ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3.72 ಕೋಟಿ ಶೂನ್ಯ ಬಡ್ಡಿ ದರದ ಸಾಲ ವಿತರಣೆ

ಪ್ರಾಮಾಣಿಕವಾಗಿ ಮರು ಪಾವತಿಸುವಂತೆ ಸಲಹೆ
Last Updated 30 ನವೆಂಬರ್ 2017, 5:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಬುಧವಾರ ಡಿಸಿಸಿ ಬ್ಯಾಂಕ್‌ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ 135 ಮಹಿಳಾ ಸ್ವ-ಸಹಾಯ ಸಂಘಗಳಿಗೆ ₹ 3.72 ಕೋಟಿ ಶೂನ್ಯ ಬಡ್ಡಿ ದರದ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಕೆ.ಸುಧಾಕರ್‌, ‘ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದು, ನೀಡಿದ ಆಶ್ವಾಸನೆಗಳನ್ನು ಬಹುತೇಕ ಈಡೇರಿಸಿದೆ. ಕೇಂದ್ರ ಸರಕಾರದ ರೀತಿಯಲ್ಲಿ ಕೇವಲ ಖಾಲಿ ಭಾಷಣ, ಘೋಷಣೆ ಮಾಡದೆ, ಬದ್ಧತೆಯಿಂದ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣ, ಸ್ವಾವಲಂಬನೆ, ಉದ್ಯೋಗ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಒತ್ತು ನೀಡಿದೆ. ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಿದೆ. ಮಹಿಳೆಯರೂ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದೆ’ ಎಂದು ತಿಳಿಸಿದರು.

‘ಈ ಸಾಲವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು. ಜತೆಗೆ ಪ್ರಾಮಾಣಿಕವಾಗಿ ಸಕಾಲಕ್ಕೆ ಮರು ಪಾವತಿಸಬೇಕು. ಇಂತಹ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಜೀವನ ಉತ್ತಮ ಪಡಿಸಿಕೊಳ್ಳಬೇಕು. ಜತೆಗೆ ಆರೋಗ್ಯದ ಕಡೆಗೆ ಸಹ ಗಮನ ಹರಿಸಬೇಕು’ ಎಂದರು.

‘ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಈ ಸಾಲಕ್ಕೆ ಸರ್ಕಾರಕ್ಕೆ ಬಡ್ಡಿ ಭರಿಸಲಿದೆ. ಅಧಿಕಾರಿಗಳು ಗೊಂದಲ ಸೃಷ್ಟಿಸಿರುವುದರಿಂದ ಜನಸಾಮಾನ್ಯರಲ್ಲಿ ಬಡ್ಡಿ ವಿಚಾರದಲ್ಲಿ ಗೊಂದಲವಿದೆ. ಈ ಬಗ್ಗೆ ಸದನದಲ್ಲಿ ಕೂಡ ಚರ್ಚೆಯಾಗಿದೆ. ಈಗಾಗಲೇ ಬಡ್ಡಿ ಕಟ್ಟಿದವರಿಗೆ ವಾಪಸ್‌ ನೀಡಲಾಗುತ್ತದೆ. ಈ ಸಾಲಕ್ಕೆ ಬಡ್ಡಿ ಕಟ್ಟುವಂತಿಲ್ಲ ಎನ್ನುವ ಸರ್ಕಾರದ ಅಧಿಕೃತ ಆದೇಶ ಎರಡು ದಿನಗಳಲ್ಲಿ ಹೊರಬೀಳಲಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಜಿಲ್ಲಾ ಘಟಕದ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಈ ಹಿಂದೆ ಸ್ತ್ರೀಶಕ್ತಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ದುಬಾರಿ ಬಡ್ಡಿ ದರದ ಸಾಲ ಪಡೆಯುತ್ತಿದ್ದರು. ಇದರಿಂದ ಸಾಕಷ್ಟು ಬಡ್ಡಿ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಸಿದ್ದರಾಮಯ್ಯ ಅವರು ಬಡ್ಡಿ ರಹಿತ ಸಾಲ ನೀಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.

‘ಹಣಕಾಸಿನ ವ್ಯವಹಾರದಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಹೀಗಾಗಿ ನಾವು ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಲು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ವಿ.ನಾಗರಾಜು, ನಿರ್ದೇಶಕರಾದ ಶ್ರೀರಾಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT