ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ನಾಡಿನಲ್ಲೊಂದು ಹಸಿರು ವಸತಿ ಶಾಲೆ

Last Updated 29 ನವೆಂಬರ್ 2017, 6:42 IST
ಅಕ್ಷರ ಗಾತ್ರ

ಯಲಬುರ್ಗಾ: ಅಲಂಕಾರಿಕ ಗಿಡಗಳು. ಬಗೆಬಗೆಯ ಹೂವು. ಹಣ್ಣಿನ ಗಿಡಗಳೇ ಕಣ್ಣಿಗೆ ಬೀಳುತ್ತವೆ. ಈ ಶಾಲೆಯೊಳಗೆ ಕಾಲಿಡುತ್ತಿದ್ದಂತೆ ಮೈ–ಮನಸ್ಸಿಗೆ ನೆಮ್ಮದಿಯ ಭಾವ.ತಾಲ್ಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಯ ಚಿತ್ರಣವಿದು. ಮಕ್ಕಳು ಹಾಗೂ ಶಿಕ್ಷಕರ ಪರಿಸರ ಪ್ರೀತಿಗೆ ಸಾಕ್ಷಿಯಾಗಿ ಈ ಶಾಲೆ ಮೈದಳೆದಿದೆ. ಇಲ್ಲಿಯ ಹಸಿರು ಪರಿಸರದ ಪಾಠ ಹೇಳುತ್ತಿದೆ. ಶಿಕ್ಷಣದ ಜತೆಗೆ ಕ್ರಿಯಾತ್ಮಕ ಕಲಿಕೆಗೆ ಆದ್ಯತೆ ನೀಡಲಾಗಿದೆ.

ಮಕ್ಕಳಿಗೆ ಪ್ರಕೃತಿಯ ಮಡಿಲಿನಲ್ಲಿ ಕಲಿಕೆಗೆ ವೇದಿಕೆ ನಿರ್ಮಿಸಲಾಗಿದೆ. ಪ್ರಾಚಾರ್ಯರ ಕ್ರಿಯಾಶೀಲತೆಯನ್ನು ಎಲ್ಲರೂ ಮೆಚ್ಚಿದ್ದಾರೆ. ಕಷ್ಟದ ಕೆಲಸವಲ್ಲ ಎಂಬುದಕ್ಕೆ ಈ ವಸತಿಶಾಲೆ ಸಾಕ್ಷಿಯಾಗಿದೆ. ಪರಸರದ ಬಗ್ಗೆ ಭಾಷಣಕ್ಕೆ ಸೀಮಿತಗೊಳಿಸುವ ದಿನಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಶಾಲಾ ಆವರಣವನ್ನು ವನವಾಗಿ ಪರಿವರ್ತಿಸಲಾಗಿದೆ.

ಪೇರಲ, ಚಿಕ್ಕು, ಮಾವು, ತೆಂಗು, ರಾಮಫಲ, ಕರಿಬೇವು, ನಿಂಬೆ ಸೇರಿದಂತೆ ವಿವಿಧ ಗಿಡಗಳು ಇಲ್ಲಿವೆ. ಫಲನೀಡುವ ಹಣ್ಣಿನ ಸಸಿಗಳು ಸಮೃದ್ಧವಾಗಿ ಬೆಳೆಯುತ್ತಿವೆ. ವಿವಿಧ ಔಷಧೀಯ ಸಸ್ಯಗಳು, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳು ಸೇರಿ 500ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಸಂಪತ್ತು ಈ ವಸತಿಯದ ಆವರಣದಲ್ಲಿ ಕಂಗೊಳಿಸುತ್ತಿದೆ.

‘ಶಾಲೆಯಲ್ಲಿ ಅಭ್ಯಾಸ ಮಾಡುವ 250 ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರೆ ಸಿಬ್ಬಂದಿಯೂ ಪರಿಸರ ಪಜ್ಞೆಯನ್ನು ಹೊಂದಿದ್ದಾರೆ. ಹೀಗಾಗಿ ಇಲ್ಲಿ ಹಸಿರು ಕಂಗೊಳಿಸುವಂತಾಗಿದೆ’ ಎಂದು ಸ್ಥಳೀಯ ಕನ್ನಡಪರ ಸಂಘಟನೆಯ ಮುಖ್ಯಸ್ಥ ರಾಜಶೇಖರ ಶ್ಯಾಗೋಟಿ ಹೇಳಿದರು.

ಕ್ರಿಯಾತ್ಮಕ ಶಿಕ್ಷಣ: ಪ್ರತಿ ತರಗತಿ ಕೊಠಡಿಯಲ್ಲಿ ಪ್ಯಾನಲ್ ಬೋರ್ಡ್‌ ಅಳವಡಿಸಲಾಗಿದೆ. ಮಕ್ಕಳು ರಚಿಸಿದ ಚಿತ್ರ, ಕವನ, ಕಥೆ ಮತ್ತಿತ್ತರ ಪಠ್ಯೇತರ ಚಟುವಟಿಕೆಗಳನ್ನು ಪ್ರರ್ದಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಕ್ರಿಯಾತ್ಮಕತೆ ಹಾಗೂ ಪ್ರತಿಭೆ ಪ್ರದರ್ಶಿಸಲು ವೇದಿಕೆ ನಿರ್ಮಿಸಲಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ವಿದ್ಯಾರ್ಥಿಗಳು.

‘ಪ್ರತಿ ಭಾನುವಾರ ರಸಪ್ರಶ್ನೆ, ಆಶುಭಾಷಣ, ಪ್ರಬಂಧ, ರಂಗೋಲಿ, ಚಿತ್ರಕಲೆ ಸ್ಪರ್ಧೆ ಏರ್ಪಡಿಸುತ್ತಿರುವುದರಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭವ ಬೆಳೆಯುತ್ತಿದೆ’ ಎಂದು ವಿದ್ಯಾರ್ಥಿಗಳಾದ ಸಿದ್ದಮ್ಮ ಪೂಜಾರ, ಶ್ವೇತಾ ಮೆಚ್ಚುಗೆ ವ್ಯಕ್ತಪಡಿಸಿದರು.

2015ರ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ‘ದಾರದಿಂದ ನೀರಾವರಿ’ ಎಂಬ ವಿಷಯದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆ ಈ ಶಾಲೆಯ ಮಕ್ಕಳಿಗೆ ಸಲ್ಲುತ್ತದೆ. ಕ್ರೀಡಾಕೂಟದಲ್ಲಿಯೂ ಅನೇಕ ಬಹುಮಾನ ಪಡೆದು ಕೀರ್ತಿ ತಂದಿದ್ದಾರೆ.

ಶಾಲೆಯ ಒಳಾಂಗಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ವಿದ್ಯಾರ್ಥಿಗಳು ಈ ಮೂರ್ತಿಗೆ ಇದಕ್ಕೆ ನಮಸ್ಕರಿಸಿ ತರಗತಿಗೆ ಪ್ರವೇಶ ಮಾಡುವುದು ಇಲ್ಲಿನ ವಾಡಿಕೆ. 2009-10ರಲ್ಲಿ ಪ್ರಾರಂಭಗೊಂಡ ಈ ಶಾಲೆಯ ಫಲಿತಾಂಶ ಜಿಲ್ಲೆಗೆ ಮಾದರಿಯಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವು ಶೇ100 ಇದೆ. ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಕರಾಟೆ ಜೀಮ್ ಸೌಲಭ್ಯಗಳಿವೆ.

‘ಹಸಿರು ಮರಗಳು, ಹುಲ್ಲಿನ ಹಾಸು, ಸುತ್ತಲೂ ಗೋಡೆ ಕಣ್ಮನ ಸೆಳೆಯುವಂತೆ ಮಾಡಿದ ಪ್ರಾಚಾರ್ಯರ ವಿರುಪಾಕ್ಷಪ್ಪ ಹನುಮಶೆಟ್ಟಿ ಅವರ ಶ್ರಮವನ್ನು ಪಾಲಕರು ಕೊಂಡಾಡುತ್ತಿದ್ದಾರೆ. ‘ಶಾಲೆಯೊಳಗೆ ಹೋದರೆ ಬಹುಬೇಗ ಹೊರಬರಲು ಸಾಧ್ಯವಾಗುವುದಿಲ್ಲ. ಕಣ್ಣಿಗೆ ಮುದ ನೀಡುವ ವಾತಾವರಣ ನಿರ್ಮಿಸಿದ್ದಾರೆ. ಇದು ಹಾಳಾಗದಂತೆ ಅಚ್ಚುಕಟ್ಟಾಗಿ ಉತ್ತಮ ನಿರ್ವಹಣೆ ಆಗಬೇಕಾಗಿದೆ’ ಎಂದು ಪಾಲಕ ಪ್ರಸನ್ನಕುಮಾರ ಹೇಳಿದರು.

* * 

ಗ್ರಾಮ ಪಂಚಾಯಿತಿ ಸಹಕಾರ ನೀಡುತ್ತಿದೆ. ಗ್ರಾಮಸ್ಥರು ಮತ್ತು ಮಕ್ಕಳ ಸಹಭಾಗಿತ್ವದಿಂದ ಹಸಿರು ವಾತಾವರಣ ನಿರ್ಮಾಣ ಸಾಧ್ಯವಾಗಿದೆ.
ವಿರೂಪಾಕ್ಷಪ್ಪ ಹನುಮಶೆಟ್ಟಿ, ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT