7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

‘ಮಹಿಳಾ ಉದ್ದಿಮೆಗಳ ಪಾರ್ಕ್‌’ ಉದ್ಘಾಟನೆಗೆ ಸಜ್ಜು

Published:
Updated:
‘ಮಹಿಳಾ ಉದ್ದಿಮೆಗಳ ಪಾರ್ಕ್‌’ ಉದ್ಘಾಟನೆಗೆ ಸಜ್ಜು

ರಾಮನಗರ: ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಮೊಟ್ಟಮೊದಲ ‘ಮಹಿಳಾ ಉದ್ದಿಮೆಗಳ ಪಾರ್ಕ್‌’ ಉದ್ಘಾಟನೆಗೆ ಸಜ್ಜಾಗುತ್ತಿದೆ.

ಮಹಿಳಾ ಉದ್ಯಮಿಗಳಿಗೆಂದೇ ಮೀಸಲಾದ ಮೊದಲ ಕೈಗಾರಿಕಾ ಪ್ರದೇಶ ಎನ್ನುವುದು ಇದರ ವಿಶೇಷ. ಈಗಾಗಲೇ ಒಟ್ಟು 105 ಮಂದಿ ಉದ್ಯಮಿಗಳು ಈ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಜಾಗ ಹಂಚಿಕೆ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಈ ಪಾರ್ಕ್‌ ಅನ್ನು ಲೋಕಾರ್ಪಣೆ ಮಾಡಲು ಜಿಲ್ಲಾಡಳಿತವು ಯೋಜಿಸಿದೆ.

‘ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಈ ಪಾರ್ಕ್‌ ನಿರ್ಮಾಣದ ಸಹಭಾಗಿತ್ವ ಹೊತ್ತಿವೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಒಟ್ಟು 1,366 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 106 ಎಕರೆ ಪ್ರದೇಶವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ರಸ್ತೆ, ಚರಂಡಿ, ನೀರಿನ ಸಂಪರ್ಕ ಮೊದಲಾದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವು ಭರದಿಂದ ಸಾಗಿದೆ’ ಎನ್ನುತ್ತಾರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಎಸ್. ಹೊನಮಾನೆ.

‘ಸದ್ಯದ ಕೈಗಾರಿಕಾ ವ್ಯವಸ್ಥೆಯಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ತೀರ ಕಡಿಮೆ ಇದೆ. ಸ್ತ್ರೀಯರೂ ಯಶಸ್ವಿ ಉದ್ಯಮಿಗಳಾಗಬೇಕು ಎನ್ನುವ ಸದಾಶಯದೊಂದಿಗೆ ರಾಜ್ಯ ಸರ್ಕಾರವು ಈ ಪಾರ್ಕ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಅದರಲ್ಲೂ ರಾಜಧಾನಿಗೆ ಸಮೀಪದಲ್ಲಿಯೇ ಇರುವ ನಮ್ಮ ಜಿಲ್ಲೆಯಲ್ಲಿ ಈ ಕನಸು ಸಾಕಾರಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ರಾಮನಗರ ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ.

ಉದ್ಯಮಿಗಳಿಗೆ ಅವಶ್ಯವಾದ ರಸ್ತೆ, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರವು ₹37 ಕೋಟಿ ಅನುದಾನ ನೀಡಿದೆ. ಇದಲ್ಲದೆ ಕೇಂದ್ರ ಪುರಸ್ಕೃತ ಎಂಎಸ್‌ಸಿ ಸಿಡಿಪಿಸಿ ಯೋಜನೆ ಅಡಿ ₹7.5 ಕೋಟಿಯಷ್ಟು ಹೆಚ್ಚುವರಿ ಅನುದಾನ ಲಭ್ಯವಿದೆ. ಬೆಂಗಳೂರು ಜಲಮಂಡಳಿಯಿಂದ ನೀರು ಸರಬರಾಜು ಹಾಗೂ ಬೆಸ್ಕಾಂನಿಂದ ವಿದ್ಯುತ್‌ ಪೂರೈಕೆಯ ಸೌಲಭ್ಯವೂ ಸಿಗಲಿದೆ.

‘ಕೆಐಡಿಬಿಯು ಇಲ್ಲಿನ ಪ್ರತಿ ಎಕರೆ ಜಮೀನಿಗೆ ₹1.4 ಕೋಟಿ ಖರೀದಿ ದರವನ್ನು ನಿಗದಿ ಪಡಿಸಿದೆ. ಇದು ಉಳಿದ ಕೈಗಾರಿಕೆಗಳಿಗೆ ಭೂಮಿ ನೀಡುವ ದರಕ್ಕಿಂತ (₹1.5 ಕೋಟಿ) ₹10 ಲಕ್ಷ ಕಡಿಮೆ ಇದೆ. ಪ್ರತಿ ಉದ್ಯಮಿಗೆ ಕನಿಷ್ಠ 10 ಗುಂಟೆ ಭೂಮಿಯಿಂದ ಹಿಡಿದು 2 ಎಕರೆವರೆಗೆ ನಿವೇಶನ ಸಿಗಲಿದೆ. ಇಲ್ಲಿಗೆ ಬರುವ ಬಹುತೇಕ ಉದ್ಯಮಿಗಳು ಸಣ್ಣ ಕೈಗಾರಿಕೆಗಳನ್ನು ಹೊಂದಿದ್ದು, ಕಡಿಮೆ ವಿಸ್ತೀರ್ಣದ ನಿವೇಶನ ಕೋರಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಬಂದ ಅರ್ಜಿಗಳನ್ನು ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದಿಸಿ ಕೆಐಡಿಬಿ ಮುಂದಿಡಲಾಗಿದೆ’ ಎನ್ನುತ್ತಾರೆ ವಿ.ಎಸ್‌. ಹೊನಮಾನೆ.

‘ಅರ್ಜಿ ಸಲ್ಲಿಸಿದವರ ಪೈಕಿ ಶೇ 25ರಷ್ಟು ಮಂದಿ ಹೊಸತಾಗಿ ಉದ್ದಿಮೆ ಸ್ಥಾಪಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಬಾಡಿಗೆ ಕಟ್ಟಡಗಳಲ್ಲಿ ಕೈಗಾರಿಕೆ ನಡೆಸುತ್ತಿರುವವರು, ಬೆಂಗಳೂರಿನಲ್ಲಿ ಕೈಗಾರಿಕೆಗಳಿದ್ದು ಜಾಗದ ಕೊರತೆ ಅನುಭವಿಸುತ್ತಿರುವ ಮಹಿಳಾ ಉದ್ಯಮಿಗಳು ಇಲ್ಲಿಗೆ ಬರಲು ಆಸಕ್ತಿ ತೋರಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ಏನೇನು ಇರಲಿದೆ: ಸಿದ್ಧ ಉಡುಪು ತಯಾರಿಕೆ, ಆಹಾರ ಸಂಸ್ಕರಣೆ, ಗೃಹ ಬಳಕೆ ಉತ್ಪನ್ನಗಳು, ರಾಸಾಯನಿಕ ತಯಾರಿಕೆ, ಆಟೊಮೊಬೈಲ್‌... ಹೀಗೆ ವಿವಿಧ ಕ್ಷೇತ್ರಗಳ ಉದ್ಯಮಿಗಳು ಇಲ್ಲಿ ತಮ್ಮ ಕೈಗಾರಿಕಾ ಘಟಕಗಳನ್ನು ತೆರೆಯಲಿದ್ದಾರೆ. ಇದರಿಂದ ಸುಮಾರು ಐದು ಸಾವಿರ ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಹೊಂದಲಾಗಿದೆ.

ಆರು ಜಿಲ್ಲೆಗಳಲ್ಲಿ ನಿರ್ಮಾಣ

ಮಹಿಳಾ ಉದ್ಯಮಿಗಳಿಗೆಂದೇ ಪ್ರತ್ಯೇಕ ಕೈಗಾರಿಕಾ ಪಾರ್ಕ್‌ ನಿರ್ಮಾಣ ಮಾಡಬೇಕು ಎನ್ನುವ ಕನಸಿಗೆ ರೆಕ್ಕೆ ಬಂದಿದ್ದು ರತ್ನಪ್ರಭಾ ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಆಗಿದ್ದಾಗ.

ರಾಜ್ಯದ ಇನ್ನೂ 5 ಜಿಲ್ಲೆಗಳಲ್ಲಿ ಇಂತಹದ್ದೇ ಪಾರ್ಕ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಮೈಸೂರು, ಬಳ್ಳಾರಿ, ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ–ಧಾರವಾಡದಲ್ಲಿ ಹಂತಹಂತವಾಗಿ ಮಹಿಳಾ ಉದ್ದಿಮೆಗಳ ಪಾರ್ಕ್‌ಗಳು ಕಾರ್ಯಾರಂಭ ಮಾಡಲಿವೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

* * 

ಹಾರೋಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹಿಳಾ ಉದ್ದಿಮೆಗಳ ಪಾರ್ಕ್‌ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಇದನ್ನು ಉದ್ಘಾಟಿಸಲಿದ್ದಾರೆ

ಡಾ. ಬಿ.ಆರ್‌. ಮಮತಾ

ಜಿಲ್ಲಾಧಿಕಾರಿ, ರಾಮನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry