ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಲಕ್ಷ ಗೃಹ ಸಾಲ ಬೇಕಾದರೆ ಬಡ್ಡಿ–ಅಸಲು ಎಷ್ಟು ಕಟ್ಟಬೇಕು?

Last Updated 28 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಮಾರುತಿ ಬ್ಯಾಹಟ್ಟಿ, ಹುಬ್ಬಳ್ಳಿ

ನಾನು ನಿಮ್ಮ ಅಭಿಮಾನಿ ಸಾರ್. ನಿಮ್ಮ ಅಂಕಣ ಓದದೇ ಮುಂದಿನ ಕೆಲಸ ಮಾಡುವುದಿಲ್ಲ. ನಾನು ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ಸಹೋದರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಇತ್ತೀಚೆಗೆ ನಾವಿಬ್ಬರೂ ಹುಬ್ಬಳ್ಳಿಯ ಸಮೀಪ ತಲಾ ಒಂದು ನಿವೇಶನ ಕೊಂಡಿದ್ದೇವೆ. ಒಪ್ಪಂದದ ಪ್ರಕಾರ ಈಗ ನಾವು ₹ 5 ಲಕ್ಷ ನಿವೇಶನ ಕೊಟ್ಟವರಿಗೆ ಕೊಡಬೇಕು. ಅವರು ₹ 5 ಲಕ್ಷ ನಗದು ರೂಪದಲ್ಲಿಯೇ ಕೊಡಲು ಹೇಳುತ್ತಾರೆ. ಇದರಿಂದ ಆದಾಯ ತೆರಿಗೆ ಆಗಬಹುದೇ?

ಉತ್ತರ: ನೀವು ಪ್ರಶ್ನೆಯ ಕೊನೆಯಲ್ಲಿ ನಿಮ್ಮ ದೂರವಾಣಿ ಸಂಖ್ಯೆ ತಿಳಿಸಿಲ್ಲ. ಸಾಧ್ಯವಾದರೆ ತಕ್ಷಣ ನಿಮಗೆ ದೂರವಾಣಿಯಲ್ಲಿಯೇ ಉತ್ತರ ಕೊಡುತ್ತಿದ್ದೆ. ನೀವು ಯಾವುದೇ ಕಾರಣಕ್ಕೂ ನಗದು ವ್ಯವಹಾರ ಮಾಡಬೇಡಿ. ಅಪರಾಧಕ್ಕಿಂತ ಮೇಲಾಗಿ ಇಲ್ಲಿ ಸರಿಯಾದ ದಾಖಲೆಗಳಿರುವುದಿಲ್ಲ. ಡಿ.ಡಿ. ಅಥವಾ ಪೇ ಆರ್ಡರ್ ಮುಖಾಂತರವೇ ನಿವೇಶನ ಕೊಟ್ಟಿರುವವರಿಗೆ ಹಣ ಸಂದಾಯ ಮಾಡಿ.

**

–ಶ್ರೀಧರ್‌, ತುಮಕೂರು

ನಾನು ಗುತ್ತಿಗೆ ಕಾರ್ಮಿಕ. ನನಗೆ ₹ 7 ಲಕ್ಷ ಗೃಹ ಸಾಲ ಬೇಕಾಗಿದೆ. ನನ್ನ ಸಂಬಳ ₹ 10,000. ಬಡ್ಡಿ–ಅಸಲು ಎಷ್ಟು ಕಟ್ಟಬೇಕು. ಯಾವ ಬ್ಯಾಂಕ್‌ನಲ್ಲಿ ಸಾಲ ಪಡೆಯಬಹುದು?

ಉತ್ತರ: ಬ್ಯಾಂಕ್‌ನಲ್ಲಿ ಗೃಹ ಸಾಲ ಪಡೆಯುವಾಗ, ಸಾಲ ಮರು ಪಾವತಿಸುವ ಸಾಮರ್ಥ್ಯ ಲೆಕ್ಕ ಹಾಕುತ್ತಾರೆ. ₹ 7 ಲಕ್ಷ ಗೃಹ ಸಾಲಕ್ಕೆ ₹ 7,000 ತಿಂಗಳ ಕಂತು (ಬಡ್ಡಿ ಅಸಲು ಸೇರಿ ಇಎಂಐ) ಕಟ್ಟಬೇಕಾಗುತ್ತದೆ. ಇದೇ ವೇಳೆ ನೀವು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಗೃಹ ಸಾಲ ದೀರ್ಘಾವಧಿ ಸಾಲವಾದ್ದರಿಂದ ನಿಮಗೆ ಸಾಲ ದೊರೆಯುವುದಿಲ್ಲ.

**

ಎನ್‌.ಎನ್‌. ಜಗದೀಶ್‌, ತುಮಕೂರು

ನಾನು ಶಿಕ್ಷಕ, ನನ್ನ ಮಗ ತುಮಕೂರಿನಲ್ಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದಾನೆ. ನಾನು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ ನನಗೆ ಶಿಕ್ಷಣ ಸಾಲ ಸಿಗಬಹುದೇ ಹಾಗೂ ಏನೆಲ್ಲಾ ಕಾಗದ ಪತ್ರ ಒದಗಿಸಬೇಕು?

ಉತ್ತರ: ವೃತ್ತಿ ಪರ ಶಿಕ್ಷಣ ಪಡೆಯುವಾಗ, ಎಲ್ಲಾ ಬ್ಯಾಂಕುಗಳು ಶಿಕ್ಷಣ ಸಾಲ ಕೊಡುತ್ತವೆ. ಹೆತ್ತವರ ಆದಾಯ ವಾರ್ಷಿಕವಾಗಿ ₹ 4.50 ಲಕ್ಷ ದೊಳಗಿರುವಲ್ಲಿ, ಬಡ್ಡಿ ಅನುದಾನಿತ ಶಿಕ್ಷಣ ಸಾಲ ಕೂಡಾ ಪಡೆಯಬಹುದು. ಇಂತಹ ಸಂದರ್ಭದಲ್ಲಿ, ತಹಸೀಲ್ದಾರರಿಂದ ವಾರ್ಷಿಕ ಆದಾಯ ₹ 4.50 ಲಕ್ಷ ದೊಳಗಿದೆ ಎಂಬುದಾಗಿ ಸರ್ಟಿಫಿಕೇಟ್‌ ಪಡೆದು, ಸಾಲಕ್ಕೆ ಅರ್ಜಿ ಸಲ್ಲಿಸುವಾಗಲೇ ಬ್ಯಾಂಕಿಗೆ ಕೊಡಬೇಕಾಗುತ್ತದೆ. ಎಲ್ಲಾ ಶಿಕ್ಷಣ ಸಾಲ ಪಡೆಯುವಾಗ, ವಿದ್ಯಾರ್ಥಿ ಉತ್ತೀರ್ಣನಾದ ಪರೀಕ್ಷೆ ಸರ್ಟಿಫಿಕೇಟ್‌, ಕಾಲೇಜಿನಲ್ಲಿ ಸೀಟು ದೊರಕಿರುವ ಬಗ್ಗೆ ಕಾಲೇಜಿನಿಂದ ಪತ್ರ, ಓದಿದ ಕಾಲೇಜಿನಿಂದ ಗುಣನಡತೆ ಸರ್ಟಿಫಿಕೇಟ್‌ ಇಷ್ಟು ಕಾಗದ ಪತ್ರ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

**

–ವಿಶ್ವನಾಥ, ಬೆಂಗಳೂರು

ನಾನು ನನ್ನ ಬಾವ ಇಬ್ಬರೂ ಕೂಡಿ 2006 ರಲ್ಲಿ ₹ 22 ಲಕ್ಷಕ್ಕೆ 30 X 40 ಅಳತೆಯ ನಿವೇಶನದಲ್ಲಿರುವ ಶೀಟಿನ ಮನೆ ಖರೀದಿಸಿದ್ದೆವು. 2013 ರಲ್ಲಿ ಈ ಶೀಟಿನ ಮನೆ ಕೆಡವಿ, 3 ಅಂತಸ್ತಿನ ಆರ್‌.ಸಿ.ಸಿ. ಮನೆ ಕಟ್ಟಿಸಿದೆವು. 2017 ಮೇ ತಿಂಗಳಲ್ಲಿ ಈ ಆಸ್ತಿಯನ್ನು ₹ 1 ಕೋಟಿ 60 ಲಕ್ಷಕ್ಕೆ ಮಾರಾಟ ಮಾಡಿದೆವು. ನನಗೆ ಹಾಗೂ ಭಾವನಿಗೆ ತಲಾ ₹ 80 ಲಕ್ಷ ಬಂದಿದೆ. ಅದರಲ್ಲಿ ಪ್ರತಿಯೊಬ್ಬರೂ ₹ 80 ಲಕ್ಷಕ್ಕೆ ಟಿ.ಡಿ.ಎಸ್‌. ಕಟ್ಟಿದೆವು. ನನ್ನ ಭಾವ ಈ ಹಣ ಅವರ ಸಾಲಕ್ಕೆ ಉಪಯೋಗಿಸಿದ್ದಾರೆ. ನಾನು ₹ 35 ಲಕ್ಷ ಮಡದಿಯ ಹೆಸರಿನಲ್ಲಿ, ₹ 39 ಲಕ್ಷ ತಾಯಿಯ ಹೆಸರಿನಲ್ಲಿ ಠೇವಣಿ ಮಾಡಿದ್ದೇನೆ. ನನಗೆ, ನನ್ನ ತಾಯಿಗೆ, ಮಡದಿಗೆ ಹಾಗೂ ಬಾವನಿಗೆ ತೆರಿಗೆ ಕಟ್ಟುವ ಅವಶ್ಯಕತೆ ಇದೆಯೇ?

ಉತ್ತರ: 2006 ರಲ್ಲಿ ನೀವು ಆಸ್ತಿ ಕೊಂಡು ಕೊಂಡಿರುವುದು ನೀವು ಹಾಗೂ ನಿಮ್ಮ ಬಾವನ ಹೆಸರಿನಲ್ಲಿ ನೋಂದಣಿಯಾಗಿದ್ದರೆ, ತಲಾ ₹ 80 ಲಕ್ಷ ಬಂದಿರುವುದರಲ್ಲಿ ಕೊಂಡುಕೊಳ್ಳುವಾಗ ಕೊಟ್ಟ ಹಣ, 2006 ರಿಂದ 2017 ರವರೆಗಿನ Cost of Inflation ಹಣ ಹಾಗೂ 3 ಅಂತಸ್ತಿನ ಮನೆಗೆ ಬಿದ್ದಿರುವ ಖರ್ಚು ಈ ಮೂರು ಸೇರಿಸಿ, ಶೇ 50 ರಂತೆ ಇಬ್ಬರಲ್ಲಿ ವಿನಿಮಯ ಮಾಡಿ, ಬಂದಿರುವ ₹ 80 ಲಕ್ಷದಲ್ಲಿ ಕಳೆದು ಉಳಿಯುವ ಹಣಕ್ಕೆ ಕ್ಯಾಪಿಟಲ್ ಗೇನ್‌ ಟ್ಯಾಕ್ಸ್‌ ಕೊಡಕಾಗುತ್ತದೆ. ನೀವು ನಿಮ್ಮ ಮಡದಿ ಹಾಗೂ ತಾಯಿ ಹೆಸರಿನಲ್ಲಿ ಡಿಪಾಸಿಟ್‌ ಮಾಡಿರುವುದಕ್ಕೆ ತೆರಿಗೆ ಬರುವುದಿಲ್ಲ. ₹ 80 ಲಕ್ಷ ಟಿ.ಡಿ.ಎಸ್‌. ಇರಲಿಕ್ಕಿಲ್ಲ. ₹ 50 ಲಕ್ಷಕ್ಕೂ ಮೀರಿದ ಸಂದರ್ಭದಲ್ಲಿ ಶೇ 1 ರಷ್ಟು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.

**

–ರಮೇಶ್ ಕನಬರ್ಗಿ, ಹುಬ್ಬಳ್ಳಿ

ನಾನು ನಿವೃತ್ತ ಫ್ರೊಪೆಸರ್, ಪಿಂಚಣಿ ಇಲ್ಲ. ಒಂದು ನಿವೇಶನ ₹ 2.7 ಲಕ್ಷಕ್ಕೆ ಮಾರಾಟ ಮಾಡಿದ್ದೆ. ನಾನು ತೆರಿಗೆಗೆ ಒಳಗಾಗುವುದಿಲ್ಲ. ಇದಕ್ಕೆ ಆದಾಯ ತೆರಿಗೆ ಅಥವಾ ಬಂಡವಾಳ ವೃದ್ಧಿ ತೆರಿಗೆ ಬರುತ್ತದೆಯೇ?

ಉತ್ತರ: ಸ್ಥಿರ ಆಸ್ತಿ ಮಾರಾಟ ಮಾಡಿದಾಗ ಬರುವ ಆದಾಯ, ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಬಂಡವಾಳ ವೃದ್ಧಿ ತೆರಿಗೆಗೆ (Capital Gain Tax) ಒಳಗಾಗುತ್ತದೆ. ಲಾಭಕ್ಕೆ ಶೇ 20 ಬಂಡವಾಳ ವೃದ್ಧಿ ತೆರಿಗೆ ಬರುತ್ತದೆ. ತೆರಿಗೆ ಉಳಿಸಲು National High Way Authority Of India ಅಥವಾ Rural Electrifiacatia Corporation ಬಾಂಡುಗಳಲ್ಲಿ 3 ವರ್ಷಗಳ ಕಾಲ ತೊಡಗಿಸಬಹುದು.

–ಸ್ವಾತಿ ಶಣೈ, ಬೆಂಗಳೂರು

ನಾನು M.Tech ಮುಗಿಸಿ ಕೆಲಸಕ್ಕೆ ಸೇರಿದ್ದೇನೆ. ವಯಸ್ಸು 24. ಅವಿವಾಹಿತೆ. ತಿಂಗಳ ಸಂಬಳ ₹ 26,500. ಖರ್ಚು ಹಾಗೂ ಹೂಡಿಕೆ- ಬಾಡಿಗೆ ₹ 7,000. ವೈಯಕ್ತಿಕ ಖರ್ಚು ₹ 3,000. ಆರ್.ಡಿ. ₹ 5,000. ನನಗೆ ₹ 1.20 ಲಕ್ಷ ಶಿಕ್ಷಣ ಸಾಲ ಇದೆ. ಸುಮಾರು ₹ 11,000 ಉಳಿಯುತ್ತದೆ. ನನ್ನ ತಂದೆಯವರು ನಿಮ್ಮ ಮಾರ್ಗದರ್ಶನ ಪಡೆಯಲು ತಿಳಿಸಿದ್ದಾರೆ.

ಉತ್ತರ: ನೀವು ನಿಮ್ಮ ತಂದೆಯವರ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೀರಿ ಎಂದು ಭಾವಿಸುವೆ. ಸಣ್ಣ ವಯಸ್ಸಿನಲ್ಲಿಯೇ ಉಳಿಸಬೇಕು ಎನ್ನುವ ಇಚ್ಛೆ, ಮುಂದಿನ ಜೀವನವನ್ನು ಸಂತೋಷವಾಗಿ ಕಳೆಯಲು ಸಹಾಯವಾಗುತ್ತದೆ. ₹ 5,000 ಆರ್.ಡಿ. ಹಾಗೆಯೇ ಮುಂದುವರೆಸಿರಿ. ನಿಮಗೆ ವಿಮೆ ಇಲ್ಲವಾದ್ದರಿಂದ ಎಲ್.ಐ.ಸಿ. ಯವರ ಜೀವನ ಆನಂದ ಪಾಲಿಸಿ ಮಾಡಿರಿ ಹಾಗೂ ತಿಂಗಳಿಗೆ ₹ 2,000 ಸಾವಿರ ತುಂಬಿರಿ. ಜೊತೆಗೆ ಪಿ.ಪಿ.ಎಫ್. ಖಾತೆ ತೆರೆದು ತಿಂಗಳಿಗೆ ₹ 5,000 ತುಂಬಿರಿ. ಉಳಿಯುವ ₹ 4,000, 2 ವರ್ಷದ ಆರ್.ಡಿ. ಮಾಡಿರಿ. ಅಷ್ಟರಲ್ಲಿ ನಿಮಗೆ ಮದುವೆ ಆಗುವ ಸಾಧ್ಯತೆ ಇದೆ.

ಈಗಲೇ ಮಾಡಿರುವ ₹ 5,000 ಆರ್.ಡಿ. ಹಾಗೂ ಈಗ ಮಾಡುವ ಆರ್.ಡಿ. ₹ 4,000 ದಿಂದ ಬಂಗಾರ ಹಾಗೂ ಮದುವೆ ಖರ್ಚು ಪೂರೈಸಲು ಸಾಧ್ಯವಾದೀತು. ಎಲ್.ಐ.ಸಿ. ಹಾಗೂ ಪಿ.ಪಿ.ಎಫ್. ಆದಾಯ ತೆರಿಗೆ ಉಳಿಸಲು ಅನುಕೂಲವಾಗುತ್ತದೆ. ಉಳಿತಾಯಕ್ಕೆ ಪ್ರಾಧಾನ್ಯ ಕೊಟ್ಟು ಬರುವ ಸಂಬಳದಲ್ಲಿ ಈ ಹಣ ಪ್ರತ್ಯೇಕವಾಗಿ ತೆಗೆದಿಟ್ಟು ಉಳಿದ ಹಣ ಖರ್ಚು ಮಾಡವುದು ಜಾಣತನ. ನೀವು ಮದುವೆಯಾಗಿ ಜೀವನದಲ್ಲಿ ನೆಲೆ ಕಂಡುಕೊಂಡ ನಂತರ, ಸಂಬಳ ಹೆಚ್ಚಾದಾಗ, ಎನ್.ಪಿ.ಎಸ್. ಮಾಡಿರಿ. ಜೀವನದ ಸಂಜೆಯಲ್ಲಿ ಪಿಂಚಣಿ ಪಡೆದ ಹಾಗಾಗುತ್ತದೆ. ನಿಮಗೆ ಶುಭ ಕೋರುತ್ತೇನೆ.

**

–ಭಾರ್ಗವಿ ತೇಜಸ್ವಿನಿ, ಬೆಂಗಳೂರು

ನಾನು ಮತ್ತು ನನ್ನ ಪತಿ ಇಬ್ಬರೂ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಅಭಿಯಂತರಾಗಿದ್ದೇವೆ. 33 ಹಾಗೂ 32 ವರ್ಷ ವಯೋಮಿತಿಯವರು. ಕೆಲಸಕ್ಕೆ ಸೇರಿ 7 ವರ್ಷಗಳಾದುವು. ನಮಗೆ ಎರಡೂವರೆ ವರ್ಷದ ಮಗ ಹಾಗೂ ಆರು ತಿಂಗಳ ಮಗಳಿದ್ದಾಳೆ. ನನ್ನ ಪತಿ ಹೆಸರಿನಲ್ಲಿ ₹ 5 ಲಕ್ಷದ ಎಲ್‌ಐಸಿ ಹಾಗೂ ₹ 5 ಲಕ್ಷದ ಪಿ.ಎಲ್.ಐ. ಇದೆ. ನನ್ನ ಹೆಸರಿನಲ್ಲಿ ₹ 10 ಲಕ್ಷ ಪಿ.ಎಲ್.ಐ. ಇದೆ. ಎಲ್‌ಐಸಿ., ಎಚ್‌.ಎಫ್.ಎಲ್.ನಲ್ಲಿ ನಿವೇಶನ ಕೊಳ್ಳಲು 10 ವರ್ಷಗಳ ಸಾಲ ಪಡೆದಿದ್ದು, ಒಂದು ವರ್ಷವಾಗಿದೆ.₹ 1 ಲಕ್ಷದವರೆಗೆ ವಿವಿಧ ಬಾಂಡ್‌ ಖರೀದಿಸಿದ್ದೇನೆ. ನಗರ ಪಾಲಿಕೆಯಲ್ಲಿ ಎನ್.ಪಿ.ಎಸ್. ಇನ್ನೂ ಜಾರಿಗೊಳಿಸಿಲ್ಲ. ನಾವಿಬ್ಬರೂ ಖಾಸಗಿಯಾಗಿ ಪಿಂಚಣಿ ಯೋಜನೆಗೆ ಸೇರಬೇಕೆಂದಿದ್ದೇವೆ. ಮಕ್ಕಳ ಶಿಕ್ಚಣ, ಮದುವೆ, ಮನೆ, ನಿರ್ಮಾಣ ಹೀಗೆ ಬೇರೆ ಬೇರೆ ಗೊಂದಲದಲ್ಲಿದ್ದೇವೆ. ಖಾಸಗಿ ಪಿಂಚಣಿ ಯೋಜನೆ ಸರಿ ಇದೆಯೇ. ಆದಾಯಕ್ಕೆ ಅನುಗುಣವಾಗಿ ಯಾವ ರೀತಿ ಉಳಿತಾಯ ಮಾಡಬೇಕು?

ಉತ್ತರ: ಈವರೆಗೆ ನೀವು ಇಳಿಸಿರುವ ವಿಮೆ ಸರಿ ಇದ್ದು, ಇನ್ನು ಮುಂದೆ ಹೆಚ್ಚಿನ ವಿಮೆ ನಿಮ್ಮ ಕುಟುಂಬಕ್ಕೆ ಅಗತ್ಯವಿಲ್ಲ. ನಿಮ್ಮ ಹೆಣ್ಣು ಮಗುವಿನ ಸಲುವಾಗಿ ಕನಿಷ್ಠ ₹ 3,000 ತಿಂಗಳಿಗೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಿರಿ. ನಿಮ್ಮ ಇಬ್ಬರ ಹೆಸರಿನಲ್ಲಿಯೂ ಪಿಪಿಎಫ್ ಖಾತೆ ತೆರೆಯಿರಿ. ಎಲ್.ಐ.ಸಿ., ಪಿ.ಎಲ್.ಐ., ಪಿ.‍ಪಿ.ಎಫ್., ಸುಕನ್ಯಾ ಸಮೃದ್ಧಿ ಯೋಜನೆ ಇವುಗಳಲ್ಲಿ ಹೂಡಿದ ತಲಾ ಗರಿಷ್ಠ ₹ 1.50 ಲಕ್ಷ ಸೆಕ್ಷನ್ 80ಸಿ ಆಧಾರದ ಮೇಲೆ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ನಿಮ್ಮ ಹೆಣ್ಣು ಮಗು ಹಾಗೂ ಗಂಡು ಮಗುವಿನ ಸಲುವಾಗಿ, ಒಟ್ಟಿನಲ್ಲಿ ₹ 6,000 ಆರ್.ಡಿ. ಒಂದು ವರ್ಷಕ್ಕೆ ಮಾಡಿ, ವರ್ಷಾಂತ್ಯಕ್ಕೆ ಬಂಗಾರದ ನಾಣ್ಯಕೊಂಡು ಲಾಕರಿನಲ್ಲಿ ಇರಿಸಿರಿ. ಈ ಪ್ರಕ್ರಿಯೆ ಮಕ್ಕಳ ಮದುವೆ ತನಕ ನಿಲ್ಲಿಸಬೇಡಿ, ಹೀಗೆ ವಾರ್ಷಿಕವಾಗಿ ನೀವು 20 ಗ್ರಾಮ್ ಬಂಗಾರ ಕೊಳ್ಳಬಹುದು. ನಿವೇಶನದ ಸಾಲ ಮುಗಿಯುತ್ತಲೇ ಎಲ್.ಐ.ಸಿ., ಎಚ್.ಎಫ್.ಎಲ್. ಅಥವಾ ಬ್ಯಾಂಕುಗಳಿಂದ ಗೃಹ ಸಾಲ ಪಡೆದು ಮನೆ ಕಟ್ಟಿಸಿಕೊಳ್ಳಿ. ಗೃಹ ಸಾಲದ ಅವಧಿ 20 ವರ್ಷಗಳಿರಲಿ. ಸಾಮಾನ್ಯವಾಗಿ ₹ 1 ಲಕ್ಷ ಗೃಹ ಸಾಲಕ್ಕೆ, ಮಾಸಿಕ ಸಮಾನ ಕಂತು (ಇಎಂಐ) ₹ 1 ಲಕ್ಷ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅವಶ್ಯ ಬಿದ್ದಲ್ಲಿ ಶಿಕ್ಷಣ ಸಾಲ ಕೂಡಾ ಪಡೆಯಬಹುದು. ಗೃಹಸಾಲದ ಕಂತು (ಸೆಕ್ಷನ್ 80 ಸಿ– ಗರಿಷ್ಠ ಮಿತಿ ₹ 1.50 ಲಕ್ಷದೊಳಗೆ) ಹಾಗೂ ಬಡ್ಡಿ ಪ್ರತ್ಯೇಕವಾಗಿ ಸೆಕ್ಷನ್ 24 (ಬಿ), ಶಿಕ್ಷಣ ಸಾಲದ ಬಡ್ಡಿ ಸೆಕ್ಷನ್ 80 ಇ, ಇವುಗಳ ಆಧಾರದ ಮೇಲೆ ತೆರಿಗೆ ವಿನಾಯ್ತಿ ಅರ್ಹತೆ ಪಡೆದಿದೆ.

ಇನ್ನು ನಿಮ್ಮ ಪಿಂಚಣಿ ವಿಷಯ. ಎಲ್.ಐ.ಸಿ. ಹಾಗೂ ಬಹಳಷ್ಟು ಖಾಸಗಿ ಕಂಪೆನಿಗಳು, ಪೆನ್ಷನ್ ಫಂಡ್ ಮೂಲಕ ಹೂಡಿಕೆದಾರರಿಗೆ ಪಿಂಚಣಿ ಯೋಜನೆ ಸಾದರ ಪಡಿಸಿವೆ. ಇದರಲ್ಲಿ ಮೋಸವಿಲ್ಲ. ಆದರೆ, ಹೂಡಿಕೆಯಲ್ಲಿ ಬಂದ ಹಣ ಷೇರುಮಾರುಕಟ್ಟೆ ಅಥವಾ ಇತರೆ ಸಂಸ್ಥೆಗಳಲ್ಲಿ ವಿನಿಯೋಗಿಸುವುದರಿಂದ ಬಹಳಷ್ಟು ಲಾಭದಾಯಕವಲ್ಲ. ಪರ್ಯಾಯವಾಗಿ ನೀವೇ ಒಂದು ಪಿಂಚಣಿ ಯೋಜನೆ ಹಾಕಿಕೊಳ್ಳಬಹುದು. ನಿಮ್ಮ ಅನುಕೂಲಕ್ಕನುಗುಣವಾಗಿ ನೀವಿಬ್ಬರೂ ಪ್ರತ್ಯೇಕವಾಗಿ ₹ 10,000 ಆರ್.ಡಿ. ಪ್ರಾರಂಭಿಸಿದಲ್ಲಿ, 20 ವರ್ಷಗಳಲ್ಲಿ ಶೇ 7 ಬಡ್ಡಿ ದರದಲ್ಲಿ ತಲಾ ₹ 52.14 ಲಕ್ಷ ಪಡೆಯುವಿರಿ.

ಹೀಗೆ ತಲಾ ಬರುವ ₹ 52.14 ಲಕ್ಷದಿಂದ ಶೇ 7 ಬಡ್ಡಿ ದರದಲ್ಲಿ ಕನಿಷ್ಠ ₹ 30,000 ನೀವಿಬ್ಬರೂ ಪ್ರತ್ಯೇಕವಾಗಿ ಬಡ್ಡಿ ಪಿಂಚಣಿ ರೂಪದಲ್ಲಿ ನಿರಂತರವಾಗಿ ಪಡೆಯಬಹುದು. ನಿಮ್ಮ ಹಣ ಬೇರೆಯವರಿಗೆ ಕೊಟ್ಟು ಕೆಲವು ದಶಕಗಳ ನಂತರ, ಅವರು ಕೊಟ್ಟಷ್ಟು ನೀವು ಪಡೆಯುವುದಕ್ಕಿಂತ, ನೀವೇ ನಿಮ್ಮ ಭವಿಷ್ಯ ಸೃಷ್ಟಿಸಿಕೊಳ್ಳಿ. ನಾನು ಸಾದರ ಪಡಿಸಿರುವ ಈ ಆರ್ಥಿಕ ಪ್ಲ್ಯಾನ್‌ ಕೇವಲ 20 ವರ್ಷಗಳ ಅವಧಿಯದ್ದಾಗಿದೆ. ನಿಮ್ಮ 52–53 ವರ್ಷ ಪ್ರಾಯದಲ್ಲಿ ನಿಮ್ಮಿಬ್ಬರಿಗೆ ‘ಕರೋಡ ಪತಿ’ ಯೋಗ ಬರುತ್ತದೆ. ಇದು ತುಂಬಾ ಸರಳ ಹಾಗೂ ನಿಮಗೆ ಸಾಧ್ಯವಾದ ವಿಚಾರ ಕೂಡಾ. ನಿಮ್ಮಂತಹ ಹಲವು ಓದುಗರಿಗೆ ಈ ಸಲಹೆ ಸಹಾಯವಾಗಲಿದೆ. ನಿಮಗೆ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT