3

ಶ್... ಸೊಳ್ಳೆ ಶಬ್ದ ಬೇಕಿದೆ

Published:
Updated:
ಶ್... ಸೊಳ್ಳೆ ಶಬ್ದ ಬೇಕಿದೆ

ಜಗತ್ತಿನ ಮಾರಕ ಜೀವಿಯಾದ ಸೊಳ್ಳೆಯನ್ನು ದೇಶದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ‘ಹತ್ತು ಹಲವು ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಾಶ ಮಾಡಲು ನಾವು ದೇವರಲ್ಲ. ಪ್ರಕೃತಿಯಿಂದ ಮಾತ್ರ ಸಾಧ್ಯವಾಗುವ ಕೆಲಸವನ್ನು ಮಾಡುವಂತೆ ನಮ್ಮಲ್ಲಿ ಹೇಳಬೇಡಿ’ ಎಂದು ಕೋರ್ಟ್ ಪ್ರತಿಕ್ರಿಯಿಸಿತ್ತು.

ಗುಂಯ್ ಗುಡುತ ಕಿರಿಕಿರಿ ಉಂಟು ಮಾಡುವ, ಕಚ್ಚಿ ರಕ್ತ ಹೀರಿ ನಿದ್ರೆಗೆ ಭಂಗ ತರುವ ಸೊಳ್ಳೆಗಳನ್ನು ಹಸ್ತಗಳ ನಡುವೆ ಸಿಲುಕಿಸಿ ಅಪ್ಪಚ್ಚಿ ಮಾಡುವುದೂ ಸುಲಭದ ಮಾತಲ್ಲ. ಆದ್ದರಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಹಾರಾಡುವ ಇವುಗಳ ಮಾಹಿತಿ ಸಂಗ್ರಹಕ್ಕೆ ವಿಜ್ಞಾನಿಗಳು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಸೊಳ್ಳೆಗಳ ಸದ್ದನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಕಳುಹಿಸುವ ಮೂಲಕ ಜಗತ್ತಿನಲ್ಲಿ ಆರೋಗ್ಯ ಸುಧಾರಣೆಗೆ ಕೈಜೋಡಿಸುವಂತೆ ಕೋರಲಾಗಿದೆ.

ಮಲೇರಿಯಾದಂತಹ ಕಾಯಿಲೆಯನ್ನು ಯಾರು, ಎಲ್ಲಿ ಬೇಕಾದರೂ ಪತ್ತೆ ಹಚ್ಚುವುದು ‘ಫೋಲ್ಡೋಸ್ಕೋಪ್’ನಿಂದ ಸಾಧ್ಯ. ₹50ಕ್ಕಿಂತ ಕಡಿಮೆ ವೆಚ್ಚದಲ್ಲಿ ಕಾಗದದ ಮೈಕ್ರೋಸ್ಕೋಪ್ (ಸೂಕ್ಷ್ಮದರ್ಶಕ) ಸಿದ್ಧಪಡಿಸಿ ಆಫ್ರಿಕಾ ಸೇರಿದಂತೆ ಜಗತ್ತಿನ ಎಲ್ಲ ಭಾಗಗಳಿಗೂ ತಲುಪಿಸಿ ಸಾವಿರಾರು ಜನರ ಆರೋಗ್ಯ ಸುರಕ್ಷತೆಗೆ ಕಾರಣರಾದವರು ಭಾರತೀಯ ಮೂಲದ ಸಂಶೋಧಕ ಮನು ಪ್ರಕಾಶ್. ಕ್ಯಾಲಿಫೋರ್ನಿಯಾ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಜೈವಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು ಸೃಜನಶೀಲ ಯೋಚನೆಗಳಿಂದ ಅತಿ ಕಡಿಮೆ ವೆಚ್ಚದಲ್ಲಿ ಮನುಷ್ಯನ ಆರೋಗ್ಯ ಸುಧಾರಣೆಗೆ ಅಗತ್ಯವಾದ ಹಲವು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

ವಿಶ್ವದ 3 ಶತಕೋಟಿ ಜನರಿಗೆ ಕಾಯಿಲೆ ಹರಡುವಷ್ಟು ಪ್ರಭಾವ ಹೆಚ್ಚಿಸಿಕೊಂಡಿರುವ ಸೊಳ್ಳೆಗಳ ಭೌಗೋಳಿಕ ಮಾಹಿತಿ ಸಂಗ್ರಹಕ್ಕೆ ಮನು ಪ್ರಕಾಶ್ ನೇತೃತ್ವದ ತಂಡ ಮುಂದಾಗಿದೆ.

ಕರ್ನಾಟಕದಲ್ಲೇ ಈ ವರ್ಷ 16 ಸಾವಿರ ಡೆಂಗಿ ಪ್ರಕರಣಗಳು ದಾಖಲಾಗಿದ್ದು, ಹತ್ತಾರು ಜನ ಸಾವಿಗೀಡಾಗಿದ್ದಾರೆ. ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಮಲೇರಿಯಾ, ಡೆಂಗಿ, ಝಿಕಾ, ಚಿಕುನ್‍ಗುನ್ಯಾ... ಇನ್ನೂ ಅನೇಕ ರೋಗಗಳನ್ನು ಹರಡಲು ಶಕ್ತವಾಗಿರುವ 30ಕ್ಕೂ ಹೆಚ್ಚು ಸೊಳ್ಳೆಗಳ ಪ್ರಭೇದಗಳನ್ನು ಈವರೆಗೆ ಪತ್ತೆ ಮಾಡಲಾಗಿದೆ. ರೋಗ ಹರಡದಂತೆ ತಡೆಯಲು ಇರುವ ಸಮರ್ಥ ದಾರಿ ‘ಸೊಳ್ಳೆಗಳ ನಿಯಂತ್ರಣ’. ಯಾವ ಪ್ರದೇಶದಲ್ಲಿ ರೋಗಕಾರಕ ಸೊಳ್ಳೆಗಳಿವೆ ಎಂಬುದನ್ನು ಗುರುತಿಸುವುದರಿಂದ ಸೂಕ್ತ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿದೆ. ಜಾಗತಿಕವಾಗಿ ಸೊಳ್ಳೆಗಳ ಮಾಹಿತಿ ಕ್ರೋಡೀಕೃತ ಮ್ಯಾಪ್ ಸಿದ್ಧಪಡಿಸುವುದು ಸಂಶೋಧಕರ ಉದ್ದೇಶ.

ಗುಂಯ್ ಸದ್ದು ಗ್ರಹಿಸುತ್ತ...: ಸೊಳ್ಳೆಗಳು ರೆಕ್ಕೆ ಬಡಿಯುವ ವೇಗದಿಂದ ಅವುಗಳ ಪ್ರಭೇದ ಗುರುತಿಸುವ ಕ್ರಮವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹೆಣ್ಣು ಸೊಳ್ಳೆಗಳಿಗಿಂತ ಗಂಡು ಸೊಳ್ಳೆಗಳು ಅತಿ ವೇಗವಾಗಿ ರೆಕ್ಕೆ ಬಡಿಯುತ್ತವೆ. ಅಂದರೆ, ಪ್ರತಿ ಸೆಕೆಂಡಿಗೆ 450-700 ಸಲ ರೆಕ್ಕೆ ಬಡಿಯುವುದರಿಂದ ಸೊಳ್ಳೆಗಳು ಕಿವಿಗಳ ಸಮೀಪ ಬಂದಾಗ ಗುಂಯ್ ಸದ್ದು ಕೇಳುತ್ತದೆ. ಸಾಮಾನ್ಯವಾಗಿ ಸೊಳ್ಳೆಗಳಿಂದ ಹೊಮ್ಮುವ ಸದ್ದು 200-700 ಹರ್ಟ್ಸ್‌ ಆವರ್ತನ ಹೊಂದಿದ್ದು, ಸೃಷ್ಟಿಯಾಗುವ ಕಂಪನದ ಆಧಾರದ ಮೇಲೆಯೇ ಪ್ರಭೇದ ಗುರುತಿಸಲಾಗುತ್ತಿದೆ.

ಶ್ರವಣಾತೀತ ಶಬ್ದವನ್ನೂ ಗ್ರಹಿಸಿಕೊಳ್ಳುವ ಮೊಬೈಲ್ ಮೈಕ್ರೋಫೋನ್ ಸಾಮರ್ಥ್ಯವನ್ನು ಇತ್ತೀಚೆಗೆ ಗೂಗಲ್ ತನ್ನ ಡಿಜಿಟಲ್ ಪಾವತಿ ‘ತೇಜ್’ ಆ್ಯಪ್‍ನಲ್ಲಿ ಬಳಸಿಕೊಂಡಿತ್ತು. ಸಾಧಾರಣವಾಗಿ ಎಲ್ಲರೂ ಬಳಸುವ ಮೊಬೈಲ್‍ನ ಧ್ವನಿ ಗ್ರಹಣ ಸಾಮರ್ಥ್ಯವನ್ನು ಮನು ಬಳಗವೂ ಕಂಡುಕೊಂಡಿದೆ. ರೆಕಾರ್ಡಿಂಗ್ ಆಯ್ಕೆ ಅಥವಾ ಆ್ಯಪ್ ಇರುವ ಯಾವುದೇ ಮೊಬೈಲ್‍ನಿಂದ ಸೊಳ್ಳೆಗಳ ಸದ್ದನ್ನು ರೆಕಾರ್ಡ್ ಮಾಡುವುದು ಸಾಧ್ಯವಿದೆ. ಇದೇ ತಂತ್ರ ಬಳಸಿ 5-10 ಸೆಂ.ಮೀ. ಅಂತರದಲ್ಲಿ ಸೊಳ್ಳೆ ಹಾರಾಟವನ್ನು ರೆಕಾರ್ಡ್ ಮಾಡಿ ‘ಎಬಝ್’ ತಂಡ ರೋಗಕಾರಕ ಸೊಳ್ಳೆ ಪ್ರಭೇದಗಳನ್ನು ಪ್ರತ್ಯೇಕಿಸಿದೆ.

ನಾವು ರೆಕಾರ್ಡ್ ಮಾಡಿ ಕಳುಹಿಸುವ ಸೊಳ್ಳೆಗಳ ಗುಂಯ್ ಸದ್ದನ್ನು ಈಗಾಗಲೇ ಸಂಗ್ರಹಿಸಿರುವ ಶಬ್ದಗಳೊಂದಿಗೆ ಎಬಝ್ ಆ್ಯಪ್ ಬಳಸಿ ಹೋಲಿಕೆ ಮಾಡಲಾಗುತ್ತದೆ. ಆ ಸೊಳ್ಳೆ ರೋಗ ಹರಡುವ ಪ್ರಭೇದವಾಗಿದ್ದಲ್ಲಿ ಶಬ್ದ ರೆಕಾರ್ಡ್ ಮಾಡಿದ ಸ್ಥಳ, ಸಮಯ, ವಾತಾವರಣದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಹಾಗೂ ರೆಕಾರ್ಡಿಂಗ್ ಕಳುಹಿಸಿದವರಿಗೆ ಸೂಚನೆ ನೀಡಲಾಗುತ್ತದೆ. ನಮ್ಮ ಸುತ್ತಲಿನ ಸೊಳ್ಳೆಗಳು ಅಪಾಯಕಾರಿ ಎಂದು ತಿಳಿದರೆ ಸೂಕ್ತ ಎಚ್ಚರಿಕೆ ವಹಿಸಿ ಅವುಗಳನ್ನು ನಾಶ ಪಡಿಸುವುದು ಸುಲಭವಾಗುತ್ತದೆ.

ಸದ್ಯ ಮಡಗಾಸ್ಕರ್ ಹಾಗೂ ಕ್ಯಾಲಿಫೋರ್ನಿಯಾದ ನಗರ, ಗ್ರಾಮೀಣ, ಕಾಡು, ಒಳಾಂಗಣ-ಹೊರಾಂಗಣ, ಪ್ರಯೋಗಾಲಯಗಳಲ್ಲಿ 20 ಪ್ರಭೇದಗಳ 1000 ಗಂಟೆಗೂ ಹೆಚ್ಚು ಅವಧಿಯ ಸೊಳ್ಳೆಯ ಸದ್ದನ್ನು ಸಂಗ್ರಹಿಸಲಾಗಿದೆ. ಈಗಾಗಲೇ ನಾಗರಿಕ ವಿಜ್ಞಾನಿಗಳಿಂದ 200ಕ್ಕೂ ಹೆಚ್ಚು ರೆಕಾರ್ಡಿಂಗ್ ಎಬಝ್ ತಂಡಕ್ಕೆ ತಲುಪಿದೆ.

ಯೋಚನೆಯ ಮೂಲ: 6 ವರ್ಷಗಳ ಹಿಂದೆ ಸ್ಟ್ಯಾನ್‍ಫೋರ್ಡ್ ವಿವಿಯಲ್ಲಿ ಮನು ಪ್ರಕಾಶ್ ಅವರ ಪ್ರತ್ಯೇಕ ಪ್ರಯೋಗಾಲಯ ನಿರ್ಮಾಣದ ಹಂತದಲ್ಲಿತ್ತು. ಸಂಶೋಧನಾ ಕಾರ್ಯ ನಡೆಸಲು ಸಾಧ್ಯವಾಗದ ಕಾರಣ ಪ್ರವಾಸ ಹೊರಟ ಅವರು ಥಾಯ್ಲೆಂಡ್‍ನಲ್ಲಿ ವೈದ್ಯಕೀಯ ಕೀಟಶಾಸ್ತ್ರಜ್ಞರ ತಂಡವನ್ನು ಆಕಸ್ಮಿಕವಾಗಿ ಭೇಟಿಯಾದರು. ಅವರ ಸಂಶೋಧನಾ ಕೊಠಡಿಯನ್ನೂ ಒಮ್ಮೆ ಪ್ರವೇಶಿಸುವ ಅವಕಾಶ ದೊರೆತಿತ್ತು. ಅಲ್ಲಿ ಕೀಟಶಾಸ್ತ್ರಜ್ಞರು ಸಾವಿರಾರು ಸೊಳ್ಳೆಗಳನ್ನು ಹಿಡಿದು ತಂದು ಸಂಗ್ರಹಿಸಿದ್ದರು. ಒಂದೊಂದಾಗಿ ಅವುಗಳನ್ನು ಎಣಿಸುತ್ತ, ಪ್ರಭೇದಗಳ ಪತ್ತೆಗೆ ಸೂಕ್ಷ್ಮದರ್ಶಕದ ಮೊರೆ ಹೋಗಿದ್ದರು.

ಸೊಳ್ಳೆಗಳ ಪ್ರಭೇದ ಪತ್ತೆ ನಿಗಾವಹಿಸಲು ಸಮರ್ಥ ಹಾಗೂ ಕಡಿಮೆ ಜನರಿಂದ ಆಗಬಹುದಾದ ವ್ಯವಸ್ಥೆ ಅಭಿವೃದ್ಧಿಯ ಯೋಚನೆ ಅಲ್ಲಿಯೇ ಮೊಳೆತಿತ್ತು. ಸೊಳ್ಳೆ ಸದ್ದು ಸಂಗ್ರಹಿಸುವ ಉಪಾಯ ಕಂಡುಕೊಂಡ ಇವರು ಅದಕ್ಕಾಗಿ ವಿಶೇಷ ಮೈಕ್ರೋಫೋನ್‍ಗಳನ್ನು ಬಳಸುವ ಪ್ರಯತ್ನದಲ್ಲಿದ್ದರು. ಆದರೆ, 2016ರಲ್ಲಿ ಮನು ಪ್ರಕಾಶ್ ತಂಡದ ಸಂಶೋಧನಾ ವಿದ್ಯಾರ್ಥಿನಿ ಸೊಳ್ಳೆ ಸದ್ದು ಸಂಗ್ರಹದಲ್ಲಿದ್ದಾಗ ಮೊಬೈಲ್‍ ಕರೆ ಬಂದಿದೆ. ಸೊಳ್ಳೆಗಳ ಗುಂಯ್ ಸದ್ದು ಕರೆಯಲ್ಲಿದ್ದವರಿಗೆ ಕೇಳಿದೆ... ಅಲ್ಲಿಂದ ಶುರುವಾಗಿದ್ದೆ ಈ ಪ್ರಯತ್ನ. ಈಗಾಗಲೇ ಸಂಗ್ರಹಿಸಿರುವ ಸೊಳ್ಳೆಗಳ ಸದ್ದನ್ನೇ ಬಳಸಿ ‘ಸೊಳ್ಳೆ ರಿಂಗ್‍ಟೋನ್’ ಸಿದ್ಧಪಡಿಸಲಾಗಿದ್ದು, abuzz.stanford.edu ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಇದರಿಂದ ಪ್ರಯೋಜನವೇನು?: ಸೊಳ್ಳೆಗಳಿಂದ ಬರುವ ಬಹುತೇಕ ರೋಗಗಳಿಗೆ ಸೂಕ್ತ ಲಸಿಕೆ ಅಥವಾ ಮದ್ದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ನಡುವೆ ರೋಗ ಹರಡದಂತೆ ತಡೆಯಲು ‘ಜಾಗತಿಕವಾಗಿ ಸೊಳ್ಳೆಗಳು ಆವರಿಸಿರುವ ಮ್ಯಾಪ್’ ಯೋಜನೆ ಪರಿಣಾಮಕಾರಿ ಮಾರ್ಗವಾಗಿದೆ. ಸೊಳ್ಳೆ ಶಬ್ದದ ರೆಕಾರ್ಡ್‌ನೊಂದಿಗೆ ಸಮಯ ಹಾಗೂ ಸ್ಥಳದ ಮಾಹಿತಿಯೂ ಸಿಗುವುದರಿಂದ ಯಾವ ಭಾಗದಲ್ಲಿ ಯಾವ ಪ್ರಭೇದದ ಸೊಳ್ಳೆಗಳಿವೆ ಎಂಬುದನ್ನು ಗ್ರಹಿಸಬಹುದು. ‘ಅನೊಫಿಲಿಸ್’ ಪ್ರಭೇದದಲ್ಲಿ ಹಲವು ರೀತಿಯ ಸೊಳ್ಳೆಗಳಿದ್ದು ಇವುಗಳ ಹಾರಾಟದ ಆವರ್ತನವೂ ಬಹುತೇಕ ಒಂದೇ ಆಗಿರುತ್ತದೆ.

ಶಬ್ದ ರೆಕಾರ್ಡ್ ಮಾಡಿದ ಸಮಯ ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ರಾತ್ರಿ ಹಾಗೂ ಬೆಳಗ್ಗಿನ ಸಮಯದಲ್ಲಿ ಹಾರಾಡುವ ಸೊಳ್ಳೆಗಳು ಬೇರೆ ಬೇರೆ ಪ್ರಭೇದದ್ದಾಗಿರುತ್ತವೆ. ನಾಗರಿಕ ‘ವಿಜ್ಞಾನಿ’ಗಳ ಪಾತ್ರವಹಿಸಿ ನಾವು ಸಂಗ್ರಹಿಸಿ ಕಳುಹಿಸುವ ಸದ್ದಿನಿಂದ ವಿಶ್ವದ ಆರೋಗ್ಯಕ್ಕೆ ಕೊಡುಗೆ ನೀಡಿದಂತಾಗುತ್ತದೆ. ರೋಗ ಹರಡುವುದಕ್ಕಿಂತಲೂ ಮುನ್ನ ರೋಗಕಾರಕ ಸೊಳ್ಳೆಗಳಿಂದ ನಮ್ಮನ್ನು, ನಮ್ಮ ಕುಟುಂಬವನ್ನೂ ಕಾಪಾಡಿಕೊಳ್ಳಬಹುದು.

ದೇಹದಿಂದ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‍ನಿಂದ ಸೊಳ್ಳೆಗಳು ಆಕರ್ಷಿತಗೊಳ್ಳುತ್ತವೆ. ಸಾಮಾನ್ಯವಾಗಿ ಸೊಳ್ಳೆಗಳು ಸಂತಾನ ಕ್ರಿಯೆಗೆ ಸಹಕಾರಿಯಾಗಲು ಮನುಷ್ಯರು, ಪ್ರಾಣಿಗಳ ದೇಹದಿಂದ ರಕ್ತ ಹೀರಿ ಅದರಿಂದ ಪ್ರೊಟೀನ್ ಪಡೆದುಕೊಳ್ಳುತ್ತವೆ. ‘ಒ’ ಗುಂಪು ರಕ್ತದ ಮಾದರಿ ಹೆಚ್ಚು ಸಿಹಿ ಅಂಶ ಹೊಂದಿರುವುದರಿಂದ ಆ ಮಾದರಿಯ ರಕ್ತ ಹೊಂದಿರುವವರಿಗೆ ಸೊಳ್ಳೆ ಕಡಿತ ಹೆಚ್ಚು.

ಮೊಬೈಲ್‍ನಲ್ಲಿ ಸದ್ದು ರೆಕಾರ್ಡ್ ಮಾಡುವ ಕ್ರಮ

* ಸೊಳ್ಳೆ ಹಾರಾಟದಿಂದ ಮೊಬೈಲ್ ಮೈಕ್ರೋಫೋನ್ 5-10 ಸೆಂ.ಮೀ. ಅಂತರದ ಒಳಗಿರಲಿ

* ಸೊಳ್ಳೆ ಹಾರುವಾಗ 1-2 ಸೆಕೆಂಡ್ ಸದ್ದು ರೆಕಾರ್ಡ್ ಆದರೂ ಪ್ರಭೇದ ಪತ್ತೆ ಸಾಧ್ಯ

* ವಾತಾವರಣದಲ್ಲಿ ಅತಿ ಹೆಚ್ಚು ಶಬ್ದವಿದ್ದರೆ ಸೊಳ್ಳೆ ಸದ್ದು ಕೇಳುವುದಿಲ್ಲ

* ಮೊಬೈಲ್‍ನಲ್ಲಿ ಮೈಕ್ರೋಫೋನ್ ಗುರುತಿಸಿ ಅದನ್ನು ಮುಂಭಾಗಕ್ಕೆ ಹಿಡಿದು ರೆಕಾರ್ಡ್ ಮಾಡಿ

* ರೆಕಾರ್ಡ್ ಮಾಡಿದ್ದನ್ನು ಕೇಳಿ ಸದ್ದು ಗ್ರಹಿಸಿರುವುದು ಖಾತರಿ ಪಡಿಸಿಕೊಳ್ಳಿ

* ಸಾಧ್ಯವಾದರೆ ಸದ್ದಿನ ಭಾಗ ಇರುವಷ್ಟು ಟ್ರಿಮ್ ಮಾಡಿ, abuzz.stanford.edu ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿ

* ಪ್ಲಾಸ್ಟಿಕ್ ಬಾಟಲಿಯೊಳಗೆ ಸೊಳ್ಳೆ ಹೋಗುವಂತೆ ಮಾಡಿ ಪೇಪರ್, ಬಟ್ಟೆ ಅಥವಾ ಕೈನಿಂದ ಮುಂಭಾಗ ಮುಚ್ಚಿ. ಬಾಟಲಿಗೆ ಒಂದು ಸಣ್ಣ ರಂಧ್ರ ಮಾಡಿರಿ. ಸೊಳ್ಳೆ ಹಾರುವಂತೆ ಮಾಡಿ ಮೊಬೈಲ್‍ನಲ್ಲಿ ಸದ್ದು ಸಂಗ್ರಹಿಸುವುದು ಮತ್ತೊಂದು ಕ್ರಮ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry