‘ಮಹಾದೇವಿ’ಯ ಅನಂತ ಲಹರಿ

7

‘ಮಹಾದೇವಿ’ಯ ಅನಂತ ಲಹರಿ

Published:
Updated:
‘ಮಹಾದೇವಿ’ಯ ಅನಂತ ಲಹರಿ

ಕನ್ನಡದ ಕಿರುತೆರೆಯಲ್ಲಿ ಅಪ್ಪ, ಮಾವ, ಅಜ್ಜ  ಹೀಗೆ ಸಜ್ಜನ ಪಾತ್ರಗಳಿಂದಲೇ ಹೆಸರಾದವರು ಹಿರಿಯ ನಟ ಅನಂತವೇಲು. ಸಾಮಾಜಿಕ ಪಾತ್ರಗಳಷ್ಟೇ ಅಲ್ಲ ಪೌರಾಣಿಕ ಪಾತ್ರಗಳಲ್ಲೂ ತಮ್ಮ ವಿಶಿಷ್ಟ ಕಂಠಸಿರಿಯಿಂದ ಪ್ರೇಕ್ಷಕರ ಮನ ಗೆದ್ದವರು ಅವರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾದೇವಿ’ ಧಾರಾವಾಹಿಯಲ್ಲಿ ವಿರೂಪಾಕ್ಷ ಶಾಸ್ತ್ರಿ ಪಾತ್ರದ ಮೂಲಕ ರಂಜಿಸುತ್ತಿರುವ ಅನಂತವೇಲು ಅವರ ಅಭಿನಯದ ಬೇರುಗಳಿರುವುದು ರಂಗಭೂಮಿಯಲ್ಲಿ.

ಸಿನಿಮಾಗಳಲ್ಲಿ ಸೈನಿಕ ಪಾತ್ರಗಳನ್ನು ನೋಡಿ ರೋಮಾಂಚಿತರಾಗುತ್ತಿದ್ದ ಅವರಿಗೆ, ಬಾಲ್ಯದಲ್ಲಿಯೇ ಸೇನೆ ಸೇರಬೇಕೆಂಬ ಮಹದಾಸೆ ಇತ್ತಂತೆ. ಅಂತೆಯೇ ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಹತ್ತು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿದ ಅನಂತವೇಲು ನಂತರ ಎಚ್‌.ಎಂ.ಟಿ.ಯಲ್ಲಿ ನೌಕರರಾಗಿ ವೃತ್ತಿಗೆ ಸೇರಿದರು. ಬಾಲ್ಯದಲ್ಲಿ ವರದಾಚಾರ್ ಸ್ಮಾರಕ ಸಭಾಂಗಣದಲ್ಲಿ ಹಿರಿಯ ನಟ ಉಮೇಶ್ ಅವರ ಅಣ್ಣ ಸತ್ಯ ಮಾಡಿಸುತ್ತಿದ್ದ ನಾಟಕಗಳಲ್ಲಿ ಅವಕಾಶ ಪಡೆದಿದ್ದ ಅನಂತವೇಲು ಅವರಿಗೆ ಅಲ್ಲಿಂದಲೇ ಬಣ್ಣದ ಬದುಕಿನ ನಂಟು ಶುರುವಾಯಿತು.

ಎರಡು ದಶಕಗಳಿಂದ ಕನ್ನಡ ಕಿರುತೆರೆಯಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿರುವ ಅವರಿಗೆ ಕಿರುತೆರೆ ಎಂದಿಗೂ ಬೋರ್ ಆಗಿಲ್ಲವಂತೆ. ಸಿನಿಮಾಗಳಿಗಿಂತ ಕಿರುತೆರೆಯಲ್ಲಿಯೇ ಕಲಾವಿದರು ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ ಎಂಬುದು ಅವರ ಅಭಿಮತ. ಜನರು ನನ್ನನ್ನು ಇಂದಿಗೂ ‘ಕಾವ್ಯಾಂಜಲಿ’ಯ ಒಳ್ಳೆಯ ಮಾವ, ‘ಮಾಂಗಲ್ಯ‘ದ ಅಪ್ಪ, ‘ಬಾಂಧವ್ಯ’ದ ಹಿರಿಯ ಸಭ್ಯ ನಾಗರಿಕ ಅಂತಲೇ ಗುರುತಿಸುತ್ತಾರೆ. ಕಲಾವಿದ ಅಂದ್ಮೇಲೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು. ಅದಕ್ಕಾಗಿಯೇ ‘ಮಹಾದೇವಿ’ಯ ವಿರೂಪಾಕ್ಷ ಶಾಸ್ತ್ರಿಯ ಪಾತ್ರ ಒಪ್ಪಿಕೊಂಡೆ. ಇಷ್ಟು ದಿನ ಸಜ್ಜನಿಕೆಯ ಪಾತ್ರಗಳನ್ನು ಮಾಡಿ ಈಗ ಕುತಂತ್ರಿಯ ಪಾತ್ರ ಒಪ್ಪಿಕೊಳ್ಳಲು ಇರಿಸುಮುರಿಸು ಆಗಲಿಲ್ಲ ಎನ್ನುತ್ತಾರೆ ಅವರು.

ಮೂಲತಃ ದೇವಿಯ ಆರಾಧಕನಾಗಿರುವ ವಿರೂಪಾಕ್ಷ ಶಾಸ್ತ್ರಿಗೆ ಶ್ರೀಚಕ್ರ ಪಡೆಯುವ ಹಂಬಲ. ಅದನ್ನು ಪಡೆದಲ್ಲಿ ತಾನೇ ದೇವರಾಗುತ್ತೇನೆ ಎಂಬ ನಂಬಿಕೆ ಅವನದು. ಆಗ ಎಲ್ಲರೂ ತನ್ನನ್ನೇ ಪೂಜಿಸುತ್ತಾರೆನ್ನುವ ಆಸೆ ವಿರೂಪಾಕ್ಷ ಶಾಸ್ತ್ರಿಯದ್ದು. ಇದೊಂಥರಾ ವಿಭಿನ್ನ ಪಾತ್ರ. ‘ಮಹಾದೇವಿ’ ಧಾರಾವಾಹಿಯಲ್ಲಿ ಬರೀ ವಾಮಾಚಾರವಷ್ಟೇ ಅಲ್ಲ ಸದಾಚಾರವೂ ಇದೆ. ಶಕ್ತಿಯ ಅನುಗ್ರಹಕ್ಕಾಗಿ ವಿರೂಪಾಕ್ಷ ಶಾಸ್ತ್ರಿ ವಾಮಾಚಾರದ ಮೊರೆ ಹೋಗುತ್ತಾನೆ.  ಇಂದಿಗೂ ಸಮಾಜದಲ್ಲಿ ಮೂಢನಂಬಿಕೆ ಇದೆ. ನಿಧಿ ಆಸೆಗಾಗಿ ಮಕ್ಕಳನ್ನು ಬಲಿ ಕೊಡುವುದು, ಹಂಪಿಯಲ್ಲಿ ಸ್ಮಾರಕ ಅಗೆಯುವುದು ಹೀಗೆ ಏನೇನೋ ನಡೆಯುತ್ತಿರುತ್ತದೆ. ಸದಾಚಾರ–ವಾಮಾಚಾರ ಎರಡರಲ್ಲಿ ಯಾವುದು ಒಳ್ಳೆಯದು ಎಂಬುದನ್ನು ನಿರ್ದೇಶಕರು ಇಲ್ಲಿ ಮನಗಾಣಿಸಲು ಪ್ರಯತ್ನಿಸಿದ್ದಾರೆ ಎಂದು ತಮ್ಮ ಪಾತ್ರದ ವಿಶೇಷತೆಯನ್ನು ಬಿಚ್ಚಿಡುತ್ತಾರೆ .

100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತವೇಲು ಅವರಿಗೆ ಕಿರುತೆರೆಯೇ ಹೆಚ್ಚು ಇಷ್ಟವಂತೆ. ಸಿನಿಮಾಗಳೇನಿದ್ದರೂ ನಾಯಕ–ನಾಯಕಿ ಪ್ರಧಾನವಾಗಿರುತ್ತವೆ. ಧಾರಾವಾಹಿಗಳು ಹಾಗಲ್ಲ. ಇಲ್ಲಿ ಸಣ್ಣ ಪಾತ್ರಕ್ಕೂ ತನ್ನದೇ ಆದ ವಿಶೇಷ ಸ್ಥಾನವಿರುತ್ತದೆ. ಹಾಗಾಗಿ, ಕಿರುತೆರೆಯೇ ನನ್ನ ಮೊದಲ ಪ್ರೀತಿ ಎಂಬ ದೃಢ ನುಡಿ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry