ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಮನೆಗಿದು ಪ್ರಶಸ್ತ ಕಾಲ

Last Updated 16 ಜೂನ್ 2018, 11:43 IST
ಅಕ್ಷರ ಗಾತ್ರ

ನರೆತ ಕೂದಲು, ಸುಕ್ಕುಗಟ್ಟಿದ ಮುಖ, ಜೀವನದ ಸಂಧ್ಯಾಕಾಲದಲ್ಲೊಂದು ಸ್ವಂತಸೂರಿನ ಕನಸು ಹೊತ್ತು ಹೊಸಮನೆಗೆ ಅಡಿ ಇಡುತ್ತಿದ್ದ ಕಾಲವದು. ಇದೇ ಒಂದೆರಡು ದಶಕಗಳ ಹಿಂದೆ ಮನೆ ಖರೀದಿಸುವವರ ಸರಾಸರಿ ವಯಸ್ಸು 50ರ ಆಸುಪಾಸು ಇರುತ್ತಿತ್ತು. ಅದರಲ್ಲೂ ನಿವೃತ್ತಿಯ ನಂತರ ಬರುವ ಹಣವನ್ನೆಲ್ಲ ಸುರಿದು ಮನೆಕೊಳ್ಳುವವರ ಸಂಖ್ಯೆಯೇ ಹೆಚ್ಚಿತ್ತು.

ಆದರೆ ಈಗ ಹಾಗಲ್ಲ, ಗರಿ–ಗರಿ ಬಟ್ಟೆ ತೊಟ್ಟು, ತಾಜಾ ಕನಸು ಹೊತ್ತು, ಜೀವನರಾಗದ ಆರಂಭದಲ್ಲೇ ತಮ್ಮದೆನ್ನುವ ಮನೆಬೇಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್‌ ಸೇರಿದಂತೆ ಭಾರತದ ಪ್ರಮುಖ ಮಹಾನಗರಗಳಲ್ಲಿ ಮನೆ ಖರೀದಿಸುವವರ ವಯೋಮಾನದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗಿದೆ. 28ರಿಂದ 38ರ ಆಸುಪಾಸಿನ ಯುವ ಜನಾಂಗ ಸ್ವಂತ ಮನೆಯಲ್ಲೇ ಹೊಸ ಬಾಳು ಆರಂಭಿಸುವ ತುಡಿತದಲ್ಲಿದೆ.

ಕಳೆದ ಮೂರು ದಶಕಗಳಿಂದ ಭಾರತೀಯ ಗೃಹ ಖರೀದಿದಾರರ ಪಟ್ಟಿಯಲ್ಲಿ ಹಿರಿಯರ ಸಂಖ್ಯೆ ಇಳಿಮುಖವಾಗುತ್ತಿದೆ. ಯುವವೃತ್ತಿಪರರು, ನವದಂಪತಿಗಳು ಪ್ರಮುಖ ಖರೀದಿದಾರರಾಗಿ ಪಾಳಿಯಲ್ಲಿ ಸ್ಥಾನಪಡೆದಿದ್ದಾರೆ. ಅಂಥವರಿಗಾಗಿಯೇ ರೂಪಿಸಿರುವ ‘ಸ್ಟಾರ್ಟರ್ಸ್‌ ಹೋಮ್‌’ ಪರಿಕಲ್ಪನೆ ಜನಪ್ರಿಯವಾಗುತ್ತಿದೆ.

ಸ್ಟಾರ್ಟರ್ಸ್‌ ಹೋಮ್‌

‘ಸ್ಟಾರ್ಟರ್ಸ್‌ ಹೋಮ್‌’ ಅಂದರೆ ಆರಂಭದ ಮನೆ. ಈಗ ತಾನೆ ಮದುವೆಯಾದ ದಂಪತಿಗಳು ತಮ್ಮ ಆರ್ಥಿಕ ಚೈತನ್ಯ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಪುಟ್ಟದೊಂದು ಮನೆಯ ಕನಸಿಗೆ ಕೈಚಾಚುತ್ತಿದ್ದಾರೆ. ಕೈಗೆಟುಕುವ ಬೆಲೆ ‘ಸ್ಟಾರ್ಟರ್ಸ್‌ ಹೋಮ್‌’ನ ಮೊದಲ ಆಕರ್ಷಣೆ. ಚಿಕ್ಕ ಕುಟುಂಬಕ್ಕೆ ಸಾಕಾಗುವಷ್ಟು ಗಾತ್ರ ಇದರ ಮುಖ್ಯ ಲಕ್ಷಣ. ₹30ರಿಂದ ₹50 ಲಕ್ಷದ ಬೆಲೆಮಿತಿಯಲ್ಲಿ 1200ರಿಂದ 1600 ಚದರಅಡಿ ವಿಸ್ತೀರ್ಣವಿರುವ ಮನೆಗಳನ್ನು ಈ ಸಾಲಿಗೆ ಸೇರಿಸಬಹುದು.

ಎರಡು ಬೆಡ್‌ರೂಮ್‌, ಎರಡು ಬಾತ್‌ರೂಮ್‌, ತುಸು ದೊಡ್ಡ ಹಾಲ್‌, ಓಪನ್‌ ಕಿಚನ್‌, ಒಂದು ಬಾಲ್ಕನಿ ಇರುವ ಮನೆಗಳಿವು. ಕೆಲವೊಮ್ಮೆ ಎರಡು ಬಾಲ್ಕನಿ ಹಾಗೂ ಒಂದು ಡೈನಿಂಗ್‌ ಹಾಲ್‌ ಸಹ ಇರಬಹುದು.

‘ಸ್ಟಾರ್ಟರ್ಸ್‌ ಹೋಮ್‌ ಗ್ರಾಹಕರು ಚಿಕ್ಕ ಮನೆಯೂ ದೊಡ್ಡದಾಗಿ ಕಾಣುವಂತಹ ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿನ ಒಲವು ತೋರುತ್ತಾರೆ. ಅಂತೆಯೇ ಓಪನ್‌ ಕಿಚನ್‌, ಓಪನ್‌ ಡೈನಿಂಗ್‌ ಹಾಲ್‌ ವಿನ್ಯಾಸಕ್ಕೆ ಈಗ ಹೆಚ್ಚಿನ ಬೇಡಿಕೆ ಇದೆ. ಬದುಕಿನ ಆರಂಭ ಹಂತದಲ್ಲಿರುವ ಶೇ 28ರಷ್ಟು ಜನರು 1,600 ಚದರ ಅಡಿ ಅಳತೆಯ ಮನೆಗಳಿಗೆ ಒಲವು ತೋರಿದ್ದಾರೆ’ ಎಂದು ಎನ್‌ಎಎಚ್‌ಬಿ (ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಹೋಮ್‌ ಬಿಲ್ಡರ್ಸ್‌) ಸಮೀಕ್ಷೆಯ ವರದಿ ತಿಳಿಸುತ್ತದೆ.

ಇತ್ತೀಚೆಗಿನ ಕೆಲವು ಬದಲಾವಣೆಗಳಿಂದ ಸ್ವಂತಮನೆ ಎಲ್ಲರಿಗೂ ಸುಲಭವಾಗಿದೆ. ವೃತ್ತಿಯನ್ನು ಆರಂಭಿಸಿ ಐದಾರು ವರ್ಷ ಕಳೆದ ದಂಪತಿ ತಮ್ಮ ಸಣ್ಣ ಉಳಿತಾಯ, ಪಿಎಫ್‌ ಹಣವನ್ನು ಉಪಯೋಗಿಸಿ, ಉಳಿದ ಹಣವನ್ನು ಬ್ಯಾಂಕ್‌ ಸಾಲ ಪಡೆಯುವ ಮೂಲಕ ಸ್ವಂತ ಮನೆಯನ್ನು ತಮ್ಮದಾಗಿಸಿಕೊಳ್ಳಬಹುದು.

ಅಧಿಕ ಸೇವಾವಧಿ, ಉತ್ತಮ ಸಂಬಳ, ಇಬ್ಬರ ಆದಾಯ ಇರುವ ಕಾರಣ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ನೀಡುವಲ್ಲಿ ಯುವ ವೃತ್ತಿಪರರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.

ಅಂತಿಮ ಆಯ್ಕೆ ನಿಮ್ಮದಾಗಲಿ

ಕನಸಿನಮನೆಯ ಮೊದಲ ಹೆಜ್ಜೆಯಾಗಿ ಅನೇಕರು ಆನ್‌ಲೈನ್‌ ಹುಡುಕಾಟ ಆರಂಭಿಸುತ್ತಾರೆ. ಮನೆ ಖರೀದಿಗೆ, ಮಾರಾಟಕ್ಕೆ, ಬಾಡಿಗೆಗೆಲ್ಲ ಆನ್‌ಲೈನ್‌ನಲ್ಲಿ ಸಾಕಷ್ಟು ವೆಬ್‌ಸೈಟುಗಳು ಕೆಲಸ ಮಾಡುತ್ತಿರುವುದರಿಂದ ಈ ಮೂಲಕ ಸಾಕಷ್ಟು ಮಾಹಿತಿಯೂ ಲಭ್ಯವಾಗುವುದು.

ನಿಮ್ಮ ವೈಯಕ್ತಿಕ ಆದ್ಯತೆ, ಅಭಿಪ್ರಾಯ, ಆಸಕ್ತಿ, ನೀವು ಕೆಲಸ ಮಾಡುವ ಕಚೇರಿ ಮುಂತಾದ ಸಂಗತಿಗೆ ಅನುಗುಣವಾಗಿ ಎಲ್ಲಾ ರೀತಿಯ ಸೌಲಭ್ಯ ಹಾಗೂ ಸಂಪರ್ಕಗಳನ್ನು ಗಮನಿಸಿ ಒಂದು ಪ್ರದೇಶವನ್ನು ಆಯ್ಕೆ ಮಾಡಿ. ಅದಾದ ಮೇಲೆ ಆ ವಲಯದಲ್ಲಿ ವರ್ಷಗಳಿಂದ ವಾಸವಿರುವ ನಿಮ್ಮ ಸಹೋದ್ಯೋಗಿಗಳು, ಸ್ನೇಹಿತರು, ಬಂಧುಗಳ ಅಭಿಪ್ರಾಯ ಕೇಳಿ. ಆದರೆ ಕೊನೆಯಲ್ಲಿ ನಿಮ್ಮ ನಿರ್ಧಾರವೇ ಅಂತಿಮವಾಗಬೇಕು.

ಬಜೆಟ್ ನಿರ್ಧರಿಸಿ

ಯುವ ಖರೀದಿದಾರರು ತಮ್ಮ ಪ್ರಸ್ತುತ ಮತ್ತು ಭವಿಷ್ಯದ ಹಣಕಾಸು ಸ್ಥಿತಿಗತಿಗಳ ಬಗ್ಗೆ ಸರಿಯಾಗಿ ಲೆಕ್ಕಾಚಾರ ಹಾಕಬೇಕು. ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಮನೆ ಖರೀದಿಗೆ ಎಷ್ಟು ಖರ್ಚು ಮಾಡಬಹುದು ಎನ್ನುವುದನ್ನು ಮೊದಲು ನಿರ್ಧರಿಸಿ. ಒಂದೇ ಆದಾಯವೋ, ಎರಡು ಆದಾಯವೋ, ವೇತನವಲ್ಲದೆ ಬೇರೆ ಆದಾಯ ಮೂಲವೇನಾದರೂ ಇದೆಯೇ, ಪಾಲಕರ ಆರ್ಥಿಕ ನೆರವು ಸಿಗಬಹುದೇ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಖರ್ಚು–ವೆಚ್ಚ, ಇತರೆ ಆರ್ಥಿಕ ಜವಾಬ್ದಾರಿಗಳು, ಬೇರೆ ಸಾಲಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಇತರ ಸಾಲಗಳಿದ್ದಲ್ಲಿ ಅದರ ಕಂತು ಹಾಗೂ ಗೃಹಸಾಲದ ಇಎಂಐ ಕಳೆದು ಆರಾಮಾಗಿ ಸಂಸಾರ ಸಾಗಿಸುವಷ್ಟು ಹಣ ಕೈಲಿ ಉಳಿಯುವಂತಿರಬೇಕು. ಹೊಸ ಸಂಸಾರವೆಂದ ಮೇಲೆ ಇನ್ನೂ ಅನೇಕ ಖರ್ಚುಗಳಿರುತ್ತವೆ. ನಂತರದ ದಿನಗಳಲ್ಲಿ, ಮಕ್ಕಳನ್ನು ಪಡೆಯುವ, ಪೋಷಣೆ ಮಾಡುವ ಜವಾಬ್ದಾರಿಯೂ ಹೆಗಲೇರುವುದಿರುತ್ತದೆ. ಇದಕ್ಕಾಗಿ ಈ ಎಲ್ಲವುಗಳ ಬಗ್ಗೆ ಮೊದಲೇ ಯೋಚಿಸಿ ನಡೆಯುವುದು ಉತ್ತಮ.

ಕಳೆದೊಂದು ವರ್ಷದಿಂದ ಬಹುತೇಕ ಡೋಲಾಯನಮಾನ ಸ್ಥಿತಿಯಲ್ಲಿ ಉಳಿದಿದ್ದ ರಿಯಾಲ್ಟಿ ಕ್ಷೇತ್ರ ಇದೀಗ ಸ್ಥಿರತೆಯ ಹಂತ ತಲುಪಿದೆ. ಇನ್ನು ಕೆಲವರ್ಷ ದೊಡ್ಡಮಟ್ಟದ ಏರಿಳಿತ ಉಂಟಾಗಲಿಕ್ಕಿಲ್ಲ ಎಂಬ ನಿರೀಕ್ಷೆ ಇದೆ. ಗೃಹಸಾಲದ ಬಡ್ಡಿದರವೂ ಇಳಿಮುಖವಾಗುತ್ತಿದೆ. ಹೀಗಾಗಿ ಯುವ ವೃತ್ತಿಪರರು ತಮ್ಮ ಶಕ್ತಿ–ಸಾಮರ್ಥ್ಯ, ಆಸಕ್ತಿ–ಅಭಿರುಚಿಗೆ ಅನುಗುಣವಾಗಿ ಪುಟ್ಟದೊಂದು ಮನೆ ಮಾಡಿಕೊಳ್ಳಲು ಇದು ಸಕಾಲವಾಗಿದೆ.

**

ಪಶ್ಚಿಮ ಬೆಂಗಳೂರಿನಲ್ಲಿ ಆದ್ಯತೆ

ತಮ್ಮ ಮೊದಲ ಮನೆಯ ಕನಸು ಕಾಣುತ್ತಿರುವ ಯುವ ಸಮುದಾಯಕ್ಕೆ ‘ಸ್ಟಾರ್ಟರ್ಸ್ ಹೋಮ್’ ಹೇಳಿ ಮಾಡಿಸಿದ ಪರಿಕಲ್ಪನೆ. ತ್ವರಿತ ಆರ್ಥಿಕ ಬೆಳವಣಿಗೆ, ಏರುತ್ತಿರುವ ಆದಾಯಮಟ್ಟ, ಹಣಕಾಸಿನ ಸುಲಭ ಲಭ್ಯತೆ ಯುವ ಜನತೆ ಜೀವನದ ಆರಂಭದ ದಿನಗಳಲ್ಲಿಯೇ ಸ್ವಂತ ಮನೆಯ ಬಗ್ಗೆ ಆಲೋಚಿಸುವಂತೆ ಮಾಡುತ್ತಿವೆ.

ತುಮಕೂರು ರಸ್ತೆ ಸೇರಿದಂತೆ ಹೊಸ ಪಶ್ಚಿಮ ಬೆಂಗಳೂರು ಎಂದು ಕರೆಯಲ್ಪಡುವ ಅನೇಕ ಸ್ಥಳಗಳಲ್ಲಿ ಈ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಮನೆ ತುಸು ಚಿಕ್ಕದಿದ್ದರೂ ಆರಾಮದಾಯಕ ಜೀವನಕ್ಕೆ ಅನುವು ಮಾಡಿಕೊಡುವಂತಿರಬೇಕು. ಅಂದರೆ ನಗರದ ಜಂಜಾಟದಿಂದ, ಗದ್ದಲದಿಂದ ತುಸು ದೂರದಲ್ಲಿರಲಿ ಆದರೆ ಉತ್ತಮ ಸೌಲಭ್ಯಗಳು ಮತ್ತು ಸುಧಾರಿತ ಮೂಲಭೂತ ಸೌಕರ್ಯಗಳು ಇರುವ ಮನೆಗಳು ಬೇಕು ಎಂದು ಬಯಸುತ್ತಾರೆ. ನಗರಕ್ಕೆ ಸುಲಭ ಸಂಪರ್ಕ ಮತ್ತು ಮೆಟ್ರೋ ರೈಲು, ರಿಂಗ್ ರಸ್ತೆ ಸಂಪರ್ಕ ಇರುವ ಕಡೆ ಈ ವರ್ಗದ ಯೋಜನೆಗಳಿಗೆ ಸಾಕಷ್ಟು ಬೇಡಿಕೆ ಇದೆ.

–ರಜೀಬ್ ದಾಶ್‌,

ಹೆಡ್ ಕಾರ್ಪೊರೇಟ್ ಮಾರ್ಕೆಟಿಂಗ್, ಟಾಟಾ ಹೌಸಿಂಗ್

**

ಆಸಕ್ತಿಗನುಗುಣವಾಗಿ ಯೋಜನೆ

ಕಳೆದ ಎರಡು ದಶಕಗಳಲ್ಲಿ, ಬೆಂಗಳೂರಿನಲ್ಲಿ ವೈಟ್-ಕಾಲರ್ ಜನರ ವಲಸೆ ಪ್ರಮಾಣ ಹೆಚ್ಚಿದೆ. ವಿಶೇಷವಾಗಿ ಐಟಿ ಉದ್ಯಮದಲ್ಲಿ ಹಾಗೂ ಇತರೆ ವಲಯಗಳ ಉದ್ಯೋಗಾವಕಾಶಗಳ ಹೆಚ್ಚಳದಿಂದ ಈ ಬೆಳವಣಿಗೆ ಕಂಡುಬರುತ್ತಿದೆ. ಈ ಬಹುಪಾಲು ವಲಸಿಗರು 25 ರಿಂದ 35 ವಯಸ್ಸಿನ ಯುವಜನರೇ ಆಗಿರುತ್ತಾರೆ.

ಅವರಲ್ಲಿ ಹೆಚ್ಚಿನವರು ತಮ್ಮ ಸ್ವಂತ ಮನೆಯ ಮೇಲೆ ಹೂಡಿಕೆ ಮಾಡುವುದರ ಮೂಲಕ ನಗರದಲ್ಲಿ ನೆಲೆಯೂರಲು ಬಯಸುತ್ತಾರೆ. ಕೈಗೆಟುಕುವ ಬೆಲೆಯಲ್ಲಿ ಸಕಲ ಸೌಲಭ್ಯವಿರುವ ‘ಸ್ಟಾಟರ್ಸ್ ಹೋಮ್’ ಇವರ ಆಕರ್ಷಣೆ. ಹೀಗಾಗಿ ನಾವು ಈ ವಿಭಾಗದ ಖರೀದಿದಾರರ ಆಸಕ್ತಿ ಅಭಿರುಚಿಗಳನ್ನು ತಿಳಿದುಕೊಂಡು ಯೋಜನೆಗಳನ್ನು ರೂಪಿಸಿದ್ದೇವೆ.

ಈ ಹೊಸ ಗೃಹ ಖರೀದಿದಾರ ಬಯಕೆಗಳಿಗೆ ಅನುಗುಣವಾಗಿ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಅಡಿಯಲ್ಲಿ ಕೈಗೆಟುಕುವ ಬೆಲೆಯ ಪ್ರೀಮಿಯಂ ಮನೆಗಳನ್ನು ಪೂರೈಸುತ್ತಿದ್ದೇವೆ. ವಾಸ್ತವವಾಗಿ, ಐದು ವರ್ಷಗಳಲ್ಲಿ ಕೈಗೆಟುಕುವ ವಸತಿ ಯೋಜನೆಗಳ ಬೇಡಿಕೆ ದ್ವಿಗುಣವಾಗಿದೆ. ಅಲ್ಲದೇ, ಈ ವಿಭಾಗದ ವಸತಿಗಳು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇನ್ನೂ ದೊಡ್ಡ ಅಲೆಯನ್ನು ಸೃಷ್ಟಿಸಲಿವೆ ಎಂದು ನಾವು ನಂಬಿದ್ದೇವೆ.

-ಆಶಿಶ್ ಪುರವಂಕರ, ಪುರವಂಕರ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT