ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನಸ ಸರೋವರ’ಕ್ಕೆ ಧಾರಾವಾಹಿ ಸ್ಪರ್ಶ

Last Updated 30 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಹ್ಯಾಟ್ರಿಕ್‌ ಹೀರೊ’ ನಟ ಶಿವರಾಜ್‌ಕುಮಾರ್‌ ಪ್ರಥಮ ಬಾರಿಗೆ ಕಿರುತೆರೆಗೆ ಹೆಜ್ಜೆ ಇಟ್ಟಿದ್ದಾರೆ. ಮುತ್ತು ಸಿನಿ ಕ್ರಿಯೇಷನ್ಸ್‌ ಮೂಲಕ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. 80ರ ದಶಕದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ್ದ ‘ಮಾನಸ ಸರೋವರ’ ಸಿನಿಮಾ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ಈ ಚಿತ್ರದ ಶೀರ್ಷಿಕೆ ಹೆಸರಿನಲ್ಲಿಯೇ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಂದುವರಿದ ಕಥೆಯೊಂದಿಗೆ ಉದಯ ವಾಹಿನಿಯಲ್ಲಿ ‘ಮಾನಸ ಸರೋವರ’ ಧಾರಾವಾಹಿ ಪ್ರಸಾರವಾಗಲಿದೆ. ಇದರ ಸಾರಥ್ಯ ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ಅವರದ್ದು.

ಕಂಠೀರವ ಸ್ಟುಡಿಯೊದಲ್ಲಿ ಧಾರಾವಾಹಿಯ ಮುಹೂರ್ತ ನೆರವೇರಿಸಲಾಯಿತು. ಹಿರಿಯ ನಟ ಶ್ರೀನಾಥ್, ‘ಮೂರು ದಶಕದ ಹಿಂದೆ ಮಾನಸ ಸರೋವರ ಚಿತ್ರ ಶುರು ಮಾಡುವಾಗ ಎಲ್ಲರಿಗೂ ಚಾಲೆಂಜ್ ಆಗಿತ್ತು. ಇಂದಿಗೂ ಚಿತ್ರದ ಕಥೆ, ಹಾಡುಗಳು ಜನರಿಂದ ಮರೆಯಾಗಿಲ್ಲ. ನಾನು ಮನೋವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡು ಕ್ಲೈಮ್ಯಾಕ್ಸ್‌ನಲ್ಲಿ ಅರೆಹುಚ್ಚನಾಗುತ್ತೇನೆ. ಮುಂದೆ ಏನಾಗುತ್ತಾನೆ ಎನ್ನುವುದು ಧಾರಾವಾಹಿಯಲ್ಲಿ ಮೂಡಿಬರಲಿದೆ’ ಎಂದರು.

ಸಿನಿಮಾದ ಕಥೆಯು ಧಾರಾವಾಹಿಯಾಗಿ ಬರುತ್ತಿರುವುದು ಭಾರತದಲ್ಲಿ ಇದೇ ಮೊದಲು. ‘ನಾನು ಪುಟ್ಟಣ್ಣ ಕಣಗಾಲ್ ಅವರ ಅಭಿಮಾನಿ. ನನಗೆ ಅವರೊಂದಿಗೆ ಕೆಲಸ ಮಾಡುವ ಭಾಗ್ಯ ಸಿಗಲಿಲ್ಲ. 25 ಬಾರಿ ಮಾನಸ ಸರೋವರ ಚಿತ್ರ ನೋಡಿದ್ದೇನೆ’ ಎಂದರು ಶಿವರಾಜ್‍ಕುಮಾರ್.

ಈ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆದಿರುವ ಶಿರಸಿ ಮೂಲದ ರಾಮ್‍ ಜಯಶೀಲ ವೈದ್ಯ ನಿರ್ದೇಶನದ ನೊಗವನ್ನೂ ಹೊತ್ತಿದ್ದಾರೆ. ಈಗಾಗಲೇ, 100 ಕಂತುಗಳ ಚಿತ್ರಕಥೆ ಸಿದ್ಧವಾಗಿದೆಯಂತೆ. ಶಿಲ್ಪಾ ವೈದ್ಯೆಯಾಗಿ ಹಾಗೂ ಕೊಡಗಿನ ಪ್ರಜ್ವಲ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಶಿವಣ್ಣ ಫೋನ್ ಮಾಡಿ ಕರೆದಾಗ ಅವರ ಪ್ರಸಾದವೆಂದು ಸಂತೋಷದಿಂದ ಅಭಿನಯಿಸುತ್ತಿದ್ದೇನೆ’ ಎಂದರು ನಟ ರಾಮಕೃಷ್ಣ.

‘ಅಂದು ಸಿನಿಮಾದಲ್ಲಿ ನಟಿಸುವಾಗ ಖುಷಿ, ಭಯ ಕಾಡುತ್ತಿತ್ತು. ಇಂದು ಸಂತೋಷವಾಗುತ್ತಿದೆ’ ಎಂದರು ನಟಿ ಪದ್ಮಾ ವಾಸಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT