ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲುಗುತ್ತಿರುವ ಗೊಂಬೆ ಉದ್ದಿಮೆ

Last Updated 28 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನೋಟು ರದ್ದತಿ ನೀಡಿದ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ, ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಪೆಡಂಭೂತವಾಗಿ ಚನ್ನಪಟ್ಟಣದ ಮಾಯಾಲೋಕದ ಕುತ್ತಿಗೆ ಹಿಸುಕುತ್ತಿದೆ.  ದೇಶ–ವಿದೇಶಗಳಲ್ಲಿಯೂ ಮನೆಮಾತಾದ ಚನ್ನಪಟ್ಟಣದ ಬೊಂಬೆ ತಯಾರಿಕಾ ಉದ್ಯಮ ಹೊಳಪು ಕಳೆದುಕೊಳ್ಳುತ್ತಿದೆ.

ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಗುಡಿ-ಕೈಗಾರಿಕೆಗಳಿಗೆ ಮಾರಕ ಎಂದೆನಿಸಿರುವ   ‘ಜಿಎಸ್‌ಟಿ’, ಚನ್ನಪಟ್ಟಣದ ರಂಗುರಂಗಿನ ಬೊಂಬೆ ತಯಾರಿಕಾ ಉದ್ಯಮದ ಮೇಲೆ ಬೀರುತ್ತಿರುವ ಕರಿನೆರಳು ನಿರೀಕ್ಷೆಯನ್ನೂ ಮೀರಿದ ಹೊಡೆತ ಕೊಟ್ಟಿದೆ-ಕೊಡುತ್ತಿದೆ. ಹಿಂದೊಮ್ಮೆ ಬಿಡುವಿಲ್ಲದಂತೆ ಚಟುವಟಿಕೆಗಳು ನಡೆಯುತ್ತಿದ್ದ ಚನ್ನಪಟ್ಟಣದ ಕಾರ್ಯಾಗಾರಗಳಲ್ಲಿ ಇಂದು ತಯಾರಿಕಾ ಚಟುವಟಿಕೆಗಳು ನಿಧಾನವಾಗಿ ಸೊರಗುತ್ತಿವೆ.

ರಾಜಧಾನಿ ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿನ ಚನ್ನಪಟ್ಟಣ ‘ಬೊಂಬೆ ನಗರಿ’ ಎಂದೇ ಪರಿಚಿತ. ಈ ಪುಟ್ಟ ಪಟ್ಟಣದ ಪ್ರತಿ ಹಾದಿ-ಬೀದಿಗಳೂ ಐತಿಹಾಸಿಕ ಬೊಂಬೆ ನಿರ್ಮಾಣ ಚಟುವಟಿಕೆಗಳ ಸಂಗಡ ನಂಟು ಇರಿಸಿಕೊಂಡಿವೆ. ಬೆಂಗಳೂರು-ಮೈಸೂರು ಹೆದ್ದಾರಿಯ ಉದ್ದಕ್ಕೂ ಮಾತ್ರವಲ್ಲದೆ, ಪಟ್ಟಣದ ಓಣಿಗಳಲ್ಲಿಯೂ ವರ್ಣರಂಜಿತ ಮರದ ಕಲಾಕೃತಿಗಳನ್ನು ಮಾರಾಟ ಮಾಡುವ ಅಂಗಡಿಗಳು ಹೇರಳವಾಗಿವೆ.

ನೇರಳೆ ಹಣ್ಣಿನ ಗಾತ್ರದ ಆಟಿಕೆ-ವಸ್ತುಗಳಿಂದ ಆರಂಭಿಸಿ, ಅಡಿಗಳೆತ್ತರದ ವಿಗ್ರಹಗಳನ್ನೂ ಇಲ್ಲಿನ ಕಲಾವಿದರು ಒಪ್ಪ-ಓರಣವಾಗಿ ನಿರ್ಮಿಸುತ್ತಾರೆ. ನಿರ್ಜೀವ ಮರದ ಕೊರಡುಗಳಿಗೂ ಇಲ್ಲಿನವರ ಬಗೆ-ಬಗೆಯ ಕಲಾತ್ಮಕ ರೂಪು ನೀಡುತ್ತದೆ. ಸುಲಲಿತ ಕೈಚಳಕ ನಿರಪಾಯಕಾರಿ ಬಣ್ಣಗಳಿಂದ ಹೊಳಪನ್ನು ನೀಡುತ್ತದೆ. ಕಲಾವಿದರ ತೀಕ್ಷ್ಣ ದೃಷ್ಟಿಗಳು ಆಟಿಕೆಗಳ ಅಂದವನ್ನು ಸೂಕ್ಷ ಕೆತ್ತನೆ-ಕುಸುರಿಗಳ ಮೂಲಕ ನೂರ್ಮಡಿಗೊಳಿಸುತ್ತವೆ.

ಶತಮಾನಗಳ ಇತಿಹಾಸ

ಕನಿಷ್ಠ ಎರಡು ಶತಮಾನಗಳ ಇತಿಹಾಸ ಚನ್ನಪಟ್ಟಣದ ಬೊಂಬೆ ತಯಾರಿಕಾ ಉದ್ಯಮದ್ದು, ಇದು ನಾಡಿಗೆ ಟಿಪ್ಪು ಸುಲ್ತಾನನ ಕೊಡುಗೆ ಎಂದು ಹೇಳಲಾಗುತ್ತದೆ. `ಆಲೆ ಮರ', ತರಕಾರಿ ಜನ್ಯ ನೈಸರ್ಗಿಕ ಬಣ್ಣಗಳು ಮತ್ತು ಅರಗನ್ನು ಬಳಸಿ ಅತ್ಯಾಕರ್ಷಕ ಕಲಾಕೃತಿಗಳನ್ನು ತಯಾರಿಸುವ ಗುಡಿಗಾರರನ್ನು ದೂರದ ಪರ್ಷಿಯಾದಿಂದ ಟಿಪ್ಪು ಸುಲ್ತಾನ್ ನಾಡಿಗೆ ಕರೆಸಿದ. ಅವರಿಂದ ಸ್ಥಳೀಯ ಕಲಾವಿದರಿಗೆ ತರಬೇತಿ ಕೊಡಿಸಿದ ಎನ್ನಲಾಗುತ್ತಿದೆ.

ಆಲೆ ಮರವು ಸ್ಥಳೀಯವಾಗಿ ದೊರೆಯುವ ಪ್ರಮುಖ ಕಚ್ಚಾವಸ್ತುವಾಗಿದ್ದು, ಅದನ್ನು ಬೇಕಾದಂತೆ ಸುಲಭವಾಗಿ ಕತ್ತರಿಸಬಹುದು, ಕೆತ್ತಬಹುದು ಮತ್ತು ಯಾವುದೇ ರೂಪು ನೀಡಬಹುದು. ನೈಸರ್ಗಿಕ ಬಣ್ಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ,  ಜತೆಗೆ ಸುದೀರ್ಘ ಹೊಳಪು ನೀಡುತ್ತವೆ. ಈ ಎಲ್ಲಾ ಕಾರಣಗಳಿಂದ ಚನ್ನಪಟ್ಟಣದ ಚಂದದ ಬೊಂಬೆಗಳು ಮಾರುಕಟ್ಟೆಯಲ್ಲಿ ಸದಾ ತೀರದ ಬೇಡಿಕೆ ಹೊಂದಿರುತ್ತವೆ. ಅತ್ಯಾಕರ್ಷಕವಾಗಿ ಪ್ಯಾಕ್ ಮಾಡಿದ- ಜೋಡಿಸಿಟ್ಟ ಪ್ಲಾಸ್ಟಿಕ್ ಆಟಿಕೆಗಳು, ಗಾಜಿನ ವಸ್ತು ಮತ್ತು ಬ್ಯಾಟರಿ ಚಾಲಿತ ಬೊಂಬೆಗಳ ತೀರದ ಪೈಪೋಟಿ ನಡುವೆಯೂ ಚನ್ನಪಟ್ಟಣದ ಕಲಾತ್ಮಕ ಸೃಷ್ಟಿಗಳಿಗೆ ಜನ ಮನಸೋಲುತ್ತಲೇ ಇದ್ದಾರೆ.

ಮರಗಳನ್ನು ಕತ್ತರಿಸುವ, ಹದಗೊಳಿಸುವ, ಸಂಸ್ಕರಿಸುವ, ಹಾಗೂ ಬೇಕಾದ ರೂಪಕ್ಕೆ ಪರಿವರ್ತಿಸುವ ಅಸಂಖ್ಯಾತ ಕುಶಲಕರ್ಮಿಗಳಿದ್ದಾರೆ. ಜೊತೆಗೆ ಬಣ್ಣ ಹಾಕುವವರು, ಹೊಳಪು ನೀಡುವವರು, ಪ್ಯಾಕ್ ಮಾಡುವವರು ಮತ್ತು ಮಾರಾಟ ಮಾಡುವವರ ದೊಡ್ಡ ಪಡೆಯೇ ಇದೆ.

‘ಮನೆಯಲ್ಲಿನ ಕಪಾಟುಗಳನ್ನು ಅಲಂಕರಿಸಲು ಮಾತ್ರವೇ ಅಲ್ಲದೆ, ಶುಭ-ಸಮಾರಂಭಗಳಿಗೆ, ಬೀಳ್ಕೊಡುಗೆಗಳಿಗೆ ಚನ್ನಪಟ್ಟಣದ ಆಟಿಕೆ-ಉತ್ಪನ್ನಗಳನ್ನು ಕೊಡುವ ಪರಿಪಾಠ ವರ್ಷಗಳಿಂದ ಹೆಚ್ಚುತ್ತಿದೆ. ಇದರಿಂದಾಗಿ ದೇಶ-ವಿದೇಶಗಳಲ್ಲಿಯೂ ಚನ್ನಪಟ್ಟಣದ ಬೊಂಬೆಗಳು ಮೋಡಿ ಮಾಡಿವೆ. ಆದರೆ, ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ನೋಟಗಳನ್ನು ರದ್ದು ಮಾಡಿದಾಗಿನಿಂದ ಉದ್ಯಮ ಸೊರಗುತ್ತಿದೆ ಎನ್ನುತ್ತಾರೆ ಇಲ್ಲಿನ ಗುಡಿಗಾರರು. ‘ಅಂದಿನಿಂದ ಅನೇಕ ಸಣ್ಣ ಘಟಕಗಳು ಸ್ಥಗಿತಗೊಂಡಿವೆ. ನೂರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ‘ ಎನ್ನುತ್ತಾರೆ ಚನ್ನಪಟ್ಟಣದ ನಂಜುಂಡಾಚಾರ್.

‘ಕೇಂದ್ರ ಸರ್ಕಾರದ ಅವೈಜ್ಞಾನಿಕ ಜಿಎಸ್‌ಟಿಯು ಉದ್ಯಮದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೊಂದೆಡೆ ಆಟಿಕೆಗಳ ಬೆಲೆ ಏರಿಕೆಯಾಗಿ ಬೇಡಿಕೆ ಕುಸಿಯುತ್ತಿದೆ ಎನ್ನುತ್ತಾರೆ ಇಲ್ಲಿನ ಮಂದಿ.

ಬೆಂಗಳೂರು-ಮೈಸೂರು ಹೆದ್ದಾರಿಯ ಉದ್ದಕ್ಕೂ ಸುಮಾರು ಇನ್ನೂರಕ್ಕೂ ಹೆಚ್ಚು ಅಂಗಡಿಗಳಲ್ಲಿ ಇವುಗಳ ಮಾರಾಟ ಇದೆ. ಜತೆಗೆ ಅನೇಕ ಮಾರಾಟಗಾರರು ತಮ್ಮದೇ ಆದ ಫೇಸ್‌ಬುಕ್‌ ಪುಟಗಳನ್ನು ಹೊಂದಿದ್ದು, ಆನ್‌ಲೈನ್‌ಗಳ ಮೂಲಕವೂ ಬೇಡಿಕೆಗಳನ್ನು ಸ್ವೀಕರಿಸಿ  ಕೊರಿಯರ್‌ಗಳ ಮೂಲಕ ದೇಶ-ವಿದೇಶದ ವಿವಿಧ ಭಾಗಗಳಿಗೆ ತಲುಪಿಸುತ್ತಿದ್ದರು. ಆದರೆ, ಗುಡಿಗಾರರ ಪ್ರಕಾರ ಕಳೆದ ನವೆಂಬರ್‌ನಿಂದ ಉತ್ಪನ್ನ ಮತ್ತು ಬೇಡಿಕೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಈ ಮುನ್ನ ತೆರಿಗೆಯ ಪ್ರಮಾಣವು ಶೇ 5ಇತ್ತು. ಜಿಎಸ್‌ಟಿ ಬಳಿಕ ಅದು ಶೇ 12ಕ್ಕೆ ಏರಿದೆ. ಅನೇಕ ಉತ್ಪನ್ನಗಳಿಗೆ ಕೆಲ ಸಂದರ್ಭಗಳಲ್ಲಿ ಪ್ಲಾಸ್ಟಿಕ್, ಪಿಂಗಾಣಿ, ತುಕ್ಕುರಹಿತ ಉಕ್ಕು ಮೊದಲಾದವನ್ನು ಬಳಸಬೇಕು. ಅಂತಹ ವಸ್ತುಗಳಿಗೆ ಶೇ 28ವರೆಗೂ ತೆರಿಗೆ ಇದೆ. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಚನ್ನಪಟ್ಟಣದ ಬೊಂಬೆಗಳು ದುಬಾರಿ ಎಂಬ ಭಾವನೆ ಬರುವುದರಿಂದ, ಸಹಜವಾಗಿಯೇ ಜನಸಾಮಾನ್ಯರು ಅಗ್ಗದ ದರದ ಪ್ಲಾಸ್ಟಿಕ್ ಆಟಿಕೆಗಳ ಮೊರೆಹೋಗುತ್ತಿದ್ದಾರೆ.

ಅಲ್ಪ ಬೆಲೆ: ಚನ್ನಪಟ್ಟಣ ಬೊಂಬೆಗಳ ದರ ಕನಿಷ್ಠ ₹ 20ರಿಂದ ಆರಂಭವಾಗುತ್ತದೆ. ಸಾವಿರಾರು ರೂಪಾಯಿ ಮೌಲ್ಯದ ಬೊಂಬೆಗಳೂ ಲಭ್ಯ. ದಸರಾ ಸಂದರ್ಭದಲ್ಲಿ ಸಾಮಾನ್ಯವಾಗಿ ಮೈಸೂರು ಅರಮನೆಯ ಸೆಟ್, ದಶಾವತಾರ, ಕೃಷ್ಣ ಲೀಲೆ ಭಜನಾ ಮಂಡಳಿ,  ವಿವಿಧ ಋಷಿಮುನಿಗಳು, ಕೈಲಾಸ ಪರ್ವತ, ಸೈನ್ಯದ ತುಕಡಿಗಳು ಮೊದಲಾದ ಗೊಂಬೆಗಳಿಗೆ ಬೇಡಿಕೆ ಹೆಚ್ಚು.  ಉಳಿದಂತೆ ದಿನನಿತ್ಯದ ಅಗತ್ಯಗಳಿಗೆ ಬೇಕಾದ ಪೆನ್ ಸ್ಟ್ಯಾಂಡ್, ಕೀ-ಬಂಚ್, ಕೀ-ಸ್ಟ್ಯಾಂಡ್, ಮಕ್ಕಳ ಕುದುರೆ, ಮೊದಲಾದವನ್ನು ತಯಾರಿಸಲಾಗುತ್ತದೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮತ್ತು ಆಂಗ್ಲ ವರ್ಣಮಾಲೆ, ಆಂಗ್ಲ ಮತ್ತು ರೋಮನ್ ಅಂಕಿಗಳು, ಕಾಗುಣಿತ ಸೇರಿದಂತೆ ವಿವಿಧ ಶೈಕ್ಷಣಿಕ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ಬೃಹತ್ ಬಂಗಲೆಗಳು ಮತ್ತು ದೊಡ್ಡ ದೊಡ್ಡ ಕಚೇರಿ ಮತ್ತು ಕಟ್ಟಡಗಳಿಗಾಗಿ ಬೃಹತ್ ಗಾತ್ರದ ವಿಗ್ರಹಗಳನ್ನು, ಆನೆಗಳನ್ನು ಖರೀದಿಸುವವರ ಸಂಖ್ಯೆಯು ಹೆಚ್ಚುತ್ತಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.

ಅಗ್ಗದ ಆಟಿಕೆಗಳ ಪೈಪೋಟಿ: ಚಿತ್ತಾಕರ್ಷಕ ಹಾಗೂ ಮನಮೋಹಕ ಚನ್ನಪಟ್ಟಣದ ಬೊಂಬೆಗಳು ಇಲ್ಲದ ಮನೆಗಳೇ ಇಲ್ಲ ಎಂಬ ಮಾತೊಂದು ಇತ್ತು. ಅವುಗಳ ಪ್ರಾಮುಖ್ಯ ಮತ್ತು ಪಾರಮ್ಯವನ್ನು ಮುರಿದದ್ದೇ, ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಆಟಿಕೆಗಳು.

ಚೀನೀ ಆಟಿಕೆಗಳೂ ಮತ್ತು ಪ್ಲಾಸ್ಟಿಕ್ ಆಟಿಕೆಗಳು ಹೇರಳವಾಗಿ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿವೆ. ಇದರ ಫಲವಾಗಿ ಚನ್ನಪಟ್ಟಣ ಬೊಂಬೆಗಳಂತಹ ಆಟಿಕೆ ತಯಾರಿಕಾ ಉದ್ಯಮ ನೆಲಕಚ್ಚುತ್ತಿವೆ.

ಕೇವಲ ಜಾತ್ರೆಗಳಲ್ಲಷ್ಟೇ ಪ್ಲಾಸ್ಟಿಕ್ ಕೈ ಗಡಿಯಾರ, ಕನ್ನಡಕ, ಅಡುಗೆ ಮನೆ ಪರಿಕರಗಳು ಮತ್ತಿತರ ಪುಟ್ಟಪುಟ್ಟ ಪ್ಲಾಸ್ಟಿಕ್ ಉತ್ಪನ್ನಗಳು ಸಿಗುತ್ತಿದ್ದವು. ಆದರೀಗ ಅಂಥ ಮೊತ್ತಕ್ಕೂ ಬೃಹತ್ ಗಾತ್ರದ ವಿಮಾನ, ಕಾರು, ಬಸ್ಸು ಮೊದಲಾದ ಪ್ಲಾಸ್ಟಿಕ್ ವಸ್ತುಗಳು ಸಿಗುತ್ತವೆ. ಯಾಂತ್ರೀಕೃತವಾಗಿ ತಯಾರಿಸಲ್ಪಡುವ ಇವು ಕಡಿಮೆ  ಗುಣಮಟ್ಟದ ಪ್ಲಾಸ್ಟಿಕ್‌ನಿಂದ ಕೂಡಿರುತ್ತವೆ. ಹಾದಿ ಬೀದಿಗಳಲ್ಲಿ, ಫುಟ್ ಪಾತ್‌ಗಳಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲಿಯೂ ಸಿಗುತ್ತಿರುವ ಇವು ಚನ್ನಪಟ್ಟಣ ಗೊಂಬೆಗಳ ಸ್ಥಾನವನ್ನು ಅಲಂಕರಿಸುತ್ತಿವೆ.

ಹೋರಾಟ: ಗುಡಿ ಕೈಗಾರಿಕೆಗಳ ಮೇಲೆ ಜಿಎಸ್‌ಟಿ ಹೊರೆ ಹೇರಿದ ಕೇಂದ್ರ ಸರ್ಕಾರದ ನಿಲುವನ್ನು ಇಲ್ಲಿನ ಗುಡಿಗಾರರು ಖಂಡಿಸುತ್ತಾರೆ. ಅಚ್ಚರಿಯ ಸಂಗತಿ ಎಂದರೆ, ಆ ಸಂಬಂಧ ಇತ್ತೀಚೆಗೆ ಅಲ್ಲಲ್ಲಿ ಹೋರಾಟಗಳು ನಡೆದರೆ, ಚನ್ನಪಟ್ಟಣದಲ್ಲಿ ಗುಡಿಗಾರರು ಸುಮ್ಮನಿದ್ದರು.

ಉದ್ಯಮದ ಉಳಿವಿಗಾಗಿ ವ್ಯವಸ್ಥಿತ ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ಇಲ್ಲಿನ ಗುಡಿಗಾರರು-ಮಾರಾಟಗಾರರು ಮನಗಂಡಿದ್ದರೂ, ಇನ್ನೂ ಆ ಸಂಬಂಧ ಕಾರ್ಯಪ್ರವೃತ್ತವಾಗಿಲ್ಲ. ಸದ್ಯ, ಹೇಗೋ ಬದುಕು ನಡೆಯುತ್ತಿದೆ. ಯಾರಾದರೂ ನೇತೃತ್ವವಹಿಸಿದರೆ ನಾವು ಜೊತೆಗೂಡುತ್ತೇವೆ ಎನ್ನುವ ಮನೋಭಾವ ಇಲ್ಲಿನ ಬಹುತೇಕರದು.

**

ಕಣ್ಮರೆಯಾಗುತ್ತಿರುವ ಸಂಪ್ರದಾಯ

ಶರನ್ನವರಾತ್ರಿಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಬೊಂಬೆ ಕೂರಿಸುವುದು ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವುದೂ ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೆ ಪೆಟ್ಟು ನೀಡುತ್ತಿದೆ. ಬೊಂಬೆಗಳನ್ನು ಕೂರಿಸುವುದು ನವರಾತ್ರಿಯ ಸಂಪ್ರದಾಯಗಳಲ್ಲಿ ಒಂದು.  ಅದಕ್ಕಾಗಿ, ಪುರಾಣ ಮತ್ತು ಐತಿಹಾಸಿಕ ಪ್ರಸಂಗಗಳನ್ನು ಸಾರುವ ಬೊಂಬೆಗಳ ವಿವಿಧ ಸೆಟ್‌ಗಳನ್ನು ಖರೀದಿಸಿ,  ಒಪ್ಪ-ಓರಣವಾಗಿ ಜೋಡಿಸಿ, ಅವುಗಳ ವೀಕ್ಷಣೆಗೆ ಪರಿಚಿತರು ಮತ್ತು ನೆರೆಹೊರೆಯವರನ್ನು ಕರೆಯುವುದು ವಾಡಿಕೆ. ‘ಇತ್ತೀಚಿನ ದಿನಗಳಲ್ಲಿ ಆ ಪದ್ಧತಿ ಮರೆಯಾಗುತ್ತಿದೆ. ಹೊಸದಾಗಿ ಬೊಂಬೆಗಳನ್ನು ಕೂರಿಸುವವರು ಅತೀ ಕಡಿಮೆ. ಹಳೆಯ ತಲೆಮಾರಿನವರು ತಮ್ಮಲ್ಲಿ ಇರುವ ಗೊಂಬೆಗಳನ್ನು ಕೂಡಿಸುತ್ತಾರೆ. ಇದರ ಪರಿಣಾಮವಾಗಿ ದಸರಾ ಪ್ರದರ್ಶನಗಳಿಗಾಗಿ ಬೊಂಬೆಗಳನ್ನು ಖರೀದಿಸುವ ಪರಿಪಾಠವೇ ನಿಂತೇ ಹೋಗಿದೆ’ ಎನ್ನುತ್ತಾರೆ ಶ್ರೀ ಕೃಷ್ಣ ಸಾಯಿಸ್ ಎಂಪೋರಿಯಂನ ನಿಧೀಶ್.

ಪದಾತಿದಳ, ಅಶ್ವಾರೋಹಿ ಪಡೆ, ದರ್ಬಾರ್ ಹಾಲಿನ ಪ್ರಸಂಗ, ಬ್ಯಾಂಡ್ ಸೆಟ್, ಗಿರಿಜಾ ಕಲ್ಯಾಣ ಪ್ರಸಂಗ, ವಾಲಿ-ಸುಗ್ರೀವರು ಇದ್ದ ಕಥಾ ಪ್ರಸಂಗ, ಕೈಲಾಸ, ಶಿವತಾಂಡವ ನೃತ್ಯ ಸೇರಿದಂತೆ ರಾಮಾಯಣ ಮತ್ತು ಮಹಾಭಾರತಗಳ ಅಸಂಖ್ಯಾತ ಪ್ರಸಂಗಗಳನ್ನು ಚನ್ನಪಟ್ಟಣದ ಕಲಾವಿದರು ತಮ್ಮ ಅದ್ಭುತ ಸೃಷ್ಟಿಗಳ ಮೂಲಕ ಕಟ್ಟಿಕೊಡುತ್ತಿದ್ದರು. ಅವುಗಳಿಗೆ ದಸರಾ ಸಂದರ್ಭಗಳಲ್ಲಿ ತೀರದ ಬೇಡಿಕೆ ಇರುತ್ತಿತ್ತು. ಈ ಗೊಂಬೆಗಳನ್ನು ಖರೀದಿಸಿ, ವರ್ಣ ಮತ್ತು ಗಾತ್ರಗಳಿಗೆ ಅನುಸಾರವಾಗಿ ಸೋಪಾನ ಮಾದರಿಯಲ್ಲಿ ಜೋಡಿಸಿ ಪ್ರದರ್ಶನ ನೀಡಲಾಗುತ್ತಿತ್ತು. ಆದರೆ ಈ ಪದ್ಧತಿ ಕಡಿಮೆಯಾಗುತ್ತಿರುವುದು ಈ ಉದ್ಯಮಕ್ಕೆ ಹೊಡೆತ ನೀಡುತ್ತಿದೆ. ರಾಮನಗರ ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಗಳ ಪ್ರಕಾರ ಚನ್ನಪಟ್ಟಣದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

**

ಅಗ್ಗದ ಆಟಿಕೆಗಳ ಪೈಪೋಟಿ

ಚಿತ್ತಾಕರ್ಷಕ ಹಾಗೂ ಮನಮೋಹಕ ಚನ್ನಪಟ್ಟಣದ ಬೊಂಬೆಗಳು ಇಲ್ಲದ ಮನೆಗಳೇ ಇಲ್ಲ ಎಂಬ ಮಾತೊಂದು ಇತ್ತು. ಅವುಗಳ ಪ್ರಾಮುಖ್ಯ ಮತ್ತು ಪಾರಮ್ಯವನ್ನು ಮುರಿದದ್ದೇ, ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಆಟಿಕೆಗಳು.

ಚೀನೀ ಆಟಿಕೆಗಳೂ ಮತ್ತು ಪ್ಲಾಸ್ಟಿಕ್ ಆಟಿಕೆಗಳು ಹೇರಳವಾಗಿ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿವೆ. ಇದರ ಫಲವಾಗಿ ಚನ್ನಪಟ್ಟಣ ಬೊಂಬೆಗಳಂತಹ ಆಟಿಕೆ ತಯಾರಿಕಾ ಉದ್ಯಮ ನೆಲಕಚ್ಚುತ್ತಿವೆ.

ಕೇವಲ ಜಾತ್ರೆಗಳಲ್ಲಷ್ಟೇ ಪ್ಲಾಸ್ಟಿಕ್ ಕೈ ಗಡಿಯಾರ, ಕನ್ನಡಕ, ಅಡುಗೆ ಮನೆ ಪರಿಕರಗಳು ಮತ್ತಿತರ ಪುಟ್ಟಪುಟ್ಟ ಪ್ಲಾಸ್ಟಿಕ್ ಉತ್ಪನ್ನಗಳು ಸಿಗುತ್ತಿದ್ದವು. ಆದರೀಗ ಅಂಥ ಮೊತ್ತಕ್ಕೂ ಬೃಹತ್ ಗಾತ್ರದ ವಿಮಾನ, ಕಾರು, ಬಸ್ಸು ಮೊದಲಾದ ಪ್ಲಾಸ್ಟಿಕ್ ವಸ್ತುಗಳು ಸಿಗುತ್ತವೆ.

ಯಾಂತ್ರೀಕೃತವಾಗಿ ತಯಾರಿಸಲ್ಪಡುವ ಇವು ಕಡಿಮೆ  ಗುಣಮಟ್ಟದ ಪ್ಲಾಸ್ಟಿಕ್‌ನಿಂದ ಕೂಡಿರುತ್ತವೆ. ಹಾದಿ ಬೀದಿಗಳಲ್ಲಿ, ಫುಟ್ ಪಾತ್‌ಗಳಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲಿಯೂ ಸಿಗುತ್ತಿರುವ ಇವು ಚನ್ನಪಟ್ಟಣ ಗೊಂಬೆಗಳ ಸ್ಥಾನವನ್ನು ಅಲಂಕರಿಸುತ್ತಿವೆ.

**

ಗಗನ ಮುಟ್ಟುತ್ತಿರುವ ತಯಾರಿಕಾ ವೆಚ್ಚ

ಚನ್ನಪಟ್ಟಣ ಆಟಿಕೆಗಳು ತಮ್ಮ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಸುದೀರ್ಘ ಬಾಳಿಕೆ ಬರುತ್ತವೆ. ಆದರೆ, ಅವುಗಳ ತಯಾರಿಕಾ ವೆಚ್ಚ ಅಧಿಕ. ಈ ಬೊಂಬೆಗಳ ತಯಾರಿಕೆಯಲ್ಲಿ ಆಲೆ ಮರ, ಅರಗು ಮತ್ತು ತರಕಾರಿಗಳಿಂದ ತಯಾರಿಸಿದ ಬಣ್ಣಗಳನ್ನು ಬಳಸಲಾಗುತ್ತದೆ. ಇವು ರಾಸಾಯನಕ ಮುಕ್ತ. ಹೀಗಾಗಿ ಪರಿಸರದ ಮೇಲಾಗಲಿ, ಆರೋಗ್ಯದ ಮೇಲಾಗಲಿ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಆದರೆ, ದಿನೇ ದಿನೇ ಅರಗು, ತರಕಾರಿ ಬಣ್ಣ ಮತ್ತು ಮರದ ಬೆಲೆ ಹೆಚ್ಚುತ್ತಿದೆ. ಮಿಗಿಲಾಗಿ ಕುಶಲ ಕರ್ಮಿಗಳ ಕೂಲಿ ಹೆಚ್ಚುತ್ತಿದೆ. ಅವುಗಳನ್ನು ಅನಿವಾರ್ಯವಾಗಿ ಗ್ರಾಹಕ ಮೇಲೆ ಹೇರಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಚನ್ನಪಟ್ಟಣ ಬೊಂಬೆಗಳು ಗ್ರಾಹಕನ ಜೇಬಿಗೆ ಭಾರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

**

ಒಬಾಮ ಮನ ಗೆದ್ದ ಚಿತ್ತಾರದ ಗೊಂಬೆ

ಚನ್ನಪಟ್ಟಣದ ಬೊಂಬೆ ಕಳೆದ ಎರಡು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿಯೂ ಒಲವು ಗಳಿಸುತ್ತಿದೆ. 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ದಂಪತಿಗೆ ಉಡುಗೊರೆ ರೂಪದಲ್ಲಿ ನೀಡಲಾಗಿತ್ತು. ಅವುಗಳ ಅಂದ ಮತ್ತು ಕುಶಲತೆಗೆ ಮರುಳಾಗಿದ್ದ ಒಬಾಮಾ ದಂಪತಿ ಶ್ವೇತಭವನಕ್ಕೆ ಕೊಂಡೊಯ್ದಿದ್ದರು.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಚನ್ನಪಟ್ಟಣ ಗೊಂಬೆಯ ಸ್ತಬ್ಧ ಚಿತ್ರವೂ ಪಾಲ್ಗೊಂಡಿತ್ತು. ಈ ಎರಡು ಘಟನೆಗಳ ನಂತರ ಗೊಂಬೆಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದವು. ಇತ್ತೀಚೆಗೆ ಭಾರತಕ್ಕೆ ಭೇಟಿ ಕೊಟ್ಟಿದ್ದ ಭೂತಾನ್‌ ದೊರೆಯ ಮಗುವಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಚನ್ನಪಟ್ಟಣ ಬೊಂಬೆಗಳನ್ನು ಉಡುಗೊರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT