7
ಜಿ.ಪಂ. ಅಧ್ಯಕ್ಷ ಗಾದಿಗೆ ನಡೆದ ನಾಲ್ಕು ತಿಂಗಳ ಹಗ್ಗಜಗ್ಗಾಟಕ್ಕೆ ತೆರೆ

ಚಿತ್ರದುರ್ಗ: ಸೌಭಾಗ್ಯ ಉಚ್ಚಾಟನೆ; ಮುಂದೇನು?

Published:
Updated:
ಚಿತ್ರದುರ್ಗ: ಸೌಭಾಗ್ಯ ಉಚ್ಚಾಟನೆ; ಮುಂದೇನು?

ಚಿತ್ರದುರ್ಗ: ನಾಲ್ಕು ತಿಂಗಳಿಂದ ಜಿಲ್ಲಾಪಂಚಾಯ್ತಿ ಅಧ್ಯಕ್ಷ ಗಾದಿಗಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಸೌಭಾಗ್ಯ ಬಸವರಾಜನ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಉಚ್ಚಾಟಿಸುವ ಮೂಲಕ ತೆರೆಬಿದ್ದಂತಾಗಿದೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವೇಳೆ 15 ತಿಂಗಳಂತೆ ನಾಲ್ಕು ಅವಧಿಗೆ ನಾಲ್ವರು ಮಹಿಳಾ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಒಪ್ಪಂದವಾಗಿತ್ತು. ಆ ಪ್ರಕಾರವೇ ಮೊದಲ ಹಂತದಲ್ಲಿ ಸೌಭಾಗ್ಯ ಬಸವರಾಜನ್ ಅವರಿಗೆ ಅವಕಾಶ ನೀಡಲಾಗಿತ್ತು.

ಉಳಿದ ಮೂರು ಅವಧಿಗೆ ಹೊಸದುರ್ಗ ತಾಲ್ಲೂಕಿನ ವಿಶಾಲಾಕ್ಷಿ ನಟರಾಜ್, ಹಿರಿಯೂರು ತಾಲ್ಲೂಕಿನ ಶಶಿಕಲಾ ಸುರೇಶ್ ಬಾಬು ಮತ್ತು ಚಳ್ಳಕೆರೆ ತಾಲ್ಲೂಕಿನ ಕೌಸಲ್ಯ ತಿಪ್ಪೇಸ್ವಾಮಿ ಅವರನ್ನು ಅಧಕ್ಷರನ್ನಾಗಿ ಮಾಡಲು ಒಪ್ಪಿಗೆಯಾಗಿತ್ತು. ಆದರೆ, ಅವಧಿ ಮುಗಿದರೂ ಸೌಭಾಗ್ಯ ಸ್ಥಾನ ಬಿಟ್ಟುಕೊಡಲಿಲ್ಲ.

‘ವಿಧಾನಸಭೆ ಚುನಾವಣೆ ಮುಗಿದ ನಂತರ ಬಿಟ್ಟುಕೊಡು­ತ್ತೇನೆ. ಆರು ತಿಂಗಳು ಕಾಲಾವಕಾಶ ಕೊಡಿ’ ಎಂದು ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ಉಳಿದ ಅಧ್ಯಕ್ಷಗಾದಿಯ ಆಕಾಂಕ್ಷಿಗಳು, ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಸೌಭಾಗ್ಯ ಅವರ ಮೇಲೆ ಒತ್ತಡ ಹೇರಲಾರಂಭಿಸಿದರು.

ಈ ಸಂಬಂಧ ಕೆಡಿಪಿ ಸಭೆ ನಡೆಯುತ್ತಿದ್ದ ಜಿಲ್ಲಾ ಪಂಚಾಯ್ತಿ ಸಭಾಂಗಣಕ್ಕೆ ತಮ್ಮ ಬೆಂಬಲಿಗರು, ಕಾಂಗ್ರೆಸ್ ಮುಖಂಡರೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಅಧ್ಯಕ್ಷ ಸ್ಥಾನ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ನೀಡಬೇku ಎಂದು ಒತ್ತಾಯಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದರು.

ಪೊಲೀಸರ ರಕ್ಷಣೆಯ ನಡುವೆ ಜಿಲ್ಲಾ ಪಂಚಾಯ್ತಿಯಲ್ಲಿ ಕೆಡಿಪಿ ಸಭೆ ನಡೆಸುವಂತಾಯಿತು. ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಕುರಿತು ಖಾಸಗಿ ಹೋಟೆಲ್‌ಗಳಲ್ಲಿ ಕಾಂಗ್ರೆಸ್ ಶಾಸಕರು, ಸಚಿವರ ಸಭೆ ನಡೆದಾಗ, ಸೌಭಾಗ್ಯ ಆ ಸಭೆಗೆ ಗೈರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ ವೇಳೆ ಈ ಪ್ರಕರಣದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ನೀಡಿರಲಿಲ್ಲ.

ಈ ಬೆಳವಣಿಗೆ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರೂ ಸೌಭಾಗ್ಯ ಅವರಿಗೆ ರಾಜೀನಾಮೆ ನೀಡಲು ಸಲಹೆ ನೀಡಿದ್ದರು. ಇದನ್ನೂ ಪರಿಗಣಿಸದ ಸೌಭಾಗ್ಯ ಅಧಿಕಾರದಲ್ಲಿ ಮುಂದುವರಿದರು.

ಹೀಗೆ ಸುದೀರ್ಘ ಮಾತುಕತೆ, ಸಂಧಾನ, ಮನವೊಲಿಕೆ ಪ್ರಯತ್ನಗಳು ನಡೆದರೂ ಅಧ್ಯಕ್ಷೆ ರಾಜೀನಾಮೆ ಪಡೆಯುವಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ವಿಫಲರಾಗಿದ್ದರು. ಅಂತಿಮವಾಗಿ ಅ.23ರಂದು ಸಭೆ ನಡೆಸಿದ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡರು ಸೌಭಾಗ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೆಪಿಸಿಸಿಗೆ ಶಿಫಾರಸು ಮಾಡಿದ್ದರು. ಅದನ್ನು ಪರಿಗಣಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಅವರು, ಸೌಭಾಗ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ.

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿರುವ ಕುರಿತು ಸೌಭಾಗ್ಯ ಬಸವರಾಜನ್ ಪ್ರತಿಕ್ರಿಯೆಗಾಗಿ ಪ್ರಯತ್ನಿಸಿದಾಗ ಅವರು ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಹೊಸದುರ್ಗ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದಾಗ ಮಾಡಿಕೊಂಡ ಒಪ್ಪಂದದಂತೆ ನಡೆದುಕೊಳ್ಳದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ತಿಳಿಸಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಬುಧವಾರ ಧಾರ್ಮಿಕ ಸಮಾರಂಭವೊಂದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.

‘ಬಾಗೂರು ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ವಿಶಾಲಾಕ್ಷಿ ನಟರಾಜು ಮೊದಲ ಅವಧಿಗೆ ಅಧ್ಯಕ್ಷೆ ಆಗಬೇಕಿತ್ತು. ಆದರೆ, ನನ್ನ ತಪ್ಪು ನಿರ್ಧಾರದಿಂದ ಆ ಸ್ಥಾನ ಬೇರೆಯವರಿಗೆ ಕೊಡಬೇಕಾಗಿ ಬಂತು’ ಎಂದು ಬೇಸರ ವ್ಯಕ್ತಪಡಿಸಿದರು.

15 ತಿಂಗಳ ಅವಧಿ ನಂತರ ಸ್ಥಾನ ಬಿಟ್ಟುಕೊಡಬೇಕೆಂಬ ನಿಬಂಧನೆಗೆ ಸೌಭಾಗ್ಯ ಬಸವರಾಜನ್‌ ಒಪ್ಪಿದ್ದರು. ಅವಧಿಯ ನಂತರ ಅವರನ್ನು ಶಾಸಕರನ್ನಾಗಿ ಮಾಡುವ ಕನಸಿತ್ತು. ಆದರೆ, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ’ ಎಂದು ಅವರು ಹೇಳಿದರು.

ಶಾಸಕ ಬಿ.ಜಿ.ಗೋವಿಂದಪ್ಪ, ‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪಕ್ಷದ ವರಿಷ್ಠರ ಮಾತಿಗೆ ಮನ್ನಣೆ ನೀಡಲಿಲ್ಲ.  ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಿ, ನಂತರ ವಿಶಾಲಾಕ್ಷಿ ನಟರಾಜ್‍ಗೆ ಆ ಸ್ಥಾನ ಕೊಡಿಸಲು ನಾವು ಬದ್ಧರಾಗಿದ್ದೇವೆ. ಇದರಿಂದ ವಿಶಾಲಾಕ್ಷಿ ಅವರು ಉಪ್ಪಾರ ಸಮಾಜದ ಪ್ರಥಮ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ’ ಎಂದು ತಿಳಿಸಿದರು.

*

ಉಚ್ಚಾಟನೆಯ ಕ್ರಮ ತೃಪ್ತಿ ತಂದಿದೆ. ಇದು ಕಾಂಗ್ರೆಸ್‌ ಮುಖಂಡರ ಹೋರಾಟದ ಫಲ.

-ವಿಶಾಲಾಕ್ಷಿ ನಟರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯೆ, ಬಾಗೂರು

*

ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜೀನಾಮೆ ವಿಚಾರ ಅಧ್ಯಕ್ಷರಿಗೆ ಬಿಟ್ಟಿದ್ದು. ಮುಂದೆ ಶಾಸಕರು, ಸಚಿವರ ಸೂಚನೆಯಂತೆ ನಡೆದುಕೊಳ್ಳುತ್ತೇನೆ.

-ಶಶಿಕಲಾ ಸುರೇಶ ಬಾಬು,

ಜಿಲ್ಲಾ ಪಂಚಾಯ್ತಿ ಸದಸ್ಯೆ, ಮಸ್ಕಲ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry