6

ಆ್ಯಪ್‌ ಲೋಕ

Published:
Updated:
ಆ್ಯಪ್‌ ಲೋಕ

ಡಿಜಿಟಲ್‌ ಸೇವೆಗಳಿಗೆ ಯೂನೊ ಆ್ಯಪ್‌

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಡಿಜಿಟಲ್‌ ಸೇವೆಗಳೆಲ್ಲ ಒಂದೆಡೆಯೇ ದೊರೆಯುವಂತಹ ಸಮಗ್ರ ಸ್ವರೂಪದ ಹೊಸ ಆ್ಯಪ್‌ ‘ಯೊನೊ’ (You Only Need One–YONO)  ಪರಿಚಯಿಸಿದೆ. ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌ ಆಧರಿಸಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಹಣಕಾಸು ಸೇವೆ ಮತ್ತು ಜೀವನಶೈಲಿಯ ಸೇವೆಗಳು, ಉತ್ಪನ್ನಗಳು ಒಂದೇ ತಾಣದಲ್ಲಿ ದೊರೆಯುವ ವಿಶಿಷ್ಟ ಏಕೈಕ ಆ್ಯಪ್‌ ಇದಾಗಿದೆ.

ಕ್ಯಾಬ್‌ ಬುಕಿಂಗ್‌, ಸಿನಿಮಾ, ಬಸ್‌, ರೈಲು ಟಿಕೆಟ್‌ ಖರೀದಿ, ಹೋಟೆಲ್‌ ಕೋಣೆ ಮುಂಗಡ ಕಾದಿರಿಸುವಿಕೆ ಜತೆಗೆ ವೈದ್ಯಕೀಯ ಸೇವೆಗಳು ಇಲ್ಲಿ ಲಭ್ಯ. ಐದು ನಿಮಿಷಗಳಲ್ಲಿ ಎಸ್‌ಬಿಐ ಬ್ಯಾಂಕ್‌ ಖಾತೆಯನ್ನೂ ತೆರೆಯಬಹುದಾಗಿದೆ. ಖಾತೆಯಿಂದ ಖಾತೆಗೆ ಹಣ ರವಾನೆ, ಮಂಜೂರಾದ ಸಾಲದ ಮೊತ್ತ ಪಡೆಯುವ, ಸ್ಥಿರ ಠೇವಣಿ ಆಧರಿಸಿ ಓವರ್‌ಡ್ರಾಫ್ಟ್‌ ಪಡೆಯುವುದು, ವಿಮೆ ಉತ್ಪನ್ನಗಳ ಖರೀದಿ, ಹಣ ವೆಚ್ಚ ಮಾಡಿದ ವಿಶ್ಲೇಷಣೆ ಸೇವೆಗಳೆಲ್ಲ ಇಲ್ಲಿ ದೊರೆಯಲಿವೆ.

ಅಮೆಜಾನ್‌, ಮಿಂತ್ರಾ, ಜಬಾಂಗ್, ಷಾಪರ್ಸ್‌ ಸ್ಟಾಪ್‌, ಯಾತ್ರಾ ಸೇರಿದಂತೆ 60ಕ್ಕೂ ಹೆಚ್ಚು ಇ–ಕಾಮರ್ಸ್‌ ಸಂಸ್ಥೆಗಳ ವಹಿವಾಟನ್ನು ಈ ಆ್ಯಪ್‌ ಮೂಲಕವೇ ನಡೆಸಬಹುದು. ಸರಕು ಖರೀದಿಗೆ ಆಕರ್ಷಕ ಕೊಡುಗೆಗಳೂ ಇರಲಿವೆ.

ಗೂಗಲ್‌ ಪ್ಲೇ ಸ್ಟೋರ್: yono

**

ಸರ್ಕಾರದ ಸಕಲ ಸೇವೆಗಳಿಗೆ ಉಮಂಗ್

ಸರ್ಕಾರದ ಸಕಲ ಸೇವೆಗಳು ಒಂದೇ ಆ್ಯಪ್‌ನಲ್ಲಿ ಲಭ್ಯವಾಗುವ ‘ಉಮಂಗ್‌’ ಆ್ಯಪ್‌ ಅನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಜನರಿಗೆ ತಂತ್ರಜ್ಞಾನದ ಮೂಲಕ ತಲುಪಿಸುವ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸುವಲ್ಲಿ ಡಿಜಿಟಲ್‌ ಇಂಡಿಯಾ ದೊಡ್ಡ ಯೋಜನೆಯಾಗಿದೆ. ಆ ನಿಟ್ಟಿನಲ್ಲಿ ಇದು ಇನ್ನೊಂದು ಹೆಜ್ಜೆಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 1200ಕ್ಕೂ ಹೆಚ್ಚು ಸೇವೆಗಳನ್ನು ಉಮಂಗ್ (UMANG –Unified Mobile Application for New-age Governance) ಆ್ಯಪ್‌ ಮೂಲಕ ಪಡೆಯಬಹುದು. ಮೊಬೈಲ್‌ ಆಡಳಿತ ಹಾಗೂ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಇ–ಆಡಳಿತ ಇಲಾಖೆ ಜಂಟಿಯಾಗಿ ಈ ಆ್ಯಪ್ ಅಭಿವೃದ್ಧಿಪಡಿಸಿವೆ.

ಬಿಲ್‌ ಪಾವತಿ, ಡಿಜಿ ಲಾಕರ್‌, ಆದಾಯ ತೆರಿಗೆ ಸಲ್ಲಿಕೆ, ಗ್ಯಾಸ್‌ ಸಿಲಿಂಡರ್‌, ಪಿಎಫ್‌ ಮಾಹಿತಿ ಹಾಗೂ ಆಧಾರ್‌ ಸಂಪರ್ಕಿತ ಸೇವೆಗಳು ಸೇರಿದಂತೆ ಸರ್ಕಾರದ ಎಲ್ಲಾ ಇ–ಸೇವೆಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದು. ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಣಿ ದೊರೆಯಲಿದೆ. ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ದೇಶದ 13 ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಬಹುದು. ಮೊಬೈಲ್‌ ಮಾತ್ರವಲ್ಲದೆ ಟ್ಯಾಬ್‌ ಅಥವಾ ಕಂಪ್ಯೂಟರ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿದ ನಂತರ ಮೊಬೈಲ್‌ ಸಂಖ್ಯೆ ಮತ್ತು ಪಿನ್‌ ನೀಡಿ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕವು ಲಾಗಿನ್‌ ಆಗಬಹುದು. ಗೂಗಲ್‌ ಪ್ಲೇ ಸ್ಟೋರ್ ಅಥವಾ ಆ್ಯಪ್‌ ಸ್ಟೋರ್‌ನಿಂದ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಗೂಗಲ್‌ ಪ್ಲೇ ಸ್ಟೋರ್: umang app

**

ಸ್ಯಾಮ್ಸಂಗ್‌ ಬಿಕ್ಸ್‌ಬಿ 2.0 ವಾಯ್ಸ್ ಅಸಿಸ್ಟಂಟ್

ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಕಂಪೆನಿ ಸ್ಯಾಮ್ಸಂಗ್‌ ಬಿಕ್ಸ್‌ಬಿ 2.0 ವಾಯ್ಸ್ ಅಸಿಸ್ಟಂಟ್ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಬಿಕ್ಸ್‌ಬಿ ವಾಯ್ಸ್ ಅಸಿಸ್ಟಂಟ್‌ನ ಮೊದಲ ಅವತರಣಿಕೆ ದಕ್ಷಿಣ ಕೊರಿಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ಯಾಲಕ್ಸಿ ಎಸ್‌8 ಸರಣಿಯ ಮೊಬೈಲ್‌ಗಳಲ್ಲಿ ಮಾತ್ರ ಈ ಅಪ್ಲಿಕೇಷನ್‌ ನೀಡಲಾಗಿದೆ. ಭಾರತದಲ್ಲಿ ಸಾಕಷ್ಟು ಗ್ಯಾಲಕ್ಸಿ ಎಸ್‌8 ಫೋನ್‌ಗಳು ಮಾರಾಟವಾಗಿದ್ದರೂ ಬಿಕ್ಸ್‌ಬಿ ಸೇವೆಯನ್ನು ನೀಡಿಲ್ಲ! 2018ರಲ್ಲಿ ಬಿಕ್ಸ್‌ಬಿ ವಾಯ್ಸ್ ಅಸಿಸ್ಟಂಟ್ ಸೇವೆಯನ್ನು ಭಾರತಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಬಿಕ್ಸ್‌ಬಿ 2.0 ವಾಯ್ಸ್ ಅಸಿಸ್ಟಂಟ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಟಿ.ವಿ. ಮತ್ತು ಫ್ರಿಜ್‌ನಲ್ಲೂ ಕಾರ್ಯನಿರ್ವಹಿಸಲಿದೆ. ಗೂಗಲ್‌, ಅಮೆಜಾನ್‌ ಮತ್ತು ಆ್ಯಪೆಲ್‌ ಕಂಪನಿಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ವಾಯ್ಸ್ ಅಸಿಸ್ಟಂಟ್ ವೈಶಿಷ್ಟ್ಯ ಪರಿಚಯಿಸಿವೆ. ಇದೀಗ ಸ್ಯಾಮ್ಸಂಗ್‌ ಒಂದು ಹೆಜ್ಜೆ ಮುಂದೆ ಹೋಗಿ ಇತರೆ ಉತ್ಪನ್ನಗಳಿಗೂ ಬಿಕ್ಸ್‌ಬಿ ಸೇವೆಯನ್ನು ಅಳವಡಿಸುತ್ತಿದೆ.

ಇನ್ನು ಮುಂದೆ ಬಳಕೆದಾರರು ಸ್ಯಾಮ್ಸಂಗ್‌ ಟಿ.ವಿ. ಮತ್ತು ಫ್ರಿಜ್‌ಗಳನ್ನು ವಾಯ್ಸ್‌ ಕಮಾಂಡ್‌ ಮೂಲಕ ಬಳಕೆ ಮಾಡಬಹುದು. ವಾಯ್ಸ್‌ ಕಮಾಂಡಿಂಗ್‌ ಸೇವೆ ದೇಶದ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಲಿದೆ ಎಂಬ ಸುಳಿವನ್ನೂ ಸಂಸ್ಥೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry