ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಮಯ ರಸ್ತೆ: ಸವಾರರಿಗೆ ದೂಳಿನ ಮಜ್ಜನ

ಮೃತ್ಯುಕೂಪವಾದ ತಾಲ್ಲೂಕಿನ ಯಾರಂಘಟ್ಟ – ಗಂಗಾಪುರ ರಸ್ತೆ; ಸಂಪೂರ್ಣವಾಗಿ ಕಿತ್ತು ಹೋಗಿರುವ ರಸ್ತೆಯ ಡಾಂಬರು
Last Updated 30 ನವೆಂಬರ್ 2017, 6:42 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಯಾರಂಘಟ್ಟ ಗ್ರಾಮದಿಂದ ಗಂಗಾಪುರ ಗೇಟ್‌ವರೆಗಿನ ರಸ್ತೆಗೆ ಡಾಂಬರು ಹಾಕಿ ದಶಕವೇ ಕಳೆದಿದ್ದು, ರಸ್ತೆಯು ಮೃತ್ಯುಕೂಪವಾಗಿ ಪರಿಣಮಿಸಿದೆ.

2003–04ರಲ್ಲಿ ನಿರ್ಮಾಣವಾದ ಈ ರಸ್ತೆ ಹಳೇ ಸೋಮರಸನಹಳ್ಳಿ, ಬೆಳಗಾನಹಳ್ಳಿ, ಹುತ್ತೂರು, ಸಿರೇಸಂದ್ರ, ಹೊಲ್ಲಂಬಳ್ಳಿ, ಅಗ್ರಹಾರ ಸೋಮರಸನಹಳ್ಳಿ, ಶಾಪೂರು ಹಾಗೂ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ಹೋಗಿ ಬರಬೇಕು.

ಕೃಷಿ ಉತ್ಪನ್ನ ಹಾಗೂ ಹಾಲು ಸಾಗಣೆ ವಾಹನಗಳು ಸಹ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಬಂಗಾರಪೇಟೆ ರೈಲು ನಿಲ್ದಾಣ, ಕೆಜಿಎಫ್‌, ಬೇತಮಂಗಲ, ಕೋಟಿಲಿಂಗೇಶ್ವರ ದೇವಸ್ಥಾನಕ್ಕೂ ಇದೇ ಮಾರ್ಗವಾಗಿ ಹೋಗಬೇಕು. ಸುಮಾರು ಮೂರೂವರೆ ಕಿ.ಮೀ ರಸ್ತೆಯ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ತುಂಬಾ ಗುಂಡಿಗಳಾಗಿವೆ.

ಗುಂಡಿಮಯ ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗುವಂತಾಗಿದ್ದು, ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಹಲವು ಬೈಕ್‌ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಭಾರಿ ವಾಹನಗಳು ಈ ಭಾಗದಲ್ಲಿ ಸಂಚರಿಸಿದರೆ ಇತರೆ ವಾಹನ ಸವಾರರಿಗೆ ದೂಳಿನ ಮಜ್ಜನವಾಗುತ್ತದೆ.

ಮಳೆಗಾಲದಲ್ಲಿ ರಸ್ತೆಯು ಕೆಸರು ಗದ್ದೆಯಂತಾಗುತ್ತದೆ. ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ನಿಜಕ್ಕೂ ಸಾಹಸವೇ ಸರಿ. ಕೆಸರುಮಯ ರಸ್ತೆಯಲ್ಲಿ ವಾಹನಗಳು ಹೂತುಕೊಂಡರೆ ಸವಾರರ ಗೋಳು ಹೇಳತೀರದು.

ಬಸ್‌ ಸೇವೆ ಸ್ಥಗಿತ: ಹಿಂದೆ ಈ ಭಾಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್‌.ಆರ್‌.ಟಿ.ಸಿ) ಬಸ್‌ಗಳು ಸಂಚರಿಸುತ್ತಿದ್ದವು. ರಸ್ತೆ ಹದಗೆಟ್ಟ ನಂತರ ಎರಡು ವರ್ಷಗಳಿಂದ ಬಸ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಈ ಭಾಗದ ಜನ ಸ್ವಂತ ವಾಹನಗಳು, ಶಾಲಾ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳನ್ನು ಆಶ್ರಯಿಸುವಂತಾಗಿದೆ.

ಶಾಸಕರ ಮೀನಾಮೇಷ: ಹಳೇ ಸೋಮರಸನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳು ಕೋಲಾರ ತಾಲ್ಲೂಕಿನಲ್ಲಿದ್ದರೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತವೆ. ಹೀಗಾಗಿ ರಸ್ತೆ ಅಭಿವೃದ್ಧಿಗೆ ಕೋಲಾರ ಮತ್ತು ಬಂಗಾರಪೇಟೆ ಕ್ಷೇತ್ರದ ಶಾಸಕರು ಮೀನಮೇಷ ಎಣಿಸುತ್ತಿದ್ದಾರೆ. ಉಭಯ ಶಾಸಕರು ಪರಸ್ಪರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಸಾರ್ವಜನಿಕರು ಬವಣೆ
ಪಡುವಂತಾಗಿದೆ.

ಡಾಂಬರು ಭಾಗ್ಯವಿಲ್ಲ: ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಎರಡೂ ಕ್ಷೇತ್ರಗಳ ಶಾಸಕರಿಗೆ ಹಾಗೂ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಗಳಿಗೆ ಬರೆದ ಪತ್ರಗಳಿಗೆ ಲೆಕ್ಕವಿಲ್ಲ. ರಸ್ತೆ ದುರಸ್ತಿಗಾಗಿ ಪಿಡಬ್ಲ್ಯೂಡಿ ಕಚೇರಿಗೆ ಅಲೆದು  ಚಪ್ಪಲಿ ಸವೆದವೇ ಹೊರತು ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

’ಶಾಸಕರ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಸಿ ಹೋಗಿ ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ. ಆದರೂ ರಸ್ತೆಗೆ ಡಾಂಬರು ಭಾಗ್ಯ ಸಿಕ್ಕಿಲ್ಲ’ ಎಂದು ಹೇಳುತ್ತಾರೆ.

*
ಡಾಂಬರು ಹಾಕುವಂತೆ ಹಲವು ಬಾರಿ ಹೋರಾಟ ಮಾಡಿದ್ದೇವೆ. ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಸೌಜನ್ಯಕ್ಕೂ ರಸ್ತೆ ಪರಿಶೀಲಿಸಿಲ್ಲ.
–ಕೃಷ್ಣಪ್ಪ, ಹಳೇ ಸೋಮರಸನಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT