7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಪೌರಕಾರ್ಮಿಕರ ವೇತನಕ್ಕೂ ಹಣವಿಲ್ಲ!

Published:
Updated:
ಪೌರಕಾರ್ಮಿಕರ ವೇತನಕ್ಕೂ ಹಣವಿಲ್ಲ!

ಬೆಳಗಾವಿ: ‘ನಗರಪಾಲಿಕೆಯಲ್ಲಿ ಅನು ದಾನದ ಕೊರತೆ ಇದೆ. ಪೌರಕಾರ್ಮಿಕರಿಗೆ ಎರಡು ತಿಂಗಳಿಂದಲೂ ವೇತನವನ್ನೇ ನೀಡಿಲ್ಲ’ ಎಂದು ಆಯುಕ್ತ ಶಶಿಧರ ಕುರೇರ ತಿಳಿಸಿದರು. ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡ್‌ವಾರು ಅನುದಾನ ಹಂಚಿಕೆಗೆ ಪಟ್ಟುಹಿಡಿದ ಸದಸ್ಯರಿಗೆ ಪ್ರತಿಕ್ರಿಯೆ ನೀಡಿದ ಅವರು, ಪಾಲಿಕೆಯ ಆರ್ಥಿಕ ಸ್ಥಿತಿಯನ್ನು ಬಿಚ್ಚಿಟ್ಟರು.

‘ಪೌರಕಾರ್ಮಿಕರ ವೇತನಕ್ಕೆ ತಿಂಗಳಿಗೆ ₹ 2.30 ಕೋಟಿ ಬೇಕು. ಎರಡು ತಿಂಗಳಿಗೆ ₹ 4.60 ಕೋಟಿ ಆಗುತ್ತದೆ. ಇದು ಬಾಕಿ ಇದೆ. ₹ 2 ಕೋಟಿಯಷ್ಟು ಬಿಲ್‌ಗಳನ್ನು ಪಾವತಿಸಲಾಗಿಲ್ಲ. ಬಹಳಷ್ಟು ತೊಂದರೆಗಳಿವೆ. ಆದರೂ ಎಸ್‌ಎಫ್‌ಸಿ ಅನುದಾನದಲ್ಲಿ ₹ 9 ಕೋಟಿಯನ್ನು ವಾರ್ಡ್‌ಗಳ ಕೆಲಸಕ್ಕೆ ನೀಡಲಾಗಿದೆ. ನಿಮ್ಮ ವಾರ್ಡ್‌ಗಳಲ್ಲಿನ ತುರ್ತು ಕಾಮಗಾರಿಗಳನ್ನು ಹೇಗೋ ಹಣಕಾಸಿನ ಹೊಂದಾಣಿಕೆ ಮಾಡಿ ನಿರ್ವಹಿಸುತ್ತಿದ್ದೇವೆ’ ಎಂದು ತಿಳಿಸಿದರು.

ಕ್ರಿಯಾಯೋಜನೆ ರೂಪಿಸಲಾಗಿದೆ: ‘ಎಸ್‌ಎಫ್‌ಸಿಯಲ್ಲಿ ಲಭ್ಯವಾದ ₹ 6 ಕೋಟಿಯನ್ನು ಸದಸ್ಯರಿಗೆ ಹಂಚಬಾರದು ಎಂಬ ಉದ್ದೇಶ ನಮ್ಮದಲ್ಲ. ಈ ಹಣವನ್ನು ಶೌಚಾಲಯಗಳ ನಿರ್ಮಾಣಕ್ಕೆ ಬಳಸಲಾಗುವುದು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ನಗರವನ್ನು ಬಯಲು ಬಹಿರ್ದಸೆ ಮುಕ್ತವೆಂದು ಘೋಷಿಸಬೇಕಾಗಿದೆ. ಜ. 26ರಂದು ಘೋಷಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸಾರ್ವಜನಿಕ ಶೌಚಾಲಯ, ಸಮುದಾಯ ಶೌಚಾಲಯ ನಿರ್ಮಾಣ ಸೇರಿದಂತೆ 12 ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಜಾಗ ಗಳನ್ನು ಗುರುತಿಸಲಾಗಿದೆ. ಪ್ರಸ್ತಾವಕ್ಕೆ ಸ್ವಚ್ಛ ಭಾರತ ಅಭಿಯಾನದಲ್ಲಿ ಅನುಮೋದನೆ ದೊರೆತಿದೆ. ಇದಕ್ಕೆ ಸದಸ್ಯರು ಅಡ್ಡಿಪಡಿಸಬಾರದು’ ಎಂದು ಕೋರಿದರು.

‘ಈಗಾಗಲೇ ದಂಡು ಮಂಡಳಿ ಯವರು ಬಯಲು ಬಹಿರ್ದೆಸೆ ಮುಕ್ತ ಪ್ರದೇಶವೆಂದು ಘೋಷಿಸಿದ್ದಾರೆ. ಚಿಕ್ಕ ಪಟ್ಟಣ ನರಗುಂದ ಕೂಡ ಈ ಪಟ್ಟಿಯಲ್ಲಿದೆ. ಹೀಗಾಗಿ, ನಾವು ಹಿಂದುಳಿಯಬಾರದು. ಎಲ್ಲರೂ ಸಹಕಾರ ನೀಡಬೇಕು’ ಎಂದರು.

ಸದಸ್ಯ ದಿನೇಶ ನಾಶಿಪುಡಿ ಮಾತ ನಾಡಿ, ‘ಶೌಚಾಲಯಗಳ ನಿರ್ಮಾಣಕ್ಕೆ ಹಿಂದೆ ದೊರೆತ ಅನುದಾನದಲ್ಲಿ ಅವ್ಯವಹಾರ ನಡೆದಿದೆ. ಈ ಕುರಿತು ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಪಾಲಿಕೆ ಆವರಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ’ ಎಂದು ತಿಳಿಸಿದರು.

ಚಂಡಿಗಡ ಮಾದರಿಯಲ್ಲಿ ಅಭಿವೃದ್ಧಿ: ಇದಕ್ಕೂ ಮುನ್ನ, ಚಂಡಿಗಡ ಮಾದರಿ ಯಲ್ಲಿ ನಗರ ಅಭಿವೃದ್ಧಿಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ರಮೇಶ ಸೊಂಟಕ್ಕಿ ಮಾತನಾಡಿ, ‘ಇಲ್ಲಿ ಹಲವು ನಿರ್ಣಯ ಕೈಗೊಂಡಿ ದ್ದೇವೆ. ಆದರೆ, ಬಹಳಷ್ಟು ಅನುಷ್ಠಾನಕ್ಕೆ ಬರುತ್ತಿಲ್ಲ. ಇದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಹೀಗಿರುವಾಗ, ಚಂಡಿಗಡದಂತೆ ಈ ನಗರವನ್ನು ಮಾಡುವುದು ಸಾಧ್ಯವಿಲ್ಲ. ಆದರೆ, ಕೆಲವೊಂದು ಕ್ರಮಗಳನ್ನು ಇಲ್ಲಿ ಕೈಗೊಳ್ಳಬಹುದು. ಜಾಹೀರಾತು ಫಲಕಗಳಿಗೆ ಕಡಿವಾಣ

ಹಾಕುವುದು, ವೃತ್ತಗಳ ಅಭಿವೃದ್ಧಿ ಮಾಡಬಹುದು. ಆಗ, ಪ್ರವಾಸಕ್ಕೆ ಹೋಗಿ ಬಂದದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

‘ನಗರದ ಅಭಿವೃದ್ಧಿ ವಿಷಯದಲ್ಲಿ ಮೇಯರ್‌–ಉಪ ಮೇಯರ್‌ ಸಮನ್ವಯದಿಂದ ಕಾರ್ಯನಿರ್ವಹಿಸ ಬೇಕು. ಅಧಿಕಾರಿ ಗಳಿಂದ ಕೆಲಸ ಮಾಡಿಸಬೇಕು. ಯಾರದೋ ಒತ್ತಡಕ್ಕೆ ಒಳಗಾಗಬಾರದು’ ಎಂದು ವಿರೋಧ ಪಕ್ಷದ ನಾಯಕ ದೀಪಕ ಜಮಖಂಡಿ ಅವರು ಮಾರ್ಮಿಕವಾಗಿ ಹೇಳಿದರು.

‘ಅಲ್ಲಿನಂತೆ ಇಲ್ಲಿ ಆಗುತ್ತದೆಯೇ ಎನ್ನುವುದಕ್ಕಿಂತ ಸಕಾರಾತ್ಮಕ ಮನೋ ಭಾವದಿಂದ ಮುನ್ನಡೆಯ ಬೇಕು. ಹಂತಹಂತವಾಗಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಸದ್ಯ ಅನುದಾನದ ಕೊರತೆ ಇದೆ. ಹೆಚ್ಚಿನ ಅನುದಾನ ತರಬೇಕಾಗುತ್ತದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಭೇಟಿಯಾಗೋಣ. ಡಿಸೆಂಬರ್‌ ಮೊದಲ ವಾರ ಆಡಳಿ ತಾತ್ಮಕ ವಿಷಯಗಳ ಕುರಿತು ಚರ್ಚಿಸ ಲಾಗುವುದು’ ಎಂದು ಮೇಯರ್‌ ಸಂಜೋತಾ ಬಾಂದೇಕರ ತಿಳಿಸಿದರು.

ಪಂಢರಿ ಪರಬ್‌, ಭೈರಗೌಡ ಪಾಟೀಲ, ರತನ್‌ ಮಾಸೇಕರ, ಸರಳಾ ಹೇರೇಕರ, ಸರಿತಾ ಪಾಟೀಲ ಚರ್ಚೆ ಯಲ್ಲಿ ಭಾಗಿಯಾದರು. ಉಪಮೇಯರ್ ನಾಗೇಶ ಮಂಡೋಳ್ಕರ ಇದ್ದರು.

ಮನೋಭಾವ ಬದಲಾಗದಿದ್ದರೆ...:

‘ಪಾಲಿಕೆಯಲ್ಲಿ ಹಣವಿದೆ. ಆದರೆ, ಕೆಲಸ ಮಾಡಲು ಇಚ್ಛಾಶಕ್ತಿ ಬೇಕು. ಚಂಡಿಗಡವನ್ನು ಯೋಜಿತ ನಗರವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ವಿಶಾಲ ರಸ್ತೆಗಳಿವೆ. ಮೇಯರ್‌ ಆದವರು ಭಾಷೆ, ಧರ್ಮ, ಪಕ್ಷಕ್ಕೆ ಸೀಮಿತವಾಗಬಾರದು. ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು ನಗರಕ್ಕೆ ಬಂದಾಗ ಅವರನ್ನು ಭೇಟಿಯಾಗಿ ಹೆಚ್ಚಿನ ಅನುದಾನ ಪಡೆಯಲು ಯತ್ನಿಸಬೇಕು.

ಕಿರಣ ಸಾಯಿನಾಕ ಹೇಳಿದಂತೆ ಕೇಂದ್ರಾಡಳಿತ ಪ್ರದೇಶ ಮಾಡಿದರೆ ಅಭಿವೃದ್ಧಿ ಆಗಿಬಿಡುವುದಿಲ್ಲ. ಮನಸ್ಥಿತಿ ಬದಲಿಸಿಕೊಳ್ಳದಿದ್ದರೆ ರಾಜಧಾನಿಯನ್ನೇ ಮಾಡಿದರೂ ಪ್ರಯೋಜನ ಆಗುವುದಿಲ್ಲ. ‘ನಾಗರಿಕ ಪ್ರಜ್ಞೆ’ ಬರಬೇಕು’ ಎಂದು ವಿರೋಧಪಕ್ಷದ ನಾಯಕ ದೀಪಕ ಜಮಖಂಡಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry