7

ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ಕಳೆದ ವಾರಾಂತ್ಯದಲ್ಲಿ ಮೈಸೂರಿನಲ್ಲಿ ನಡೆದ 83ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಎರಡು ಕಾರಣಗಳಿಂದ ಚರ್ಚೆಗೊಳಗಾಗಿದೆ. ಮೊದಲನೆಯ ಕಾರಣ ಎಂದಿನಂತೆ ಪ್ರತಿ ಸಮ್ಮೇಳನದ ನಂತರವೂ ಪ್ರಸ್ತಾಪವಾಗುವಂತಹುದು: ಅದೇನೆಂದರೆ ಇತ್ತೀಚಿನ ದಶಕಗಳಲ್ಲಿ ಹಬ್ಬಗಳಂತೆ ಔಪಚಾರಿಕವಾಗಿ ಆಚರಣೆಯಾಗುವ ಈ ಸಾಹಿತ್ಯ ಸಮ್ಮೇಳನಗಳಿಗೆ ಸ್ಪಷ್ಟ ಗುರಿ, ಉದ್ದೇಶಗಳೇನಾದರೂ ಇವೆಯೇ, ಗೋಷ್ಠಿಗಳಲ್ಲಿ ಕನ್ನಡದ ಮುಂದಿರುವ ಸವಾಲುಗಳ ಬಗ್ಗೆ ಗಂಭೀರ ಚರ್ಚೆಗಳೇಕೆ ನಡೆಯುವುದಿಲ್ಲ ಎನ್ನುವ ಪ್ರಶ್ನೆಗಳು.

ಈ ಪ್ರಶ್ನೆಗಳಿಗೊಂದು ಸಣ್ಣ ಉತ್ತರವಿದೆ. ಮೊದಲ ಐವತ್ತು ಸಮ್ಮೇಳನಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಕನ್ನಡದ ಬಗ್ಗೆ ಚರ್ಚೆ ಮಾಡಲು ಲಭ್ಯವಿದ್ದ ವೇದಿಕೆಗಳು ಬಹಳ ಕಡಿಮೆ. ಹೀಗಾಗಿ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷವಾದ ಮಹತ್ವ ಮತ್ತು ಜವಾಬ್ದಾರಿಗಳೆರಡೂ ಇದ್ದವು. ಕಳೆದ ಮೂರು ದಶಕಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಕರ್ನಾಟಕದ ಎಲ್ಲೆಡೆ ವರ್ಷವಿಡೀ ವಿಚಾರಸಂಕಿರಣಗಳು, ಸಾಹಿತ್ಯ ಹಬ್ಬಗಳು ನಡೆಯುತ್ತಿರುತ್ತವೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮತ್ತು ನಾಗರಿಕ ಸಮಾಜದ ನೂರಾರು ಸಂಸ್ಥೆಗಳಿವೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳ ಮೇಲಿದ್ದ ಒತ್ತಡ ಬಹುಪಾಲು ಕಡಿಮೆಯಾಗಿದೆ. ಅಂದು ಸಮ್ಮೇಳನಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು ಇಂದು ವರ್ಷವಿಡೀ ನಡೆಯುತ್ತಿವೆ. ಹಾಗೆಂದ ಮಾತ್ರಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೊಂದು ದಿಕ್ಸೂಚಿ ವಿಷಯವಿರಬಾರದು, ಅಲ್ಲಿ ಗಂಭೀರ ಚರ್ಚೆ ನಡೆಯಬಾರದು ಎಂದು ನಾನು ಹೇಳುತ್ತಿಲ್ಲ. ಸಾಹಿತ್ಯ ಸಮ್ಮೇಳನಗಳ ಸ್ವರೂಪ, ಸಂದರ್ಭಗಳಲ್ಲಿ ಆಗಿರುವ ಬದಲಾವಣೆಗಳನ್ನು ಮಾತ್ರ ಗುರುತಿಸುತ್ತಿದ್ದೇನೆ.

ಈ ಮೇಲಿನ ಚರ್ಚೆಯನ್ನು ಲಂಬಿಸುವುದಕ್ಕಿಂತಲೂ ಕಳೆದ ವಾರಾಂತ್ಯದಿಂದಲೂ ತೀವ್ರತೆಯಿಂದ ಚರ್ಚಿತವಾಗುತ್ತಿರುವ ಎರಡನೆಯ ವಿಷಯವನ್ನು ಕೈಗೆತ್ತಿಕೊಳ್ಳೋಣ. ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲರು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ರಾಜಕೀಯ ಒಲವುಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕೆ ಟೀಕೆಗೆ ಒಳಗಾಗಿದ್ದಾರೆ. ಸಮ್ಮೇಳನದ ವೇದಿಕೆಯಿಂದ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಮತಹಾಕಿ ಎನ್ನುವುದು ಮತ್ತು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಟೀಕಿಸುವುದು ಸರಿಯಲ್ಲ. ಸಾಹಿತ್ಯದ ಸಮ್ಮೇಳನದಲ್ಲಿ ಸಾಹಿತ್ಯ, ಭಾಷೆ ಮತ್ತು ನಾಡಿನ ಹಿತಾಸಕ್ತಿಗಳ ರಕ್ಷಣೆಯ ಬಗ್ಗೆ ಮಾತ್ರ ಚರ್ಚೆಯಾಗಬೇಕು, ಚುನಾವಣಾ ರಾಜಕಾರಣವಲ್ಲ ಎನ್ನುವ ಆಕ್ಷೇಪಣೆಗಳನ್ನು ಎತ್ತಲಾಗಿದೆ. ಹೀಗೆ ಮತ್ತೊಮ್ಮೆ ಸಾಹಿತ್ಯ ಮತ್ತು ರಾಜಕಾರಣಗಳ ನಡುವಣ ಸಂಬಂಧ ನಮ್ಮ ಪ್ರಜ್ಞಾವಲಯಕ್ಕೆ ಹಿಂದಿರುಗಿದೆ.

ಸಾಹಿತಿಗಳು ಚುನಾವಣಾ ರಾಜಕಾರಣದ ಬಗ್ಗೆ ಮಾತನಾಡುವುದಕ್ಕೆ ಆಕ್ಷೇಪಣೆ ಬಂದಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳ ಮತ್ತೊಂದು ಉದಾಹರಣೆಯನ್ನೇ ಪರಿಗಣಿಸಿ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ ಮತ್ತಿತರ ಕನ್ನಡದ ಹಿರಿಯ ಸಾಹಿತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದಾಗಲೂ ಗಂಭೀರ ಆಕ್ಷೇಪಣೆಗಳನ್ನು ಎತ್ತಲಾಯಿತು. ಉಗ್ರಪ್ರತಿಕ್ರಿಯೆಗಳು, ಬೆದರಿಕೆಗಳು ಬಂದವು. ಇನ್ನಾರು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಈ ಮಾತುಗಳು ಮತ್ತೆ ಪುನರಾವರ್ತನೆಗೊಳ್ಳುತ್ತವೆ. ಹೀಗೆ ನಮ್ಮ ಸಾರ್ವಜನಿಕ ಚರ್ಚೆಗಳಲ್ಲಿ ಎರಡು ಅಭಿಪ್ರಾಯಗಳು ಮೂಡುತ್ತಿವೆ. ಚಂಪಾರಂತಹ ಬರಹಗಾರರು ಚುನಾವಣಾ ರಾಜಕಾರಣದಲ್ಲಿ ತಮ್ಮ ಆಯ್ಕೆಗಳನ್ನು ಸಾರ್ವಜನಿಕವಾಗಿ ಪ್ರಚುರಪಡಿಸಬಾರದು ಹಾಗೂ ಇಂತಹ ಮಾತುಗಳನ್ನು ಆಡಲು ಎಲ್ಲ ಸೈದ್ಧಾಂತಿಕ ಮತ್ತು ರಾಜಕೀಯ ಹಿನ್ನೆಲೆಯವರೂ ಇರುವ ಸಾಹಿತ್ಯ ಸಮ್ಮೇಳನಗಳಂತಹ ವೇದಿಕೆಗಳನ್ನು ಬಳಸಬಾರದು.

ಇದನ್ನೆಲ್ಲ ನೋಡುವಾಗ ನನ್ನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿವು: ಚುನಾವಣಾ ರಾಜಕಾರಣದ ಬಗ್ಗೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಗ್ಗೆ ಸಾಹಿತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ತಪ್ಪೇನು? ಇಂತಹ ವಿಚಾರಗಳು ನಮ್ಮ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿಯೂ ಚರ್ಚಿತವಾದರೆ ಅದರಿಂದ ನಾವು ಏನನ್ನು ಕಳೆದುಕೊಳ್ಳುತ್ತೇವೆ? ಚಂಪಾ, ಬರಗೂರು ರಾಮಚಂದ್ರಪ್ಪ ಅಥವಾ ಎಸ್.ಎಲ್. ಭೈರಪ್ಪ ಅವರ ಮಾತುಗಳನ್ನು ಕೇಳುವಾಗ ಅವರ ಸೈದ್ಧಾಂತಿಕ ಬದ್ಧತೆಗಳೇನು ಎನ್ನುವುದನ್ನು ಮರೆಯುತ್ತೇವೆಯೇ?

ಈ ಪ್ರಶ್ನೆಗಳನ್ನು ಕೇಳುವಾಗ, ನಮ್ಮ ಸಮೂಹ ಮಾಧ್ಯಮಗಳಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ ಚುನಾವಣೆಯ ರಾಜಕೀಯವೇ ಹೆಚ್ಚು ಪ್ರಸ್ತಾಪವಾಗುತ್ತದೆ, ನಮಗೆಲ್ಲರಿಗೂ ಅದೊಂದು ಗೀಳಾಗಿದೆ ಎನ್ನುವ ಎಚ್ಚರ ನನಗಿದೆ. ಹಾಗಾಗಿ ಇಂತಹ ವೇದಿಕೆಗಳಲ್ಲಿಯಾದರೂ ಹೆಚ್ಚಾಗಿ ಸಾಹಿತ್ಯ-ಭಾಷೆ-ಸಂಸ್ಕೃತಿಗಳು ಪ್ರಸ್ತಾಪವಾಗಲಿ ಎನ್ನುವ ಮಾತನ್ನು ಸಂಪೂರ್ಣವಾಗಿ ತಳ್ಳಿಹಾಕಲಾರೆ.

ಆದರೂ ಚಂಪಾ ಆಗಲೀ ಅಥವಾ ಅವರಿಗಿಂತ ಭಿನ್ನವಾದ ಸೈದ್ಧಾಂತಿಕ ಮತ್ತು ರಾಜಕೀಯ ನಿಲುವುಗಳನ್ನು ಹೊಂದಿರುವ ಮತ್ತೊಬ್ಬ ಬಲಪಂಥೀಯ ಬರಹಗಾರನಾಗಲೀ ತನ್ನ ರಾಜಕೀಯ ಒಲವುಗಳನ್ನು ವ್ಯಕ್ತಪಡಿಸುವುದಕ್ಕೆ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲ ಎನ್ನುವುದನ್ನು ಒಪ್ಪಲು ನನಗೆ ಕಷ್ಟವಾಗುತ್ತಿದೆ. ತೀಕ್ಷ್ಣಮತಿಯೂ, ವಾಕ್ಚತುರರೂ ಆದ ಚಂಪಾ ಅವರಿಗೆ ನನ್ನಂತಹ ಸಮರ್ಥಕರ ಅಗತ್ಯವಿಲ್ಲ. ಆದರೆ ಈ ಮೇಲಿನ ಮಾತನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಹೇಳಬೇಕಾದ ಅನಿವಾರ್ಯ ಇದೆ. ಹಾಗಾಗಿ ಚಂಪಾ ಅಥವಾ ಬೇರೆ ಯಾರೇ ಆಗಲಿ ಸಮ್ಮೇಳನದ ವೇದಿಕೆಯಿಂದ ಹೇಳುವುದನ್ನು ವಿಮರ್ಶಿಸಲು ನಮಗೆ ಲಭ್ಯವಿರುವ ನೆಲೆಯೆಂದರೆ ಅವರ ಮಾತುಗಳಲ್ಲಿರುವ ವಸ್ತುನಿಷ್ಠತೆ, ಕ್ರಮಬದ್ಧ ಚಿಂತನೆ ಮತ್ತು ಕನ್ನಡಿಗರೆಲ್ಲರ ಒಳಿತಿನ ಬಗೆಗಿನ ಕಳಕಳಿಗಳಷ್ಟೇ. ಇದರಾಚೆಗೆ ಸಮ್ಮೇಳನದ ವೇದಿಕೆಗೆ ಅನಗತ್ಯ ಪಾವಿತ್ರ್ಯವನ್ನು ಆರೋಪಿಸಬೇಕಾಗಿಲ್ಲ.

ನನ್ನ ಈ ಮೇಲಿನ ಮಾತುಗಳನ್ನು ವಿವರಿಸಲು ಹಾಗೂ ಬರವಣಿಗೆ-ಸಾಹಿತ್ಯ-ಸಂಶೋಧನೆಗಳ ಸಾರ್ವಜನಿಕ ಮತ್ತು ರಾಜಕೀಯ ಆಯಾಮಗಳನ್ನು ಸ್ವಲ್ಪ ಸ್ಪಷ್ಟಗೊಳಿಸಿಕೊಳ್ಳುವುದು ಒಂದು ಆರೋಗ್ಯಪೂರ್ಣ ಚರ್ಚೆಯನ್ನು ನಡೆಸಲು ಉಪಯುಕ್ತವಾಗಬಹುದು ಎನಿಸುತ್ತದೆ. ಗಮನಿಸಿ. ಬರವಣಿಗೆ, ಅದರಲ್ಲೂ ಸಾಹಿತ್ಯ ಅಥವಾ ಸಂಶೋಧನೆಯ ಬರಹ, ಒಂದು ಸಾರ್ವಜನಿಕ ಕ್ರಿಯೆ. ಇಂತಹ ಯಾವ ಸಾರ್ವಜನಿಕ ಕ್ರಿಯೆಯೂ ತಟಸ್ಥವಾದ ಅಥವಾ ನಿರಾಸಕ್ತ ಮನಸ್ಸಿನ ಚಟುವಟಿಕೆಯಲ್ಲ. ಅದೊಂದು ರಾಜಕೀಯ ಚಟುವಟಿಕೆ. ಸಾರ್ವಜನಿಕವಾದ ಎಲ್ಲ ಕ್ರಿಯೆಗಳಿಗೂ ರಾಜಕಾರಣದ ಲೇಪವಿರುತ್ತದೆ. ಈ ಮಾತುಗಳನ್ನು ಹೇಳುವಾಗ ನಾನು ಸಾಹಿತ್ಯದ ಅಥವಾ ಸಂಶೋಧನೆಯ ಗುಣಮಟ್ಟದ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಈ ಚಟುವಟಿಕೆಗಳ ಮೂಲಗುಣವನ್ನು ಗುರುತಿಸುತ್ತಿದ್ದೇನೆ ಅಷ್ಟೆ. ಸಾಹಿತ್ಯ ರಚನೆ ಅಥವಾ ಸಂಶೋಧನೆಯಂತಹ ಬೌದ್ಧಿಕ ಚಟುವಟಿಕೆಗಳು ನಮಗೆ ಯಾವ ಬಗೆಯ ಸಮಾಜ ಬೇಕು ಎನ್ನುವುದರ ಬಗ್ಗೆ ನಮ್ಮ ಒಲವು- ಆದ್ಯತೆಗಳನ್ನು ನಮ್ಮ ಸಹನಾಗರಿಕರ ಮುಂದಿಡುವ ಕ್ರಿಯೆಗಳು.

ಬರಹಗಾರರು ಮತ್ತು ಕಲಾವಿದರಿಗೂ, ರಾಜಕಾರಣಕ್ಕೂ ಸಂಬಂಧವಿಲ್ಲ ಎನ್ನುವ ಮಾತು ಆಗಾಗ ನಮ್ಮಲ್ಲಿ ಕೇಳಿಬರುತ್ತದೆ. ಇದೊಂದು ಅರ್ಥರಹಿತವಾದ ಮಾತು, ಪ್ರಮೇಯ ಎನ್ನದೆ ವಿಧಿಯಿಲ್ಲ. ಕೆನ್ಯಾದ ಬರಹಗಾರ ಗೂಗಿ ವಥಿಯಾಂಗೊ ಹೇಳುವಂತೆ ಪ್ರತಿಯೊಬ್ಬ ಬರಹಗಾರನೂ ರಾಜಕೀಯದಲ್ಲಿರುವ ಬರಹಗಾರನೇ. ಅದು ಯಾವ ಮತ್ತು ಯಾರ ರಾಜಕಾರಣದಲ್ಲಿ ಎನ್ನುವುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ. ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರು ಸಾಹಿತ್ಯ ಮತ್ತು ರಾಜಕಾರಣಗಳ ನಡುವಿನ ಅಂತರವನ್ನು ಕಾಯ್ದುಕೊಳ್ಳುವ ಕುರಿತಾಗಿ, ಸಾಹಿತ್ಯಕ್ಕೆ ರಾಜಕೀಯ ಪ್ರೇರಣೆಗಳು ಇರಬಾರದು ಎನ್ನುವುದರ ಬಗ್ಗೆ ಪದೇಪದೇ ಮಾತನಾಡುತ್ತಾರೆ. ಅವರ ಈ ಅಭಿಪ್ರಾಯವೂ ಒಂದು ರಾಜಕೀಯ ನಿಲುವು ಎನ್ನುವುದನ್ನು ಮರೆಯಬಾರದು. ಮುಂದುವರೆದು ಹೇಳುವುದಾದರೆ, ಭೈರಪ್ಪನವರು ಶಾಲಾಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಪರವಾಗಿ ಮಾಡುವ ವಾದವಾಗಲೀ ಅಥವಾ ನೆಹರೂ ಅವರ ಆರ್ಥಿಕ ನೀತಿಯನ್ನು ಟೀಕಿಸುತ್ತ ಸ್ಪರ್ಧೆ ಮತ್ತು ಖಾಸಗಿ ಉದ್ಯಮಗಳ ಬೆಂಬಲಕ್ಕೆ ನಿಲ್ಲುವುದಾಗಲೀ ರಾಜಕೀಯ ನಿಲುವುಗಳೇ. ಇನ್ನೂ ಮುಖ್ಯವಾಗಿ, ಅವರ ಕಾದಂಬರಿಗಳಲ್ಲಿ ಕಥಾವಸ್ತುವನ್ನು ಆಯ್ಕೆ ಮಾಡುವಾಗ, ಪಾತ್ರಗಳನ್ನು ಸೃಷ್ಟಿಸುವಾಗ, ಅವರದೊಂದು ಕಥಾಪ್ರಪಂಚವನ್ನು ಕಟ್ಟುವಾಗ ಭೈರಪ್ಪನವರು ಮಾಡುವ ಆಯ್ಕೆಗಳೆಲ್ಲ ರಾಜಕೀಯಪ್ರೇರಿತ, ಸೈದ್ಧಾಂತಿಕ ಆಯ್ಕೆಗಳು. ಅಂದರೆ ಒಬ್ಬ ಸಾಹಿತಿಯ ಸೃಜನಾತ್ಮಕ ಚಟುವಟಿಕೆಗಳು ಸಹ ರಾಜಕೀಯ ಪ್ರೇರಿತವಾದವುಗಳು. ಸಮಾಜವಾದದಿಂದ ಪ್ರೇರಿತನಾದ ಒಬ್ಬ ಸಾಹಿತಿಯಷ್ಟೇ ಭೈರಪ್ಪನವರೂ ರಾಜಕಾರಣದೊಳಗೆ ಇರುವ ಬರಹಗಾರ. ಎಡ-ಬಲ ಗುಂಪುಗಳೆರಡಕ್ಕೂ ಸೇರಿದ ಸಾಹಿತಿಗಳು ತಮ್ಮ ಬರಹಗಳನ್ನು ಸಮಾಜದ ಮೇಲೆ ಪ್ರಭಾವ ಬೀರುವ ಸಾಧನವಾಗಿಯೇ ಬಳಸುತ್ತಾರೆ. ತಮ್ಮೊಳಗಿರುವ, ತಮ್ಮ ಕೃತಿಗಳೊಳಗಿರುವ ರಾಜಕೀಯ ಪ್ರೇರಣೆ-ಆಯ್ಕೆಗಳನ್ನು ಅವರು ಒಪ್ಪುತ್ತಾರೆಯೊ ಇಲ್ಲವೊ ಎನ್ನುವುದು ಅಷ್ಟೇನೂ ಮುಖ್ಯವಲ್ಲ.

ನಾನಿಲ್ಲಿ ರಾಜಕೀಯವನ್ನು ಸಾರ್ವಜನಿಕ ಜೀವನದೊಡನೆ ತಳಕು ಹಾಕುವಾಗ ನಮ್ಮ ಸಾರ್ವಜನಿಕ ಜೀವನದ ಎಲ್ಲಾ ಆಯಾಮಗಳನ್ನು ಒಳಗೊಳ್ಳುವ ರಾಜಕಾರಣದ ವಿಶಾಲ ಪರಿಕಲ್ಪನೆಯೊಂದನ್ನು ಬಳಸುತ್ತಿದ್ದೇನೆ. ನಮ್ಮೆಲ್ಲರ ಒಳಿತಿಗೆ ಅತ್ಯವಶ್ಯಕವಾದ ಇಂತಹ ರಾಜಕಾರಣವನ್ನು ಕೇವಲ ವೃತ್ತಿಪರ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಆದುದರಿಂದಲೇ ಸಾಹಿತಿಯಾಗಲೀ, ಸಂಶೋಧಕನಾಗಲೀ ಎಚ್ಚರದಿಂದ, ಮುಕ್ತಮನಸ್ಸಿನಿಂದ ಚಿಂತನೆ, ಬರಹ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲೇಬೇಕು. ಸರ್ಕಾರದ ನೀತಿಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿವರ್ಗವನ್ನು ಹೊರತುಪಡಿಸಿ, ನಮ್ಮ ಸಮಾಜದ ಮಿಕ್ಕವರೆಲ್ಲರೂ ದೇಶದ ಆಗುಹೋಗುಗಳ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿರಬೇಕು. ಇಂತಹ ಚರ್ಚೆಗೆ ಯಾವ ವೇದಿಕೆಯೂ ಹೊರತಾಗಬಾರದು.

ಹಾಗಾದರೆ ಸಾಹಿತಿಯೊಬ್ಬನು ತನ್ನ ಮೇಲೆ ತಾನೇ ಹಾಕಿಕೊಳ್ಳಬೇಕಾಗಿರುವ ಮಿತಿಗಳೇನು? ರಾಜಕಾರಣ ಮತ್ತು ಸಾಹಿತ್ಯಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಚಿಂತಿಸಿದವನು ಜಾರ್ಜ್ ಆರ್ವೆಲ್. ಅದರಲ್ಲೂ ಬರಹಗಾರನ ಪಾತ್ರದ ಬಗ್ಗೆ ಆರ್ವೆಲ್ ಎಚ್ಚರಿಕೆಯಿಂದ ಬರೆಯುತ್ತಾನೆ. ಸಾಹಿತಿಯೊಬ್ಬನು ವ್ಯಕ್ತಿಯಾಗಿ, ನಾಗರಿಕನಾಗಿ, ಹೊರಗಿನವನಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದು. ಸಭೆಗಳಲ್ಲಿ ಮಾತನಾಡುತ್ತ, ಕರಪತ್ರ ಹಂಚುವ ಮೂಲಕ ತನ್ನ ನಿಲುವುಗಳನ್ನು, ಆಯ್ಕೆಗಳನ್ನು ಸ್ಪಷ್ಟಪಡಿಸಬಹುದು. ಇವುಗಳ ನಡುವೆ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬರಹಗಾರನೊಬ್ಬ ಮಾಡಲೇಬೇಕಿರುವ ಕೆಲಸ, ಪಡೆದಿರಲೇಬೇಕಾದ ಎಚ್ಚರವಿದು: ತನ್ನ ಆಯ್ಕೆಯ ರಾಜಕೀಯ ಪಕ್ಷಕ್ಕೆ ಬರೆಯಬಾರದು. ತನ್ನ ಸಾಹಿತ್ಯಿಕ ನಿಷ್ಠೆಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಬೇಕು. ಚಂಪಾರಿಗೆ ಈ ಪರೀಕ್ಷೆಯನ್ನು ಎದುರಿಸುವಂತೆ ಕೇಳುವುದು ಉಚಿತ, ಮತ್ತಾವುದೂ ಅಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry