ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃತಕ ಬುದ್ಧಿಮತ್ತೆ’ಯ ಸವಾಲುಗಳು

Last Updated 28 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮನುಷ್ಯನ ರೀತಿಯಲ್ಲಿಯೇ ಯೋಚಿಸುವ, ತರ್ಕ ಮಾಡುವಂತಹ ‘ಕೃತಕ ಬುದ್ಧಿಮತ್ತೆ’ (Artificial Intelligence) ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ. ಈ ತಂತ್ರಜ್ಞಾನ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುತ್ತಿದೆ. ನಿರ್ಣಯಗಳನ್ನೂ ತೆಗೆದುಕೊಳ್ಳುತ್ತಿದೆ. ತಾವಾಗಿಯೇ ಕೆಲಸ ಮಾಡುವಂತಹ ಯಂತ್ರಗಳಿಗೆ, ಪರಿಕರಗಳಿಗೆ, ವ್ಯವಸ್ಥೆಗೆ ಜೀವ ತುಂಬುತ್ತಿದೆ.

ಮಾನವನ ಬುದ್ಧಿಶಕ್ತಿಯಿಂದಲೇ ಜನ್ಮತಾಳಿದ ಈ ತಂತ್ರಜ್ಞಾನ ಈಗ ಮಾನವನಿಗೇ ಸವಾಲೆಸೆಯುತ್ತಿದೆ. ಮುಂದಿನ 15 ವರ್ಷಗಳಲ್ಲಿ ಇದು ಮನುಷ್ಯನ ಬುದ್ಧಿಶಕ್ತಿ ಸಾಮರ್ಥ್ಯವನ್ನು ಮೀರಿಸುತ್ತದೆ. 50 –100 ವರ್ಷಗಳಲ್ಲಿ ವಿಶ್ವದ ಒಟ್ಟಾರೆ ಜನರ ಬುದ್ಧಿಶಕ್ತಿಯನ್ನು ಒಟ್ಟುಗೂಡಿಸಿದರೂ ಇದಕ್ಕೆ ಸರಿಸಾಟಿಯಾಗಲಾರದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ವೈದ್ಯ, ವಿಜ್ಞಾನ, ವಾಣಿಜ್ಯ, ಸೇನೆ, ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇದರದ್ದೇ ಮೇಲುಗೈ ಆದರೂ ಆಶ್ಚರ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಕೃತಕ ಬುದ್ಧಿಮತ್ತೆ ಎಂದರೇನು?

ಸರಳವಾಗಿ ಹೇಳುವುದಾದರೆ ಇದು ಒಂದು ಕಂಪ್ಯೂಟರ್ ಪ್ರೋಗ್ರಾಮ್. ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ, ಇದು ಸಾಮಾನ್ಯ ಕಂಪ್ಯೂಟರ್ ಪ್ರೋಗ್ರಾಮ್‌ ಅಲ್ಲ.

ತನ್ನ ಕಾರ್ಯವೈಖರಿಯನ್ನು ಗಮನಿಸುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ನಿರಂತರವಾಗಿ ಹೊಸ ವಿಷಯಗಳನ್ನು ತಿಳಿಯುತ್ತಾ ಕಲಿಯುತ್ತಿದೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ.

ವಿಸ್ತೃತವಾದ ಮಾಹಿತಿ ಜಾಲದಲ್ಲಿ ಬೇಕಾದ ವಿಷಯವನ್ನಷ್ಟೇ ಸುಲಭವಾಗಿ ಹೆಕ್ಕಿ ತೆಗೆಯುತ್ತಿರುವ ಕಂಪ್ಯೂಟರ್‌ಗಳು ಮತ್ತು ಚಾಲಕನ ಸಹಾಯವಿಲ್ಲದೇ ಚಲಿಸುತ್ತಿರುವ ವಾಹನಗಳು ಈ ತಂತ್ರಜ್ಞಾನದ ಪ್ರತಿಬಿಂಬವಾಗಿವೆ.

ಯಾವುದಾದರೂ ಮಾಹಿತಿಗಾಗಿ ಗೂಗಲ್ ಪುಟದಲ್ಲಿ ಎರಡು ಅಕ್ಷರಗಳನ್ನು ಟೈಪ್‌ ಮಾಡುತ್ತಿದ್ದಂತೇ ನಾವು ಏನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಊಹಿಸಿಕೊಂಡು ಅದಕ್ಕೆ ಸಂಬಂಧಿಸಿದ ಪದಗಳು ಹೇಗೆ ಪ್ರತ್ಯಕ್ಷವಾಗುತ್ತಿವೆ?

ನಿರ್ದಿಷ್ಟ ವ್ಯಕ್ತಿಗೆ ಫೋನ್ ಮಾಡಬೇಕು ಎಂದ ಕೂಡಲೇ ‘ಓಕೆ ಗೂಗಲ್’ ಹೇಗೆ ಮಾಡುತ್ತಿದೆ? ಇದಷ್ಟೇ ಅಲ್ಲ ಕೊರ್ಟೊನಾ, ಸಿರಿಯಂತಹ ಡಿಜಿಟಲ್ ಅಸಿಸ್ಟಂಟ್‌ಗಳು ಮಾಡುತ್ತಿರುವ ಕೆಲಸವನ್ನು ಗಮನಿಸಿದ್ದೀರಾ?

ನಮ್ಮ ಆಲೋಚನೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾದ ಕೆಲಸಗಳನ್ನು ಮಾಡುತ್ತಿರುವ ಇವೆಲ್ಲಾ ಕೃತಕ ಬುದ್ಧಿಮತ್ತೆಯ ರೂಪಗಳೇ. ಹೀಗೆ ನಮಗೆ ಅರಿವಿಲ್ಲದಂತೆ ಇದು ನಮ್ಮ ಜೀವನಕ್ಕೆ ಕಾಲಿಟ್ಟಿದೆ.

ಪರಿಣಾಮಗಳೇನು?

ಕೃತಕ ಬುದ್ಧಿಮತ್ತೆ ವಿಜೃಂಭಿಸಿದರೆ ಹಲವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಇದರ ಶಕ್ತಿಯಿಂದ ಕೆಲಸ ಮಾಡುವ ಸ್ವಯಂಚಾಲಿತ ಪರಿಕರಗಳನ್ನು ಭಯೋತ್ಪಾದಕರು, ಕಳ್ಳರು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ವಿಶೇಷವೇನು?

ಸುತ್ತಮುತ್ತಲಿನ ಪರಿಸರ, ಪರಿಸ್ಥಿತಿಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವ ಗುಣ, ಭಾಷೆಗಳನ್ನು ಗುರುತಿಸುವಿಕೆ, ಹೀಗೆ ಸಾಮಾನ್ಯ ಉಪಕರಣಗಳಿಂದ ಹಿಡಿದು ಸ್ವಯಂ ಆಗಿ ಕಲಿಯುವ ಯಂತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಕೆಲಸ ಮಾಡುತ್ತದೆ.

ಹಳೆಯ ಮಾಹಿತಿಯನ್ನು ಕಲೆಹಾಕಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರೋಗ್ರಾಮಿಂಗ್ ಮಾಡಿಕೊಂಡು ಅದರ ಅಧಾರವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಆಯಾ ಕೆಲಸಗಳಿಗೆ ಅಗತ್ಯವಾದ ನೆನಪಿನ ಶಕ್ತಿ ಮಾತ್ರ ಇರುತ್ತದೆ. ಉದಾಹರಣೆಗೆ ಸ್ವಯಂಚಾಲಿತ ವಾಹನ, ಯಂತ್ರಗಳು, ಚಾಟ್‌ಬೋಟ್ಸ್, ಪರ್ಸನಲ್ ಡಿಜಿಟಲ್ ಅಸಿಸ್ಟಂಟ್‌ ಮುಂತಾದವು ಇದಕ್ಕೆ ಸೂಕ್ತ ನಿದರ್ಶನಗಳಾಗಿವೆ.

**

ಬಳಕೆಗೆ ಬಂದಿದ್ದು ಯಾವಾಗ?

ಕೃತಕ ಬುದ್ಧಿಮತ್ತೆ 1956ರಿಂದಲೇ ಬಳಕೆಗೆ ಬಂದಿದೆ. ಎಲ್‌ಐಎಸ್‌ಪಿ ಎನ್ನುವ ಪ್ರೊಗ್ರಾಮಿಂಗ್ ಲಾಂಗ್ವೇಜ್ ಅಭಿವೃದ್ಧಿಪಡಿಸಿದ ಜಾನ್ ಮೆಕ್‌ಕಾರ್ತಿ ಎನ್ನುವ ವಿಜ್ಞಾನಿ ಇದಕ್ಕೆ ‘ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌’ ಎಂಬ ಹೆಸರನ್ನು ಸೂಚಿಸಿದರು.

ಫೊಟೊಗಳನ್ನು ಗುರುತಿಸಲು, ಭಾಷೆಯಿಂದ ಭಾಷೆಗೆ ಮಾಹಿತಿ ಅನುವಾದಿಸಲು, ಸಾಮಾನ್ಯ ಭಾಷೆಯಲ್ಲಿ ಹೇಳುವ ವಿಷಯಗಳನ್ನು ಸಂಕೇತ ರೂಪದಲ್ಲಿ ಗ್ರಹಿಸಲು 60, 70ರ ದಶಕದಲ್ಲಿ ತಂತ್ರಜ್ಞಾನ ತಜ್ಞರು ಕಂಪ್ಯೂಟರ್ ಬಳಕೆ ಮಾಡಲು ಆರಂಭಿಸಿದರು.
ಹೀಗೆ ಕ್ರಮವಾಗಿ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವ ಕಂಪ್ಯೂಟರ್ ಪ್ರೊಗ್ರಾಮ್‌ಗಳ ತಯಾರಾದವು.

ಈ ತಂತ್ರಜ್ಞಾನದಿಂದ ವಿಶ್ವ ಚೆಸ್‌ ಚಾಂಪಿಯನ್ ಆಗಿದ್ದ ಗ್ಯಾರಿ ಕಾಸ್ಪೆರೆಸೊ ಅವರನ್ನು ಐಬಿಎಂನ ‘ಡೀಪ್‌ ಬ್ಲೂ’ ಸೂಪರ್ ಕಂಪ್ಯೂಟರ್‌ ಸೋಲಿಸಿತು. ಈ ಘಟನೆ ನಂತರ ಕೃತಕ ಬುದ್ಧಿಮತ್ತೆಯ ಶಕ್ತಿ ಏನೆಂಬುದು ವಿಶ್ವಕ್ಕೆ ತಿಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT