6

ಅಧಿಕಾರದ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್

Published:
Updated:
ಅಧಿಕಾರದ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್

ಬೀಳಗಿ: ‘ಹಣ, ಹೆಂಡ ಹಾಗೂ ಜಾತಿ ಆಧಾರದ ಮೇಲೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭ್ರಮೆಯಲ್ಲಿರುವ ಕಾಂಗ್ರೆಸ್‌ನವರು ಹಗಲು ಕನಸು ಕಾಣುತ್ತಿದ್ದಾರೆ’ ಎಂದು ಬಿ.ಜೆ.ಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಲೇವಡಿ ಮಾಡಿದರು.

ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಹೆಚ್ಚು ಆಡಳಿತ ನಡೆಸಿದ ಕಾಂಗ್ರೆಸ್‌ನವರು ರೈತರು, ಕಾರ್ಮಿಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗಾಗಿ ಸರಿಯಾದ ಯೋಜನೆಗಳನ್ನು ಜಾರಿಗೊಳಿಸದೇ ಸರ್ಕಾರದ ಖಜಾನೆ ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿತ್ತು. ನಾವು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ₹ 10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಕೇವಲ ₹ 5,500 ಕೋಟಿ ನೀಡುವ ಮೂಲಕ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದು, ಅವರ ಕೊಡುಗೆ ಶೂನ್ಯವಾಗಿದೆ. ಈ ಹಿಂದೆ ಯುಪಿಎ ಸರ್ಕಾರದ ಹಲವಾರು ಹಗರಣಗಳಿಂದ ದೇಶದ ಖಜಾನೆ ಖಾಲಿಯಾಗಿತ್ತು. ಅದನ್ನು ತುಂಬಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೂದಿ ಅವರು ಮಾಡುತ್ತಿದ್ದಾರೆ’ ಎಂದರು.

ಕೇಂದ್ರ ಸಚಿವ ಅನಂತಕುಮಾರ ಮಾತನಾಡಿ, ‘ದೇಶದ ಬಡತನ ಹಾಗೂ ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಧಾನಿ ಮೋದಿ ಕ್ರಮ ಕೈಗೊಂಡಿದ್ದು, ₹ 50 ಸಾವಿರದಿಂದ ₹ 10 ಲಕ್ಷದವರೆಗೆ ಸಾಲ ನೀಡುವ ಮೂಲಕ ನಿರುದ್ಯೋಗಿಗಳಿಗೆ ನೆರವಾಗಿದ್ದಾರೆ’ ಎಂದರು.

ಮಾಜಿ ಸಚಿವ ಮುರುಗೇಶ ನಿರಾಣಿ, ‘ಮತಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಂತ್ರಸ್ತರಿಗೆ ಮನೆ ಕಟ್ಟಲು ಮರಳಿನ ಸಮಸ್ಯೆಯಾಗುವಂತೆ ಮಾಡಿರುವುದೇ ಕಾಂಗ್ರೆಸ್‌ನವರ ಸಾಧನೆ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ, ಸಿದ್ದು ಸವದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry