ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಗಿರಿ ಕರಿಸಿದ್ದೇಶ್ವರ ಕಾರ್ತಿಕೋತ್ಸವ ಡಿ.4ಕ್ಕೆ

ಬಾಳೆಹಣ್ಣು ಪ್ರಿಯನಿಗೆ ಲಕ್ಷ ದೀಪೋತ್ಸವ, ಪವಾಡ ಪುರುಷನಿಗೆ ವಿಶೇಷ ಪೂಜೆ
Last Updated 30 ನವೆಂಬರ್ 2017, 10:03 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯಲ್ಲಿ ಡಿ.4ರಂದು ಕರಿಸಿದ್ದೇಶ್ವರ ಸ್ವಾಮಿಯ ಕಡೇ ಕಾರ್ತಿಕೋತ್ಸವ ಹಾಗೂ ಲಕ್ಷ ದೀಪೋತ್ಸವ ನಡೆಯಲಿದೆ.

ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸ್ವಾಮಿಯ ಬೆಟ್ಟವನ್ನು ಎಣ್ಣೆ, ಬತ್ತಿಗಳ ದೀಪಗಳಿಂದ ಅಲಂಕರಿಸಲಾಗುತ್ತದೆ. ಬೆಟ್ಟದ ತುದಿಯಲ್ಲಿ ದೇವಾಲಯವಿದ್ದು, ಅಲ್ಲಿಯವರೆಗೆ ಇರುವ ಮೆಟ್ಟಿಲುಗಳ ಮೇಲೆ ದೀಪಗಳನ್ನು ಬೆಳಗಲಾಗುತ್ತದೆ. ರಾತ್ರಿ ವೇಳೆ ಇಡೀ ಬೆಟ್ಟ, ದೀಪಗಳಿಂದ ಕಂಗೊಳಿಸುತ್ತದೆ. ತಾಲ್ಲೂಕಿನ ದೊಡ್ಡ ಜಾತ್ರೆಗಳಲ್ಲಿ ಒಂದಾದ ಇಲ್ಲಿನ ಕಾರ್ತಿಕೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ.

ಮಂಗಳವಾರ ಬೆಳಗಿನ ಜಾವ ಕರಿಸಿದ್ದೇಶ್ವರ ಸ್ವಾಮಿಯನ್ನು ಬೆಟ್ಟದಿಂದ ಕೆಳಗೆ ಕರೆ ತರಲಾಗುತ್ತದೆ. ಬಾಳೆದಿಂಡುಗಳಲ್ಲಿ ಕಲಾತ್ಮಕವಾಗಿ ನಿರ್ಮಿಸುವ ಕದಳಿ ಮಂಟಪದಲ್ಲಿ ಕರಿಸಿದ್ದೇಶ್ವರ ಸ್ವಾಮಿ, ಕರಿಯಮ್ಮದೇವಿ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಬಾಳೆಹಣ್ಣು ರಾಶಿ: ಇಲ್ಲಿನ ಕರಿಸಿದ್ದೇಶ್ವರ ಸ್ವಾಮಿಗೆ ಬಾಳೆಹಣ್ಣು ಎಂದರೆ ಹೆಚ್ಚು ಪ್ರಿಯ. ದೇವರ ಮುಂದೆ ಬಾಳೆಹಣ್ಣುಗಳ ರಾಶಿ ಹಾಕುವುದು ಇಲ್ಲಿನ ವಿಶೇಷಗಳಲ್ಲಿ ಒಂದು. ಭಕ್ತರು ತಮ್ಮ ಇಷ್ಟಾನುಸಾರ ‘ನೂರಾ ಒಂದು, ಐನೂರ ಒಂದು, ಸಾವಿರದ ಒಂದು...’ ಹೀಗೆ ಬಾಳೆಹಣ್ಣು ನೀಡುವುದಾಗಿ ಹರಕೆ ಹೊರುತ್ತಾರೆ. ಭಕ್ತರು ಕೊಟ್ಟ ಬಾಳೆಹಣ್ಣನ್ನು ರಾಶಿ ಹಾಕಲಾಗುತ್ತದೆ. ಈ ರಾಶಿ 15ರಿಂದ 20 ಅಡಿ ಎತ್ತರ ಆಗುತ್ತದೆ.

ಹಣ್ಣನ್ನು ರಾಶಿ ಹಾಕಿದ ನಂತರ ಪೂಜೆ ಸಲ್ಲಿಸಿ ಭಕ್ತರಿಗೆ ಹಂಚಲಾಗುತ್ತದೆ. ಇದರೊಂದಿಗೆ ನೆನೆಸಿದ ಕಡಲೆ ಕಾಳು ವಿತರಿಸಲಾಗುತ್ತದೆ. ಜಾತ್ರೆಯಲ್ಲಿ ಬಾಳೆ ಹಣ್ಣು ಮಾರಾಟ ಜೋರಾಗಿರುತ್ತದೆ. ವ್ಯಾಪಾರಿಗಳು ಮಾರಾಟಕ್ಕೆಂದೇ ಟನ್‌ಗಟ್ಟಲೆ ಬಾಳೆಹಣ್ಣು ತರಿಸಿರುತ್ತಾರೆ ಎನ್ನುತ್ತಾರೆ ಅರ್ಚಕರಾದ ಯತೀಶ್, ವಿನಯ್, ಮಲ್ಲಿಕಾರ್ಜುನ ಹಾಗೂ ಚನ್ನಬಸಪ್ಪ.

ಕಾಲಜ್ಞಾನಿ ಬಾವಿ: ‘ಬೆಟ್ಟದ ಮೇಲಿನ ದೇವಾಲಯದ ಒಳಗೆ ಗಂಗಮ್ಮನ ಬಾವಿ ಇದ್ದು, ಇಲ್ಲಿ ಒಂದು ಪವಾಡ ನಡೆಯುತ್ತದೆ. ಹಿಂದಿನಿಂದಲೂ ಈ ಬಾವಿಯ ನೀರು ಬತ್ತಿಲ್ಲ. ಇದು ಭವಿಷ್ಯ ನುಡಿಯುವ ಬಾವಿಯಾಗಿದ್ದು, ಇದರಲ್ಲಿನ ನೀರು ಸ್ವಲ್ಪ ಕೆಳಗೆ ಹೋದರೆ ಆ ವರ್ಷ ಹೆಚ್ಚು ಮಳೆ ಬರುತ್ತದೆ, ಮೇಲೆ ಬಂದರೆ ಮಳೆ ಕಡಿಮೆ ಆಗುತ್ತದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ’ ಎಂದು ಇಲ್ಲಿನ ಪ್ರಧಾನ ಅರ್ಚಕ ರುದ್ರಸ್ವಾಮಿ ಹೇಳುತ್ತಾರೆ.

₹ 65 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ: ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಸುಮಾರು ₹ 60 ಲಕ್ಷ ವೆಚ್ಛದಲ್ಲಿ ಸಮುದಾಯ ಭವನ, ಯಾತ್ರಿ ನಿವಾಸ, ದಾಸೋಹ ಭವನ, ಶೌಚಾಲಯ, ಕಚೇರಿ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರದಿಂದ ₹ 5 ಲಕ್ಷ ಅನುದಾನವಷ್ಟೇ ಬಂದಿದೆ. ಈಗ ನಡೆಯುವ ಜಾತ್ರೆಗೆ ಸುಮಾರು ₹1.5 ಲಕ್ಷ ಖರ್ಚಾಗುತ್ತದೆ. ಭಕ್ತರ ನೆರವಿನಿಂದ ಎಲ್ಲವೂ ನಡೆಯುತ್ತಿದೆ. ಇಲ್ಲಿಗೆ ಬರುವ ಭಕ್ತರಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ’ ಎನ್ನುತ್ತಾರೆ ದೇವಾಲಯ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ರಾಮಣ್ಣ.

‘ಹಿಂದೆ ಸ್ವಾಮಿಯ ತೇರು ನಡೆಯುತ್ತಿತ್ತಂತೆ. ಯಾವುದೋ ಕಾರಣದಿಂದ ಸುಮಾರು 100 ವರ್ಷಗಳಿಂದ ರಥೋತ್ಸವ ನಡೆದಿಲ್ಲ. ದೇವರ ತೇರು ಹಾಳುಬಿದ್ದಿದ್ದು, ಬಳಕೆಗೆ ಬರುವುದಿಲ್ಲ. ಈಗ ಹೊಸ ತೇರು ನಿರ್ಮಿಸುವ ಬಗ್ಗೆ ಭಕ್ತರು ಚಿಂತನೆ ನಡೆಸಿದ್ದಾರೆ’ ಎಂದು ರಾಮಣ್ಣ ತಿಳಿಸಿದರು.

₹ 20 ಲಕ್ಷ ವೆಚ್ಚದಲ್ಲಿ ಚಾವಣಿ ನಿರ್ಮಾಣ
ಕರಿಸಿದ್ದೇಶ್ವರ ಬೆಟ್ಟಕ್ಕೆ ತೆರಳುವ ಮೆಟ್ಟಿಲುಗಳ ಮೇಲೆ ₹ 20 ಲಕ್ಷ ವೆಚ್ಚದಲ್ಲಿ ಚಾವಣಿ ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ರಾಮಗಿರಿ ಗ್ರಾಮದವರೇ ಆದ ಕೆ.ಎಂ.ಯೋಗೀಶ್ವರ ಅವರು ಇದನ್ನು ನಿರ್ಮಿಸಿಕೊಟ್ಟಿದ್ದಾರೆ.

ಬೆಟ್ಟದ ಆರಂಭದಿಂದ ದೇವಾಲಯದವರೆಗೆ 318 ಮೆಟ್ಟಿಲುಗಳಿದ್ದು, ಸುಮಾರು 122 ಪಿಲ್ಲರ್ ಬಳಸಲಾಗಿದೆ. ಚಾವಣಿ 12 ಅಡಿ ಎತ್ತರವಿದೆ. ಅದರ ಕೆಳಗೆ 70 ಎಲ್‌.ಇ.ಡಿ ಟ್ಯೂಬ್‌ಲೈಟ್ ಅಳವಡಿಸಲಾಗಿದೆ.

‘ರಾಮಗಿರಿ ನಮ್ಮ ಅಜ್ಜ-ಅಜ್ಜಿಯ ಊರು. 40 ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ವಾಸವಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದೇನೆ. ಬೇಸಿಗೆಯಲ್ಲಿ ಬೆಟ್ಟ ಹತ್ತುವಾಗ ಮೆಟ್ಟಿಲುಗಳು ಸುಡುತ್ತವೆ. ಭಕ್ತರು ಪ್ರಯಾಸಪಟ್ಟು ಬೆಟ್ಟ ಏರುವುದನ್ನು ಕಂಡಿದ್ದೆ. ಇದರಿಂದ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಅಳವಡಿಸಿರುವಂತೆ ನಮ್ಮ ಊರಿನಲ್ಲೂ ಮೆಟ್ಟಿಲುಗಳ ಮೇಲೆ ಚಾವಣಿ ನಿರ್ಮಿಸಬೇಕೆಂದು ತೀರ್ಮಾನಿಸಿದೆ’ ಎನ್ನುತ್ತಾರೆ ಯೋಗೀಶ್ವರ.

*
100 ವರ್ಷಗಳ ಹಿಂದೆ ಜಾತಿ ವೈಷಮ್ಯದಿಂದ ರಥೋತ್ಸವ ನಿಂತು ಹೋಗಿದ್ದು, ರಥ ಹಾಳಾಗಿದೆ. ಹೊಸ ರಥಕ್ಕೆ ₹ 1 ಕೋಟಿ ವೆಚ್ಚವಾಗಲಿದ್ದು, ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
-ರಾಮಣ್ಣ,
ದೇವಾಲಯ ಅಭಿವೃದ್ಧಿ ಸಮಿತಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT