7

ರಾಗಿ ಬೆಳೆ ಕಟಾವಿಗೆ ಕಾರ್ಮಿಕರ ಅಭಾವ

Published:
Updated:
ರಾಗಿ ಬೆಳೆ ಕಟಾವಿಗೆ ಕಾರ್ಮಿಕರ ಅಭಾವ

ವಿಜಯಪುರ: ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ವರವಾಗಿ ಬಂದ ಮಳೆ ಭೂಮಿಯನ್ನು ತಂಪಾಗಿಸಿದ್ದರ ಜತೆಗೆ ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಿತ್ತು. ಆದರೆ, ಈಗ ಹುಲುಸಾಗಿ ಬೆಳೆದಿರುವ ಬೆಳೆ ಕಟಾವು ಮಾಡಲು ಕೂಲಿ ಕಾರ್ಮಿಕರ ಅಭಾವ ಹಾಗೂ ಸಂಭಾವನೆ ಹೆಚ್ಚಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಎಲ್ಲೆಡೆ  ಉತ್ತಮ ಫಸಲು ಇದೆ. ಎಲ್ಲಾ ಕಡೆ ಬೆಳೆ ಕಟಾವು ಮಾಡುವುದು ಒಂದೇ ಸಮಯವಾಗಿದ್ದರಿಂದ ಕಾರ್ಮಿಕರ ಕೊರತೆ ಹಾಗೂ ಕಾರ್ಮಿಕರ ಕೂಲಿಯಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ.

ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿಯ ಬೆಳೆ ಕಟಾವು ಮಾಡಲು ಕಾರ್ಮಿಕರೆಲ್ಲರೂ ಒಪ್ಪಂದ ಮಾಡಿಕೊಳ್ಳುತ್ತಾರೆ. ಅದಕ್ಕೆ ಸುಮಾರು ₹ 6,000 ದವರೆಗೂ ನಿಗದಿ ಪಡಿಸಿದ್ದಾರೆ. ದಿನಗೂಲಿ ಲೆಕ್ಕದಲ್ಲಿ ಕಟಾವು ಮಾಡಿಕೊಡಬೇಕಾದರೆ ಒಬ್ಬ ಪುರುಷ ಕಾರ್ಮಿಕನಿಗೆ ₹ 300, ಸ್ತ್ರೀಗೆ ₹ 250 ಗಳನ್ನು ನಿಗದಿ ಪಡಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ರೈತರೇ ಊಟ ಕೊಡಬೇಕು. ಅವರನ್ನು ಕರೆದುಕೊಂಡು ಬಂದು ಕೆಲಸ ಪೂರ್ಣವಾದ ನಂತರ ಹಳ್ಳಿಗಳಿಗೆ ಬಿಟ್ಟು ಬರಬೇಕು ಎನ್ನುತ್ತಾರೆ ರೈತ ನಾಗರಾಜು.

ಹೊಲ ಕಟಾವು ಮಾಡಲು ಯಂತ್ರಗಳು ಬಂದಿದ್ದರೂ ಅವುಗಳಲ್ಲಿ ಸರಿಯಾಗಿ ಕೆಲಸ ಆಗುವುದಿಲ್ಲ ಎಂಬುದು ರೈತರ ವಾದ. ಯಂತ್ರದಲ್ಲಿ ಕಟಾವು ಮಾಡಬೇಕಾದರೆ ಭೂಮಿಯಿಂದ ಅರ್ಧ ಅಡಿಯಷ್ಟು ಮೇಲಕ್ಕೆ ಕಟಾವಾಗುತ್ತದೆ. ಸಣ್ಣ ಸಣ್ಣ ಪೈರುಗಳು ಯಂತ್ರದಿಂದ ಕಟಾವಾಗುವುದಿಲ್ಲ ಎನ್ನುತ್ತಾರೆ.

ತೆನೆಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿಗೆ ಬೀಳುತ್ತವೆ. ಬಿತ್ತನೆ ಮಾಡುವಾಗ ಕೆಲವು ರೈತರು ಹಲಿವಿಗೆ ಹಾಕಿ ಬಿತ್ತನೆ ಮಾಡಿರುತ್ತಾರೆ. ಕೆಲವರು ನೇಗಿಲಿನಲ್ಲಿ ಬಿತ್ತನೆ ಮಾಡಿರುತ್ತಾರೆ. ಎಲ್ಲಾ ಕಡೆ ಭೂಮಿ ಸಮತಟ್ಟಾಗಿರುವುದಿಲ್ಲ, ಆದ್ದರಿಂದ ಯಂತ್ರಗಳನ್ನು ಉಪಯೋಗ ಮಾಡಿಕೊಂಡು ಕಟಾವು ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತ ಅಶ್ವಥ್ಥಪ್ಪ.

ಯಂತ್ರಗಳಲ್ಲಿ ಕಟಾವು ಮಾಡಬೇಕಾದರೆ, ರಾಗಿಯ ಮಧ್ಯೆ ಮಿಶ್ರಬೆಳೆಗಳು ಇರಬಾರದು. ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ರಾಗಿಯ ಜತೆ ಅವರೆ, ಸಾಸಿವೆ, ಜೋಳ, ಅಲಸಂದಿ ಬೆಳೆ ಸಾಲು ಪದ್ಧತಿಯಲ್ಲಿ ಬಿತ್ತನೆ ಮಾಡುವುದು ವಾಡಿಕೆ. ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೇ ಬೆಳೆ ಬೆಳೆದಿರದ ಕಾರಣ ಈ ಬಾರಿ ರೈತರು ಹೊಲಗಳಲ್ಲೇ ಆಹಾರ ಧಾನ್ಯಗಳನ್ನು ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಯಂತ್ರಗಳಲ್ಲಿ ಕಟಾವು ಮಾಡಲು ಆಗಲ್ಲ ಎಂದು ರೈತ ನಾರಾಯಣಸ್ವಾಮಿ ಹೇಳುತ್ತಾರೆ.

ಬೆಳೆ ಕಟಾವು ಮಾಡಲು ಕೃಷಿ ಇಲಾಖೆಯ ಮೂಲಕ ರಿಯಾಯಿತಿ ದರದಲ್ಲಿ ಯಂತ್ರೋಪಕರಣ ಒದಗಿಸಬೇಕು. ಅವುಗಳ  ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಟಾವು ಮಾಡಲು ಎಕರೆಗೆ ₹ 6,000

ಕಟಾವು ಮಾಡಲಿಕ್ಕಷ್ಟೇ ಒಂದು ಎಕರೆಗೆ ₹ 6,000 ವಿಧಿಸಲಾಗುತ್ತದೆ. ಅದನ್ನು ಒಟ್ಟುಗೂಡಿಸುವುದು, ಕುಪ್ಪೆ ಹಾಕುವುದು, ಪುನಃ ಅದನ್ನು ತಂದು ಒಕ್ಕಣೆ ಮಾಡಲು ಕಣದಲ್ಲಿ ಹಾಕುವುದಕ್ಕೆ ಪ್ರತ್ಯೇಕ ಹಣ ಕೊಡಬೇಕು. ಕಣ ಮಾಡಲಿಕ್ಕೆ ಕಾರ್ಮಿಕರಿಗೆ ರಾಗಿ ಕೊಟ್ಟರೂ ನಡೆಯುತ್ತದೆ. ಇದಕ್ಕೆಲ್ಲಾ ಹಣ ಹೊಂದಿಸಲಿಕ್ಕೆ ತುಂಬಾ ಕಷ್ಟವಾಗಿದೆ ಎಂದು ರೈತ ಮುನಿಯಪ್ಪ ಹೇಳುತ್ತಾರೆ.

ಕಟಾವು ಮಾಡುವುದು ವಿಳಂಬ ಮಾಡಿದರೆ ತೆನೆಯಲ್ಲಿನ ಕಾಳು ಉದುರುತ್ತವೆ. ಆದ್ದರಿಂದ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಹಗಲೆಲ್ಲಾ ಮೋಡಗಳು ಕಾಣಿಸಿಕೊಳ್ಳುತ್ತಿರುವುದರಿಂದ ಕಟಾವು ಮಾಡಲಿಕ್ಕೂ ಹಿಂಜರಿಯುತ್ತಿದ್ದೇವೆ. ಕಟಾವು ಮಾಡಿದಾಗ ಮಳೆ ಬಂದರೆ ರಾಗಿಯೆಲ್ಲಾ ಮೊಳಕೆಯೊಡೆದು ಬೆಳೆ ನಾಶವಾಗುತ್ತದೆ. ಆದ್ದರಿಂದ ಕೆಲ ರೈತರು ತೆನೆ ಮಾತ್ರ ಕಟಾವು ಮಾಡುತ್ತಿದ್ದಾರೆ ಎಂದು ರೈತ ನಟರಾಜು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry