ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ ಬಂತೆಂದರೆ ಹೌಸ್‌ಫುಲ್

Last Updated 29 ನವೆಂಬರ್ 2017, 5:44 IST
ಅಕ್ಷರ ಗಾತ್ರ

ತುಮಕೂರು: ಡಾ.ಗುಬ್ಬಿ ವೀರಣ್ಣನವರ ನೆನಪಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ ಈಚೆಗೆ ರಂಗ ಚಟುವಟಿಕೆಗಳು ಹೆಚ್ಚು ಗರಿಗೆದರಿವೆ. ಪೌರಾಣಿಕ ನಾಟಕಗಳನ್ನು ಇಲ್ಲಿ ಪ್ರದರ್ಶಿಸಲು ಬಯಸುವ ತಂಡಗಳು ಪಾಳಿ ಹಚ್ಚಿ ಕಾಯಬೇಕು. ಅಷ್ಟೊಂದು ಬೇಡಿಕೆ ಕಲಾಕ್ಷೇತ್ರಕ್ಕೆ ಬಂದಿದೆ.

ಭಾನುವಾರ ಬಂತೆಂದರೆ ಪೌರಾಣಿಕ ನಾಟಕಗಳು ದಿನಪೂರ್ತಿ ಪ್ರದರ್ಶನ ಕಾಣುತ್ತವೆ. ಪೌರಾಣಿಕ ನಾಟಕ ಪ್ರಿಯರು, ಕಲಾವಿದರು, ರಂಗಸಜ್ಜಿಕೆಯವರಿಗೆ ಆ ದಿನ ಎಡೆಬಿಡದ ಕೆಲಸ. ನಗರ ಪ್ರದೇಶದ ಜನರೂ ಸೇರಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರ, ಕೊರಟಗೆರೆ, ಮಧುಗಿರಿ, ಪಾವಗತಿ, ಶಿರಾ ಹೀಗೆ ವಿವಿಧ ತಾಲ್ಲೂಕುಗಳಿಂದ ಪೌರಾಣಿಕ ನಾಟಕ ಪ್ರಿಯರು ನಾಟಕ ವೀಕ್ಷಿಸಲು ಬರುತ್ತಾರೆ. ಪ್ರದರ್ಶನ ವೀಕ್ಷಿಸುವುದೇ ಇವರಿಗೆ ರಸದೌತನ.

ತಿಂಗಳಾನುಗಟ್ಟಲೆ ಅಭ್ಯಾಸ ಮಾಡಿದ ಕಲಾವಿದರು ಪ್ರದರ್ಶನಕ್ಕೆ ತುದಿಗಾಲ ಮೇಲೆ ನಿಂತಿರುತ್ತಾರೆ. ಬೆಳಿಗ್ಗೆ 11ರಿಂದ ರಾತ್ರಿ 10 ಗಂಟೆಯವರೆಗೂ ಕಲಾಕ್ಷೇತ್ರ ಗಿಜಿಗಿಡುತ್ತಿರುತ್ತದೆ. ರಂಗ ಸಜ್ಜಿಕೆಗಳೂ ಒಂದು ವಾರಕ್ಕಿಂತ ಇನ್ನೊಂದು ವಾರಕ್ಕೆ ನಾಟಕ ಪ್ರದರ್ಶಿಸುವ ತಂಡಗಳು, ನಿರ್ದೇಶಕರು, ರಂಗಸಜ್ಜಿಕೆಯವರು ಬದಲಾಗಬಹುದು. ಆದರೆ, ಕಲಾಕ್ಷೇತ್ರ ಮಾತ್ರ ಹೌಸ್ ಫುಲ್‌.

ಭಾನುವಾರ ನಗರಕ್ಕೆ ಬಂದ ಗ್ರಾಮೀಣ ಪ್ರದೇಶದ ಜನರು ಗುಬ್ಬಿ ಕಲಾ ಕ್ಷೇತ್ರಕ್ಕೆ ಹೋದರೆ ಸಾಕು. ಯಾವುದಾದರೂ ಒಂದು ನಾಟಕ ಇದ್ದೇ ಇರುತ್ತದೆ ಎಂಬಂತೆ ಕಲಾಕ್ಷೇತ್ರಕ್ಕೆ ಬಂದು ನಾಟಕ ವೀಕ್ಷಿಸುತ್ತಾರೆ. ಭಾನುವಾರ ನಗರದ ಹೆಚ್ಚಿನ ಜನ ಚಲನಚಿತ್ರ ಮಂದಿರದ ಕಡೆ ಹೋದರೆ ಗ್ರಾಮೀಣ ಪ್ರದೇಶದ ಹೆಚ್ಚಿನ ಜನರು ನಾಟಕ ವೀಕ್ಷಣೆಗಾಗಿಯೇ ನೂರಾರು ರೂಪಾಯಿ ಕರ್ಚು ಮಾಡಿಕೊಂಡು ಕಲಾಕ್ಷೇತ್ರಕ್ಕೆ ಬರುತ್ತಾರೆ. ಒಂದು ಗಂಟೆಯಲ್ಲ, ಎರಡು ಗಂಟೆಯಲ್ಲ. ದಿನಪೂರ್ತಿ ನಾಟಕ ನಡೆದರೂ ಖುರ್ಚಿ ಬಿಟ್ಟು ಏಳದೇ ನೋಡುತ್ತಲೇ ಇರುತ್ತಾರೆ.

ಆನ್‌ಲೈನ್ ಬುಕ್ಕಿಂಗ್ ಪ್ರಭಾವ: ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಸೇರಿದಂತೆ ಯಾವುದೇ ಕಾರ್ಯಕ್ರಮ ಮಾಡಬೇಕಾದರೂ ಆನ್‌ಲೈನ್‌ನಲ್ಲಿಯೇ ಬುಕ್ಕಿಂಗ್ ಮಾಡಿರಬೇಕು. ಹೀಗಾಗಿ ನಾಟಕ ಪ್ರದರ್ಶನ ತಂಡಗಳು ಉತ್ಸುಕತೆಯಿಂದ ಬಳಸಿಕೊಳ್ಳುತ್ತಿವೆ.

ಒಂದಲ್ಲ, ಎರಡಲ್ಲ ಮೂರ್ನಾಲ್ಕು ತಿಂಗಳ ಮೊದಲೇ ಬುಕ್ಕಿಂಗ್ ಮಾಡುತ್ತಿದ್ದಾರೆ. ತುಮಕೂರು ನಗರ, ಗ್ರಾಮೀಣ, ಶಿರಾ, ಪಾವಗಡ ಭಾಗದಿಂದ ಹೆಚ್ಚಿನ ತಂಡಗಳು ಪ್ರದರ್ಶನಕ್ಕೆ ಬರುತ್ತವೆ. ಅಲ್ಲದೇ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರದ ತಂಡಗಳೂ ಈ ಕಲಾ ಕ್ಷೇತ್ರದಲ್ಲಿ ನಾಟಕ ಪ್ರದರ್ಶಿಸಲು ಧಾವಿಸುತ್ತಿವೆ.

ನಾಟಕ ಪ್ರದರ್ಶಿಸುವ ತಂಡ ಯಾವುದೇ ಆದರೂ ಪ್ರೇಕ್ಷಕ ಮಾತ್ರ ಮುಕ್ತವಾಗಿ ಮನಸ್ಸಿನಿಂದ ವೀಕ್ಷಿಸುತ್ತಾನೆ. ಹೀಗಾಗಿ, ಭಾನುವಾರ ನಗರದ ಚಲನಚಿತ್ರ ಮಂದಿರಗಳಷ್ಟೇ ಕಲಾಕ್ಷೇತ್ರವೂ ಪ್ರೇಕ್ಷಕರಿಂದ ತುಂಬಿ ತುಳುಕುತ್ತದೆ. ಕೆಲವೊಮ್ಮೆ ಸರ್ಕಾರಿ ಕಾರ್ಯಕ್ರಮಗಳಿದ್ದರೆ ಮಾತ್ರ ನಾಟಕಗಳಿರುವುದಿಲ್ಲ ಎಂದು ರಂಗ ಕಲಾವಿದರು ಹೇಳುತ್ತಾರೆ. ಕಲಾಕ್ಷೇತ್ರದಲ್ಲಿ 450 ಆಸನಗಳಿದ್ದರೆ ಅದರ ಅರ್ಧದಷ್ಟು ಜನರು ನಿಂತು ನಾಟಕ ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಕಲಾಕ್ಷೇತ್ರ ಗಿಜಿಗುಡುತ್ತದೆ ಎಂದು ವಿವರಿಸುತ್ತಾರೆ.

ಸೌಕರ್ಯ ಕೊರತೆ
‘ಮೂರ್ನಾಲ್ಕು ವರ್ಷದಲ್ಲಿ ಅಂದಾಜು ₹ 1 ಕೋಟಿ ಮೊತ್ತದಲ್ಲಿ ಕಲಾಕ್ಷೇತ್ರ ನವೀಕರಣಗೊಂಡರೂ ಸಹ ರಂಗ ಪ್ರದರ್ಶನಕ್ಕೆ ಬೇಕಾದ, ವೇದಿಕೆಗೆ ಅಗತ್ಯವಾದ ಕೆಲ ಸೌಕರ್ಯಗಳ ಕೊರತೆ ಇದೆ. ಮುಖ್ಯವಾಗಿ ವಿದ್ಯುತ್ ದೀಪಗಳು, ಧ್ವನಿ ಪೆಟ್ಟಿಗೆ ವ್ಯವಸ್ಥೆ ಸರಿಪಡಿಸಬೇಕಾಗಿದೆ. ಸ್ವಚ್ಛತೆಗೆ ಇನ್ನಷ್ಟು ಆದ್ಯತೆ ಕೊಡಬೇಕು’ ಎಂದು ಹೆಸರು ಹೇಳಲಿಚ್ಚಿಸದ ಕಲಾವಿದರೊಬ್ಬರು ಹೇಳಿದರು.

ಎರಡು ತಿಂಗಳ ಮುಂಚೆಯೇ ಬುಕ್
‘ಪೌರಾಣಿಕ ನಾಟಕ ಪ್ರದರ್ಶನಕ್ಕೆ ಈಚೆಗೆ ಹೆಚ್ಚಿನ ತಂಡಗಳು ಉತ್ಸುಕತೆ ತೋರಿಸುತ್ತಿವೆ. ಪ್ರತಿ ಭಾನುವಾರ ನಾಟಕ ಪ್ರದರ್ಶನಕ್ಕೆ ಆನ್‌ ಲೈನ್‌ನಲ್ಲಿ ತಂಡದವರು ಬುಕ್ ಮಾಡುತ್ತಾರೆ. ಫೆಬ್ರುವರಿ 28ರವರೆಗೂ ಈಗಾಗಲೇ ಬುಕ್ ಆಗಿವೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಅಪ್ಪಿನಕಟ್ಟೆ ಹೇಳಿದರು. ‘ಭಾನುವಾರವೇ ನಾಟಕ ಪ್ರದರ್ಶನ ಮಾಡಬೇಕು ಎನ್ನುವರು ಫೆಬ್ರುವರಿ 28ರ ಬಳಿಕ ಬರುವ ಭಾನುವಾರಕ್ಕೆ ಬುಕ್ ಮಾಡಿಕೊಳ್ಳಬಹುದು’ ತಿಳಿಸಿದರು.

‘ಎರಡು ತಿಂಗಳ ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಒಂದು ದಿನ ಪೂರ್ತಿ ಬಾಡಿಗೆ ಪಡೆಯುತ್ತಾರೆ. ದಿನಕ್ಕೆ ₹4000 ಬಾಡಿಗೆ ಹಾಗೂ ಎರಡುವರೆ ಸಾವಿರ ಠೇವಣಿ ಪಡೆಯಲಾಗುತ್ತದೆ. ಸ್ವಚ್ಛತೆಗೆ ಪ್ರತ್ಯೇಕವಾಗಿ ₹ 500 ಪಡೆಯಲಾಗುತ್ತದೆ. ಧ್ವನಿಪೆಟ್ಟಿಗೆ(ಸೌಂಡ್ ಬಾಕ್ಸ್), ರಂಗ ಪ್ರದರ್ಶನಕ್ಕೆ ಅನುಕೂಲವಾಗುವ ರೀತಿ ವಿದ್ಯುತ್ ದೀಪಗಳ ವ್ಯವಸ್ಥೆಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT