7

ಕುಸಿಯುವ ಹಂತದಲ್ಲಿ ಮಿನಿ ವಿಧಾನಸೌಧ ಕಟ್ಟಡ

Published:
Updated:
ಕುಸಿಯುವ ಹಂತದಲ್ಲಿ ಮಿನಿ ವಿಧಾನಸೌಧ ಕಟ್ಟಡ

ಸೋಮವಾರಪೇಟೆ: ಒಂದೇ ಸೂರಿನ ಅಡಿ ಎಲ್ಲ ಕಚೇರಿಗಳನ್ನು ತಂದು ಜನರಿಗೆ ಉತ್ತಮ ಸೇವೆ ನೀಡಲು 1997ರಲ್ಲಿ ನಿರ್ಮಿಸಿದ್ದ ಮಿನಿ ವಿಧಾನಸೌಧ ಈಗ ಪಾಳು ಕೊಂಪೆಯಂತಾಗಿದೆ.

20 ವರ್ಷಗಳ ಹಿಂದೆ ಈ ಕಟ್ಟಡಕ್ಕೆ ಸುಮಾರು ₹ 1 ಕೋಟಿ ವ್ಯಯಿಸಲಾಗಿತ್ತು. ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‌ಟಿಸಿ ವಿತರಣಾ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ ಹಾಗೂ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ವಿಭಾಗಗಳು ಈ ಕಟ್ಟಡದಲ್ಲಿವೆ. ಸೇವೆ ಪಡೆಯಲು ಅನುಕೂಲವಾಗಿತ್ತು. ಆದರೆ, ಇಂದು ತಾಲ್ಲೂಕು ಕಚೇರಿ ಕಟ್ಟಡ ಸೂಕ್ತ ನಿರ್ವಹಣೆಯಿಲ್ಲದೇ ಸುಣ್ಣಬಣ್ಣ ಕಾಣದೆ ವರ್ಷಗಳೇ ಕಳೆದಿವೆ. ಮುಂಗಾರು ಪ್ರಾರಂಭವಾಗುತ್ತಿದಂತೆ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಆತಂಕ ಎದುರಾಗುತ್ತದೆ.

ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಇರುವವರಿಂದಲೂ ಯಾವುದೇ ಸೇವೆ ಜನರಿಗೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ದೂರದ ಕೊಡ್ಲಿಪೇಟೆ ಹೋಬಳಿಯಿಂದ ಬಂದು ಬೆಳಿಗ್ಗೆಯಿಂದ ಸಂಜೆವರೆಗೆ ಕಚೇರಿ ಎದುರು ನಿಂತು ಮತ್ತೆ ಸಂಜೆ ಯಾವುದೇ ಕೆಲಸವಾಗದೇ ಮನೆಗೆ ವಾಪಸ್ ಆಗುವ ಸ್ಥಿತಿಯಿದೆ ಎಂದು ಕೊಡ್ಲಿಪೇಟೆ ನಿವಾಸಿ ಅನಂತ್‌ ದೂರುತ್ತಾರೆ. ತಾಲ್ಲೂಕಿನ ಆರು ಹೋಬಳಿಯಲ್ಲಿ 298 ಗ್ರಾಮಗಳ ಜನರು ಕಂದಾಯ, ಆಹಾರ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕೆಲಸ ಕಾರ್ಯಗಳಿಗೆ ಮಿನಿ ವಿಧಾನಸೌಧಕ್ಕೆ ಬರುತ್ತಾರೆ. ಸಂತೆ ದಿನವಾದ ಸೋಮವಾರ ಹೆಚ್ಚು ಜನರಿರುತ್ತಾರೆ.

ಕಳೆದ ಆರು ವರ್ಷಗಳಿಂದ ಕಟ್ಟಡ ಸೋರುತ್ತಿದ್ದು, ಗೋಡೆಗಳು ಶಿಥಿಲಗೊಂಡು ದುಸ್ಥಿತಿ ತಲುಪಿವೆ. ಕಟ್ಟಡದಲ್ಲಿ ತಾಲ್ಲೂಕು ಕಚೇರಿಯ ಯಾವುದೇ ನಾಮಫಲಕವೂ ಇಲ್ಲ. ಯಾವುದೋ ಪಾಳುಬಿದ್ದ ಕಟ್ಟಡಕ್ಕೆ ತೆರಳುವಂತಾಗುತ್ತಿದೆ. ಈಗಲಾದರೂ ಕಟ್ಟಡಕ್ಕೆ ಸುಣ್ಣ ಬಣ್ಣ ಹೊಡೆಸಿ, ನಾಮ ಫಲಕ ಹಾಕಿಸಬೇಕಿದೆ ಎಂದು ಸ್ಥಳೀಯ ನಿವಾಸಿ ನಾಗೇಶ್‌ ಆಗ್ರಹಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಕಟ್ಟಡ ದುರಸ್ತಿಗೆ ಅನುದಾನ ಕೋರಿ ಮನವಿ ಸಲ್ಲಿಸಲಾಗಿತ್ತು. ಇದುವರೆಗೆ ಕಟ್ಟಡ ದುರಸ್ತಿಗೆ ಅನುದಾನ ಸಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ಧಾರಾಕಾರ ಮಳೆ ಸುರಿದರೆ ಕೊಠಡಿಗಳ ಮೇಲ್ಚಾವಣಿಯಲ್ಲಿ ನೀರು ಜಿನುಗುತ್ತದೆ. ಬಹುತೇಕ ವಿಭಾಗಗಳು ಕಂಪ್ಯೂಟರೀಕರಣ ಗೊಂಡಿದ್ದು, ಶೀತಕ್ಕೆ ಕಂಪ್ಯೂಟರ್‌ಗಳನ್ನು ಸುಸ್ಥಿತಿ ಯಲ್ಲಿಟ್ಟುಕೊಳ್ಳುವುದೇ ಕಷ್ಟಕರ ಎಂದು ಸಿಬ್ಬಂದಿ ಅಲವತ್ತುಕೊಂಡರು.

ಉಪ ನೋಂದಣಿ ಕಚೇರಿಯನ್ನು ಬಾಡಿಗೆಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಳೆಗಾಲದಲ್ಲಿ ಆರ್‌ಟಿಸಿ ವಿತರಿಸುವ ವಿಭಾಗದಲ್ಲಿ ಮೇಲ್ಚಾವಣಿಗೆ ಪ್ಲಾಸ್ಟಿಕ್‌ ಹೊದಿಕೆ ಹಾಕಿ ರಕ್ಷಣೆ ಮಾಡಲಾಗುತ್ತದೆ.

* * 

ಕಚೇರಿ ಆವರಣದಲ್ಲಿ ಬೀದಿದೀಪ ಇಲ್ಲದಿರುವುದರಿಂದ ಅನೈತಿಕ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಕಚೇರಿಗೆ ಗೇಟ್‌ಗೆ ಬೀಗ ಹಾಕದಿರುವುದರಿಂದ ನಿರಾಶ್ರಿತರ ಬೀಡಾಗುತ್ತಿದೆ

ಸುರೇಶ್‌ ಶೆಟ್ಟಿ, ತಾಲ್ಲೂಕು ಅಧ್ಯಕ್ಷ, ಜಯ ಕರ್ನಾಟಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry