7

ಕಾಂಗ್ರೆಸ್ ಟಿಕೆಟ್ ಯಾರಿಗೆ; ಜನರಲ್ಲಿ ಬಿಸಿ ಬಿಸಿ ಚರ್ಚೆ

Published:
Updated:
ಕಾಂಗ್ರೆಸ್ ಟಿಕೆಟ್ ಯಾರಿಗೆ; ಜನರಲ್ಲಿ ಬಿಸಿ ಬಿಸಿ ಚರ್ಚೆ

ಚಿಂತಾಮಣಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಚಿಂತಾಮಣಿ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಯಾರಿಗೆ ಎಂಬ ಪ್ರಶ್ನೆ ಮತದಾರರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖಂಡ ಡಾ.ಎಂ.ಸಿ.ಸುಧಾಕರ್‌ ಅವರ ನಡೆ ಜನರಲ್ಲಿ ಕುತೂಹಲ ಮೂಡಿಸಿದೆ.

ಸುಧಾಕರ್ ಅಥವಾ ವಾಣಿ ಕೃಷ್ಣಾರೆಡ್ಡಿ ಅವರಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆಯೇ ಎಂಬ ಚರ್ಚೆಗಳು ಹರಿದಾಡುತ್ತಿವೆ. ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಡಾ.ಎಂ.ಸಿ.ಸುಧಾಕರ್‌ ನಡುವೆ ಶೀತಲ ಸಮರ ಮುಂದುವರಿದಿದೆ. ಪಕ್ಷ ನಿಷ್ಠ ಕಾರ್ಯಕರ್ತರಿಗೆ ಇವರ ಮೇಲೂ ಬೇಸರ ಮೂಡಿಸಿದೆ. 20 ವರ್ಷಗಳಿಂದ ಕೆ.ಎಚ್‌.ಮುನಿಯಪ್ಪ ಮತ್ತು ಸುಧಾಕರ್‌ ಕುಟುಂಬವು ಒಂದಾಗುವುದು ಮತ್ತೆ ಬೇರ್ಪಡೆಯಾಗುವುದು, ಒಬ್ಬರ ಮೇಲೆ ಮತ್ತೊಬ್ಬರು ರಾಜಕೀಯ ಕತ್ತಿ ಮಸೆಯುವುದು, ಸೋಲಿಸಲು ತಂತ್ರ ರೂಪಿಸುವುದು ಮಾಮೂಲಿ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವ್ಯಕ್ತಿ ಪ್ರಧಾನವಾಗಿರುವ ಚಿಂತಾಮಣಿ ರಾಜಕೀಯದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಪರಸ್ಪರರು ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಇವರಿಬ್ಬರ

ಭಿನ್ನಾಭಿಪ್ರಾಯದಿಂದ ಪಕ್ಷ ಸಂಘಟನೆಗೆ ಸಾಕಷ್ಟು ಹಿನ್ನಡೆಯಾಗಿದೆ ಎಂದು ಕಾರ್ಯಕರ್ತರು ಬಹಿರಂಗವಾಗಿಯೇ ಹೇಳುತ್ತಾರೆ.

‘ಕ್ಷೇತ್ರದಲ್ಲಿ ನನ್ನ ಮಾತೇ ನಡೆಯಬೇಕು. ನಾನು ಹೇಳಿದಂತೆ ಕೇಳಬೇಕು’ ಎಂಬ ಪ್ರತಿಷ್ಠೆಯಿಂದ ಕೆ.ಎಚ್‌.ಮುನಿಯಪ್ಪ ಮತ್ತು ಸುಧಾಕರ್‌ ನಡುವೆ ಮುಸುಕಿನ ಗುದ್ದಾಟ ಇದೆ. ಒಬ್ಬರು ನೇರವಾಗಿ ಸವಾಲು ಹಾಕಿದರೆ ಮತ್ತೊಬ್ಬರು ನವಿರಾಗಿ ಒಳಸುಳಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸುತ್ತಾರೆ. ಇವರಿಬ್ಬರ ನಡುವೆ ಪಕ್ಷ ಮತ್ತು ಕಾರ್ಯಕರ್ತರು ಅನಾಥವಾಗಿದ್ದಾರೆ’ ಎಂದು ಹಿರಿಯ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸುವರು.

ಸಚಿವ ಡಿ.ಕೆ.ಶಿವಕುಮಾರ್‌ ಸಂಧಾನದ ಫಲವಾಗಿ ಸುಧಾಕರ್ ಮತ್ತು ಮುನಿಯಪ್ಪ ಒಂದಾದರು. ಆದರೆ ಈ ಬೆಸುಗೆ ಬಹಳ ದಿನ ಉಳಿಯಲಿಲ್ಲ. ತೆರೆ ಮರೆಯಲ್ಲಿ ಇದ್ದ ವಾಣಿ ಕೃಷ್ಣಾರೆಡ್ಡಿ ಅವರಿಗೆ ಮುನಿಯಪ್ಪ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸ್ಥಾನ ಕೊಡಿಸಿದರು.ಇದು ಸಹಜವಾಗಿ ಸುಧಾಕರ್ ಅವರಿಗೆ ಇರುಸುಮುರುಸಾಯಿತು ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ.

‘ಕೆ.ಎಚ್‌.ಮುನಿಯಪ್ಪ ರಾಜಕೀಯವಾಗಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಸುಧಾಕರ್‌ ಇನ್ನು ಯುವಕರು. ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಉತ್ತಮ’ ಎಂದು ಆ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಇಬ್ಬರ ಜಗಳ ಮೂರನೇಯವರಿಗೆ ಲಾಭ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬಿ.ಫಾರಂ ಪಡೆದು ಸ್ಪರ್ಧಿಸುವಂತೆ ಸುಧಾಕರ್‌ ಅವರಿಗೆ ಹೇಳಿದರೂ ಅವರು ಒಪ್ಪದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡರು. ಸಂಸದರು ಜೆಡಿಎಸ್‌ನ ವಾಣಿ ಕೃಷ್ಣಾರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಬಿ.ಫಾರಂ ನೀಡಿದರು. ಕೊನೆ ಗಳಿಗೆಯಲ್ಲಿ ಸುಧಾಕರ್‌ ಅವರನ್ನು ಸೋಲಿಸಲೇಬೇಕು ಎಂಬ ಜಿದ್ದಿನಿಂದ ಜೆಡಿಎಸ್‌ಗೆ ಮತದಾನ ಮಾಡಿಸಿದರು.

ಕಾಂಗ್ರೆಸ್‌ ಪಕ್ಷ ಠೇವಣಿ ಕಳೆದುಕೊಳ್ಳಬೇಕಾಯಿತು. ಇಬ್ಬರ ಜಗಳದಲ್ಲಿ ಜೆಡಿಎಸ್‌ ನ ಎಂ.ಕೃಷ್ಣಾರೆಡ್ಡಿ ಗೆಲುವನ್ನು ಪಡೆದರು. ನಂತರ ನಡೆದ ಸಂಸತ್‌ ಚುನಾವಣೆಯಲ್ಲಿ ಕೆ.ಎಚ್‌.ಮುನಿಯಪ್ಪ ಅವರನ್ನು ಸೋಲಿಸಲೇಬೇಕು ಎಂಬ ಸುಧಾಕರ್‌ ತಂತ್ರ ಫಲಿಸಲಿಲ್ಲ. ಈ ತಂತ್ರ–ಪ್ರತಿತಂತ್ರದ ರಾಜಕಾರಣ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಇದನ್ನು ಪಕ್ಷ ನಿಷ್ಠ ಕಾರ್ಯಕರ್ತರು ಬಹಿರಂಗವಾಗಿ ಹೇಳುವರು.

                                                                                                          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry