ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹75 ಕೋಟಿ ವೆಚ್ಚದಲ್ಲಿ ಮುಲ್ಲಾಮಾರಿ ಯೋಜನೆ ಪುನಶ್ಚೇತನ

Last Updated 29 ನವೆಂಬರ್ 2017, 7:10 IST
ಅಕ್ಷರ ಗಾತ್ರ

ಹುಮನಾಬಾದ್: ‘ರೈತರ ಹಿತ ಕಾಪಾಡುವ ಸಲುವಾಗಿ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಪುನಶ್ಚೇತನ ಕಾಮಗಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ನಾನು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಿ ₹75.20 ಕೋಟಿ ಬಿಡುಗಡೆ ಗೊಳಿಸಿದ್ದೇವೆ’ ಎಂದು ಕೆ.ಆರ್‌.ಡಿ.ಎಲ್. ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಹೇಳಿದರು.

ಇಲ್ಲಿನ ಮುಲ್ಲಾಮಾರಿ ಮೇಲ್ದಂಡೆ ಯೋಜನೆ ಉಪವಿಭಾಗ ಕಚೇರಿಯಲ್ಲಿ ಮಂಗಳವಾರ ನಡೆದ ನೀರು ಬಳಕೆದಾರರ ಸಹಕಾರ ಸಂಘದ ಹಿಂಗಾರು ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘1993–94ರಲ್ಲಿ 28ಕಿ.ಮೀ ಎಡದಂಡೆ ಕಾಲುವೆ ಮತ್ತು 42.80 ಕಿ.ಮೀ ಉದ್ದದ ಬಲದಂಡೆ ಕಾಲುವೆ ನಿರ್ಮಿಸಿ, ಶಹಾಬಾದ್‌ ಸ್ಲ್ಯಾಬ್‌ ಅಳವಡಿಸಲಾಗಿತ್ತು. ಅನೇಕ ಕಡೆ ಕಾಲುವೆ ಸಮತಟ್ಟಾಗಿ ಇಲ್ಲದಿರುವುದು, ಕೆಲವು ಭಾಗಗಳು ಶಿಥಿಲಾವಸ್ಥೆ ತಲುಪಿದ್ದರಿಂದಾಗಿ ಕಾಲುವೆ ಕೊನೆ ಭಾಗಗಳಿಗೆ ಸಮರ್ಪಕ ನೀರು ಒದಗಿಸಲು ಆಗುತ್ತಿರಲಿಲ್ಲ. ರೈತರ ಬೇಡಿಕೆ ಗಂಭೀರ ಪರಿಗಣಿಸಿ, ಸರ್ಕಾರದಿಂದ ಬಿಡುಗಡೆಗೊಳಿಸಲಾದ ಅನುದಾನದಲ್ಲಿ ಆಧುನೀಕರಣಕ್ಕಾಗಿ ಟೆಂಡರ್‌ ಕರೆಯಲಾಗಿದೆ. ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆಧುನೀಕರಣ ನಂತರ ಮುಲ್ಲಾಮಾರಿ ಮೇಲ್ದಂಡೆ ಯೋಜನೆ ನೀರು ಬಳಕೆದಾರರು ನೆಮ್ಮದಿಯಿಂದ ಕಾಲ ಕಳೆಯಬಹುದು. ಕಾರಣ 40 ವರ್ಷದ ನೆಮ್ಮದಿ ಜೀವನಕ್ಕಾಗಿ ರೈತರು ಒಂದು ವರ್ಷ ಕಷ್ಟವಾದರೂ ಸಹಿಸಿಕೊಂಡು ಸಹಕರಿಸಬೇಕು. ರೈತರ ಸಮಸ್ಯೆ ಬಗೆಹರಿಸಲು ಸದಾಸಿದ್ಧ’ ಇರುವುದಾಗಿ ರಾಜಶೇಖರ ಬಿ.ಪಾಟೀಲ ಭರವಸೆ ನೀಡಿದರು.

ಬಳಕೆದಾರರ ಸಂಘದ ಪ್ರಮುಖರ ವಿರುದ್ಧ ಆಕ್ರೋಶ: ‘ನೀರು ಬಳಕೆದಾರರ ಸಹಕಾರ ಸಂಘದ ಪ್ರತಿನಿಧಿಗಳು ಇಲಾಖೆ ಯಾವುದೆ ಹೊಸ ಯೋಜನೆ, ಮೊದಲಾದ ವಿಷಯ ಯಾರೊಬ್ಬರ ಗಮನಕ್ಕೂ ತರುವುದಿಲ್ಲ. ಅವರೆಲ್ಲ ಸ್ವಾರ್ಥಿಗಳಾಗಿದ್ದಾರೆ. ಅವರ ದ್ವಿಮುಖ ಧೋರಣೆಯಿಂದಾಗಿ ನಮ್ಮ ತೊಗರಿ ಬೆಳೆ ಹೇಗಾಗಿದೆ ನೋಡಿ ಎಂದು ಹಳ್ಳಿಖೇಡ(ಕೆ) ಗ್ರಾಮದ ರೈತರಾದ ಗೋವಿಂದ ದೊಡ್ಮನಿ ಸಭೆಯಲ್ಲಿ ಕಾಯಿ ಗಟ್ಟಿಗೊಳ್ಳದ ತೊಗರಿ ಗಿಡ ಪ್ರದರ್ಶಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿನಿಧಿಗಳ ಮೇಲೆ ನಮಗೆ ವಿಶ್ವಾಸವಿಲ್ಲ ಇಲಾಖೆ ಹೊಸ ಯೋಜನೆ ಇತ್ಯಾದಿ ಇದ್ದಲ್ಲಿ ಇಲಾಖೆ ವತಿಯಿಂದ ಸಂಬಂಧಪಟ್ಟ ಗ್ರಾಮಗಳಲ್ಲಿ ಡಂಗೋರ ಸಾರಬೇಕು’ ಎಂದು ಅದೇ ಗ್ರಾಮದ ಪ್ರಭುರಾವ್‌ ಬಿರಾದಾರ್‌ ಆಗ್ರಹಪಡಿಸಿದರು.

ರೈತರ ಸಮಸ್ಯೆ ಆಲಿಸಿ, ಮಾತನಾಡಿದ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮಸಿಂಗ್‌ ‘ಬಲದಂಡೆ ಕಾಲುವೆಗೆ 15ಕಿ.ಮೀ ಮತ್ತು ಎಡದಂಡೆ ಕಾಲುವೆಗೆ 12 ಕಿ.ಮೀ ನೀರು ಪೂರೈಸಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್‌ ಡಾಕುಳಗಿ, ಕಾಡಾ ಕೃಷಿ ಭೂ ಅಭಿವೃದ್ಧಿ ಅಧಿಕಾರಿ ಆರ್‌.ದೇವಿಕಾ, ಕಾರ್ಯ ನಿರ್ವಾಹಕ ಎಂಜಿನಿಯರ್‌ ಶಿವಕುಮಾರ ಲಾತೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT