ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮವಾದುದರಲ್ಲಿಯೇ ಸುಖ ಇರುವುದು

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಯೋ ವೈ ಭೂಮಾ ತತ್‌ಸುಖಂ ನಾಲ್ಪೇ ಸುಖಮಸ್ತಿ | ಭೂಮೈವ ಸುಖಂ ||’ ಇದು ಉಪನಿಷತ್ತಿನ ಸೊಲ್ಲು. ‘ಯಾವುದು ಭೂಮವೋ ಅದೇ ಸುಖ; ಅಲ್ಪವಾದುದರಲ್ಲಿ ಸುಖವಿಲ್ಲ; ಭೂಮವೊಂದೇ ಸುಖ’ ಎನ್ನುವುದು ಈ ಮಾತಿನ ಅರ್ಥ.

‘ಭೂಮ’ ಎಂದರೆ ‘ಹಿರಿದಾದುದು’, ‘ತುಂಬ ದೊಡ್ಡದು’, ‘ಮಹತ್ತಾದುದು’ ಎಂದು ಸ್ವಲ್ಪ ಸರಳವಾಗಿ ಹೇಳಬಹುದು. ಹಿರಿದಾದುರಲ್ಲಿಯೇ ಸುಖವಿದೆ; ಅಲ್ಪವಾಗಿರುವುದರಲ್ಲಿ ಸುಖ ಇಲ್ಲ. ಇದು ಛಾಂದೋಗ್ಯೋಪನಿಷತ್ತಿನ ನಿಲುವು. ಹಾಗಾದರೆ ಈ ‘ಹಿರಿದಾದುದು’ – ‘ಭೂಮ’ ಯಾವುದು? ದಿನನಿತ್ಯ ನಮ್ಮ ಅನುಭವಕ್ಕೆ ಬರುವ ಸಂಗತಿಯೊಂದರ ಮೂಲಕ ಕುವೆಂಪು ಅವರು ‘ಭೂಮ’ದ ವಿವರವನ್ನು ಕಟ್ಟಿಕೊಟ್ಟಿದ್ದಾರೆ:

‘ಹಳ್ಳಿಯ ಹೊರಗಡೆ ಒಂದು ಹೆಮ್ಮರವಿರುತ್ತದೆ. ಅದರ ಗಾತ್ರವೊ ಏಳೆಂಟು ಜನರು ತಬ್ಬಿದರೂ ಸಾಲದು. ಎತ್ತರವೊ ಕೊರಳು ಸೋತು ಕಣ್ಣು ದಣಿಯುವಷ್ಟು. ಅದರ ಒಂದೊಂದು ಕೊಂಬೆಯೂ ಬಲ್ಮರದಂತೆ ಕೈಚಾಚಿರುತ್ತದೆ. ಎಲೆ ದಟ್ಟವಾಗಿ ಬೆಳೆದು ಮರ ಕತ್ತಲೆಯ ಗುಡಾರದಂತಿರುತ್ತದೆ. ಅದನ್ನು ನೋಡಿದರೆ ಏನೋ ದೊಡ್ಡದನ್ನು ಕಂಡಂತಾಗುತ್ತದೆ. ಅದರ ಆ ರಹಸ್ಯಮಯ ಮೌನದಲ್ಲಿ ಏನೋ ಗೌರವಾಸ್ಪದವಾದುದು ನೆಲೆಸಿರುವಂತೆ ಭಾಸವಾಗುತ್ತದೆ.

ಅದರ ಬೃಹತ್ತನ್ನು ಕಂಡೊಡನೆ ನಮ್ಮ ಅಲ್ಪತೆ ಅಪ್ಪಳಿಸಿದಂತಾಗಿ ಗಮನಕ್ಕೂ ಬರುತ್ತದೆ. ನಾವರಿಯಲಾರದ ಏನೊ ಮಹತ್ತು ಅದರಲ್ಲಿ ಸ್ಫುರಿಸಿ ನಮ್ಮನ್ನು ಪುಲಕಿತರನ್ನಾಗಿ ಮಾಡುತ್ತದೆ. ಆ ಪುಲಕದಲ್ಲಿ ಗೌರವದಂತೆಯೆ ಭೀತಿಯೂ ಸಂಚರಿಸುತ್ತದೆ. ಕೈಮುಗಿಯುವಂತಾಗುತ್ತದೆ; ಅಡ್ಡಬೀಳುವಂತಾಗುತ್ತದೆ; ಕ್ಷಮೆ ಬೇಡುವಂತಾಗುತ್ತದೆ; ಪ್ರಾರ್ಥಿಸಬೇಕು ಎನ್ನಿಸುತ್ತದೆ. ವೃಕ್ಷದೇವತೆ ಅವತರಿಸುತ್ತದೆ. ಭೈರವನ ಆವಾಹನೆಯಾಗುತ್ತದೆ; ಗ್ರಾಮಮಾರಿಕಾಶಕ್ತಿಯ ಆವಾಸವೂ ಆದೀತು!’

ಹೀಗೆ ಮುಂದುವರೆಯುತ್ತ ‘ಭೂಮದ ಅನುಭೂತಿ ಬರಿಯ ವೈಯಕ್ತಿಕ ಭಾವದ ಅನುಭವ ಮಾತ್ರವಲ್ಲ; ಅದು ವಸ್ತು; ಅದು ಶಕ್ತಿ; ನಿಗ್ರಹಾನುಗ್ರಹ ಸಮರ್ಥವಾದ ಚೈತನ್ಯವೂ ಆಗುತ್ತದೆ’ ಎನ್ನುತ್ತಾರೆ. ‘ಭೂಮಾನುಭೂತಿ ಮತ್ತು ಭವ್ಯತಾ ಅನುಭವದ ಮೀಮಾಂಸೆ’ ಕುವೆಂಪು ಅವರ ಈ ಪ್ರಬಂಧದ ಅನುಸಂಧಾನ ನಮ್ಮ ವ್ಯಕ್ತಿತ್ವದ ಉತ್ಕರ್ಷಕ್ಕೆ ಒದಗುವಂತಿದೆ.ಉಪನಿಷತ್ತು ‘ಭೂಮಾನುಭವ’ ಎಂದು ಹೇಳುತ್ತಿರುವುದು ‘ಬ್ರಹ್ಮಾನುಭವ’ವನ್ನು ಕುರಿತು. ‘ಬ್ರಹ್ಮ’ ಎಂದರೂ ಅರ್ಥ ‘ಬೃಹತ್ತಾದುದು’ ಎಂದೇ ಎನ್ನಿ!

ನಮ್ಮ ಈಗಿನ ಸಮಸ್ಯೆ ಎಂದರೆ ನಮಗೆ ‘ಭೂಮ’ದ ಬಗ್ಗೆ ತಿಳಿಯುವ ಕುತೂಹಲವಿಲ್ಲ; ಇರುವಿಕೆಯಲ್ಲಿ ಶ್ರದ್ಧೆಯಿಲ್ಲ; ಅದನ್ನು ಪಡೆಯುವ ಹಂಬಲವಿಲ್ಲ; ಪಡೆಯಲು ಸಾಧನೆಯ ತುಡಿತವಿಲ್ಲ. ‘ನಮಗೆ ನಾವೇ ದೊಡ್ಡವರು’ – ಇದು ಈ ಕಾಲದ ದರ್ಶನವಾಗಿದೆ. ಆದರೆ ಉಪನಿಷತ್ತು ಹೇಳುತ್ತಿದೆ – ‘ಭೂಮದಲ್ಲಿ ಮಾತ್ರವೇ ಸುಖವಿದೆ; ಅಲ್ಪವಾದುದರಲ್ಲಿ ಇಲ್ಲ.’ ನಮಗೆ ಈ ಮಾತಿನ ಬಗ್ಗೆಯೇ ನಂಬಿಕೆಯಿಲ್ಲವಾಗಿದೆ. ಏಕೆಂದರೆ ‘ನನಗಿಂತಲೂ ದೊಡ್ಡದಾದುದು ಈ ಸೃಷ್ಟಿಯಲ್ಲಿ ಯಾವುದೂ ಇರಲು ಸಾಧ್ಯವಿಲ್ಲ’ ಎಂಬ ಸಾಕ್ಷಾತ್ಕಾರವಾಗಿಬಿಟ್ಟಿದೆ!

ನಮಗಿಂತಲೂ ದೊಡ್ಡದಾದುದನ್ನು ಊಹಿಸಿಕೊಳ್ಳಲು ಕೂಡ ನಮಗೆ ಸಾಧ್ಯವಿಲ್ಲವಾಗಿದೆ. ಇದರ ಮೊದಲ ಅಡ್ಡಪರಿಣಾಮ ಎಂದರೆ: ನಮ್ಮಲ್ಲಿ ಇಂದು ವಿನಯವೇ ಮಾಯವಾಗಿದೆ. ಇದನ್ನು ನಮ್ಮ ಮನೆಯನ್ನೋ, ನಾವು ಓಡಾಡುವ ರಸ್ತೆಯನ್ನೋ, ನಮ್ಮ ಕೆಲಸದ ಪರಿಸರವನ್ನೋ – ಎಲ್ಲಿ ಬೇಕಾದರೂ ನಾವಿದನ್ನು ಗುರುತಿಸಬಹುದು. ನಮ್ಮ ಕಲಿಕೆ, ಉಡುಗೆ–ತೊಡುಗೆ, ಆಹಾರ–ವಿಹಾರ – ಜೀವನದ ಪ್ರತಿ ವಿವರದಲ್ಲೂ ‘ನಾನು, ನಾನು’ ಎನ್ನುವುದು ಹುಚ್ಚೆದ್ದು ಕುಣಿಯುತ್ತಿರುವುದರಿಂದ ವಿನಯ ಮಾಯವಾಗಿದೆ. ಅದರ ಪರಿಣಾಮವಾಗಿ ಭೂಮದ ಬಗ್ಗೆ ಗಮನ ಮೂಡಲೂ ಅವಕಾಶವಿಲ್ಲದಂತಾಗಿದೆ.

ನನಗಿಂತಲೂ ದೊಡ್ಡದಾದ, ಮಹತ್ತಾದ ವಸ್ತುವೋ ವ್ಯಕ್ತಿಯೋ ಇರಬಹುದು ಎಂಬ ಪ್ರಾಂಜಲತೆಯೇ ನಮ್ಮಿಂದ ಮಾಯವಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಒಮ್ಮೆ ಕಣ್ಣುಬಿಟ್ಟು ನೋಡಿದರೂ ಈ ಸಂಗತಿ ನಮಗೆ ಪ್ರತ್ಯಕ್ಷವಾಗುತ್ತದೆ. ಆದರೆ ನಾವು ಇಂದು ನಮ್ಮ ಎದುರಿಗೇ ಇರುವ ಸೃಷ್ಟಿಯ ವಿವರಗಳನ್ನೇ ನೋಡುತ್ತಿಲ್ಲ – ಎಂದರೆ ನೋಡುತ್ತಿದ್ದರೂ ನಾವು ಕಾಣುತ್ತಿಲ್ಲ. ನಾವೇ ಬಿತ್ತಿದ ಬೀಜ ನಮ್ಮ ಕಣ್ಣಮುಂದೆಯೇ ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಿ ಬೆಳೆಯುತ್ತದೆ. ಆದರೆ ಬೀಜದಲ್ಲಿರುವ ಭೂಮದ ಶಕ್ತಿ ನಮ್ಮ ಕುತೂಹಲಕ್ಕೆ ವಸ್ತುವಾಗದು; ಮರದಲ್ಲಿರುವ ಭೂಮದ ಶಕ್ತಿ–ಸೌಂದರ್ಯಗಳು ನಮ್ಮ ಗಮನಕ್ಕೆ ಬಾರದು. ನಮ್ಮ ವ್ಯಕ್ತಿತ್ವವು ಸೊಬಗನ್ನೂ ಬಲವನ್ನೂ ಪಡೆಯಬೇಕು ಎಂದರೆ ಮೊದಲಿಗೆ ನಾವು ನಮ್ಮ ಕಣ್ಣೆದುರಿಗಿರುವ ಸೃಷ್ಟಿಯನ್ನು ಅನುಭವಿಸಬೇಕು; ಅದರ ಭೂಮತ್ವದಲ್ಲಿ ಮೈಮರೆಯುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT