7

ಛಾಯಾಚಿತ್ರಗಳಲ್ಲ, ಕಲಾಕೃತಿಗಳು!

Published:
Updated:
ಛಾಯಾಚಿತ್ರಗಳಲ್ಲ, ಕಲಾಕೃತಿಗಳು!

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಎರಡು ಬಾರಿ ಅನುತ್ತೀರ್ಣನಾದ ಎಂದು ಮೊಮ್ಮಗನ ಮೇಲೆ ಪ್ರೀತಿಯ ತಾತ ಮುನಿಸಿಕೊಂಡು ಮಾತು ನಿಲ್ಲಿಸಿದರು. ಹಾಲಿನ ಡೇರಿ ಗೋಡೆಯ ಮೇಲೆ ಚಿತ್ರ ಬರೆದಾಗ, ಸ್ನೇಹಿತರು ಅದನ್ನು ವಿರೂಪಗೊಳಿಸಿದರು. ಇದರಿಂದ ತನ್ನದಲ್ಲದ ತಪ್ಪಿಗೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅದೇ ಡೇರಿಯ ಮುಂದೆ ಮೊಮ್ಮಗನನ್ನು ತಾತ ದನಕ್ಕೆ ಬಡಿದಂತೆ ಬಡಿದು, ಒದ್ದರು. ಹೀಗೆ ಸಾಲು, ಸಾಲು ಅವಮಾನ, ನೋವನ್ನು ಅನುಭವಿಸಿದ ಹುಡುಗನನ್ನು ಕುಂಚವೇ ಕೈ ಹಿಡಿದು ನಡೆಸಿತು, ಅವನ ಬದುಕನ್ನೂ ಅರಳಿಸಿತು.

16ನೇ ವರ್ಷದಲ್ಲೇ, ಮುನಿದ ಲೇಖನಿಯನ್ನು ಕೆಳಗಿಟ್ಟು, ಒಲಿದ ಕುಂಚವನ್ನು ಎದೆಗಪ್ಪಿಕೊಂಡ ಹುಡುಗನಿಗೆ ಚಿತ್ರಕಲೆಯೇ ಚಿತ್ರಾನ್ನಕ್ಕೆ ದಾರಿಯಾಯಿತು. 30–40ಕಿ.ಮೀ ಸೈಕಲ್‌ ತುಳಿಯುತ್ತಾ, ಊರೂರು ಅಲೆಯುತ್ತಾ ‘ಅಕ್ಷರ ದಾಸೋಹ’ ಕಾರ್ಯಕ್ರಮದಡಿ ಚಿತ್ರವನ್ನು ಬಿಡಿಸುತ್ತಿದ್ದ. ಇಡೀ ಕೊಠಡಿಯನ್ನು ವಾರಗಟ್ಟಲೆ ಶ್ರಮವಹಿಸಿ, ಚಿತ್ರಗಳಿಂದ ಸಿಂಗಾರಗೊಳಿಸಿದರೆ ಸಿಗುತ್ತಿದ್ದುದು ಒಂದು ಅಥವಾ ಎರಡು ಸಾವಿರ ರೂಪಾಯಿ. ಗ್ರಾಮದ ಟೈರ್‌ ಗಾಡಿಗಳಿಗೆ ಬಣ್ಣ ಬಳಿದು, ಪ್ರಾಣಿಗಳ ಚಿತ್ರ ಬಿಡಿಸಿದರೆ ನೂರು, ಇನ್ನೂರು ರೂಪಾಯಿ ಕೊಡುತ್ತಿದ್ದರು.

ಹೀಗೆ, ಚಿಕ್ಕಂದಿನಿಂದಲೂ ಚಿತ್ರಕಲೆ ಯನ್ನೇ ಬದುಕಿನ ಉಸಿರಾಗಿಸಿಕೊಂಡ ಈ ಕಲಾವಿದನ ಕಲಾಕೃತಿಗಳಿಗೆ ಈಗ ಚಿನ್ನದ ಬೆಲೆ ಸಿಗುತ್ತಿದೆ. ಹೌದು, ಇವರ ಕುಂಚದಲ್ಲಿ ಅರಳಿದ ಕೆಲವು ಕಲಾಕೃತಿಗಳನ್ನು ಕಲಾ ರಸಿಕರು, ಉದ್ಯಮಿಗಳು, ವ್ಯಾಪಾರಸ್ಥರು ಒಂದು ಲಕ್ಷಕ್ಕೂ ಅಧಿಕ ಹಣ ಕೊಟ್ಟು ಖರೀದಿಸಿದ್ದಾರೆ! ಅಷ್ಟೇ ಅಲ್ಲ, ಮೈಸೂರು ದಸರಾಕ್ಕೆ ಬರುವ ಮಾವುತರು ಮತ್ತು ಕಾವಾಡಿಗರ ಮಕ್ಕಳ ಕುರಿತಾದ ‘ಚೈಲ್ಡ್‌ ಲೈಫ್‌’ ಪೇಂಟಿಂಗ್‌ಗೆ 2016–17ನೇ ಸಾಲಿನ ‘ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ’ಯೂ ಸಂದಿದೆ.

ಹೌದು, ಇಂಥದ್ದೊಂದು ಪುರಸ್ಕಾರಕ್ಕೆ ಅರ್ಹರಾದ ಕಲಾವಿದರೇ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸಂಕಲಗೆರೆ ಗ್ರಾಮ ವೇದಮೂರ್ತಿ ಮತ್ತು ಮಂಗಳಮ್ಮ ಅವರ ಪುತ್ರ ಗಂಗಾಧರಮೂರ್ತಿ. ತಾತ ಜಯಲಿಂಗಯ್ಯ ಅವರು ವೃತ್ತಿಯಿಂದ ಶಿಕ್ಷಕ, ಪ್ರವೃತ್ತಿಯಿಂದ ಕಲಾವಿದ ರಾಗಿದ್ದರು. ಇವರು ಮದುವೆ ಮನೆಗಳಲ್ಲಿ ಬಿಡಿಸುತ್ತಿದ್ದ ಹಸೆ ಚಿತ್ರಗಳನ್ನು ನೋಡಿಕೊಂಡು ಬೆಳೆದ ಗಂಗಾಧರ್ ಅವರಿಗೆ ಸಹಜವಾಗಿಯೇ ಕಲೆಯ ಮೇಲೆ ಒಲವು ಮೂಡಿತು.

ಗಂಗಾಧರ್‌ ಅವರಿಗೆ ಕುಂಚದ ಮೇಲೆ ಇದ್ದ ಹಿಡಿತವನ್ನು ಗಮನಿಸಿದ ಕಲಾವಿದ ನರಸಿಂಹಾಚಾರ್‌ ಎಂಬುವರು ಕಲಾ ಕಾಲೇಜು ಸೇರಲು ಸಲಹೆ ನೀಡಿದರು. ಆದರೆ, ಎಸ್‌ಎಸ್‌ಎಲ್‌ಸಿಯನ್ನೇ ಪಾಸ್‌ ಮಾಡದ ಇವರಿಗೆ ಕಾಲೇಜು ಸೇರುವುದು ದೂರದ ಮಾತಾಯಿತು. ಅದಾಗ್ಯೂ ಕಾಲೇಜು ಸೇರಲೇಬೇಕು, ಕಲಾ ಶಿಕ್ಷಣ ಪಡೆಯಲೇಬೇಕು ಎಂಬ ಹಟ ತೊಟ್ಟು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಮೈಸೂರಿನ ಶ್ರೀ ಕಲಾನಿಕೇತನ ಕಲಾ ಕಾಲೇಜಿನಲ್ಲಿ ಬಿ.ವಿ.ಎ (ಬ್ಯಾಚುಲರ್‌ ಆಫ್‌ ವಿಷುಯಲ್‌ ಆರ್ಟ್ಸ್‌) 5 ವರ್ಷ ಅವಧಿಯ ಕೋರ್ಸ್‌ಗೆ ಸೇರಿದರು.

ಬದುಕಿಗೆ ಬಣ್ಣ ತುಂಬಿದ ಗೆಳತಿ ಮೊದಲ ವರ್ಷದಲ್ಲೇ ಸಹಪಾಠಿ ಕಾವ್ಯಶ್ರೀ ಅವರೊಂದಿಗೆ ಪ್ರೇಮಾಂಕುರವಾಯಿತು. 2–3 ತಿಂಗಳ ನಂತರ ಇಬ್ಬರ ಮಧ್ಯೆ ಮನಸ್ತಾಪ ಬಂತು. ಕಾವ್ಯಶ್ರೀ ಕಾಲೇಜು ತೊರೆದರು. ಇದರಿಂದ ಬೇಸರ ಗೊಂಡ ಗಂಗಾಧರ್‌ ಕೂಡ ಕಾಲೇಜು ಬಿಟ್ಟರು. ಪರೀಕ್ಷೆಯನ್ನೂ ಬರೆಯಲಿಲ್ಲ. ಕೆಲ ತಿಂಗಳು ಕಳೆದ ನಂತರ ಒಂದು ದಿನ ಕಾವ್ಯಶ್ರೀ ಅವರೇ ಕರೆ ಮಾಡಿ, ಮದುವೆ ಪ್ರಸ್ತಾಪ ಮಾಡಿದರು. ಆಗ ಸ್ನೇಹಿತರ ಸಮ್ಮುಖದಲ್ಲಿ ಗಂಗಾಧರ್‌ ಮತ್ತು ಕಾವ್ಯಶ್ರೀ ಅವರು ದಾಂಪತ್ಯಕ್ಕೆ ಕಾಲಿಟ್ಟರು.

ವಿವಾಹವಾದ ನಂತರ, ಮೈಸೂರಿನಲ್ಲಿದ್ದ ಮಾವ ಕೃಷ್ಣಪ್ಪ ನವರ ಮನೆಯಲ್ಲಿ ನವಜೀವನ ಶುರುವಾಯಿತು. ಮಾವನವರ ಒತ್ತಾಸೆ ಮೇರೆಗೆ ಗಂಗಾಧರ್‌ ಅವರು 2008–09ರಲ್ಲಿ ಮತ್ತೆ ಬಿ.ವಿ.ಎ. ಕೋರ್ಸ್‌ನ ಮೊದಲ ವರ್ಷಕ್ಕೆ ಸೇರಿದರು. ಕಾಲೇಜಿನಲ್ಲಿ ಪ್ರವೀಣ್‌, ವಿನೋದ್‌ ಅವರ ಜೊತೆಗೂಡಿ ‘ವನ್ಯಾವರಣ’ ಎಂಬ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ, ಶಿಕ್ಷಕರು ಮತ್ತು ಕಲಾಪ್ರೇಮಿಗಳಿಂದ ಸೈ ಎನಿಸಿಕೊಂಡರು. ಐದು ವರ್ಷಗಳ ಯಶಸ್ವಿ ಕಲಾ ಶಿಕ್ಷಣವನ್ನು ಪಡೆದು, ನಂತರ ಎಂ.ಎಫ್‌.ಎ. (ಮಾಸ್ಟರ್‌ ಆಫ್‌ ಫೈನ್‌ ಆರ್ಟ್ಸ್‌) ಕೋರ್ಸ್‌ನಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. ಹೀಗೆ ಓದಿನ ಜತೆಯಲ್ಲೇ ಮನೆಯಲ್ಲಿ ಪೇಂಟಿಂಗ್‌ಗಳನ್ನು ಮಾಡುತ್ತಾ, ಅವುಗಳ ಮಾರಾಟದಿಂದ ಬಂದ ಹಣದಿಂದ ಜೀವನ ಸಾಗಿಸಿದರು. ಎಲ್ಲಿಯೂ ಕೆಲಸಕ್ಕೆ ಹೋಗಲು ಒಪ್ಪದ ಗಂಗಾಧರ್‌ ಈಗಲೂ ಮನೆಯಲ್ಲೇ ಕುಳಿತು ಅಪೂರ್ವ ಕಲಾಕೃತಿಗಳನ್ನು ರಚಿಸುತ್ತಾರೆ.

‘ನಾನು ಯಾವತ್ತೂ ಮಾರಾಟದ ಬಗ್ಗೆ ತಲೆಕೆಡಿಸಿಕೊಳ್ಳುವು ದಿಲ್ಲ. ಸಂತೃಪ್ತಿ ನೀಡುವ ಕಲಾಕೃತಿಗಳನ್ನು ರಚಿಸಬೇಕು ಎಂಬುದು ನನ್ನ ಮನದಾಸೆ. ಕೆಲವರು ಆರ್ಡರ್‌ ಕೊಟ್ಟು, ಬಣ್ಣ, ವಿನ್ಯಾಸ ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ. ಈ ರೀತಿಯ ಚಿತ್ರಗಳನ್ನು ಬಿಡಿಸುವುದು ನನಗೆ ಬೋರಿಂಗ್‌. ಪ್ರಾಮಾಣಿಕವಾಗಿ ಚಿತ್ರಕಲೆಯನ್ನು ಕಲಿಯಲು ಬಯಸುವವರಿಗೆ ತರಬೇತಿ ನೀಡಬೇಕು. ಚಿತ್ರಕಲೆಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಗಂಗಾಧರ್‌ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ವನ್ಯಜೀವಿಗಳೇ ಪ್ರೇರಣೆ!

ಗಂಗಾಧರ್‌ ಅವರು ವನ್ಯಜೀವಿ ಕುರಿತ ಪೇಂಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಾಗಾಗಿಯೇ ಇವರು ಕ್ಯಾಮೆರಾವನ್ನು ಬಗಲಿಗೇರಿಸಿಕೊಂಡು ಚಾಮರಾಜನಗರ ಜಿಲ್ಲೆಯ ಬಂಡೀಪುರ, ಶಿವಮೊಗ್ಗ ಜಿಲ್ಲೆಯ ತಾವರೇಕೊಪ್ಪ ಸೇರಿದಂತೆ ಕಾಡು, ಕಣಿವೆ, ಬೆಟ್ಟ, ಗುಡ್ಡಗಳಲ್ಲಿ ಅಲೆಯುತ್ತಾ, ಸಫಾರಿ ಮಾಡುತ್ತಾ, ವನ್ಯಜೀವಿ ಚಿತ್ರಗಳನ್ನು ಸೆರೆಹಿಡಿಯುತ್ತಾರೆ. ಕೆಲವೊಮ್ಮೆ ತನಗೆ ಬೇಕಾದ ಪ್ರಾಣಿಯ ಚಿತ್ರ ಸೆರೆ ಹಿಡಿಯಲು ತಿಂಗಳುಗಟ್ಟಲೆ ಕಾಡಲ್ಲಿ ಅಲೆದದ್ದೂ ಉಂಟು. ಹೀಗೆ ಸೆರೆಸಿಕ್ಕ ಛಾಯಾಚಿತ್ರಗಳನ್ನು ಯಥಾವತ್ತಾಗಿ ಕ್ಯಾನ್ವಾಸ್‌ನ ಮೇಲೆ ತೈಲ ವರ್ಣದಲ್ಲಿ ಅರಳಿಸುತ್ತಾರೆ. ಥಟ್ಟನೆ ಇವರ ಪೇಂಟಿಂಗ್‌ ನೋಡಿದರೆ, ಇವು ಛಾಯಾಚಿತ್ರ ಎನಿಸುವಷ್ಟು ನೈಜತೆಯನ್ನು ಮೈಗೂಡಿಸಿಕೊಂಡಿವೆ. ಪೇಂಟಿಂಗ್‌ ಮಾಡುವಾಗ ಕೆಲ ಛಾಯಾಚಿತ್ರಗಳ ಹಿನ್ನೆಲೆ, ನೆರಳು–ಬೆಳಕನ್ನು ಬದಲಿಸಿ, ಕಲಾಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಾರೆ.

ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಪ್ರತಿ ವರ್ಷವೂ ಪಾಲ್ಗೊಂಡಿದ್ದಾರೆ. ಚಿತ್ರಸಂತೆಯಲ್ಲಿ ಇವರು ರಚಿಸಿದ ಸಿಂಹದ ಪೇಂಟಿಂಗ್‌ ₹ 1.20 ಲಕ್ಷ, ಗೂಳಿ ಪೇಂಟಿಂಗ್‌ ₹ 80 ಸಾವಿರ, ನವಿಲು ಪೇಂಟಿಂಗ್‌ ₹ 60 ಸಾವಿರಕ್ಕೆ ಮಾರಾಟವಾಗಿವೆ. ಇತ್ತೀಚೆಗೆ ಬರೆದಿರುವ ಜೋಡಿ ಹುಲಿಯ ಪೇಂಟಿಂಗ್‌ಗೆ (3X5.5 ಅಡಿ) ₹4 ಲಕ್ಷ ದರ ನಿಗದಿಪಡಿಸಿದ್ದಾರೆ. ನೂರಕ್ಕೂ ಹೆಚ್ಚು ಕಲಾಕೃತಿಗಳು ಇದುವರೆಗೆ ಮಾರಾಟವಾಗಿವೆ. ಹಂಪಿ ಲ್ಯಾಂಡ್‌ಸ್ಕೇಪ್‌ ಕ್ಯಾಂಪ್‌, ವರ್ಲಿ ಪೇಂಟಿಂಗ್‌ ಕ್ಯಾಂಪ್‌, ಮೂಡುಬಿದರೆ ಕಲಾ ಶಿಬಿರ, ಕಲಾ ಪ್ರತಿಭೋತ್ಸವ, ಲಲಿತ ಕಲಾ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಅನೇಕ ಶಿಬಿರಗಳಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry