ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ ವಿಫಲ

Last Updated 29 ನವೆಂಬರ್ 2017, 7:38 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಟೀಕಿಸಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ನಡೆದ ಗಡಿನಾಡ ಕನ್ನಡಿಗರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಸಮ್ಮೇಳನ ನಡೆಸುವುದು ಬೇಕಿರಲಿಲ್ಲ. ಆದರೆ, ತರಾತುರಿಯಲ್ಲಿ ಸಮ್ಮೇಳನ ನಡೆಸಲಾಯಿತು. ಅವಿವೇಕದ ಪರಮಾವಧಿಯಿಂದ ಅದು ವಿಫಲವಾಯಿತು ಎಂದು ಟೀಕಿಸಿದರು.

ಸಮ್ಮೇಳನದಲ್ಲಿ ಮಹದಾಯಿ, ಕಳಸಾ ಬಂಡೂರಿ, ಕಾವೇರಿ, ಮೇಕೆದಾಟು ಯೋಜನೆಗಳ ಬಗ್ಗೆ ಮಾತನಾಡಲಿಲ್ಲ. ರಾಜ್ಯದಲ್ಲಿ ಸುಮಾರು 1.5 ಕೋಟಿ ಜನ ಕನ್ನಡಿಗರು ನಿರುದ್ಯೋಗಿಗಳಾಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಯಲಿಲ್ಲ. ಪರಭಾಷಿಕರ ದಾಳಿ ಹಾಗೂ ಪರಭಾಷೆ ಚಿತ್ರಗಳ ಹಾವಳಿಯ ಬಗ್ಗೆ ಧ್ವನಿ ಎತ್ತಲಿಲ್ಲ. ಯಾವುದಕ್ಕಾಗಿ ಸಮ್ಮೇಳನ ನಡೆಸಿದ್ದೀರಾ? ಇದರ ಪ್ರಯೋಜನವೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮೇಳನವನ್ನು ಕೆಲವರ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಮಾಡಲಾಗಿದೆ. ಅವರಿಗೆ ಇಷ್ಟ ಬಂದ ಹಾಗೆ ಮಾತನಾಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ವರಿಷ್ಠರನ್ನು ಆಹ್ವಾನಿಸಲಾಗಿದೆ. ಆದರೆ, ಕನ್ನಡ ಚಳವಳಿ ಮಾಡಿದ ಒಬ್ಬ ನಾಯಕನನ್ನು ಕೂಡ ಆಹ್ವಾನಿಸಲಿಲ್ಲ ಎಂದು ಆರೋಪಿಸಿದರು.

ಸಾಹಿತಿಗಳು ಪುಸ್ತಕ ಬರೆದು ಬಿಟ್ಟರೆ ಅವರೇನು ಚಂದ್ರಲೋಕದಿಂದ ಬಂದವರಾಗುತ್ತಾರೆಯೇ? ಕನ್ನಡಕ್ಕಾಗಿ ಅವರು ಒಂದು ಚಳವಳಿ ಮಾಡಿ ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಲಿ ಎಂದು ಸವಾಲು ಹಾಕಿದರು.

ಸಮ್ಮೇಳನದಲ್ಲಿ ಬಹಳ ಮುಖ್ಯವಾಗಿ ಗೌರಿ ಲಂಕೇಶ್‌ ಹಾಗೂ ಎಂ.ಎಂ. ಕಲಬುರ್ಗಿ ಅವರನ್ನು ಮರೆತಿದ್ದಾರೆ. ಸಾಹಿತಿಗಳು ನಾಟಕ, ಡೋಂಗಿತನ ಪ್ರದರ್ಶಿಸುತ್ತಿದ್ದಾರೆ. ಕೇವಲ ಪ್ರಶಸ್ತಿ ಹಿಂತಿರುಗಿಸುತ್ತೇನೆ ಎನ್ನುತ್ತಾರೆ. ಇದರಿಂದ ಏನೂ ಬದಲಾಗುವುದಿಲ್ಲ. ಎಲ್ಲರೂ ಬೀದಿಗೆ ಬಂದು ಹೋರಾಟ ಮಾಡಬೇಕು ಎಂದರು.

ಬಾವುಟ ಬದಲಾವಣೆ ಬೇಡ: ಕನ್ನಡ ಬಾವುಟದ ಮಹತ್ವ ಯಾವುದೇ ಪಕ್ಷದ ನಾಯಕರು, ಸಾಹಿತಿಗಳಿಗೂ ಗೊತ್ತಿಲ್ಲ. ಬಾವುಟದಲ್ಲಿ ಬದಲಾವಣೆ ಮಾಡಬಾರದು. ಸರ್ಕಾರ ಬಾವುಟ ಸಮಿತಿ ರಚನೆ ಮಾಡಿದ್ದರೆ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮಕ್ಕೂ ಮೊದಲು ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಾಟಾಳ್ ಸೂರ್ಯ ಸಿಂಹಾಸನ ಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಸಿದ್ದಮಲ್ಲೇಶ್ವರ ವಿರಕ್ತ ಮಠ ಚೆನ್ನಬಸವ ಸ್ವಾಮೀಜಿ, ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ. ಮುರಳಿ, ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಜೆಎಸ್‍ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಎ.ಜಿ. ಶಿವಕುಮಾರ್, ಸಾಹಿತಿ ಸೋಮಶೇಖರ್‌ ಬಿಸಲ್ವಾಡಿ, ಗುತ್ತಿಗೆದಾರ ಕೆ.ಎಸ್. ಮಹದೇವಸ್ವಾಮಿ ಹಾಜರಿದ್ದರು.

‘ಪೇಟಕ್ಕೆ ಅವಮಾನ’
ಮೈಸೂರು ಪೇಟ ಪ್ರಭುತ್ವದ ಸಂಕೇತವಲ್ಲ. ಅದು ನಾಡು, ಭಾಷೆ, ಕನ್ನಡಿಗರ ಸಂಕೇತ. ಅದನ್ನು ನಿರಾಕರಿಸುವ ಮೂಲಕ ಸಮ್ಮೇಳನಾಧ್ಯಕ್ಷರು ಪೇಟಕ್ಕೆ ಅವಮಾನ ಮಾಡಿದ್ದಾರೆ ಎಂದು ವಾಟಾಳ್‌ ನಾಗರಾಜ್‌ ಆರೋಪಿಸಿದರು.

ಮೈಸೂರಿನ ಪೇಟ ಮಹಾರಾಜರ ದರ್ಬಾರು ಎಂದು ಹೇಳಿರುವುದು ಅವರ ಅಜ್ಞಾನ. ವಿಜ್ಞಾನಿ ಸಿ.ವಿ. ರಾಮನ್‌, ಎಂ. ವಿಶ್ವೇಶ್ವರಯ್ಯ, ಕೆಂಗಲ್‌ ಹನುಮಂತಯ್ಯ ತಲೆಯ ಮೇಲೆ ಪೇಟವಿದೆ. ಇದು ಪೇಟಕ್ಕೆ ಇರುವ ಗೌರವ. ಪೇಟದ ಗಾಂಭೀರ್ಯ, ಘನತೆಯ ಖ್ಯಾತಿ ಕರ್ನಾಟಕದಾಚೆಗೂ ಹರಡಿದೆ ಎಂದು ಹೇಳಿದರು.

ಪೇಟಕ್ಕೆ ಎಷ್ಟು ಶಕ್ತಿ, ಗೌರವ ಮತ್ತು ಮಹತ್ವವಿದೆ ಎಂದು ಜನರಿಗೆ ತಿಳಿಸುವ ಉದ್ದೇಶದಿಂದ ಡಿ. 3ರಂದು ಪೇಟ ಧರಿಸಿ ಸಾರೋಟಿನಲ್ಲಿ ಮೈಸೂರಿನ ರಸ್ತೆಗಳಲ್ಲಿ ಸಂಚರಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT