6

ಕ್ಷುಲ್ಲಕ ರಾಜಕಾರಣ ಎಂದೂ ಮಾಡಿಲ್ಲ

Published:
Updated:

ಕಡೂರು: ‘ರಾಜಕೀಯವಾಗಿ ನನ್ನನ್ನು ವಿರೋಧಿಸಬಹುದು. ಆದರೆ, ನಾನು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದೇನೆ ಎಂದು ಯಾರೂ ವಿರೋಧಿಸುವುದು ಸಾಧ್ಯವಿಲ್ಲ’ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಕಡೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಜೀವನದಲ್ಲಿ ಅಪಮಾನ ಸಹಿಸಿದ್ದೇನೆ. ಆದರೆ, ನನ್ನ ಅಧಿಕಾರ ಸದ್ಬಳಕೆಯಾಗಬೇಕು ಎಂಬ ಆಶಯದಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಎಂದಿಗೂ ಜಾತಿ, ಭೀತಿ ಎಂದು ರಾಜಕಾರಣ ಮಾಡಿಲ್ಲ. ಸಮಾನತೆಯ ಮತ್ತು ಪ್ರೀತಿಯ ರಾಜಕಾರಣ ಮಾಡಿದ್ದೇನೆ’ ಎಂದು ಹೇಳಿದರು.

‘ಕ್ಷೇತ್ರದಿಂದ ಸಿ.ಟಿ.ರವಿ ತೊಲಗಲಿ’ ಎಂಬ ಅಭಿಯಾನ ಮಾಡುತ್ತಾರೆಂಬ ಸುದ್ದಿಯಿದೆ. ನನಗೆ ಯಾವ ದುಶ್ಚಟ ಗಳಿಲ್ಲ. ರಾಜಕೀಯವೇ ದುಶ್ಚಟ ಎಂದಾದರೆ ಅದೊಂದೇ ನನ್ನ ದುಶ್ಚಟ ಎನ್ನಬಹುದು. ತೀರ್ಮಾನ ಜನತೆಯ ಕೈಯಲ್ಲಿದೆ. ಸೂಕ್ತ ತೀರ್ಮಾನ ಕೈಗೊ ಳ್ಳಲು ಅವರು ಸ್ವತಂತ್ರರು’ ಎಂದರು.

‘ಶಾಸಕತ್ವದ ಮೊದಲ ಅವಧಿಯಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನಿಡಘಟ್ಟಕ್ಕೆ ₹ 38 ಲಕ್ಷ ಅನುದಾನ ಹಾಗೂ ಸುಮಾರು ₹ 8 ಕೋಟಿಯಷ್ಟು ವಿವಿಧ ಅನುದಾನಗಳನ್ನು ಇಲ್ಲಿಗೆ ತರಲು ಶ್ರಮಿಸಿದ್ದೇನೆ. ಎರಡನೇ ಅವಧಿಯಲ್ಲಿ ₹ 6 ಕೋಟಿಗೂ ಹೆಚ್ಚಿನ ಕಾಮಗಾರಿಯನ್ನು ಇಲ್ಲಿ ಮಾಡಿಸಿದ್ದೇನೆ. ಈ ಭಾಗಕ್ಕೆ ಅನುಕೂಲವಾಗುವಂತಹ ನೀರಾವರಿ ಯೋಜನೆಗಾಗಿ ಸದನದಲ್ಲಿ ಪ್ರಸ್ತಾಪಿಸಿದ್ದೇನೆ’ ಎಂದದು ತಿಳಿಸಿದರು.

ನಿಡಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ‘ಈ ಭಾಗದ ಜನರಿಗೆ ಕುಡಿಯುವ ನೀರಿನದ್ದೆ ದೊಡ್ಡ ತೊಂದರೆ. ಟ್ಯಾಂಕರ್ ಮೂಲಕ ನೀರು ನೀಡುತ್ತಿದ್ದೇವೆ. ಗ್ರಾಮ ಪಂಚಾಯಿತಿಯಲ್ಲಿರುವ ಅನುದಾನವನ್ನು ಅದಕ್ಕೆ ಬಳಸುವ ಮಾರ್ಗಸೂಚಿ ಇಲ್ಲ. ಕೊಳವೆ ಬಾವಿ ಕೊರೆಸಿಕೊಡುವ ಬಗ್ಗೆ ಶಾಸಕರು ನೀಡಿರುವ ಭರವಸೆ ಇನ್ನೂ ಈಡೇರಿಲ್ಲ. ಇದಲ್ಲದೆ ಹಾಸನ ಮೂಲದ ಗುತ್ತಿಗೆದಾರರೊಬ್ಬರು ಈ ಭಾಗದ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದು, ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ್ ಕುಮಾರ್, ಜಿಗಣೇಹಳ್ಳಿ ಮಂಜು, ಎಪಿಎಂಸಿ ಉಪಾಧ್ಯಕ್ಷೆ ಅನಸೂಯ, ಮಾಜಿ ಅಧ್ಯಕ್ಷ ಲಕ್ಷ್ಮಣ್ ನಾಯ್ಕ ಇದ್ದರು. ಕುಡಿಯುವ ನೀರಿನ ಸಮಸ್ಯೆ, ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ, ಟ್ಯಾಂಕರ್ ನೀರಿನ ಬಾಕಿ, ಗಂಗಮ್ಮನ ಹೊಳೆ ಚೆಕ್ ಡ್ಯಾಂ ಕಾಮಗಾರಿಯಲ್ಲಿ ಒತ್ತುವರಿ ಸಮಸ್ಯೆ ಹೀಗೆ ಹಲವು ಸಮಸ್ಯೆಗಳ ಪ್ರಸ್ತಾಪವಾದಾಗ ಅಧಿಕಾರಿಗಳು ಉತ್ತರ ನೀಡಿದರು. ಹಲವು ಮಹಿಳೆಯರು ಸಭೆಗೆ ಖಾಲಿ ಕೊಡದೊಡನೆ ಬಂದರೆ, ಗಂಗಮ್ಮ ಎಂಬ ಮಹಿಳೆ ‘ಸ್ವಚ್ಛ ಗ್ರಾಮ ಚೊಕ್ಕ ಗ್ರಾಮ’ ಎಂಬ ಯೋಜನೆಯಲ್ಲಿ ಮಾಡಲಾದ ಶೌಚಾಲಯಕ್ಕೂ ನೀರಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು. ದತ್ತ ಮಾಲಾಧಾರಿಯಾದ ಶಾಸಕ ಸಿ.ಟಿ.ರವಿ ಅವರನ್ನು ಎಲ್ಲರೂ ‘ಸ್ವಾಮಿ’ ಎಂದು ಸಂಬೋಧಿಸುತ್ತಿದ್ದುದು ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry