ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ

ಪೊಲೀಸ್ ಇಲಾಖೆ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಮೆಚ್ಚುಗೆ
Last Updated 30 ನವೆಂಬರ್ 2017, 6:34 IST
ಅಕ್ಷರ ಗಾತ್ರ

ಕೋಲಾರ: ‘ಸುಧಾರಿತ ಗಸ್ತು ಪದ್ಧತಿ ಜಾರಿಗೆ ತಂದ ಮೇಲೆ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿದ್ದು, ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಪರಾಧ ಹಾಗೂ ಅಪಘಾತ ಪ್ರಕರಣಗಳ ಪ್ರಮಾಣ ಕಡಿಮೆಯಾಗಿದೆ ಎಂದರು.

ಈ ಹಿಂದೆ ಜಿಲ್ಲೆಯಲ್ಲಿ ಕೊಲೆ, ದರೋಡೆ, ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಿದ್ದ ಕಾರಣ ಅಪರಾಧ ವಿಭಾಗಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು. ಜತೆಗೆ ಗ್ರಾಮೀಣ ಭಾಗದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸುಧಾರಿತ ಗಸ್ತು ವ್ಯವಸ್ಥೆ ಆರಂಭಿಸಲಾಯಿತು ಎಂದು ವಿವರಿಸಿದರು.

ಕಂದಾಯ, ಅರಣ್ಯ ಸೇರಿದಂತೆ ಇತರೆ ಇಲಾಖೆಗಳಲ್ಲೂ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಕೊರತೆಯಿದೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಸಮಸ್ಯೆ ಇದೆ. ರಾಜ್ಯದಲ್ಲಿ 5 ವರ್ಷಗಳಿಂದ ಸಿಬ್ಬಂದಿಯ ನೇಮಕಾತಿ ನಡೆದಿರಲಿಲ್ಲ. ಈಗಿನ ರ್ಕಾರ ಎರಡು ಬಾರಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಆಯ್ಕೆಯಾಗಿರುವ ಸಿಬ್ಬಂದಿಯು ತರಬೇತಿ ಹಂತದಲ್ಲಿದ್ದಾರೆ. ಇನ್ನು ಒಂದು ತಿಂಗಳಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಕೊರತೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಹೊಸ ಠಾಣೆಗಳನ್ನು ಸ್ಥಾಪಿಸುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ತರಬೇತಿ ಹಂತದಲ್ಲಿರುವ ಸಿಬ್ಬಂದಿಯು ಸೇವೆಗೆ ನಿಯೋಜನೆಗೊಂಡ ನಂತರ ಗ್ರಾಮೀಣ ಭಾಗದಲ್ಲಿ ಗಸ್ತು ಹೆಚ್ಚಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೆಲ ಪೊಲೀಸ್‌ ಸಿಬ್ಬಂದಿ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿ, ಮಾಧ್ಯಮದವರನ್ನು ಕಂಡರೆ ಸಿಬ್ಬಂದಿಗೆ ಭಯವಾಗುತ್ತಿದೆ. ಕೆಲ ಪತ್ರಕರ್ತರು ಭಯೋತ್ಪಾದಕರಂತೆ ವರ್ತಿಸುತ್ತಾರೆ. ಅವರನ್ನು ಮಾತನಾಡಿಸುವುದಕ್ಕೂ ಆಗುವುದಿಲ್ಲ ಎಂದರು.

ಕೇಂದ್ರ ವಲಯ ಐಜಿಪಿ ಅಮೃತ್‌ ಪಾಲ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಡಿವೈಎಸ್ಪಿ ಅಬ್ದುಲ್‌ ಸತ್ತಾರ್ ಹಾಜರಿದ್ದರು.

ಬ್ಯಾಕ್‌ಲಾಗ್‌ ನೇಮಕಾತಿ: ಕ್ರಮ
ಕೆಜಿಎಫ್‌:
‘ಬ್ಯಾಕ್‌ ಲಾಗ್ ಹುದ್ದೆ ಭರ್ತಿ ಮಾಡುವಾಗ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಹೇಳಿದರು.

ನಗರದ ಚಾಂಪಿಯನ್‌ರೀಫ್ಸ್‌ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೇಮಕಾತಿ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದ್ದು, ವರದಿ ಬರಲಿದೆ. ನೇಮಕಾತಿ ವಿಚಾರ ನನ್ನ ಗಮನದಲ್ಲಿದೆ. ತಪ್ಪಿತಸ್ಥರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗಳ ಕೊರತೆ ಇದೆ. ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆ ಕಳೆದ ನಾಲ್ಕು ವರ್ಷಗಳಿಂದ ಇರಲಿಲ್ಲ. ಈಗ ನೇಮಕಾತಿ ಮುಗಿದು, ತರಬೇತಿ ಕೂಡ ಮುಗಿದಿದೆ. ಹತ್ತುದಿನಗಳಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ಹೇಳಿದರು.

‘ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತಂದಿರುವ ಬೀಟ್ ವ್ಯವಸ್ಥೆ ಉತ್ತಮವಾಗಿದೆ. ಒಂದೆರಡು ಜಿಲ್ಲೆ ಬಿಟ್ಟರೆ ಎಲ್ಲೆಡೆ ಬೀಟ್‌ ವ್ಯವಸ್ಥೆ ಬಗ್ಗೆ ಜನ ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಸಾರ್ವಜನಿಕ ಜಾಗದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವ ಪ್ರಕ್ರಿಯೆ ಅಷ್ಟು ಚುರುಕಾಗಿಲ್ಲ. ಮುಂದಿನ ಚುನಾವಣೆಯೊಳಗೆ ಕ್ಯಾಮೆರಾ ಪ್ರಮಾಣ ಹೆಚ್ಚಿಸುವಂತೆ ಸೂಚಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ ಆಂಬುಲೆನ್ಸ್ ನೀಡುವಂತೆ ಬೆಮಲ್ ಅಥವಾ ಜಿಲ್ಲಾಡಳಿತ ಕೋರಬೇಕು’ ಎಂದು ಎಸ್ಪಿಯವರಿಗೆ ಸೂಚಿಸಿದರು.

ಕೇಂದ್ರ ವಲಯದ ಐಜಿಪಿ ಅಮೃತ್‌ಪಾಲ್‌, ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶ್‌ ಕುಮಾರ್‌, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT