ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಕೋಟಿ ವೆಚ್ಚದಲ್ಲಿ ನಿರ್ಮಾಣ

Last Updated 29 ನವೆಂಬರ್ 2017, 8:44 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕು ಕೇಂದ್ರ ದಿಂದ ಹೊನ್ನೆಕೂಡಿಗೆ ಗ್ರಾಮಕ್ಕೆ ಹತ್ತಿರದ ಮಾರ್ಗವಾಗಿದ್ದ ಭದ್ರಾಹಿನ್ನೀರಿನಲ್ಲಿರುವ ರಸ್ತೆಗೆ ಸೇತುವೆ ನಿರ್ಮಿಸಿ, ಅನುಕೂಲ ಕಲ್ಪಿಸಿಕೊಡಬೇಕೆಂಬ ಗ್ರಾಮಸ್ಥರ ಹಲವು ದಶಕಗಳ ಕನಸು ಈಡೇರುವ ಹಂತ ತಲುಪಿದೆ. ಇದೇ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡುವ ಮುನ್ನಾ ತಾಲ್ಲೂಕು ಕೇಂದ್ರದಿಂದ ಹೊನ್ನೆಕೂಡಿಗೆ, ಹಂದೂರು, ಚಿನ್ನಕೂಡಿಗೆ, ಚಿಕ್ಕಂದೂರು ಮಾರ್ಗವಾಗಿ ನಾಗೇ ಸಾಲೂರು, ಬಿಳಾಲ್‌ಕೊಪ್ಪ, ಕಲ್ಮನೆಯ ಮೂಲಕ ಭದ್ರಾನದಿಗೆ ಮತ್ತು ಹೆಬ್ಬೆ ಗ್ರಾಮದಲ್ಲಿದ್ದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಕಾಶೆ ಕಂಡ ರಸ್ತೆ ಇದಾಗಿತ್ತು. ಭದ್ರಾ ಅಣೆಕಟ್ಟು ನಿರ್ಮಾಣ ಮಾಡಿದಾಗಿನಿಂದ ಹಿನ್ನೀರು ಆವರಿಸಿದ ಕಾರಣದಿಂದ ಈ ಮಾರ್ಗ ಕಡಿದು ಹೋಯಿತು. ಬದಲಾಗಿ ಬಿ.ಎಚ್.ಕೈಮರ, ಶಾಂತಿಭವನ ಮಾರ್ಗವಾಗಿ ಹೊಸ ರಸ್ತೆ ನಿರ್ಮಾಣ ಮಾಡಲಾಯಿತು. ಹಳೆ ರಸ್ತೆಯ ಮೂಲಕ ಹೊನ್ನೆಕೂಡಿಗೆ ಗ್ರಾಮಕ್ಕೆ ಪಟ್ಟಣದಿಂದ ಕೇವಲ 4 ರಿಂದ 5 ಕಿ.ಮೀ ದೂರವಾಗುತ್ತಿತ್ತು. ಪ್ರಸ್ತುತ ಗ್ರಾಮಕ್ಕೆ ಸುತ್ತಿ ಬಳಸಿ ಹೋಗುವುದರಿಂದ 20 ಕಿ.ಮೀ ದೂರವಾಗುತ್ತಿದೆ. ಹಳೆ ಮಾರ್ಗಕ್ಕೆ ಸೇತುವೆ ನಿರ್ಮಾಣವಾಗುವುದರಿಂದ ಗ್ರಾಮಸ್ಥರಿಗೆ, ಶಾಲಾ, ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತಾಲ್ಲೂಕು ಕೇಂದ್ರಕ್ಕೆ ಹತ್ತಿರದ ಮಾರ್ಗ ಲಭ್ಯವಾಗಲಿದೆ. ಇಂಧನ, ಸಮಯ ಉಳಿತಾಯವಾಗಲಿದೆ.

ಈ ರಸ್ತೆಗೆ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆ.ಟಿ.ಚಿನ್ನೇಗೌಡ ಅವರು ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚಿಂತನೆ ನಡೆಸಲಾಗಿತ್ತು. ಅಲ್ಲದೆ, ಈ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ 2008ರಲ್ಲಿ ಹಂದೂರು ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಸಭೆಯಲ್ಲಿ ಅಂದಿನ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ₹ 20ಲಕ್ಷ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 3, 2016ರಂದು ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನರಸಿಂಹರಾಜಪುರ ಎಂದು ನಾಮಾಕಿಂತಗೊಂಡು 100 ವರ್ಷಗಳಾದ ಸವಿನೆನಪಿಗಾಗಿ ಹಾಗೂ ಹಲವು ದಶಕಗಳ ನಂತರ ಮುಖ್ಯಮಂತ್ರಿಯೊಬ್ಬರು ಊರಿಗೆ ಆಗಮಿಸಿದ್ದ ನೆನಪಿಗಾಗಿ ಹೊನ್ನೆಕೂಡಿಗೆ ಗ್ರಾಮಕ್ಕೆ ಹತ್ತಿರದ ಸಂಪರ್ಕದ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ, ಪ್ರಾರಂಭದಲ್ಲಿ ₹4.90 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ನಂತರ ತಾಂತ್ರಿಕ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಕ್ರಿಯಾ ಯೋಜನೆ ರೂಪಿಸಿದಾಗ ₹20 ಕೋಟಿ ವೆಚ್ಚ ತಗಲುವುದಾಗಿ ವರದಿ ನೀಡಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಮುಖ್ಯಮಂತ್ರಿಗೆ ಮನವಿ ಮಾಡಿ, ಉಳಿದ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿಗೆ ಸ್ಪಂದಿಸಿ ಊರಿನ ಅಭಿವೃದ್ಧಿಗೆ ನೀಡಿರುವ ಅನುದಾನದ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ.
ಎಂ.ಶ್ರೀನಿವಾಸ್, ವಿಧಾನಪರಿಷತ್ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT