7
ಕಿನ್ನಿಗೋಳಿ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳ ಆಕ್ಷೇಪ

ಜನಪ್ರತಿನಿಧಿಗಳಿಗೆ ಮಕ್ಕಳ ತರಾಟೆ

Published:
Updated:
ಜನಪ್ರತಿನಿಧಿಗಳಿಗೆ ಮಕ್ಕಳ ತರಾಟೆ

ಮೂಲ್ಕಿ: ‘ಮಳೆ ನೀರೆಲ್ಲ ಆಟದ ಮೈದಾ ನಕ್ಕೆ ನುಗ್ಗುತ್ತದೆ, ಪಠ್ಯಪುಸ್ತಕಗಳು ಇನ್ನೂ ಕೈಸೇರಿಲ್ಲ, ಶಾಲೆಯ ರಸ್ತೆಗೊಂದು ವೇಗನಿಯಂತ್ರಕ ಉಬ್ಬು ನಿರ್ಮಿಸಿ ಎಂದರೂ ಸ್ಪಂದಿಸಿಲ್ಲ. ನಮ್ಮ ಶಿಕ್ಷಕರನ್ನು ಪಂಚಾಯಿತಿ ಕೆಲಸಕ್ಕೆ ಬಳಸುತ್ತೀರಿ. ನಮಗೆ ಪಾಠ ಮಾಡುವುದು ಬೇಡವೇ.’

ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳು, ಪಂಚಾಯಿತಿಯ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

ಪದ್ಮನೂರು ಶಾಲೆಯ ವಿದ್ಯಾರ್ಥಿ ಯುವರಾಜ ಅಧ್ಯಕ್ಷತೆಯಲ್ಲಿ ನಡೆದ ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ, ಮಕ್ಕಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ, ಪಂಚಾಯಿತಿ ಅಧ್ಯಕ್ಷರನ್ನು ಹಾಗೂ ಅಧಿಕಾರಿಗಳನ್ನು ಸಭೆಯಲ್ಲಿ ನೇರವಾಗಿ ತರಾಟೆಗೆ ತೆಗೆದುಕೊಂಡರು.

ಪದ್ಮನೂರು ಶಾಲೆಯ ಮೈದಾನಕ್ಕೆ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ಹರಿದು ಬರುತ್ತದೆ. ಇದರಿಂದ ನಮಗೆ ಆಟವಾಡಲು ತೊಂದರೆ ಆಗುತ್ತಿದೆ. ಹಲವು ಬಾರಿ ಹೇಳಿಕೊಂಡರೂ ಪ್ರಯೋಜನ ಇಲ್ಲ ಎಂದು ವಿದ್ಯಾರ್ಥಿ ಧನುಷ್ ಪ್ರಶ್ನಿಸಿದರು.

ಮೂರು ಕಾವೇರಿಯಲ್ಲಿ ವಾಹನ ದಟ್ಟಣೆ ಹೆಚ್ಚಾದ ಕಾರಣ ರಸ್ತೆ ದಾಟಲು ತುಂಬಾ ಕಷ್ಟವಾಗುತ್ತಿದೆ. ಈ ಪ್ರದೇಶದಲ್ಲಿ ಸಂಚಾರಿ ಪೊಲೀಸರ ವ್ಯವಸ್ಥೆ ಮಾಡಿ ಎಂದು ಕಳೆದ ಬಾರಿಯೇ ಹೇಳಿದ್ದೇವೆ. ಆದರೂ ಪಂಚಾಯಿತಿಯು ಮೌನವಾಗಿದೆ ಎಂದು ಪಾಂಪೈ ಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು.

ಶಾಲಾ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸ ಬಿಟ್ಟು, ಬೇರೆ ಬೇರೆ ಕೆಲಸಗಳನ್ನು ಹೇರಲಾಗುತ್ತದೆ. ಇದರಿಂದ ಶಿಕ್ಷಕರಿಗೆ ಪಾಠ ಮಾಡಲು ಕಷ್ಟವಾಗುತ್ತಿದೆ ಎಂದು ಭಾರತ್ ಮಾತಾ ಶಾಲಾ ವಿದ್ಯಾರ್ಥಿಗಳು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆಯ ರಾಮದಾಸ್, ‘ಸರ್ಕಾರದ ನಿರ್ದೇಶನದದಂತೆ ಕೆಲಸ ಮಾಡುವುದು ಅನಿವಾರ್ಯ’ ಎಂದಾಗ, ಮಕ್ಕಳು ಅದಕ್ಕೆಂದು ಬೇರೆ ಸಿಬ್ಬಂದಿಗಳನ್ನು ನೇಮಿಸಿ ಎಂದರು. ಈ ಕುರಿತು ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.

ಶಾಲೆಗೆ ಸರ್ಕಾರದಿಂದ ಬರುವ ಪಠ್ಯ ಪುಸ್ತಕಗಳು ತಡವಾಗಿ ಬರುತ್ತಿವೆ. ಇದರ ಬಗ್ಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಅಳ್ವಾಸ್ ಸಂಸ್ಥೆ ಶಿಕ್ಷಕಿ ಸುಧಾರಾಣಿ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಮಾಜ ಸೇವಕಿ ನಂದಾ ಪಾಯಸ್, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು, ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗರತ್ನಾ, ಶಿಕ್ಷಣ ಇಲಾಖೆಯ ರಾಮದಾಸ್, ಆರೋಗ್ಯ ಸಹಾಯಕಿ ಪೂರ್ಣಿಮಾ. ಶಾಲಾ ವಿದ್ಯಾರ್ಥಿಗಳಾದ ಹೆವಿನ್, ಉಜ್ವಲ್, ಯಶವಂತ್, ಕಾವ್ಯಶ್ರೀ, ನಿತಿನ್, ಶ್ರೀನಿಧಿ ಇದ್ದರು.

*

ನಿತ್ಯ ಬರುವ ಬಸ್‌ಗಳು ಕೆಲವೊಂದು ಬಾರಿ ಟ್ರಿಪ್ ಮೊಟಕುಗೊಳಿಸುತ್ತದೆ. ಇದರಿಂದ ಪರೀಕ್ಷಾ ಸಮಯದಲ್ಲಿ ಕಷ್ಟವಾಗುತ್ತದೆ.

-ಪೂಜಾಶ್ರೀ ಆಚಾರ್ಯ, ಪಾಂಪೈ ಶಾಲಾ ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry