7

ಅವಳ ಚರಿತ್ರೆ: ಅಗ್ನಿದಿವ್ಯದ ವರ್ತಮಾನ

Published:
Updated:
ಅವಳ ಚರಿತ್ರೆ: ಅಗ್ನಿದಿವ್ಯದ ವರ್ತಮಾನ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಸಿನಿಮಾದ ಬಗ್ಗೆ ಉನ್ನತ ಅಧಿಕಾರ ಸ್ಥಾನಗಳಲ್ಲಿರುವವರು ನೀಡಿರುವ ಹೇಳಿಕೆಗಳಿಗೆ ತೀವ್ರ ಆಕ್ಷೇಪವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ. ‘ಈವರೆಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್‌ಸಿ) ಪ್ರಮಾಣ ಪತ್ರ ಪಡೆದಿಲ್ಲದ ಸಿನಿಮಾ ಬಗ್ಗೆ ತೀರ್ಮಾನಗಳನ್ನು ನೀಡುತ್ತಿರುವುದು ಸರಿಯಲ್ಲ.ಸಿಬಿಎಫ್‌ಸಿಯಿಂದ ಸಿನಿಮಾಗೆ ಅನುಮೋದನೆ ದೊರೆಯುವವರೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರುಗಳು ಸೇರಿದಂತೆ ಸಾರ್ವಜನಿಕ ಹುದ್ದೆಗಳಲ್ಲಿ ಇರುವವರು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ. ಈಗಾಗಲೇ ಬ್ರಿಟನ್‌ನಲ್ಲಿ ಈ ಸಿನಿಮಾ ಬಿಡುಗಡೆಗೆ ಅನುಮೋದನೆ ಸಿಕ್ಕಿದೆ. ಆದರೆ ಸಿಬಿಎಫ್‌ಸಿಯಿಂದ ಪ್ರಮಾಣಪತ್ರ ದೊರಕುವವರೆಗೆ ‘ಪದ್ಮಾವತಿ’ ಸಿನಿಮಾವನ್ನು ಇತರ ರಾಷ್ಟ್ರಗಳಲ್ಲಿಯೂ ಬಿಡುಗಡೆ ಮಾಡುವುದಿಲ್ಲ ಎಂದು ಬನ್ಸಾಲಿ ಸ್ಪಷ್ಟಪಡಿಸಿದ್ದಾರೆ.

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹೀದ್ ಕಪೂರ್ ತಾರಾಗಣದಲ್ಲಿರುವ ಈ ಚಿತ್ರದಲ್ಲಿ ರಜಪೂತರನ್ನು ಚಿತ್ರಿಸಿರುವ ರೀತಿ ಸರಿ ಇಲ್ಲ ಎಂದು ಆರೋಪಿಸಿ ಸೃಷ್ಟಿಸಲಾಗಿರುವ ವಿವಾದ ಅತಿರೇಕದ್ದು. ಚಿತ್ರ ಬಿಡುಗಡೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆ ಪ್ರತಿಭಟಿಸುತ್ತಿದೆ. ಈ ಪ್ರತಿಭಟನೆಗಳು ರಾಜಸ್ಥಾನಕ್ಕಷ್ಟೇ ಸೀಮಿತವಾಗಿಲ್ಲ. ವಿಪರ್ಯಾಸದ ಸಂಗತಿ ಎಂದರೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ ‘ಪದ್ಮಾವತಿ’ ಸಿನಿಮಾದ ವಿರುದ್ಧ ದನಿ ಎತ್ತಿರುವುದು. ವಸುಂಧರಾ ರಾಜೇ (ರಾಜಸ್ಥಾನ), ಶಿವರಾಜ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ಯೋಗಿ ಆದಿತ್ಯನಾಥ (ಉತ್ತರಪ್ರದೇಶ) ಹಾಗೂ ವಿಜಯ್ ರೂಪಾನಿ (ಗುಜರಾತ್) ಅವರು ‘ಪದ್ಮಾವತಿ’ ಸಿನಿಮಾ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಈ ಗುಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ತಮ್ಮ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ‘ಪದ್ಮಾವತಿ’ ಸಿನಿಮಾ ಹಾಗೂ ಸಿನಿಮಾ ನಿರ್ದೇಶಕರನ್ನು ಬೆಂಬಲಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹರಿಯಾಣದ ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಅವರು ಬೆದರಿಕೆ ಒಡ್ಡಿದ ಅನಪೇಕ್ಷಣೀಯ ಘಟನೆಯೂ ನಡೆದಿದೆ. ತುಂಡು ಸಂಘಟನೆಗಳ ಬೆದರಿಕೆಯನ್ನೇನೋ ಕಡೆಗಣಿಸಬಹುದು. ಆದರೆ ಆಡಳಿತ ಸೂತ್ರ ಹಿಡಿದ ರಾಜಕೀಯ ನೇತಾರರ ಮಾತುಗಳು ಹಾಗೂ ನಡೆಗಳನ್ನು ಅರ್ಥೈಸುವುದಾದರೂ ಹೇಗೆ?

ಚರಿತ್ರೆಯನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸುವ ಮೂಲಕ ಸೃಜನಾತ್ಮಕ ಅಭಿವ್ಯಕ್ತಿಗೆ ತಡೆ ನೀಡುವ ಯತ್ನ ಇಲ್ಲಿ ಢಾಳಾಗಿದೆ ಎಂಬುದು ಸ್ಪಷ್ಟ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿವಾದಕ್ಕೆ ಮೂಲ ಕಾರಣವಾದರೂ ಏನು? ಅದು – ‘ಪದ್ಮಾವತಿ’ ಸಿನಿಮಾದಲ್ಲಿ ಪದ್ಮಾವತಿ ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಪಾತ್ರಗಳನ್ನು ಚಿತ್ರಿಸಿರುವ ರೀತಿಯ ಬಗೆಗಿರುವ ಭೀತಿ. ‘ಪದ್ಮಾವತಿ’ ಸಿನಿಮಾ ಮಾತ್ರವಲ್ಲ, ಮೊನ್ನೆ ಮುಕ್ತಾಯವಾದ ಗೋವಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದ್ದ ‘ಎಸ್ ದುರ್ಗಾ’ ಹಾಗೂ ‘ನ್ಯೂಡ್ ’ ಸಿನಿಮಾಗಳನ್ನೂ ಇಂತಹದ್ದೇ ಕಾರಣಗಳಿಗಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೈಬಿಟ್ಟಂತಹ ಬೆಳವಣಿಗೆಯೂ ನಡೆದಿದೆ. ಇದಕ್ಕೆಲ್ಲಾ ಏನು ಕಾರಣ? ಸಿನಿಮಾದಲ್ಲಿ ಹೆಣ್ಣಿನ ಚಿತ್ರಣ ಕುರಿತಾಗಿ ನಮಗಿರುವ ಆಷಾಢಭೂತಿ ಧೋರಣೆಯಲ್ಲದೆ ಮತ್ತೇನಲ್ಲ ಎಂದಷ್ಟೇ ಗಟ್ಟಿಯಾಗಿ ಹೇಳಬೇಕಿದೆ.

‘ಸೆಕ್ಸಿ ದುರ್ಗಾ’ ಎಂದಿದ್ದ ಸಿನಿಮಾ ಶೀರ್ಷಿಕೆ ತಪ್ಪು ವ್ಯಾಖ್ಯಾನಗಳಿಗೆ ಕಾರಣವಾಗಬಹುದೇನೋ ಎಂಬಂಥ ಭೀತಿಯನ್ನು ನಿವಾರಿಸುವುದಕ್ಕಾಗಿ ‘ಎಸ್ ದುರ್ಗಾ’ ಎಂದು ಸಿನಿಮಾ ಶೀರ್ಷಿಕೆಯನ್ನು ಸಂಕ್ಷಿಪ್ತಗೊಳಿಸಿದರೂ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ ಎಂದರೆ ಈ ಮನಸ್ಥಿತಿ ಬೇರೂರಿರುವ ಬಗೆ ಎಂತಹದ್ದು ಎಂಬುದನ್ನು ಊಹಿಸಿ. ವಾಸ್ತವವಾಗಿ ಈ ಚಿತ್ರ, ನಿಜ ಬದುಕಿನಲ್ಲಿ ದಿನನಿತ್ಯ ಮಹಿಳೆ ಎದುರಿಸುವ ಅಸುರಕ್ಷಿತ ಹಾಗೂ ಹೆಣ್ಣಿನ ಕುರಿತಾದ ಅಪಮೌಲ್ಯೀಕರಣದ ಭಾವವನ್ನು ನಿರೂಪಿಸುವ ಚಿತ್ರ. ಇನ್ನು ‘ನ್ಯೂಡ್’ ಸಿನಿಮಾ, ಚಿತ್ರಕಲಾವಿದರಿಗೆ ಚಿತ್ರ ಬಿಡಿಸುವುದಕ್ಕಾಗಿ ಬೆತ್ತಲೆ ರೂಪದರ್ಶಿಯಾಗಿ ಕೆಲಸ ಮಾಡುವ ಮಹಿಳೆಯ ಕುರಿತಾದದ್ದು. ವಿಭಿನ್ನ ನೆಲೆಗಳಲ್ಲಿ ಸಮಕಾಲೀನ ಭಾರತದ ಸಶಕ್ತ ಮಹಿಳೆಯರ ಚಿತ್ರಣ ಈ ಸಿನಿಮಾಗಳಲ್ಲಿದೆ ಎಂಬ ಅಭಿಪ್ರಾಯ ಈ ಚಿತ್ರವನ್ನು ಚಿತ್ರೋತ್ಸವದಲ್ಲಿ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆ ಮಾಡಿದ್ದ ಆಯ್ಕೆ ಸಮಿತಿಯದಾಗಿತ್ತು. ಆದರೆ ಕಡೆಗೂ ಅನೈತಿಕ ಪೊಲೀಸ್‌ಗಿರಿಯ ಮಾನದಂಡಗಳೇ ವಿಜೃಂಭಿಸುವಂತಾದದ್ದು ವಿಪರ್ಯಾಸ.

‘ಪದ್ಮಾವತಿ’ ಸಿನಿಮಾದಲ್ಲಿ ರಾಣಿ ಪದ್ಮಾವತಿಯಾಗಿ ಅಭಿನಯಿಸಿರುವ ದೀಪಿಕಾ ಪಡುಕೋಣೆ ಹಾಗೂ ಸಿನಿಮಾ ನಿರ್ದೇಶಕ ಸಂಜಯ್ ಬನ್ಸಾಲಿ ವಿರುದ್ಧ ಬೆದರಿಕೆ ಹಾಕುತ್ತಿರುವ ರೀತಿ ನಾಗರಿಕ ಸಮಾಜಕ್ಕೆ ತಕ್ಕುದಾಗಿಲ್ಲ ಎಂಬುದು ಎದ್ದು ಕಾಣಿಸುವ ಸಂಗತಿ. ಹೀಗಿದ್ದೂ ಬೆದರಿಕೆ ಹಾಕುತ್ತಿರುವವರ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿಲ್ಲ ಏಕೆ? ಬದಲಿಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅಂತಹವರೂ ಸಿನಿಮಾ ಕುರಿತು ಟೀಕೆ ಮಾಡುತ್ತಾರೆ.

ಮುಖದ ಮೇಲೆ ಸೆರಗಿಲ್ಲದೆ ರಾಣಿ ನರ್ತಿಸಿರುವ ಹಾಡಿನ ಚಿತ್ರಣ (ಘೂಮರ್) ರಜಪೂತರ ಭಾವನೆಗಳಿಗೆ ಧಕ್ಕೆ ತರುವಂತಹದ್ದು ಎಂಬುದನ್ನು ಈಗ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ. ಆದರೆ ರಾಣಿ ‘ಪದ್ಮಾವತಿ’ಯ ಗೌರವ ರಕ್ಷಿಸುವುದಕ್ಕಾಗಿ ಆ ಪಾತ್ರ ಮಾಡಿದ ಮಹಿಳೆಯ ಮೇಲೆ ಕೈ ಮಾಡಬಹುದು ಎಂಬ ತರ್ಕವನ್ನು ಒಪ್ಪುವುದು ಸಾಧ್ಯವೆ? ‘ರಜಪೂತರು ಮಹಿಳೆ ಮೇಲೆ ಎಂದೂ ಕೈ ಎತ್ತುವುದಿಲ್ಲ. ಆದರೆ ಅಗತ್ಯ ಬಿದ್ದಲ್ಲಿ ಶೂರ್ಪನಖಿಗೆ ಲಕ್ಷ್ಮಣ ಮಾಡಿದ್ದನ್ನು ನಾವು ದೀಪಿಕಾ ಪಡುಕೋಣೆಗೆ ಮಾಡುತ್ತೇವೆ. ಲಕ್ಷ ಜನ ಒಟ್ಟಾಗುತ್ತೇವೆ. ನಮ್ಮ ಪೂರ್ವಿಕರು, ಇತಿಹಾಸವನ್ನು ರಕ್ತದಲ್ಲಿ ಬರೆದರು. ಅದನ್ನು ಕಪ್ಪು ಮಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಕರ್ಣಿ ಸೇನಾದ ಮಹಿಪಾಲ ಸಿಂಗ್ ಮಕ್ರಾಣಾ ಹೇಳಿ ದಕ್ಕಿಸಿಕೊಂಡಿದ್ದಾರೆ. ಅವರ ವಿರುದ್ಧ ಯಾವುದೇ ಕಾನುನು ಕ್ರಮವನ್ನೂ ಜರುಗಿಸಿಲ್ಲ.

‘ಜೋಹರ್ ಕಾ ಜ್ವಾಲಾ ಹೈ. ಬಹುತ್ ಕುಚ್ ಜಲೇಗಾ. ರೋಖ್‌ ಸಕೋ ತೊ ರೋಖ್’ (ತ್ಯಾಗದ ಜ್ವಾಲೆ ಅದು. ಬಹಳಷ್ಟು ಸುಟ್ಟು ಹೋಗುತ್ತವೆ. ಸಾಧ್ಯವಾದರೆ ಈ ಬೆಂಕಿ ತಡೆಯಿರಿ) ಎಂದು ಬೆದರಿಕೆ ಒಡ್ಡುವ ಮಾತುಗಳಿಗೆ ಅಧಿಕಾರಸ್ಥರು ಮೌನವಾಗಿದ್ದಾರೆ. ದೀಪಿಕಾ ಮತ್ತು ಬನ್ಸಾಲಿ ಅವರನ್ನುಕೊಂದವರಿಗೆ ₹ 5 ಕೋಟಿ ನೀಡುವುದಾಗಿ ಹೇಳಿದ ಸೋಮ್ ವಿರುದ್ಧ ಕ್ರಮ ಎಲ್ಲಿ? ನಂತರ ಬಹುಮಾನ ಮೊತ್ತವನ್ನು ₹ 10 ಕೋಟಿಗೆ ಏರಿಸಿದ ಹರಿಯಾಣದ ಬಿಜೆಪಿ ನಾಯಕ ಸೂರಜ್ ಪಾಲ್ ಅಮು ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ‘ಪದ್ಮಾವತಿ’ ಗೌರವ ರಕ್ಷಿಸುವ ನೆಪದಲ್ಲಿ ಹರಡಲಾಗುತ್ತಿರುವ ಈ ವಿದ್ವೇಷ ತಾಲಿಬಾನೀಕರಣವಲ್ಲದೆ ಮತ್ತೇನು? ರಾಜಕೀಯ ದಾಳಗಳಾಗಿ ಬಳಕೆಯಾಗುತ್ತಿರುವ ಈ ಹೇಳಿಕೆಗಳಿಗೆ ಕರ್ನಾಟಕದ ರಾಜಕೀಯ ನಾಯಕರೂ ದನಿಗೂಡಿಸಿರುವುದು ವಿಶೇಷ. ಆದರೆ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆಗೆ ಪೂರ್ಣ ಬೆಂಬಲವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ವಿರುದ್ಧ ದನಿ ಎತ್ತಿದ್ದ ಪಂಜಾಬ್‌ನ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈಗ ತಮ್ಮ ಹೇಳಿಕೆ ಹಿಂತೆಗೆದುಕೊಂಡಿದ್ದಾರೆ.

ಚಿತ್ತೋರ್‌ನ ಪದ್ಮಾವತಿ 16,000 ಮಹಿಳೆಯರೊಂದಿಗೆ ಜೋಹರ್‌ (ಸಾಮೂಹಿಕ ಸತಿ ಸಹಗಮನ) ದಂತಕಥೆಯನ್ನು ನಾವೆಲ್ಲರೂ ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ. ಇಂತಹ ಮಹಾನ್ ಕಥೆಗಳಲ್ಲಿ ಒಂದಿಷ್ಟು ಇತಿಹಾಸ, ಕಲ್ಪನೆ, ಪುರಾಣಗಳಿರುವುದು ಸಹಜ. ವಾಸ್ತವವನ್ನು ಮೀರಿದ ಕಾಲ್ಪನಿಕತೆಗಳಲ್ಲಿ ಇಂತಹ ಕಥೆಗಳು ಬೆಳೆಯುತ್ತವೆ ಎಂಬುದು ನಮಗೆ ನೆನಪಿರಬೇಕು. ಇತಿಹಾಸಹಾಗೂ ಪುರಾಣ ಕಥೆಗಳು ಸಾಹಿತ್ಯಕೃತಿ ಅಥವಾ ಸಿನಿಮಾದಂತಹ ಸೃಜನಾತ್ಮಕ ಮಾಧ್ಯಮಗಳಲ್ಲಿ ಬೇರೆಯದೇ ಆಯಾಮ ಪಡೆದುಕೊಳ್ಳುವುದೂ ಮಾಮೂಲು. ಇತಿಹಾಸದ ದಾಖಲೆಗಳ ಪ್ರಕಾರ, 1303ರಲ್ಲಿ ಚಿತ್ತೂರಿನ ರಾಣಾನನ್ನು ಅಲ್ಲಾವುದ್ದೀನ್ ಖಿಲ್ಜಿ ಸೋಲಿಸುತ್ತಾನೆ 1316ರಲ್ಲಿ ಖಿಲ್ಜಿಯ ಸಾವು. ಐತಿಹಾಸಿಕ ದಾಖಲೆಗಳಲ್ಲಿ ಪದ್ಮಿನಿ ಅಥವಾ ಪದ್ಮಾವತಿ ಹೆಸರಿಲ್ಲ. ಎರಡು ಶತಮಾನಗಳಾದ ನಂತರ 1540ರಲ್ಲಿ ‘ಪದ್ಮಾವತಿ’ ಎಂಬ ಕಾವ್ಯ, ಅನೇಕ ಸ್ಥಳೀಯ ಪುರಾಣ ಕಥೆಗಳ ಸೃಷ್ಟಿಗೆ ಕಾರಣವಾಯಿತು ಎನ್ನಲಾಗುತ್ತದೆ. ಈ ಕಾವ್ಯವನ್ನು ಬರೆದದ್ದು ಮಲಿಕ್ ಮೊಹಮ್ಮದ್ ಜಾಯಸಿ. ಸೂಫಿ ಪರಂಪರೆಯ ಸಾಹಿತ್ಯಕ ಪ್ರಕಾರದಲ್ಲಿ ರೂಪಕಗಳು, ದೈವದ ಕುರಿತಾಗಿ ಮನುಷ್ಯ ಪ್ರೀತಿ, ಬದುಕಿನಲ್ಲಿ ಒದಗುವ ಅಡೆತಡೆ ಜಯಿಸುವುದು - ಇಂತಹ ಅಂಶಗಳು ಕವಿ ಕಲ್ಪನೆಯಲ್ಲಿ ಮೈದಳೆಯುವುದು ಮಾಮೂಲು. ಹಿಂದೂ ರಾಣಿಯ ಬಗ್ಗೆ ಮುಸ್ಲಿಂ ರಾಜನ ಪ್ರೀತಿ, ಯುದ್ಧದಲ್ಲಿ ಹಿಂದೂ ರಾಜನ ಸೋಲು, ಇದರಿಂದ ಮುಸ್ಲಿಂ ರಾಜನಿಗೆ ಶರಣಾಗತಳಾಗಬಯಸದೆ ಹಿಂದೂ ರಾಣಿ ಸತಿಸಹಗಮನ ಮಾಡುವಂತಹ ಕಥಾನಕ ಸಹಜವಾಗಿಯೇ ಜನರ ಭಾವನೆಗಳನ್ನು ಸ್ಪರ್ಶಿಸುವಂತಹದ್ದಾಗಿತ್ತು.

ರಾಜಸ್ಥಾನದಿಂದ ಬಂಗಾಳದವರೆಗೆ ಇಡೀ ಉತ್ತರ ಭಾರತದಲ್ಲಿ 16ರಿಂದ 20ನೇ ಶತಮಾನದವರೆಗೆ ಈ ಕಥೆಯ ವ್ಯಾಪಕ ಚಲಾವಣೆ ಹಾಗೂ ಅದು ಪಡೆದುಕೊಂಡ ಪರಿವರ್ತನೆಗಳನ್ನು ರಮ್ಯಾ ಶ್ರೀನಿವಾಸನ್ ಅವರು ‘ದಿ ಮೆನಿ ಲೈವ್ಸ್ ಆಫ್ ಎ ರಜಪೂತ್ ಕ್ವೀನ್’ ಎಂಬ ತಮ್ಮ ಪುಸ್ತಕದಲ್ಲಿ ಗುರುತಿಸುತ್ತಾರೆ. ಹೀಗಾಗಿ ಈ ಕಥಾನಕ ಯಾರಿಗೆ ಸೇರಿದ್ದು? ಎನ್ನುವ ಪ್ರಶ್ನೆ ಸಹಜ. ಕರ್ಣಿಸೇನಾಗೆ ಈ ಕಥಾನಕದ ಮೇಲಿರುವ ಅಧಿಕಾರವಾದರೂ ಏನು?ಎಂದು ಕೇಳಬೇಕಾಗುತ್ತದೆ.

1829ರ ಡಿಸೆಂಬರ್ 8ರಂದು ಸತಿ ನಿಯಂತ್ರಣ ಕಾಯಿದೆಯನ್ನು ಬ್ರಿಟಿಷ್ ಭಾರತದ ಅಂದಿನ ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟೆಕ್ ಜಾರಿಗೊಳಿಸಿದ ಎಂಬುದನ್ನೂ ನೆನಪಿಸಿಕೊಳ್ಳಬೇಕು. ಸತಿ ಪದ್ಧತಿ ನಿಷೇಧವಾಗಿ ಈಗಾಗಲೇ 188 ವರ್ಷಗಳು ಸಂದಿವೆ. ಹೀಗಿದ್ದೂ ಮಧ್ಯಯುಗದಲ್ಲಿ ಸತಿಯಾದ ದಂತಕತೆಯೊಂದರ ಆಧಾರದಲ್ಲಿ ಪದ್ಮಾವತಿಯನ್ನು ದೈವೀಕರಿಸಲು ನಮ್ಮ ರಾಜಕೀಯ ನಾಯಕರು ಹೊರಟಿರುವುದು ಎಷ್ಟು ಸರಿ? ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಹ್ ಚೌಹಾಣ್ ಅವರಂತೂ ಪದ್ಮಾವತಿಯನ್ನು ‘ರಾಷ್ಟ್ರಮಾತಾ ಪದ್ಮಾವತಿ’ ಎಂದು ಕರೆದಿದ್ದಾರೆ.

ಮಹಿಳಾ ಕಾಳಜಿಯ ನೆಪದಲ್ಲಿ ಮಹಿಳೆಯನ್ನು ಪುರುಷಪ್ರಧಾನ ಮೌಲ್ಯಗಳಲ್ಲಿ ಬಂಧಿಸುವ ಕಥಾನಕವೇ ಇಲ್ಲಿ ಢಾಳಾಗಿ ಕಾಣಿಸುತ್ತದೆ ಎನ್ನದೆ ವಿಧಿ ಇಲ್ಲ. ಹೆಣ್ಣಿನ ವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸಮುದಾಯದ ಪ್ರತಿಪಾದನೆಯೇ ಪ್ರಬಲವಾಗುತ್ತಿರುವ ದಿನಗಳಿವು. ಮುಸ್ಲಿಂ ಯುವಕನನ್ನು ಮದುವೆಯಾಗಿ ಹಾದಿಯಾ ಆದ ಅಖಿಲಾಳನ್ನು ನಿಯಂ

ತ್ರಿಸುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ನಡೆದಿದ್ದನ್ನೂ ನಾವು ನೋಡಿದ್ದೇವೆ. ಸ್ವಇಚ್ಛೆಯಿಂದ ವಿವಾಹವಾದ ವಯಸ್ಕ ಯುವತಿಯನ್ನು ಚಿಕ್ಕ ಬಾಲೆಯಂತೆ ಪರಿಭಾವಿಸಿ ಪೋಷಕರ ವಶಕ್ಕೆ ಕೇರಳ ಹೈಕೋರ್ಟ್ ಒಪ್ಪಿಸಿದಂತಹ ಪ್ರಕರಣವೂ ನಡೆದುಹೋಯಿತು. ಈಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ, ತನ್ನ ಪೋಷಕರ ವಶದಿಂದ ಹಾದಿಯಾಳಿಗೆ ಬಿಡುಗಡೆ ಸಿಕ್ಕಿದೆ. ಶಿಕ್ಷಣವನ್ನು ಮುಂದುವರಿಸುವುದಕ್ಕೆ ಹಾದಿಯಾಗೆ ಅವಕಾಶ ಕೊಡಲಾಗಿದೆ. ಇಸ್ಲಾಮ್ ಭೀತಿ ಸಾಂಸ್ಥೀಕರಣಗೊಂಡು ವಯಸ್ಕ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಪರಿಸ್ಥಿತಿಗೆ ಇದು ದ್ಯೋತಕ.

ಈ 21ನೇ ಶತಮಾನದಲ್ಲಿ ಸತಿಯನ್ನು ವೈಭವೀಕರಿಸುವ ಪ್ರಯತ್ನ ಎಷ್ಟು ಸರಿ? ಈಗ ಅದು ಪ್ರಸ್ತುತವೆ? ಎಂಬುದು ಪ್ರಶ್ನೆ. ರಾಜಸ್ಥಾನದ ಮಹಿಳೆಯರಲ್ಲಿ ಶೇ 47ರಷ್ಟು ಮಂದಿ ಅನಕ್ಷರಸ್ಥರು. ಶೇ 43ರಷ್ಟು ಹೆಣ್ಣುಮಕ್ಕಳು ಬಾಲ್ಯವಿವಾಹ ಪಿಡುಗಿಗೆ ಸಿಲುಕುತ್ತಾರೆ. ಶೇ 40ರಷ್ಟು ಹೆಣ್ಣುಮಕ್ಕಳು 19 ವರ್ಷ ಆಗುವ ಮೊದಲೇ ತಾಯಂದಿರಾಗಿರುತ್ತಾರೆ.

ಗಂಡು – ಹೆಣ್ಣುಮಕ್ಕಳ ಅನುಪಾತ 900 ದಾಟಿಲ್ಲ ಎಂಬುದು ಅಲ್ಲಿನ ಹೆಣ್ಣಮಕ್ಕಳ ಸ್ಥಿತಿಯನ್ನು ಕಟ್ಟಿಕೊಡುತ್ತದೆ. ಈ ಅಸಮಾನತೆ ತೊಡೆಯಲು ಕರ್ಣಿಸೇನಾ ಪ್ರಯತ್ನಿಸಿದಲ್ಲಿ ಅದು ಹೆಣ್ಣುಮಕ್ಕಳ ಕುರಿತಾದ ನೈಜ ಕಾಳಜಿಯಾಗುತ್ತದೆ. ಪುರಾಣ ಕಾಲದ ರಾಣಿಯ ಗೌರವ ಕಾಪಾಡಲು ಕತ್ತಿ ಹಿಡಿದು ನಿಲ್ಲುವುದಕ್ಕಿಂತ ಸಮಕಾಲೀನ ಮಹಿಳೆಯನ್ನು ಗೌರವಿಸುವುದು ಮುಖ್ಯವಲ್ಲವೆ? ಬದಲಿಗೆ ಚುನವಣಾ ರಾಜಕೀಯಕ್ಕೆ ಸೊಪ್ಪು ಹಾಕಲು ಹೆಣ್ಣುಮಕ್ಕಳ ಗೌರವದ ಪರಿಕಲ್ಪನೆಯನ್ನು ದಾಳವಾಗಿ ಬಳಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಜನ ದಡ್ಡರಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry