7

‘ಮಾತೃಪೂರ್ಣ ಯೋಜನೆ ಗೊಂದಲ ನಿವಾರಿಸಿ’

Published:
Updated:
‘ಮಾತೃಪೂರ್ಣ ಯೋಜನೆ ಗೊಂದಲ ನಿವಾರಿಸಿ’

ಸಾಗರ: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಕೇಂದ್ರಗಳನ್ನು ಮುಚ್ಚಿ, ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಲೆನಾಡು ಭಾಗದಲ್ಲಿ ಮಾತೃಪೂರ್ಣ ಯೋಜನೆಯ ಅನುಷ್ಠಾನದಲ್ಲಿ ಗೊಂದಲಗಳು ಉಂಟಾಗಿವೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಈ ಗೊಂದಲಗಳನ್ನು ನಿವಾರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಾತೃಪೂರ್ಣ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹಾಗೂ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ನೀಡಬೇಕು. ಈ ಯೋಜನೆ ಫಲಾನುಭವಿಗಳ ಸಂಖ್ಯೆಗೆ ತಕ್ಕಂತೆ ಸೂಕ್ತ ಗಾತ್ರದ ಸ್ಟೌ, ಕುಕ್ಕರ್‌ ಒದಗಿಸಬೇಕು, ಫಲಾನುಭವಿಗಳಿಗೆ ಮೊಟ್ಟೆ ನೀಡಲು ಅಗತ್ಯವಿರುವ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಮುಂಚಿತವಾಗಿ ಖರೀದಿಸಲು ಅವರ ಖಾತೆಗೆ ಹಣ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಾತೃಪೂರ್ಣ ಯೋಜನೆ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಸಿಲಿಂಡರ್‌ ಒದಗಿಸಬೇಕು. ಹೆಚ್ಚಿನ ಫಲಾನುಭವಿಗಳು ಇರುವ ಕಡೆ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ಗೌರವಧನ ಹೆಚ್ಚಿಸಬೇಕು, ಫಲಾನುಭವಿಗಳ ಹಾಜರಾತಿಯ ಬಗ್ಗೆ ಯೋಜನಾಧಿಕಾರಿಗಳಿಗೆ ಎಸ್‌ಎಂಎಸ್‌ ಕಳುಹಿಸಬೇಕು ಎಂಬ ಸೂಚನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಜಶೇಖರ್‌ ಗಾಳಿಪುರ, ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್‌ನ ರಾಜ್ಯ ಸಂಚಾಲಕ ಎನ್‌.ರವೀಂದ್ರ ಸಾಗರ್, ಪ್ರಮುಖರಾದ ಕೋಮಲಾಕ್ಷಿ, ಸಾವಿತ್ರಿ ಚಕ್ಕೋಡು, ಟಿ.ಎನ್‌. ಮಹಾಲಕ್ಷ್ಮಿ, ರೇಖಾ ಗೌತಮಪುರ, ಪ್ರಮೀಳ ಕೆ., ಸರೋಜ ಎಸ್.,ಪುಷ್ಪಾ, ವಿನೋದಾ ಹಾಜರಿದ್ದರು.

‘ಸರ್ಕಾರದಿಂದ ಶೋಷಣೆ’

ಭದ್ರಾವತಿ:
ಸರ್ಕಾರ ಮಾತೃಪೂರ್ಣ ಯೋಜನೆ ರೂಪಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ಶೋಷಣೆಗೆ ಒಳಪಡಿಸಿದೆ ಎಂದು ಎಐಟಿಯುಸಿ ಬೆಂಬಲಿತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಪ್ರತಿಭಟನೆ ನಡೆಸಿತು.

ತಾಲ್ಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರಗಳನ್ನು ಬಂದ್ ಮಾಡಿ, ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಾತೃಪೂರ್ಣ ಯೋಜನೆಗೆ ಬೇಕಾಗುವ ಮೊಟ್ಟೆ, ತರಕಾರಿ ಖರೀದಿಗೆ ಮೂರು ತಿಂಗಳು ಮುಂಚಿತವಾಗಿ ಖಾತೆಗೆ ಅನುದಾನ ಬರಬೇಕು, ಪಂಚಾಯ್ತಿ ಸದಸ್ಯರ ಜತೆಗೆ ಬದಲು ಮೇಲ್ವಿಚಾರಕರೊಂದಿಗೆ ಜಂಟಿ ಖಾತೆ ತೆರೆಯಲು ಆದೇಶ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಕನಿಷ್ಠ ವೇತನ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಫೆಡರೇಷನ್ ಪದಾಧಿಕಾರಿಗಳಾದ ಸುಶೀಲಾಬಾಯಿ, ಭಾಗ್ಯಮಣಿ, ಭಾನುಮತಿ, ಸುಧಾ, ಸುಲೋಚನಾ, ವಿಶಾಲ, ವೇದಾ, ಸುಶೀಲ್ ಬದ್ನೆಹಾಳ್ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry