ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್ ಲೈವ್ ಮಾಡುವುದು ಹೇಗೆ?

Last Updated 29 ನವೆಂಬರ್ 2017, 20:31 IST
ಅಕ್ಷರ ಗಾತ್ರ

ಸಾರ್ವಜನಿಕ ಸಮಾರಂಭಗಳನ್ನು ಫೇಸ್‍‍ಬುಕ್‍ನಲ್ಲಿ ವಿಡಿಯೊ ಲೈವ್ ಮಾಡುವುದು ಈಗ ಹಲವರ ಅಭ್ಯಾಸ. ಕೆಲವರು ಗೆಳೆಯರ ಜತೆಗಿನ ಸಂಭ್ರಮದ ಗಳಿಗೆಗಳನ್ನೂ ಫೇಸ್‍‍ಬುಕ್‍‍ನಲ್ಲಿ ಲೈವ್ ಮಾಡುತ್ತಾರೆ. ಆದರೆ, ಯೂಟ್ಯೂಬ್‍ನಲ್ಲಿ ವಿಡಿಯೊ ಲೈವ್ ಮಾಡುವವರು ವಿರಳ. ಯೂಟ್ಯೂಬ್‍ನಲ್ಲಿ ವಿಡಿಯೊ ಲೈವ್ ಮಾಡುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಯೂಟ್ಯೂಬ್‍ನಿಂದ ಲೈವ್ ವಿಡಿಯೊ ಮಾಡಲು ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ಆ್ಯಪ್ ಇದ್ದರೆ ಸಾಕು. ಮೊದಲು ಯೂಟ್ಯೂಬ್ ಆ್ಯಪ್‍‍ ತೆರೆಯಿರಿ. ಆ್ಯಪ್ ತೆರೆದ ಬಳಿಕ ಮೇಲ್ಭಾಗದಲ್ಲಿ ಕಾಣುವ ಕ್ಯಾಮೆರಾ ಚಿತ್ರದ ಮೇಲೆ ಒತ್ತಿ. ಕಾಣುವ ಆಯ್ಕೆಗಳಲ್ಲಿ GO LIVE ಎಂಬಲ್ಲಿ ಒತ್ತಿ. ಈಗ ವಿಡಿಯೊ ಲೈವ್‍‍ಗೆ ಒಂದು ಹೆಸರು ಕೊಡಿ. ಬಳಿಕ ವಿಡಿಯೊ ಬಗ್ಗೆ ವಿವರಣೆ ಬರೆದು NEXT ಎಂಬಲ್ಲಿ ಒತ್ತಿ.

ಕೆಲವು ಸೆಕೆಂಡ್‍‍ಗಳಲ್ಲಿ ಲೈವ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ GO LIVE ಎಂಬಲ್ಲಿ ಒತ್ತಿ. ನೆಟ್‍‍ವರ್ಕ್‍‍ನ ವೇಗಕ್ಕೆ ಅನುಗುಣವಾಗಿ ವಿಡಿಯೊ ಲೈವ್ ಆಗುತ್ತದೆ. ವಿಡಿಯೊ ಲೈವ್ ಆಗುತ್ತಿರುವಾಗ ಸ್ಕ್ರೀನ್‍‍ನ ಎಡಭಾಗದಲ್ಲಿ LIVE ಎಂಬ ಅಕ್ಷರಗಳು ಕಾಣಿಸುತ್ತಿರುತ್ತವೆ.

ಇದೇ ಲೈವ್ ವಿಡಿಯೊ ಅನ್ನು ನೀವು ಇತರೆ ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಳ್ಳಬಹುದು. ಇದಕ್ಕಾಗಿ ಸ್ಕ್ರೀನ್‍ನ ಬಲಭಾಗದಲ್ಲಿ ಕೆಳಗೆ ಕಾಣುವ ಮೂರು ಚುಕ್ಕೆಯ ಆಯ್ಕೆ ಮೇಲೆ ಒತ್ತಿ. ಇಲ್ಲಿ ಕಾಣುವ ಆಯ್ಕೆಗಳಲ್ಲಿ Share ಮೇಲೆ ಕ್ಲಿಕ್ ಮಾಡಿ. ಈಗ ಫೇಸ್‍‍ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಇ-ಮೇಲ್ ಸೇರಿದಂತೆ ಹಲವು ಶೇರಿಂಗ್ ಆಯ್ಕೆಗಳು ಕಾಣುತ್ತವೆ. ಆದರ ಮೂಲಕ ನೀವು ಲೈವ್ ವಿಡಿಯೊ ಹಂಚಿಕೊಳ್ಳಬಹುದು.

ವಿಡಿಯೊ ಲೈವ್ ನಿಲ್ಲಿಸಲು FINISH ಎಂಬಲ್ಲಿ ಒತ್ತಿ. ಈಗ ವಿಡಿಯೊ ಲೈವ್ ನಿಲ್ಲಿಸಲು ಸಮ್ಮತಿ ಇದೆಯೇ ಎಂಬ ಅನುಮತಿ ಕೇಳುತ್ತದೆ. ಇಲ್ಲಿ OK ಒತ್ತಿ. ವಿಡಿಯೊ ಲೈವ್ ನಿಂತ ಬಳಿಕ ಎಷ್ಟು ಜನ ನಿಮ್ಮ ಲೈವ್ ವಿಡಿಯೊ ನೋಡಿದ್ದಾರೆ. ಎಷ್ಟು ಹೊತ್ತು ವಿಡಿಯೊ ಲೈವ್ ಆಗಿದೆ ಎಂಬ ಮಾಹಿತಿ ಕಾಣಿಸಿಕೊಳ್ಳುತ್ತದೆ. ಕೊನೆಗೆ ಕಾಣುವ Done ಎಂಬಲ್ಲಿ ಒತ್ತಿದರೆ ನಿಮ್ಮ ವಿಡಿಯೊ ಲೈವ್‍‍ನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಲೈವ್ ಆದ ವಿಡಿಯೊ ಯೂಟ್ಯೂಬ್‍‍ನಲ್ಲಿ ನಿಮ್ಮ ಚಾನೆಲ್‍‍ನಲ್ಲಿ ಉಳಿದುಕೊಂಡಿರುತ್ತದೆ. ಒಂದು ವೇಳೆ ನಿಮಗೆ ಈ ವಿಡಿಯೊ ನಿಮ್ಮ ಯೂಟ್ಯೂಬ್ ಚಾನೆಲ್‍‍ನಲ್ಲಿ ಉಳಿದುಕೊಳ್ಳುವುದು ಬೇಡವೆಂದರೆ ಆಯ್ಕೆಗಳಿಗೆ ಹೋಗಿ ಅದನ್ನು ಡಿಲೀಟ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT