7

15 ವರ್ಷಗಳಿಂದ ಹೆಲ್ಮೆಟ್‌ ಇಲ್ಲದೇ ಬೈಕ್‌ ಮುಟ್ಟಿಲ್ಲ: ‘ಹೆಲ್ಮೆಟ್‌ಧಾರಿ’ ಸುರೇಂದ್ರ ಜನಜಾಗೃತಿ!

Published:
Updated:
15 ವರ್ಷಗಳಿಂದ ಹೆಲ್ಮೆಟ್‌ ಇಲ್ಲದೇ ಬೈಕ್‌ ಮುಟ್ಟಿಲ್ಲ: ‘ಹೆಲ್ಮೆಟ್‌ಧಾರಿ’ ಸುರೇಂದ್ರ ಜನಜಾಗೃತಿ!

ಹುಮನಾಬಾದ್‌: ಎಲ್ಲರೂ ಮೊದಲು ಬೈಕ್‌ ಖರೀದಿಸುತ್ತಾರೆ. ಆಮೇಲೆ ಹೆಲ್ಮೆಟ್‌ ತೆಗೆದುಕೊಳ್ಳುತ್ತಾರೆ. ಆದರೆ, ತಾಲ್ಲೂಕಿನ ಹಣಕುಣಿಯ ಸುರೇಂದ್ರ ಆರ್‌.ಹುಡಗೀಕರ್‌ ಅವರು ಹೆಲ್ಮೆಟ್‌ ಕೊಂಡುಕೊಂಡ ತಿಂಗಳ ನಂತರ ಬೈಕ್‌ ಖರೀದಿಸಿದ್ದರು!

ರವೀಂದ್ರನಾಥ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿರುವ ಇವರು, ಹದಿನೈದು ವರ್ಷಗಳಿಂದಲೂ ಹೆಲ್ಮೆಟ್‌ ಧರಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ನಿಂತವರು ಗೇಲಿ ಮಾಡಿದರೂ ಅದಕ್ಕೆ ಇವರು ತಲೆ ಕೆಡಿಸಿಕೊಳ್ಳಲ್ಲಿಲ್ಲ. ಏಕೆಂದರೆ ಇವರಿಗೆ ತಮ್ಮ ತಲೆಯ ಸುರಕ್ಷತೆಯೇ ಮುಖ್ಯವಾಗಿತ್ತು.

ಅಂದಹಾಗೆ ಸುರೇಂದ್ರ ಅವರ ಹೆಲ್ಮೆಟ್ ಬಳಕೆ ಹಿಂದೆ ಕಾಡುವ ಕಥೆ ಇದೆ. ಇವರು 21 ವರ್ಷಗಳ ಹಿಂದೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಅಡ್ಡಾದಿಡ್ಡಿ ಬೈಕ್‌ ಓಡಿಸಿ, ನೆಲಕ್ಕೆ ಉರುಳಿದಾಗ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮೃತಪಟ್ಟರು. ಶವಪರೀಕ್ಷೆಯ ಬಳಿಕ ವೈದ್ಯರು ‘ಹೆಲ್ಮೆಟ್‌ ಧರಿಸಿದ್ದರೆ ಪ್ರಾಣ ಉಳಿಯುತ್ತಿತ್ತು’ ಎಂದು ವರದಿ ನೀಡಿದ್ದರು. ಈ ಘಟನೆಯಿಂದ ಜಾಗೃತಗೊಂಡ ಸುರೇಂದ್ರ ‘ಹೆಲ್ಮೆಟ್‌ಧಾರಿ’ ಯಾದರು.

ಪ್ರಾಣ ಉಳಿಸಿದ ಹೆಲ್ಮೆಟ್‌: ‘ನಮ್ಮ ತೋಟದಿಂದ ಸಕ್ಕರೆ ಕಾರ್ಖಾನೆಗೆ ಲಾರಿ ಮೂಲಕ ಕಬ್ಬು ಕಳಿಸಿದ್ದೆ. ಅದು ಒಂದು ತಿರುವಿನಲ್ಲಿ ಪಲ್ಟಿಯಾಗಿತ್ತು. ವಿಷಯ ತಿಳಿದು ರಾತೋರಾತ್ರಿ ಬೈಕ್‌ನಲ್ಲಿ ಸ್ಥಳಕ್ಕೆ ಹೋಗುವಾಗ ಆಯತಪ್ಪಿ ಕೆಳಕ್ಕೆ ಬಿದ್ದೆ. ಆಗ ನನ್ನ ಪ್ರಾಣವನ್ನು ಉಳಿಸಿದ್ದು ಹೆಲ್ಮೆಟ್‌’ ಎಂದು ಸುರೇಂದ್ರ ಹೇಳುತ್ತಾರೆ. ಇವರಿಂದ ಪ್ರೇರಣೆಗೊಂಡು ಸ್ನೇಹಿತರು ಸಹ ಹೆಲ್ಮೆಟ್‌ ಧರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

‘ಸುರೇಂದ್ರ ಹೆಲ್ಮೆಟ್‌ ಧರಿಸುವುದನ್ನು ಹತ್ತು ವರ್ಷಗಳಿಂದ ನೋಡುತ್ತಿದ್ದೇನೆ. ಹೆಲ್ಮೆಟ್‌ ಇಲ್ಲದೇ ಅವರು ಬೈಕ್‌ ಮುಟ್ಟುವುದೇ ಇಲ್ಲ. ನಾನು ಅವರಿಂದ ಪ್ರೇರಿತನಾಗಿ ಹೆಲ್ಮೆಟ್‌ ಧರಿಸುವುದನ್ನು ರೂಢಿ ಮಾಡಿಕೊಂಡಿದ್ದೇನೆ’ ಎಂದು ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಟಿ.ದೊಡ್ಮನಿ ಹೇಳುತ್ತಾರೆ.

‘ಹೆಲ್ಮೆಟ್‌ ಧರಿಸುವುದರಿಂದ ತಲೆ ಗೂದಲು ಉದುರುತ್ತದೆ. ಉಸಿರಾಟಕ್ಕೆ ತೊಂದರೆಯಾಗುತ್ತದೆ ಎನ್ನುವುದೆಲ್ಲ ಸುಳ್ಳು. ಗಾಳಿ ಆಡದಿದ್ದರೆ ಹೆಲ್ಮೆಟ್‌ನ ಗ್ಲಾಸನ್ನು ಕೊಂಚ ಮೇಲೆ ಮಾಡಿದರೆ ಆಯಿತು. ನಾನು ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಹೊಸ ಹೆಲ್ಮೆಟ್‌ ಖರೀದಿಸುತ್ತೇನೆ. ಕಡಿಮೆ ಬೆಲೆಯ ಹೆಲ್ಮೆಟ್‌ನಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಹೆಲ್ಮೆಟ್‌ ಖರೀದಿ ವಿಷಯದಲ್ಲಿ ಜಿಪುಣತನ ಸಲ್ಲದು’ ಎಂದು ಸುರೇಂದ್ರ ಹುಡಗೀಕರ್‌ ಕಿವಿಮಾತು ಹೇಳುತ್ತಾರೆ.

–ಶಶಿಕಾಂತ ಭಗೋಜಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry