ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಯಲ್ಲಿ ಸರ್ವಾಧಿಕಾರಿ ಧೋರಣೆ– ದೂರು

Last Updated 30 ನವೆಂಬರ್ 2017, 9:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಭಾವಿ ಮುಖಂಡರ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ಗ್ರಾಮಸ್ಥರು ಸರ್ಕಾರದಿಂದ ಬರುವ ಯೋಜನೆಗಳ ಸೌಲಭ್ಯ ಪಡೆಯ ಬೇಕಾದರೆ ಜೆಡಿಎಸ್ ಪಕ್ಷ ಸೇರಬೇಕೆಂಬ ಅಘೋಷಿತ ನಿಯಮ ಜಾರಿಗೊಳಿಸಲಾಗಿದೆ ಎಂದು ಗ್ರಾಮದ ಮುಖಂಡ ಎಂ.ಮುನೇಗೌಡ ದೂರಿದ್ದಾರೆ.

ಅವರು ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ಖಾತೆಗಳು, ಅರಣ್ಯದ ಒತ್ತುವರಿ, ಸರ್ಕಾರಿ ನಿವೇಶವನ್ನು ಖಾಸಗಿಯವರಿಗೆ ಮಾರಾಟ ಮಾಡಿರುವುದು ಸೇರಿದಂತೆ ಅನೇಕ ಅವ್ಯವಹಾರ ನಡೆದಿವೆ. ಈ ಕುರಿತಂತೆ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದರು.

ಹಾಡೋನಹಳ್ಳಿ ಗ್ರಾಮದಲ್ಲಿ ಎರಡು ಕೆರೆಗಳಿದ್ದು ಈ ಜಾಗದಲ್ಲಿ ಜಿಕೆವಿಕೆಗೆ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಜಿಕೆವಿಕೆಯವರು ಕಾಂಪೌಂಡ್ ನಿರ್ಮಿಸಿರುವುದು ಹಾಗೂ ಇಲ್ಲಿನ ಗಿಡಗಳಿಗೆ ನೀರುಣಿಸಲು ಕೆರೆಯಲ್ಲಿನ ನೀರನ್ನು ಜನರೇಟರ್ ಮೂಲಕ ಬಳಸುತ್ತಿದ್ದು ಅಂತರ್ಜಲಕ್ಕೆ ಮಾರಕವಾಗಿದೆ. ಗ್ರಾಮ ಪಂಚಾಯಿತಿಯಲ್ಲಿನ ಅಕ್ರಮಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದರು.

ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಭಾವತಿ ಮಾತನಾಡಿ, ವಿರೋಧ ಪಕ್ಷದ ಬೆಂಬಲಿತ ಸದಸ್ಯರೆಂಬ ಕಾರಣಕ್ಕೆ ಸಭೆ ಸಮಾರಂಭಗಳಿಗೆ ಆಹ್ವಾನ ನೀಡದೆ ಇಲ್ಲಿನ ಜೆಡಿಎಸ್ ಮುಖಂಡರು ಶಿಷ್ಟಾಚಾರವನ್ನು ಗಾಳಿಗೆ ತೂರಿದ್ದಾರೆ ಎಂದರು.

ಜೆಡಿಎಸ್ ಬೆಂಬಲಿತ ಅಧ್ಯಕ್ಷರು ಆಡಳಿತ ನಡೆಸುತ್ತಿದ್ದು ಕಾಂಗ್ರೆಸ್‌ ಬೆಂಬಲಿತ ಸದಸ್ಯರೆಂಬ ಕಾರಣಕ್ಕೆ ನಾಲ್ಕು ಜನ ಸದಸ್ಯರ ವಾರ್ಡ್‌ಗಳಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಿರುಮಗೊಂಡನಹಳ್ಳಿಯ ಮುಖಂಡ ಎಚ್‌.ನಂಜೇಗೌಡ ಮಾತನಾಡಿ, ‘ಗ್ರಾಮದಲ್ಲಿನ ಸರ್ವೇ ನಂಬರ್‌ 187, 182ರಲ್ಲಿ ಮೂರು ಎಕರೆ ಜಮೀನನ್ನು ಮಾರುತಿ ಯುವಕ ಸಂಘಕ್ಕೆ ನೀಡಲಾಗಿತ್ತು. ಈ ಭೂಮಿಯನ್ನು ಸಂತೋಷ್‌ ಕುಮಾರ್‌ ಎಂಬುವವರು ತಾವೇ ಉಳುಮೆ ಮಾಡುತ್ತಿದ್ದೇವೆ ನಮಗೇ ಮಂಜೂರು ಮಾಡಬೇಕು ಎಂದು ಅರ್ಜಿ ಸಲ್ಲಿಸಿ ಬಡವರಿಗೆ ನಿವೇಶನ ಮಾಡಬೇಕಾಗಿದ್ದ ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಮನಾಯ್ಕ, ಶ್ರೀಧರ್, ಶೇಟ್ಟಪ್ಪ, ಗೋವಿಂದರಾಜ್, ಸಿದ್ದಪ್ಪ ,ಜಯಕರ್ನಾಟಕ ಜಿಲ್ಲಾ ಸಂಚಾಲಕ ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT