7

ಬೆಳಕಿನಲ್ಲಿ ಕಳೆದುಹೋಗಬೇಕೇ ಆಗಸ?

Published:
Updated:

‘ರಾತ್ರಿ ಉರಿಯದ ದೀಪಗಳು ಬೆಳಗ್ಗೆ ಝಗಮಗಿಸುತ್ತವೆ’- ಬೀದಿ ದೀಪಗಳ ನಿರ್ವಹಣೆ ಕುರಿತ ಈ ಮಾತು ವ್ಯಂಗ್ಯಕ್ಕೂ ಮಿಗಿಲಾಗಿ ಗಹನ ಚಿಂತನೆಗೆ ಪ್ರೇರೇಪಿಸುತ್ತದೆ. ಪರಿಸರ ಸಂರಕ್ಷಣೆಯ ವಿಚಾರ ಬಂದಾಗ ‘ಶಬ್ದ ಮಾಲಿನ್ಯ’ದ ಬಗ್ಗೆ ಮಾತನಾಡುವುದು ಕಡಿಮೆ. ಬಸ್ಸು, ರೈಲು, ಸಿನಿಮಾ ಮಂದಿರ, ಕಚೇರಿ, ಬ್ಯಾಂಕು, ಗ್ರಂಥಾಲಯ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಏರು ಧ್ವನಿಯ ಮೊಬೈಲ್ ಸಂಭಾಷಣೆಗೆ ವೃಥಾ ಏಕೆ ಮನಸ್ತಾಪವೆಂಬ ಕಾರಣಕ್ಕೆ ಪ್ರತಿರೋಧ ಅಪರೂಪವೇ. ಇನ್ನು ‘ಬೆಳಕಿನ ಮಾಲಿನ್ಯ’ದಬಗ್ಗೆ ಅಂಥದ್ದೊಂದು ಉಂಟೇ ಎನ್ನುವಷ್ಟರಮಟ್ಟಿಗೆ ಕಡೆಗಣನೆ. ‘ಜಗತ್ತಿನಾದ್ಯಂತ ಬೆಳಕಿನ ಮಾಲಿನ್ಯ ಹೆಚ್ಚಳ; ಎಚ್ಚರ’ ವರದಿಗೆ (ಪ್ರ.ವಾ. ನ.25) ಸಂಬಂಧಿಸಿದಂತೆ ಒಂದಷ್ಟು ಮಾಹಿತಿಗಳನ್ನು ನಿವೇದಿಸಿಕೊಳ್ಳಲು ಬಯಸುತ್ತೇನೆ.

ಭೂಮಿಯನ್ನು ಆಶ್ರಯಿಸಿರುವ ಜೀವಜಾಲಕ್ಕೆ ಹಗಲು ಎಷ್ಟು ಮುಖ್ಯವೋ ಇರುಳೂ ಅಷ್ಟೇ ಮುಖ್ಯ. ಸ್ವಾಭಾವಿಕವಾದ ರಾತ್ರಿಯ ಕತ್ತಲನ್ನು ಕೃತಕವಾಗಿ ಗೆಲ್ಲುವುದಕ್ಕೂ ಒಂದು ಮಿತಿಯಿದೆ. ಮಿತಿ ಮೀರಿದರೆ ಜೀವ ವೈವಿಧ್ಯಗಳ ಯೋಗಕ್ಷೇಮ ಅಯೋಮಯವಾಗುತ್ತದೆ. ಹೀಗೆ ಕಲ್ಪಿಸಿಕೊಳ್ಳಿ; ಸಿನಿಮಾ ಮಂದಿರದಲ್ಲಿ ಚಲನಚಿತ್ರವನ್ನು ಪ್ರೇಕ್ಷಕರು ಅಸಕ್ತಿಯಿಂದ ನೋಡುತ್ತಿದ್ದಾರೆ. ಧುತ್ತನೆ ಯಾರೋ ಬಾಗಿಲು ತೆಗೆದು ಒಳಬರುತ್ತಾರೆ. ಬೆಳಕು ಕಾರಿಸಿ ಕತ್ತಲನ್ನು ಭೇದಿಸಿದ ‘ಮಹದಪಕಾರಕ್ಕೆ’ ಆತ ರಸಿಕರ ಯಾವ ಕೋಪಕ್ಕೆ ಗುರಿಯಾದಾನು ನಿಮ್ಮ ಊಹೆಗೆ ಬಿಟ್ಟಿದ್ದು. ಸಲ್ಲದ ದಿಕ್ಕಿನಿಂದ ಬರುವ, ಅತೀವ ಕಾಂತಿಯ ಕಣ್ಣು ಕುಕ್ಕುವ ಮತ್ತು ಇತರೆ ಯಾವುದನ್ನೂ ಕಾಣದಂತಾಗಿಸುವ ಪ್ರಕಾಶದ ರಾದ್ಧಾಂತವನ್ನು ‘ಬೆಳಕಿನ ಮಾಲಿನ್ಯ’ ಎಂದು ವ್ಯಾಖ್ಯಾನಿಸಲಾಗುತ್ತದೆ.

ಹಗಲು-ಇರುಳು ಪ್ರಕೃತಿ ನಿಯಮಿಸಿರುವ ಶಿಸ್ತು. ಪ್ರತೀ ಜೀವಿಯೂ ಒಂದು ಜೈವಿಕ ಗಡಿಯಾರ. ನಿದ್ರೆ, ಎಚ್ಚರ, ಆಹಾರ ಸೇವನೆ, ಮಲ ಮೂತ್ರ ವಿಸರ್ಜನೆ, ಮೈಥುನ, ಚಹರೆ, ಚಲನವಲನ ಮುಂತಾದ ಎಲ್ಲ ಕ್ರಿಯೆಗಳೂ ಕಾಲಬದ್ಧವಾಗಿ ನಿಯೋಜಿತವಾಗಿವೆ. ಜೀವ ವೈವಿಧ್ಯ ದ್ಯುತಿ ಅವಧಿತ್ವಕ್ಕೊಳಪಟ್ಟಿದೆ. ಬೆಳಕಿನಲ್ಲಿ ನಿದ್ರಿಸಿದರೆ ನಮ್ಮ ಮುಮ್ಮಿದುಳಿನ ಭಾಗದಲ್ಲಿರುವ ಪಿನಿಯಲ್ ಗ್ರಂಥಿಯಿಂದ ಮೆಲಟೊನಿನ್ ಎಂಬ ಹಾರ್ಮೋನ್ ಸರಾಗವಾಗಿ ಉತ್ಪತ್ತಿಯಾಗದು. ಮೆಲಟೊನಿನ್ ನಿದ್ರೆ- ಎಚ್ಚರ ಸಮಯ ನಿರ್ದೇಶಿಸುವ ವಸ್ತು.

ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಮಂದಿ ನಗರವಾಸಿಗಳೇ. ನಗರಗಳ ಜನದಟ್ಟಣೆ ಏರಿದಂತೆ ಬೆಳಕಿನ ಮಾಲಿನ್ಯ ತೀವ್ರಗೊಳ್ಳುತ್ತದೆ. ನೂರು ವರ್ಷಗಳ ಹಿಂದೆ ಆಗಸದಲ್ಲಿ ಕಮಾನಿನಂತೆ ಚಾಚುವ ಇಡೀ ನಮ್ಮ ನಕ್ಷತ್ರ ರಾಶಿಯನ್ನು ಕಂಡು ಕಣ್ತುಂಬಿಕೊಳ್ಳಬಹುದಿತ್ತು. ಆದರೆ ಇಂದು? ನಕ್ಷತ್ರಗಳು ಕಾಣೆಯಾಗಿವೆ. ಸೂರ್ಯೋದಯ, ಸೂರ್ಯಾಸ್ತ ದೃಶ್ಯ ಆಸ್ವಾದಿಸಲೂ ನಗರದಿಂದ ಹಲವು ಕಿ. ಮೀ. ದೂರ ಹೋಗಬೇಕಿದೆ.

ಗ್ರಹಣಗಳ ನೋಟದ ಮಾತಿರಲಿ, ಚಂದ್ರನ ಕಲೆಗಳನ್ನೇ ಗುರುತಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಧೂಮಕೇತುಗಳ ಗೋಚರ, ಉಲ್ಕಾವರ್ಷ, ಗ್ರಹ ಕೂಟ ಇತ್ಯಾದಿ ಹಲವು ಶತಮಾನಗಳಿಗೊಮ್ಮೆ ಸಂಭವಿಸುವ ಖಗೋಳ ವಿದ್ಯಮಾನಗಳ ದರ್ಶನ ಭಾಗ್ಯ ಹೇಗೆ ಲಭ್ಯ? ವೀಕ್ಷಣೆಗೆ, ಸಂಶೋಧನೆಗೆ ನಗರ ಪ್ರದೇಶಗಳಿಗಿಂತ ಬಹು ದೂರದಲ್ಲಿ ಖಗೋಳ ವಿಜ್ಞಾನಿಗಳಿಗೇನೋ  ವೇಧಶಾಲೆಗಳು  ಸ್ಥಾಪಿತವಾಗಿರುತ್ತವೆ. ಆದರೆ ಹವ್ಯಾಸಿ ಖಗೋಳ ವೀಕ್ಷಕರಿಗೆ? ಇರುಳಿನಲ್ಲಿ ಜನವಸತಿ, ವಾಣಿಜ್ಯ ಸಂಕೀರ್ಣಗಳು, ವಾಹನಗಳು, ದೀಪಗೋಪುರಗಳು ಸಾರ್ವಜನಿಕ ಸ್ಥಳಗಳು ಪ್ರಖರ ಬೆಳಕು ರಾಚುವ ವಿದ್ಯುತ್ ದೀಪಗಳಿಂದ ಆಗಸದಲ್ಲಿ ಆ ಪ್ರಮಾಣದಷ್ಟು ‘ನಾಗರಿಕ ಪ್ರಭೆ’ ಸೃಷ್ಟಿಸಿವೆ. ಇರುಳ ಅಂತರಿಕ್ಷದ ಸೊಬಗನ್ನು ಕಥೆ, ಕಾದಂಬರಿ, ಕವನಗಳಲ್ಲಿ ಪರಿಭಾವಿಸುವಂತಾಗಿದೆ. ಋತುಮಾನಾನುಸಾರ ವಲಸೆ ಹೋಗುವ ಪ್ರಾಣಿ, ಪಕ್ಷಿಗಳು ಮನುಷ್ಯಕೃತ ಹಗಲು ಕಂಡು ದಿಕ್ಕೆಡುತ್ತವೆ. ಖಂಡಾಂತರ ಯಾನಿಸುವ ಪಕ್ಷಿಗಳಂತೂ ಬೆಳಗಾಗಿದೆ ಎಂಬ ಭ್ರಮೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕೆಳಗೆ ಬಿದ್ದು ಸಾಯುತ್ತವೆ.

ಈ ನಿಟ್ಟಿನಲ್ಲಿ ಇಂದಿನ ದಿನಮಾನಗಳಲ್ಲಿ ಸಂಭ್ರಮ, ಸಡಗರಗಳ ಪರಿಕಲ್ಪನೆಗಳನ್ನು ಅವಶ್ಯವಾಗಿ ಮಾರ್ಪಡಿಸಿಕೊಳ್ಳಬೇಕಿದೆ. ಮನೆ, ಕಟ್ಟಡ, ಮಳಿಗೆಗಳ ವಿದ್ಯುದಲಂಕಾರ ಬೆಳಕಿನ ಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುತ್ತದೆ. ನೆರೆಮನೆಯಿಂದ ಬೆಳಕು ಬರುತ್ತಿದೆ ಎಂಬ ಕಾರಣಕ್ಕೆ ಕಿಟಕಿ ಮುಚ್ಚಿದಿರಿ ಅನ್ನಿ, ಆಗ ಬೆಳಕಿನಿಂದ ಪಾರಾದರೂ ಸೇವಿಸಲು ತಾಜಾ ಗಾಳಿ ದುರ್ಲಭವಾದೀತು! ಆದ್ದರಿಂದ ನಮ್ಮ ನಮ್ಮ ಮನೆಗಳಿಂದ ಮೂಡುವ ಬೆಳಕನ್ನು ನಿಯಂತ್ರಿಸಬೇಕಿದೆ. ನಿಗಿ ನಿಗಿ ಬೆಳಕಿನಲ್ಲಿ ಕುಣಿದು ಕುಪ್ಪಳಿಸುವುದು ತಿಳಿಗೇಡಿತನ. ಏಕೆಂದರೆ ಆ ಹಿಗ್ಗಿಗೆ ಭಾರಿ ಬೆಲೆಯನ್ನೇ ಪರೋಕ್ಷವಾಗಿ ತೆತ್ತಿರುತ್ತೇವೆ. ಗಿಡ, ಮರಗಳು ಚಿಗುರುವುದು, ಹೂ ಬಿಡುವುದು, ಕಾಯಿ ಕಚ್ಚುವುದು, ಬೆಳೆಯುವುದು ಎಲ್ಲವೂ ಸ್ವಾಭಾವಿಕ ಹಗಲು-ಕತ್ತಲ ಆವರ್ತಕ್ಕೆ ಹೊಂದಿಕೊಂಡು. ಒಂದು ಚೆನ್ನಾಗಿ ಬೆಳೆದ ಮರ ಅಸಂಖ್ಯ ಕ್ರಿಮಿ, ಕೀಟ, ಹಕ್ಕಿ, ಹುಳ, ಸರೀಸೃಪಗಳಿಗೆ ವಾಸ್ತವ್ಯ ಒದಗಿಸುವುದರಿಂದ ಅವುಗಳ ಪಾಡೇನು ಎಂದು ಆಲೋಚಿಸಬೇಕಲ್ಲವೇ? 50 ವರ್ಷ ವಯಸ್ಸಿನ ಒಂದು ಮರ ಬಿಡುಗಡೆಮಾಡುವ ಆಮ್ಲಜನಕ, ಹೀರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ, ಒದಗಿಸುವ ನೆರಳು, ವೃದ್ಧಿಸುವ ಅಂತರ್ಜಲ ಇವೆಲ್ಲವನ್ನು ಲೆಕ್ಕ ಹಾಕಿದರೆ ಅದರ ಕಿಮ್ಮತ್ತು ಒಂದು ಕೋಟಿ ರೂಪಾಯಿಗೂ ಅಧಿಕ. ಹಾಗಾಗಿ ನಿಜವಾದ ವೈಭವದಾಚರಣೆಯೆಂದರೆ ಹಗಲು ಹಗಲಾಗಿರಲು, ಇರುಳು ಇರುಳಾಗಿರಲು ಬಿಡುವುದು. ಜಗತ್ತಿನಾದ್ಯಂತ ಒಟ್ಟು ಉತ್ಪನ್ನವಾಗುವ ವಿದುಚ್ಛಕ್ತಿಯ ಪ್ರಮಾಣದ ಶೇ 60 ರಷ್ಟು ರಾತ್ರಿಯ ಕತ್ತಲನ್ನು ನಿವಾರಿಸಲೇ ವ್ಯಯವಾಗುತ್ತದೆ.

ರಾತ್ರಿ ದೀಪಗಳನ್ನು ಉರಿಸಬಾರದೆಂದಲ್ಲ. ಮಿತವ್ಯಯ ಸಾಧಿಸದಿದ್ದರೆ ಎರಡು ಬಗೆಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಒಂದು, ಬೆಳಕಿನ ಮಾಲಿನ್ಯ. ಎರಡು, ಶಕ್ತಿ ಸಂಪನ್ಮೂಲಗಳಾದ ಅಪಾರ ಬಳಕೆ. ಇದರ ದುಷ್ಫಲವಾಗಿ ಮತ್ತೆ ವಾಯು ಮಾಲಿನ್ಯ, ಜಲಮಾಲಿನ್ಯ. ಕಡೆಗೆ ಜಾಗತಿಕ ತಾಪಮಾನ ಹೆಚ್ಚಾಗುವುದರಲ್ಲಿ ಪರ್ಯಾವಸಾನ. ಭದ್ರತೆಯೊಂದನ್ನೇ ಪರಿಗಣಿಸಬಾರದು. ಬೀದಿ, ಬಡಾವಣೆ, ಹೆದ್ದಾರಿಗಳನ್ನು ಬೆಳಗುವುದಕ್ಕೆ ಕಡಿವಾಣ ಬೇಕಿದೆ. ಅಗತ್ಯವಿರುವಾಗ ಮಾತ್ರ ಬೆಳಕಿನ ಬಳಕೆಗೆ ನಮ್ಮ ಕೈ ಬೆರಳು ಸದಾ ವಿದ್ಯುತ್ ಗುಂಡಿಯ ಮೇಲಿರುವುದು ಪರಿಣಾಮಕಾರಿ ಕ್ರಮ. ಹೊರಗಡೆ ಅಡ್ಡಾಡುವಾಗ ಒಂದು ಟಾರ್ಚ್ ಹಿಡಿಯುವುದು ಮಾದರಿ. ಅಂತೆಯೇ ಸ್ವಯಂಚಾಲಿತ ದೀಪಗಳೂ ವಿದ್ಯುತ್ ಪೋಲನ್ನು ತಪ್ಪಿಸುತ್ತವೆ. 1938 ರಲ್ಲೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ‘ಅಂತರರಾಷ್ಟ್ರೀಯ ಕತ್ತಲ ರಾತ್ರಿ ಸಂಘ’ (ಐ.ಡಿ.ಎ.) ಸ್ಥಾಪಿತವಾಗಿದೆ. ಅದಕ್ಕೆ ವಿಶ್ವದಾದ್ಯಂತ ಸದಸ್ಯರಿದ್ದಾರೆ. ಸುಂದರ ಆಗಸ ಬೆಳಕಿನಲ್ಲಿ ಕಳೆದುಹೋಗಬಾರದು ಎನ್ನುವ ಅರ್ಥವತ್ತಾದ ಧ್ಯೇಯ ವಾಖ್ಯ ಅದರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry