ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದೇಶ ಬರುವವರೆಗೂ ವಿಶ್ರಾಂತಿ ಇಲ್ಲ’

24 ಗಂಟೆ ವಿದ್ಯುತ್‌ಗಾಗಿ ಮುಂದುವರಿದ ಶಾಸಕರ ಪಾದಯಾತ್ರೆ
Last Updated 30 ನವೆಂಬರ್ 2017, 11:24 IST
ಅಕ್ಷರ ಗಾತ್ರ

ರಾಯಚೂರು: ‘ತಾಲ್ಲೂಕಿಗೆ 24 ಗಂಟೆ ವಿದ್ಯುತ್‌ ಸರಬರಾಜು ಮಾಡುವ ಬಗ್ಗೆ ಸರ್ಕಾರವು ಅಧಿಕೃತ ಆದೇಶ ಕೊಡುವವರೆಗೂ ವಿಶ್ರಮಿಸುವುದಿಲ್ಲ. ಪಾದಯಾತ್ರೆಯ ಬಳಿಕ ಉಪವಾಸದ ಮೂಲಕ ಹೋರಾಟ ಮುಂದುವರಿಸುತ್ತೇವೆ’ ಎಂದು ಶಾಸಕರಾದ ತಿಪ್ಪುರಾಜು ಹವಾಲ್ದಾರ್‌ ಹಾಗೂ ಡಾ.ಶಿವರಾಜ ಪಾಟೀಲ ಘೋಷಿಸಿದರು.

ತಾಲ್ಲೂಕಿನ ಗಾಣದಾಳದಿಂದ ಆರಂಭವಾದ ಪಾದಯಾತ್ರೆಯು ಎರಡನೇ ದಿನ ಪೂರೈಸಿ ಮಿಟ್ಟಿಮಲ್ಕಾಪುರದಲ್ಲಿ ತಂಗಿತ್ತು. 3ನೇ ದಿನ ಬುಧವಾರ ಪಾದಯಾತ್ರೆ ಆರಂಭಿಸುವ ಪೂರ್ವ ಗ್ರಾಮದ ಶಾಂತಾ ಶ್ರಮದ ಮುಂಭಾಗದಲ್ಲಿ ಶಾಸಕರು ಮಾತನಾಡಿದರು.

‘ರೈತರು, ಉದ್ಯಮಿಗಳು ಹಾಗೂ ಜನಸಾಮಾನ್ಯರ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ನಿಜವಾದ ಕಾಳಜಿಯಿದ್ದರೆ ನಿರಂ ತರ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರವು ಯಾವುದೇ ಆದೇಶ ನೀಡಿಲ್ಲವಾದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ವಿಜಯೋತ್ಸವ ಮಾಡಿರುವುದು ರಾಜಕೀಯ ತಂತ್ರ. ಆದರೆ ನಮ್ಮ ಪಾದಯಾತ್ರೆಯು ರೈತರು ಮತ್ತು ಜನಸಾಮಾನ್ಯರ ಬಗ್ಗೆ ನಿಜವಾದ ಕಾಳಜಿ ಇಟ್ಟುಕೊಂಡು ನಡೆಯುತ್ತಿದೆ’ ಎಂದು ಹೇಳಿದರು.

’ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ. ತಾಲ್ಲೂಕಿಗೆ 12 ಗಂಟೆ ವಿದ್ಯುತ್ ನೀಡಿರುವುದಾಗಿ ಸರ್ಕಾರ ಮೌಖಿಕ ಆದೇಶ ನೀಡಿದ್ದನ್ನು ಅಧಿಕೃತ ಆದೇಶವೆಂದು ಪರಿಗಣಿಸಿ, ವಿಜಯೋತ್ಸವ ಮಾಡಿರುವುದು ಖಂಡನೀಯವಾಗಿದೆ’ ಎಂದರು.

ಬಿಜೆಪಿ ಮುಖಂಡರಾದ ಎನ್.ಶಂಕ್ರಪ್ಪ, ರವೀಂದ್ರ ಜಲ್ದಾರ್, ಜೆಡಿಎಸ್‌ ಮುಖಂಡ ಎನ್.ಶಿವಶಂಕರ ಮಾತನಾಡಿದರು. ಶಾಂತಾಶ್ರಮದ ಸ್ವಾಮೀಜಿ, ಕಿಲ್ಲೇ ಬೃಹನ್ಮಠದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಕೇಶವರೆಡ್ಡಿ, ಕಡಗೋಳ ಆಂಜಿನೇಯ, ಅಚ್ಯುತರೆಡ್ಡಿ, ಜಗದೀಶ್, ಶಶಿರಾಜ್ ಮಸ್ಕಿ, ಗಾಣದಾಳ ಲಕ್ಷ್ಮೀಪತಿ, ಪಿ. ಯಲ್ಲಪ್ಪ, ಮಂಚಾಲಿ ಭೀಮಣ್ಣ,ಇದ್ದರು.

ಜೆಡಿಎಸ್‌ ಬೈಕ್‌ ರ‍್ಯಾಲಿ: ಶಾಸಕ ಡಾ.ಶಿವರಾಜ ಪಾಟೀಲ ಅವರು ಬುಧವಾರದಿಂದ ಆರಂಭಿಸಿದ ಪಾದಯಾತ್ರೆಯನ್ನು ಬೆಂಬಲಿಸಿ ರಾಯಚೂರು ನಗರದಿಂದ ಮಿಟ್ಟಿ ಮಲ್ಕಾಪುರದವರೆಗೂ ಬೆಂಬಲಿಗರು ಜೆಡಿಎಸ್‌ ಪಕ್ಷದ ಧ್ವಜ ಕಟ್ಟಿಕೊಂಡು ಬೈಕ್‌ ರ‍್ಯಾಲಿ ನಡೆಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಅವರು ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿದರು. ರ‍್ಯಾಲಿಯು ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಡಾ.ಬಾಬು ಜಗಜೀವನರಾಮ್ ವೃತ್ತ ಹಾಗೂ ಮಡಿವಾಳ ಮಾಚಿದೇವ (ಆರ್‌ಟಿಓ) ವೃತ್ತದ ಮೂಲಕ ಮಿಟ್ಟಿಮಲ್ಕಾಪೂರು ಗ್ರಾಮಕ್ಕೆ ತಲುಪಿತು.

ಶಾಸಕರಿಗೆ ನೋಟಿಸ್
ಗ್ರಾಮ ಪಂಚಾಯಿತಿಗೆ ತೆರವಾದ ಸದಸ್ಯ ಸ್ಥಾನಗಳಿಗೆ ನಡೆಯುವ ಉಪಚುನಾವಣೆಗಾಗಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಆರ್‌ಟಿಪಿಎಸ್ ಎದುರು ಧರಣಿ ನಡೆಸದಂತೆ ಚುನಾವಣಾಧಿಕಾರಿಯು ಶಾಸಕರಾದ ತಿಪ್ಪರಾಜು ಹವಾಲ್ದಾರ್‌ ಹಾಗೂ ಡಾ.ಶಿವರಾಜ ಪಾಟೀಲ ಅವರಿಗೆ ನೋಟಿಸ್ ನೀಡಿದ್ದಾರೆ.

ಇದಕ್ಕೆ ಖಂಡನೆ ವ್ಯಕ್ತಪಡಿಸಿರುವ ಶಾಸಕ ತಿಪ್ಪರಾಜು ‘ನಾನು ನೇರವಾಗಿ ಚುನಾವಣಾ ಆಯೋಗದ ಆಯುಕ್ತರಿಗೆ ಮಾತನಾಡಿದ್ದೇನೆ. ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ಆಧಾರಿತವಲ್ಲ. ನಿಮ್ಮ ಹೋರಾಟಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಯಾರು ಏನೇ ಅಡ್ಡಿಪಡಿಸಿದರೂ ನಮ್ಮ ಹೋರಾಟ ಆರ್‌ಟಿಪಿಎಸ್ ತಲುಪುವುದು ಶತಸಿದ್ಧ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಪರಿಶೀಲನೆ
ಶಕ್ತಿನಗರ:
ಆರ್‌ಟಿಪಿಎಸ್‌ ಮತ್ತು ವೈಟಿಪಿಎಸ್‌ ವಿದ್ಯುತ್ ಘಟಕಗಳ ಮಹಾದ್ವಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯುತ್‌ ಘಟಕಗಳ ಸ್ಥಳಕ್ಕೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು.

‘ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪ ಚುನಾವಣೆ ನಡಯುತ್ತಿದೆ. ಚುನಾವಣೆ ಮುಗಿಯುವವರೆಗೂ ಮುಷ್ಕರ ನಡೆಸದಂತೆ ನಿಷೇಧಿ ಸಲಾಗಿದೆ’ ಎಂದರು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕಿಶೋರಬಾಬು, ಸಿಪಿಐ ಹನುಮರೆಡ್ಡೆಪ್ಪ, ಪಿಎಸ್‌ಐಗಳಾದ ಸೋಮಶೇಖರ ಕೆಂಚರೆಡ್ಡಿ, ನಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT