ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ಅಭಿವೃದ್ಧಿ ₹ 250 ಕೋಟಿ ಪ್ರಸ್ತಾವ

ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಸಾಮಾನ್ಯ ಸಭೆ ನಿರ್ಣಯ
Last Updated 30 ನವೆಂಬರ್ 2017, 7:15 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ಮುಂಬರುವ ಬಜೆಟ್‌ನಲ್ಲಿ ₹ 250 ಕೋಟಿ ಮೀಸಲಿಡಲು ಸರ್ಕಾರವನ್ನು ಕೋರುವ ಪ್ರಸ್ತಾವಕ್ಕೆ ಮಂಡಳಿಯ ಸಾಮಾನ್ಯ ಸಭೆ ಬುಧವಾರ ಸರ್ವಾನುಮತದ ಅನುಮೋದನೆ ನೀಡಿತು.

ಮಂಡಳಿ ಅಧ್ಯಕ್ಷ ಎಚ್‌.ಪಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಶಾಸಕರು, ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಮಲೆನಾಡು ಭಾಗದ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಕಾಮಗಾರಿಗಳು ಕೈಗೊಳ್ಳಬೇಕಿದೆ. 2016–17ನೇ ಸಾಲಿನಲ್ಲಿ ₹ 80 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅನುಮೋದನೆ ದೊರೆತಿರುವುದು ₹ 31 ಕೋಟಿಗೆ ಮಾತ್ರ. ಹಾಗಾಗಿ, ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಕೋರಬೇಕಿದೆ ಎಂದು ಅಧ್ಯಕ್ಷ ಮೋಹನ್ ಸಭೆಯ ಗಮನ ಸೆಳೆದರು.

₹ 3 ಲಕ್ಷದೊಳಗಿನ ಕಾಮಗಾರಿಗೆ ತಡೆ: ಹೊಸ ನಿಯಮದ ಪ್ರಕಾರ ₹ 3 ಲಕ್ಷದ ಒಳಗಿನ ಕಾಮಗಾರಿಗಳಿಗೆ ಅನುಮೋದನೆ ನೀಡುವಂತಿಲ್ಲ. ಯಾವುದೇ ಕಾಮಗಾರಿ ₹ 3 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಒಳಗೊಂಡಿರಬೇಕು. ಬೀದಿದೀಪ, ಹೈಮಾಸ್ಟ್ ದೀಪ, ನೀರಿನ ಸಮಸ್ಯೆಗಳಿಗೆ ಅನುದಾನ ನೀಡಲು ಆಗುವುದಿಲ್ಲ. ಯಾವುದೇ ಹೊಸ ಸೇತುವೆ, ರಸ್ತೆ ನಿರ್ಮಿಸಿದರೆ 5 ವರ್ಷಗಳ ನಿರ್ವಹಣೆಯ ಹೊಣೆ ಗುತ್ತಿಗೆದಾರರ ಮೇಲಿರುತ್ತದೆ. ನಿರ್ವಹಣಾ ವೆಚ್ಚವನ್ನೂ ಪರಿಗಣಿಸಿ ಕ್ರಿಯಾ ಯೋಜನೆ ರೂಪಿಸ ಬೇಕು ಎಂದು ಸಲಹೆ ನೀಡಿದರು.

ನೋಂದಾಯಿತ ಸಹಕಾರ ಸಂಘಗಳು, ಟ್ರಸ್ಟ್‌ಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಅನುಮತಿ ದೊರೆತಿದೆ. ವಾರ್ಷಿಕ ಲೆಕ್ಕಪತ್ರ ಕಡ್ಡಾಯವಾಗಿ ಸಲ್ಲಿಸುವ, ಲಾಭದಾಯಕವಲ್ಲದ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಬಹುದು. ನಿರ್ಮಿತಿ ಕೇಂದ್ರಕ್ಕೆ ರಸ್ತೆ ನಿರ್ಮಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾರತಮ್ಯಕ್ಕೆ ಆಕ್ಷೇಪ: ಕೆಲವು ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ಕೆಲವರಿಗೆ ಕಡಿಮೆ ಅನುದಾನ ನೀಡಲಾಗಿದೆ. ಇಂತಹ ತಾರತಮ್ಯ ಮೊದಲು ಸರಿಪಡಿಸಬೇಕು ಎಂದು ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮೋಹನ್‌, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಅನುದಾನದ ಹಣವೂ ಸೇರಿರುವ ಕಾರಣ ಈ ರೀತಿಯ ವ್ಯತ್ಯಾಸವಾಗಿದೆ ಎಂದು ಸಮಜಾಯಿಷಿ ನೀಡಿದರು.

ವಿಳಂಬಕ್ಕೆ ಆಕ್ಷೇಪ: ಏಪ್ರಿಲ್‌ ನಿಂದಲೇ ಹಣಕಾಸು ವರ್ಷ ಆರಂಭ ವಾದರೂ ಕಾಮಗಾರಿಗಳಿಗೆ ತಡವಾಗಿ ಅನುಮೋದನೆ ನೀಡಲಾಗಿದೆ. ಉಳಿದ ನಾಲ್ಕೈದು ತಿಂಗಳ ಅವಧಿಯಲ್ಲಿ ಎಲ್ಲ ಕಾಮಗಾರಿ ಹೇಗೆ ಮುಗಿಸಬೇಕು ಎಂದು ಸದಸ್ಯರು ಪ್ರಶ್ನಿಸಿದರು. ₹ 5 ಲಕ್ಷಕ್ಕಿಂತ ಮೇಲಿನ ಅನುದಾನಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಪಡೆಯಬೇಕಿದೆ. ಹಾಗಾದರೆ ಇಲ್ಲಿ ಮಂಡಳಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ಟೆಂಡರ್‌ನಲ್ಲಿ ಕೆಲವರು ನಿಗದಿತ ವೆಚ್ಚದಲ್ಲಿ ಶೇ 20ರಿಂದ 40ರಷ್ಟು ಕಡಿತ ಮಾಡುತ್ತಿದ್ದಾರೆ. ಹಾಗಾದರೆ ಅವರು ತಪ್ಪು ಮಾಹಿತಿ ನೀಡಿರಬೇಕು. ಇಲ್ಲವೇ ಕಳಪೆ ಕಾಮಗಾರಿ ಮಾಡಿರಬೇಕು. ಈ ಕುರಿತು ತನಿಖೆ ನಡೆಸಬೇಕು ಎಂದು ವಡ್ನಾಳ್ ಆಗ್ರಹಿಸಿದರು.

ನಿರ್ಮಿತಿ ಕೇಂದ್ರ, ಕ್ರೆಡಿಲ್‌ ಸೇರಿದಂತೆ ಗುತ್ತಿಗೆ ಸಂಸ್ಥೆಗಳಿಗೆ ಕಾಮಗಾರಿ ಆರಂಭಿಸಲು ಮುಂಗಡ ವಾಗಿ ನೀಡುತ್ತಿದ್ದ ಶೇ 80ರಷ್ಟು ಹಣದ ಬದಲಿಗೆ, ಶೇ 40ರಷ್ಟು ಮಾತ್ರ ನೀಡಲು ಸರ್ಕಾರ ಸೂಚಿಸಿದೆ ಎಂದು ಮಂಡಳಿ ಕಾರ್ಯದರ್ಶಿ ಸುಬ್ಬರಾವ್ ಹೇಳಿದರು.

ಶಾಸಕರಾದ ಜೀವರಾಜ್ ಆಳ್ವಾ, ಮನೋಹರ್ ತಹಶೀಲ್ದಾರ್, ಧರ್ಮಸೇನಾ, ಆರ್. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಉಪಸ್ಥಿತರಿದ್ದರು.

ಬೆಳ್ಳಿ ಮಹೋತ್ಸವಕ್ಕೆ ಸಿದ್ಧತೆ
1993ರಲ್ಲಿ ಸ್ಥಾಪಿತವಾದ ಮಂಡಳಿಗೆ ಈಗ 25 ವರ್ಷ ತುಂಬುತ್ತಿದೆ. ಅದರ ಸವಿನೆನಪಿಗೆ ಬೆಳ್ಳಿ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ₹ 25 ಕೋಟಿ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಯಿತು.

ನಾಲ್ವರು ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಬೇಕು. ಸರ್ಕಾರದ ಒಪ್ಪಿಗೆ ದೊರೆತ ನಂತರ ಮುಂದಿನ ಸಭೆ ಕರೆಯಬೇಕು. ಹೊಸ ವರ್ಷದ ಡೈರಿ ಹೊರತರಬೇಕು ಎಂದು ಹಲವು ಸದಸ್ಯರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT