6

ಅಲೆಮಾರಿ ಮಕ್ಕಳಿಗಿಲ್ಲ ಕಲಿಕೆಯ ಭಾಗ್ಯ!

Published:
Updated:
ಅಲೆಮಾರಿ ಮಕ್ಕಳಿಗಿಲ್ಲ ಕಲಿಕೆಯ ಭಾಗ್ಯ!

ಯಾದಗಿರಿ: ಕಲಿಕೆ ಮಕ್ಕಳ ಮೂಲಭೂತ ಹಕ್ಕಾಗಿದೆ. ಆದರೆ, ಈ ಮೂಲಭೂತ ‘ಶೈಕ್ಷಣಿಕ ಹಕ್ಕು’ ಹೊಸಳ್ಳಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಅಲೆಮಾರಿ ಬಡಾವಣೆಯ 200ಕ್ಕೂ ಹೆಚ್ಚು ಮಕ್ಕಳಿಗೆ ದಕ್ಕಿಲ್ಲ!

ನಗರದ ತುಂಬಾ ಚದುರಿದಂತೆ ಹಲವು ವರ್ಷಗಳಿಂದ ನೆಲೆಗೊಂಡಿದ್ದ ಅಲೆಮಾರಿ ಜನಾಂಗಕ್ಕೆ ಈಚೆಗೆ ಜಿಲ್ಲಾಡಳಿತ ಹೊಸಳ್ಳಿ ಗ್ರಾಮದ ಬಳಿ ನಿವೇಶನ ಕಲ್ಪಿಸುವ ಮೂಲಕ ಶಾಶ್ವತ ನೆಲೆ ಕಲ್ಪಿಸಿಕೊಟ್ಟಿದೆ. ನಗರದಿಂದ 8 ಕಿಲೋ ಮೀಟರ್‌ ದೂರ ಇರುವ ಅಲೆಮಾರಿ ಬಡಾವಣೆ ವರ್ಷದಿಂದ ಮೂಲ ಸೌಕರ್ಯಗಳಿಂದ ನರಳುತ್ತಿದೆ. ಶುದ್ಧ ಕುಡಿಯುವ ನೀರು, ಬೀದಿದೀಪ, ರಸ್ತೆಗಳಿಲ್ಲ. ಆದರೂ ಪರವಾಗಿಲ್ಲ ನಮಗೆ ಮೊದಲು ಒಂದು ಶಾಲೆ ಕೊಡಿ ಎಂದು ಇಲ್ಲಿನ ಅಲೆಮಾರಿ ಜನರು ಮನವಿ ಮಾಡಿದ್ದರೂ, ಅಧಿಕಾರಿಗಳು ಮಾತ್ರ ಮೀನಮೇಷ ಎಣಿಸುತ್ತಿದ್ದಾರೆ.

ಅಲೆಮಾರಿ ಬದುಕಿಗೆ ಅಂಟಿಕೊಂಡು ನಿರಕ್ಷರಕುಕ್ಷಿಗಳಾಗಿರುವ ಅಲೆಮಾರಿಗಳು ತಮ್ಮ ಮಕ್ಕಳಲ್ಲಾದರೂ ಕಲಿಕೆಯ ಬೀಜಾಕ್ಷರ ಬಿತ್ತಬೇಕು ಎಂಬ ಹಂಬಲ ಹೊಂದಿದ್ದಾರೆ. ಇದರಿಂದ ಒಂದೆಡೆ ಶಾಶ್ವತವಾಗಿ ನೆಲೆ ನಿಂತುಕೊಂಡು ಸಾಂಘಿಕ ಶಕ್ತಿಯಾಗಿ ಪರಿವರ್ತನೆಗೊಂಡಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಹಾಗೂ ನಗರಸಭೆಯ ವಿರುದ್ಧ ನಿರಂತರ ಹೋರಾಟ ನಡೆಸಿ ನಿವಾಸಿ ದೃಢೀಕರಣ, ಮತದಾರ ನೋಂದಣಿ, ಅಂತ್ಯೋದಯ ಪಡಿತರ ಕಾರ್ಡುಗಳನ್ನು ಪಡೆದಿದ್ದಾರೆ. ಸಂಘಟನೆಯ ಶಕ್ತಿಯಿಂದ ಈಗ ಅವರಿಗೆ 120ಕ್ಕೂ ಹೆಚ್ಚು ಜನರಿಗೆ ಕಾಯಂ ನಿವೇಶನ ಸಿಕ್ಕಿದೆ. ಆದರೆ, ಶಾಲೆ ಇಲ್ಲದಿರುವುದು ಅವರ ಮೂಲ ಆಶಯ ಈಡೇರದಂತಾಗಿದೆ.

ಸಂವಿಧಾನ ವಿಧಿ 21 ‘ಎ’ ಪ್ರಕಾರ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ‘ಶೈಕ್ಷಣಿಕ ಹಕ್ಕು’ ಕಡ್ಡಾಯವಾಗಿ ಕಲ್ಪಿಸಬೇಕು. ಸರ್ಕಾರ ಕೂಡ ಶಿಕ್ಷಣದ ಸಾರ್ವತ್ರೀಕರಣದ ಗುರಿ ಸಾಧಿಸಲು ‘ಸರ್ವ ಶಿಕ್ಷಣ ಅಭಿಯಾನ’ ಕೂಡ ಆರಂಭಿಸಿದೆ. ಆದರೂ ಅಲೆಮಾರಿ ಜನಾಂಗದ ಮಕ್ಕಳಿಗೆ ಕಲಿಕೆಯ ಭಾಗ್ಯ ಮಾತ್ರ ಕೂಡಿ ಬಂದಿಲ್ಲ!

‘ಮಳೆ ಬಂದಾಗ ಹೊರ ವಲಯದ ಬೆಟ್ಟದ ಬುಡದಲ್ಲಿರುವ ಅಲೆಮಾರಿಗಳ ಬಡಾವಣೆಗೆ ಸಂಪರ್ಕ ಹಾದಿ ಕಡಿದು ಹೋಗುತ್ತದೆ. ವರ್ಷದುದ್ದಕ್ಕೂ ನಿರಂತರ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ವಿದ್ಯುತ್‌ ಸಮಸ್ಯೆ ಬಗೆಹರಿದಿಲ್ಲ’ ಎನ್ನುತ್ತಾರೆ ಬುಡ್ಗ ಜಂಗಮ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ.

‘ಸರ್ಕಾರ ನಿವೇಶನ ಕಲ್ಪಿಸಿಕೊಟ್ಟಿದೆ. ವಸತಿ ಸೌಕರ್ಯ ನೀಡಿದೆ. ಆದರೆ ಮೂಲ ಸೌಕರ್ಯ ಇಲ್ಲದೇ ಅಲೆಮಾರಿಗಳ ಬಡಾವಣೆ ನೂರಾರು ಸಮಸ್ಯೆ, ಸಂಕಟಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಜಿ.ಮುದ್ನಾಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಪರಿಸ್ಥಿತಿ ಅಧ್ಯಯನ ಮಾಡಿದ್ದೇನೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್

‘ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಂಗವಿಕಲರ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಸಮಸ್ತ ಇಲಾಖೆಗಳ ಅಧಿಕಾರಿಗಳೊಂದಿಗೆ ಈಚೆಗೆ ಅಲೆಮಾರಿ ಬಡಾವಣೆಯಲ್ಲಿ ಕೊಂದುಕೊರತೆ ಸಭೆ ನಡೆಸಿ ಅಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಿದ್ದೇನೆ. ಅಲ್ಲದೇ ಜನರಿಂದ ಅಹವಾಲು ಸ್ವೀಕರಿಸಿ ತತಕ್ಷಣ ಪರಿಹಾರ ಕೊಡಿಸುವ ಕೆಲಸ ಮಾಡಲಾಗಿದೆ. ಹಂತಹಂತವಾಗಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಲಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

* * 

ಅಲೆಮಾರಿ ಹಾಗೂ ಅವರ ವೈವಿಧ್ಯಮಯ ಬದುಕನ್ನು ಸಂರಕ್ಷಿಸಲಾದರೂ ಅಲೆಮಾರಿ ಬಡಾವಣೆಗೆ ಮೊದಲು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಬೇಕು.

ಮಾರುತಿ ಅಧ್ಯಕ್ಷ, ಬುಡ್ಗ ಜಂಗಮ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry