7

ಸ್ವಚ್ಛಗೊಳ್ಳದ ಚರಂಡಿ: ಹೆಚ್ಚಿದ ಸೊಳ್ಳೆ ಕಾಟ

Published:
Updated:

ಯಾದಗಿರಿ: ಚರಂಡಿಗಳು ಸ್ವಚ್ಛಗೊಳ್ಳದ ಹಿನ್ನೆಲೆಯಲ್ಲಿ ಸೊಳ್ಳೆ ಕಾಟ ಹೆಚ್ಚಿದ್ದು, ಕ್ರಮ ಕೈಗೊಳ್ಳದ ನಗರಸಭೆಯ ವಿರುದ್ಧ ನಗರದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಂಬೇಡ್ಕರ್ ನಗರದ, ಬಸವೇಶ್ವರ ನಗರ, ಚಿರಂಜೀವಿ ನಗರ, ಗಾಂಧಿ ನಗರ, ಚಕ್ರಕಟ್ಟಾ, ಲಕ್ಷ್ಮಿ ನಗರ, ಹಳೇ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್‌, ಲುಂಬಿನಿ ವನದ ಸುತ್ತಮುತ್ತ, ಕೋಲಿವಾಡ, ಮದನಗಲ್ಲಿ, ಮುಸ್ಲಿಂಪುರ, ಗ್ರಾಮೀಣ ಪೊಲೀಸ್ ಠಾಣೆ ಸುತ್ತಲಿನ ಪ್ರದೇಶ, ಸರ್ಕಾರಿ ಕಾಲೇಜು, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳು ಸ್ವಚ್ಛಗೊಂಡಿಲ್ಲ. ಅಲ್ಲದೇ ಮಳೆಗಾಲದಲ್ಲಿ ತುಂಬಿರುವ ಗುಂಡಿಗಳಲ್ಲಿ ಸೊಳ್ಳೆ ಸಂತಾನ ಕೂಡ ಹೆಚ್ಚಿದ್ದು, ಯಾವ ವರ್ಷವೂ ಇಷ್ಟು ಪ್ರಮಾಣದಲ್ಲಿ ಸೊಳ್ಳೆಕಾಟ ಇರಲಿಲ್ಲ’ ಎಂದು ನಾಗರಿಕರಾದ ಹೇಮಂತ್, ದಿನಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಗಳ ಮೇಲೆ ಹೆಚ್ಚಿದ ಮಣ್ಣು: ‘ಬಹುತೇಕ ನಗರದ ರಸ್ತೆಗಳು ಮಣ್ಣಿನಿಂದ ಮುಚ್ಚಿಕೊಂಡಿವೆ. ಇದರಿಂದ ವಾಹನ ಸಂಚಾರ ಸಂದರ್ಭದಲ್ಲಿ ರಸ್ತೆಗಳಲ್ಲಿ ಧೂಳು ಹೆಚ್ಚಿದ್ದು, ಸಂಚಾರಕ್ಕೂ ತೊಂದರೆ ಉಂಟಾಗಿದೆ. ಅಲ್ಲದೇ ನುಸಿಮಣ್ಣಿನಿಂದಾಗಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತ ಉಂಟಾಗುತ್ತಿದೆ. ಇಡೀ ನಗರದಲ್ಲಿ ಒಂದೂ ರಸ್ತೆಗಳು ಸ್ವಚ್ಛವಾಗಿಲ್ಲ. ಪೌರಕಾರ್ಮಿಕರು ಕೇವಲ ಕಸಗುಡಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ’ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

‘ಗುಡ್ಡ ಬೆಟ್ಟಗಳಿಗೆ ಹೆಸರುವಾಸಿಯಾಗಿದ್ದ ಗಿರಿನಗರ ಈಗ ಸೊಳ್ಳೆಗಳ ನಗರ ಎಂಬ ಅಪಖ್ಯಾತಿಗೆ ಒಳಗಾಗುತ್ತಿದೆ. ನಗರದಲ್ಲಿ ವಿಪರೀತ ಸೊಳ್ಳೆಗಳ ಕಾಟದಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಿದೆ. ಡೆಂಗಿ, ಮಲೇರಿಯಾದಂತಹ ರೋಗಗಳಿಗೆ ನಾಗರಿಕರು ತುತ್ತಾಗುತ್ತಿದ್ದಾರೆ. ನಗರದಲ್ಲಿ ಸ್ವಚ್ಛತೆಯಿಲ್ಲದ ಪರಿಣಾಮ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣವಾಗಿದೆ’ ಎಂದು ಜೆಡಿಎಸ್ ಕೈಸ್ಟ್ ಅಲ್ಪಸಂಖ್ಯಾತರ ಉಪಾಧ್ಯಕ್ಷ ಕ್ರಿಸ್ಟೋಫರ್ ಬಾಯರ್ ಹೇಳುತ್ತಾರೆ.

‘ಕೂಡಲೇ ನಗರಸಭೆ ಫಾಗಿಂಗ್‌ ಕೈಗೊಂಡು ನಗರದ ಚರಂಡಿ, ರಸ್ತೆ ಸ್ವಚ್ಛತೆಗೆ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನಗರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ನಾಗರಿಕರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry