನಡದಲ್ಲಿ ನೀಡಲಾಗಿದೆ. ಅಂತರ್ಜಾಲವನ್ನು ಮೊದಲ ಬಾರಿಗೆ ಬಳಸುವವರನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಸರಳ ರೀತಿಯಲ್ಲಿ ರೂಪಿಸಲಾಗಿದೆ. ಪ್ರಾದೇಶಿಕ ವೈಶಿಷ್ಟ್ಯದ ಸಾಂಸ್ಕೃತಿಕ, ಸಾಹಿತ್ಯ, ಶಿಕ್ಷಣ, ಪ್ರಚಲಿತ ಸುದ್ದಿ, ಸಿನಿಮಾ, ವಿನೋದ, ಮನರಂಜನೆ, ಭಕ್ತಿ ಮತ್ತು ಕ್ರೀಡೆಗೂ ಇಲ್ಲಿ ಅವಕಾಶ ಇದೆ’ ಎಂದು  ಕನ್ನಡ ವಿಭಾಗದ ಮುಖ್ಯಸ್ಥೆ ರಜನಿ ಎಂ. ಹೇಳುತ್ತಾರೆ.

‘ಕರಕುಶಲ ಉತ್ಪನ್ನಗಳ ತಯಾರಕರು, ಈ ತಾಣದಲ್ಲಿ ತಮ್ಮ ಉತ್ಪನ್ನ ಪರಿಚಯಿಸಿ ಮಾರಾಟಕ್ಕೂ ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳಬಹುದು. ಬಳಕೆದಾರರ ಹಿತದೃಷ್ಟಿಯಿಂದ ಒಳಿತಲ್ಲದ ವಿಷಯ, ಚಿತ್ರ, ಮಾಹಿತಿ ಬಗ್ಗೆ ಬಳಕೆದಾರರು ದೂರು ನೀಡಿದರೆ ಅಂತಹ ಆಕ್ಷೇಪಾರ್ಹ ಸಂಗತಿಗಳನ್ನು ತೆಗೆದು ಹಾಕಲು ಸಂಸ್ಥೆ ತಕ್ಷಣ ಕ್ರಮ ಕೈಗೊಳ್ಳುತ್ತದೆ. ಬೆಂಗಳೂರಿನಲ್ಲಿ ಇರುವ ಪ್ರಧಾನ ಕಚೇರಿಯಲ್ಲಿ, 15 ವಿಭಿನ್ನ ಭಾಷೆಗಳನ್ನು ಮಾತನಾಡುವವರೂ ಸೇರಿದಂತೆ ಒಟ್ಟು 50 ಜನ ಸಿಬ್ಬಂದಿ ಇದ್ದಾರೆ.

(ರಂಜನಿ ಎಂ.)

‘ಈ ಆ್ಯಪ್‌ನ ಗಾತ್ರ ಕೂಡ ತುಂಬ (7 ಎಂಬಿ) ಕಡಿಮೆ ಇದೆ. ಇದಕ್ಕಾಗಿ ದುಬಾರಿ, ಸ್ಮಾರ್ಟ್‌ಫೋನ್‌ಗಳ ಅಗತ್ಯ ಇಲ್ಲ. ಸದ್ಯಕ್ಕೆ ಆಂಡ್ರಾಯ್ಡ್‌ ಆ್ಯಪ್‌ನಲ್ಲಿ ಮಾತ್ರ ಬಳಕೆಗೆ ಅವಕಾಶ ಇದೆ. ಬ್ಯಾಟರಿ ಬಳಕೆ ಕೂಡ ಕಡಿಮೆ ಇದೆ. ಎಲ್ಲರೂ ಸುಲಭವಾಗಿ ಆ್ಯಪ್‌ ಬಳಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಡಿಮೆ ವೇಗದ ಇಂಟರ್‌ನೆಟ್‌ನಲ್ಲಿಯೂ ಇದು ಕಾರ್ಯನಿರ್ವಹಿಸಲಿದೆ. ದಿನ ಬಳಕೆಯ ಶಬ್ದಗಳನ್ನೇ ಇಲ್ಲಿ ಬಳಸಲಾಗಿದೆ. ಇದು ಬಳಕೆದಾರರಿಗೆ ಹೆಚ್ಚು ಇಷ್ಟವಾಗಿದೆ' ಎಂದು ತಂಡದ ಸದಸ್ಯರಲ್ಲಿ ಒಬ್ಬರಾದ ಶಶಾಂಕ್‌ ಶೇಖರ್‌ ಹೇಳುತ್ತಾರೆ.

‘ಗ್ರಾಹಕರಿಗಾಗಿ ಸಹಾಯ ಕೇಂದ್ರದ ಸೌಲಭ್ಯವನ್ನೂ ಈ ಆ್ಯಪ್‌ ಒಳಗೊಂಡಿದೆ. 1800 108 7777 ಸಂಖ್ಯೆಯು ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಎಲ್ಲ ಪ್ರಾದೇಶಿಕ ಭಾಷೆಗಳ ಬಳಕೆದಾರರು ದೂರು, ಸಲಹೆಗಳಿಗೆ ಇದನ್ನು ಬಳಸಿಕೊಳ್ಳಬಹುದು. ಭೋಜ್‌ಪುರಿ, ಅವಧಿ, ಕೊಂಕಣಿ, ಉರ್ದು ಭಾಷೆಗಳಲ್ಲೂ ಇದನ್ನು ಅಭಿವೃದ್ಧಿಪಡಿಸುವ ಅವಕಾಶ ಇದೆ’ ಎಂದೂ ಅವರು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry