ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ರಿಂಗ್‌ಗೆ ಹೆಚ್ಚಿದ ಬೇಡಿಕೆ

Last Updated 29 ನವೆಂಬರ್ 2017, 8:32 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕನ್ನು ಬಯಲು ಬಹಿರ್ದೆಸೆ ಮುಕ್ತ‌ಗೊಳಿಸುವ ಕಾರ್ಯ ಚುರುಕು ಪಡೆದಿದೆ. ‘ಸ್ವಚ್ಛ ಭಾರತ್ ಮಿಷನ್’ ಅಡಿ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಶೌಚದ ಗುಂಡಿಗೆ ಬಳಸುವ ಸಿಮೆಂಟ್‌ ರಿಂಗ್‌ಗಳಿಗೆ ಭಾರಿ ಬೇಡಿಕೆ ಬಂದಿದೆ.

ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಒತ್ತಡ ಹೇರುತ್ತಿರುವ ಕಾರಣ ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಪ್ರಗತಿ ಕಾಣುತ್ತಿದೆ.

ಈ ಹಿಂದೆ ಬಹುತೇಕರು ಶೌಚದ ಗುಂಡಿಯನ್ನು ಕಲ್ಲಿನಿಂದ ಕಟ್ಟಿಸುತ್ತಿದ್ದರು. ಆರು ಅಡಿ ಎತ್ತರದ ಶೌಚದ ಗುಂಡಿ ನಿರ್ಮಾಣಕ್ಕೆ 500 ಕಲ್ಲುಗಳು ಬೇಕಾಗುತ್ತವೆ. ಒಂದು ಕಲ್ಲಿನ ಬೆಲೆ ₹ 12. ಅದರಂತೆ ಲೆಕ್ಕ ಹಾಕಿದರೆ ಕಲ್ಲಿಗೆ ₹ 6 ಸಾವಿರ ಖರ್ಚು ಮಾಡಬೇಕಾಗಿತ್ತು. ಜತೆಗೆ ಗುಂಡಿ ಮೇಲೆ ಮುಚ್ಚಲು ಕಲ್ಲು ಚಪ್ಪಡಿ ಇತರೆ ಸಾಮಗ್ರಿಗಳಿಗೆ ₹ 3 ಸಾವಿರ, ಗಾರೆ ಕೆಲಸದವರ ಕೂಲಿ ₹ 3 ಸಾವಿರ ಹೀಗೆ ಶೌಚದ ಗುಂಡಿ ನಿರ್ಮಾಣಕ್ಕಾಗಿಯೇ ₹ 12 ಸಾವಿರ ಖರ್ಚಾಗುತ್ತಿತ್ತು.

ಶೌಚದ ಗುಂಡಿಯನ್ನು ಕಲ್ಲಿನ ಬದಲು ಸಿಮೆಂಟ್‌ ರಿಂಗ್‌ ಬಳಸಿ ನಿರ್ಮಿಸುವುದು ಸುಲಭ ಮತ್ತು ಖರ್ಚು ಕೂಡ ಕಡಿಮೆ ಎಂಬುದು ಮನಗಂಡಿರುವ ಜನರು ಸಿಮೆಂಟ್‌ ರಿಂಗ್‌ನಿಂದಲೇ ಶೌಚ ಗುಂಡಿ ನಿರ್ಮಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತಾಲ್ಲೂಕಿನಲ್ಲಿ ಸದ್ಯ ರಿಂಗ್‌ ತಯಾರಿಸುವವರಿಗೆ ಬಿಡುವಿಲ್ಲದ ಕೆಲಸ.

ರಿಂಗ್‌ ತಯಾರಕರು ನಾಲ್ಕು, ಮೂರೂವರೆ ಮತ್ತು ಮೂರು ಅಡಿ ಹೀಗೆ ಮೂರು ಅಳತೆಯ ವ್ಯಾಸದ ರಿಂಗ್‌ಗಳನ್ನು ತಯಾರಿಸುತ್ತಿದ್ದಾರೆ. ನಾಲ್ಕು ಅಡಿ ವ್ಯಾಸಕ್ಕೆ ₹ 550, ಮೂರೂವರೆ ಅಡಿಗೆ ₹ 450 ಮತ್ತು ಮೂರು ಅಡಿ ವ್ಯಾಸದ ರಿಂಗ್‌ಗೆ ₹ 250 ಪಡೆಯುತ್ತಾರೆ. 5 ರಿಂದ 6 ರಿಂಗ್‌ಗಳನ್ನು ಬಳಸಿದರೆ ಆರು ಅಡಿ ಉದ್ದದ ಶೌಚ ಗುಂಡಿ ಸಿದ್ಧವಾಗುತ್ತದೆ.

₹ 3 ಸಾವಿರದಲ್ಲಿ ಶೌಚಗುಂಡಿಗೆ ಸಾಕಾಗುವಷ್ಟು ರಿಂಗ್‌ಗಳು ದೊರೆಯುತ್ತವೆ. ಗುಂಡಿ ಮೇಲೆ ಮುಚ್ಚಲು ಸಾಧಾರಣ ದಪ್ಪ ಕಲ್ಲು ಚಪ್ಪಡಿ, ಕಾರ್ಮಿಕರ ಕೂಲಿ ಲೆಕ್ಕ ಹಾಕಿದರೆ ₹ 4,500 ಶೌಚಗುಂಡಿ ಸಿದ್ಧಗೊಳ್ಳುತ್ತದೆ. ಹೀಗಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಬಯಸುತ್ತಿರುವ ಬಹುತೇಕರು ಸಿಮೆಂಟ್‌ ರಿಂಗ್‌ ಖರೀದಿಗೆ ಮುಗಿಬಿದ್ದಿದ್ದಾರೆ.

‘ಸಿಮೆಂಟ್‌ನಿಂದ ಈ ಹಿಂದೆ ಹೂವಿನ ಕುಂಡಗಳು, ತುಳಸಿ ಗಿಡದ ಬೃಂದಾವನ ತಯಾರಿಸುತ್ತಿದ್ದೆವು. ಈಗ ತಾಲ್ಲೂಕಿನಲ್ಲಿ ಪ್ರತಿ ಕುಟುಂಬ ಶೌಚಾಲಯ ನಿರ್ಮಿಸಿಕೊಳ್ಳವಂತೆ ಕಡ್ಡಾಯ ಮಾಡಿರುವುದರಿಂದ ನಮ್ಮಲ್ಲಿ ರಿಂಗ್‌ಗೆ ತುಂಬಾ ಬೇಡಿಕೆ ಬರುತ್ತಿದೆ. ಕೆಲವರು ಮುಂಗಡವಾಗಿ  ಹಣ ನೀಡುತ್ತಿದ್ದಾರೆ. ಹೀಗಾಗಿ ಸದ್ಯ ನಾವು ಉಳಿದೆಲ್ಲವನ್ನೂ ಬಿಟ್ಟು ಕೇವಲ ರಿಂಗ್‌ ಮಾತ್ರ ತಯಾರಿಸುತ್ತಿದ್ದೇವೆ’ ಎಂದು ಪಟ್ಟಣದಲ್ಲಿ ಸಿಮೆಂಟ್‌ ವಸ್ತುಗಳನ್ನು ತಯಾರಿಸಿ ಮಾರುವ ರಾಮಾಂಜನಪ್ಪ ತಿಳಿಸಿದರು.

* * 

ಕಲ್ಲು ಮತ್ತು ಸಿಮೆಂಟ್‌ ರಿಂಗ್‌ನ ಶೌಚಗುಂಡಿ ನಿರ್ಮಾಣದ ಖರ್ಚು, ಶ್ರಮ, ಸಮಯ ಹೋಲಿಕೆ ಮಾಡಿದರೆ ರಿಂಗ್‌ನಿಂದ ನಿರ್ಮಿಸುವುದು ತುಂಬಾ ಅನುಕೂಲವಿದೆ.
ನಾರಾಯಣಪ್ಪ, ಗೌರಿಬಿದನೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT