7

‘ಕಪಾಲಿ’ ಚಿತ್ರಮಂದಿರ ಸಿದ್ಧವಾಗಿದ್ದು ಹೀಗೆ

Published:
Updated:
‘ಕಪಾಲಿ’ ಚಿತ್ರಮಂದಿರ ಸಿದ್ಧವಾಗಿದ್ದು ಹೀಗೆ

ವಾಸ್ತುಶಿಲ್ಪದ ಆಯಾಮದಿಂದ ನೋಡಿದರೆ ನಗರದ ಕಪಾಲಿ ಚಿತ್ರಮಂದಿರ ಇಂದಿಗೂ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. 60 ಸಾವಿರ ಚದರ ಅಡಿ ಜಾಗದಲ್ಲಿ ಇರುವ ಈ ಚಿತ್ರಮಂದಿರ ಐಷಾರಾಮಿ ಬಂಗಲೆ ರೀತಿಯಲ್ಲಿದೆ. ಕಾಲಾಂತರದಲ್ಲಿ ಹಲವು ಮಾರ್ಪಾಡುಗಳಿಗೆ ಒಳಪಟ್ಟಿದೆ. ಚಿತ್ರಮಂದಿರದ ಒಳಾಂಗಣ 125 ಚದರಡಿ ಉದ್ದ, 102 ಚದರಡಿ ಅಗಲವಿದ್ದು, ಚಿಕ್ಕದೊಂದು ಕ್ರೀಡಾಂಗಣದಂತಿರುವುದು ವಿಶೇಷ.

ದೇಶದ ಮೊದಲ ‘ಸಿನಿ‌ರೆಮಾ’ (ಮೂರು ಪ್ರೊಜೆಕ್ಟರ್‌ಗಳ ಮೂಲಕ ಸಿನಿಮಾ ತೋರಿಸುವ ವಿಧಾನ) ತಂತ್ರಜ್ಞಾನ ಬಳಕೆಯ ಅತಿದೊಡ್ಡ ಚಿತ್ರಮಂದಿರ. 1500 ಆಸನ ವ್ಯವಸ್ಥೆ ಹೊಂದಿದ್ದು, 83.8 ಅಡಿ ಎತ್ತರ, 31.4 ಅಡಿ ಅಗಲದ ಪರದೆಯು 1,100 ಆಸನಗಳ ಸಾಮರ್ಥ್ಯ ಇತ್ತು. ಉತ್ತಮ ಹವಾನಿಯಂತ್ರಿತ, ಗಾಳಿ – ಬೆಳಕಿನ ಲಾಬಿ ಒಳಗೊಂಡ ಸುಸಜ್ಜಿತ ಕಟ್ಟಡ ಇದಾಗಿದೆ.

ಆಧುನಿಕ ತಂತ್ರಜ್ಞಾನ ಅಳವಡಿಸಿದ್ದ ಚಿತ್ರಮಂದಿರದಲ್ಲಿ 35 ಎಂ.ಎಂ. ಪ್ರೊಜೆಕ್ಟರ್ ಮೂಲಕ 70 ಎಂ.ಎಂ. ಸ್ಕ್ರೀನ್‌ಗಿಂತಲೂ ದೊಡ್ಡದಾಗಿ ಚಿತ್ರ ಪ್ರದರ್ಶಿಸಬಹುದಾಗಿತ್ತು. ಇಂತಹ ಚಿತ್ರಮಂದಿರ ದಕ್ಷಿಣ ಏಷ್ಯಾದಲ್ಲಿ ಬೆಂಗಳೂರು ಬಿಟ್ಟರೆ, ಕರಾಚಿ ಮತ್ತು ಕೊಲೊಂಬೊದಲ್ಲಿ ಮಾತ್ರ ಇದೆ.

ಮೂರು ವರ್ಷಗಳ ಕಾಲ ನಿರ್ಮಾಣವಾದ ಈ ಕಟ್ಟಡಕ್ಕೆ 500 ಮಂದಿ ಕಾರ್ಮಿಕರು ಹಗಲಿರುಳು ದುಡಿದಿದ್ದಾರೆ. 1000 ಟನ್ ಸಿಮೆಂಟ್, 150 ಟನ್ ಸ್ಟೀಲ್ ಬಳಕೆಯಾಗಿದ್ದು, ನಿರ್ಮಾಣ ವೆಚ್ಚ ₹ 32 ಲಕ್ಷ.

‘ರಾಜಗೋಪಾಲ್ ಅವರು 40 ವರ್ಷಗಳ ಕಾಲ ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದು ಐಷಾರಾಮಿ ಚಿತ್ರಮಂದಿರ ನಿರ್ಮಾಣ ಮಾಡಿ, ಇತಿಹಾಸ ಸೃಷ್ಟಿಸಿದರು’ ಎಂದು ಚಿತ್ರಮಂದಿರ ನಿರ್ಮಾಣದ ಹೊಣೆ ಹೊತ್ತಿದ್ದ ಸಿವಿಲ್ ಎಂಜಿನಿಯರ್ ವೈ.ಎಂ.ರಾಮು ಅಂದಿನ ನೆನಪುಗಳನ್ನು ಮೆಲುಕು ಹಾಕಿದರು.

ಏರ್ ಕೂಲಿಂಗ್, ಏರ್ ಕಂಡಿಷನರ್, ಫಾಲ್ಸ್ ಸೀಲಿಂಗ್, ವಾಲ್ ಪೆನ್ಸೆಲಿಂಗ್, ಪ್ಲಾಸ್ಟರ್ ಆಫ್ ಪ್ಯಾರೀಸ್, ಫ್ಲೆಕ್ಸಿ ಗ್ಲಾಸ್ ಫಾಲ್ಸ್ ಸೀಲಿಂಗ್, ಥರ್ಮಕೋಲ್ ಫಾಲ್ಸ್, ಸೀಲಿಂಗ್ ಅಲ್ಯುಮಿನಿಯಂ ಬೀಡ್ ಲಾಕ್,  ಬಾಗಿಲು, ಕಿಟಕಿ, ಪೀಠೋಪಕರಣ, ಅಲಂಕಾರಿಕ ಕನ್ನಡಿಗಳು ಸೇರಿದಂತೆ ಕಟ್ಟಡಕ್ಕೆ ಬೇಕಾದ ವಸ್ತುಗಳನ್ನು ಚೆನ್ನೈ, ಮುಂಬೈ ಸೇರಿದಂತೆ ದೇಶದ ಹಲವು ನಗರಗಳಿಂದ ತರಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಅವರು.

ಮುಂಬೈನ ರಮ್ಜದ್ ಎಂಬ ವಾಸ್ತುಶಿಲ್ಪಿ ಕಟ್ಟಡಕ್ಕೆ ಹೊಸತನ ತಂದರು. ತಾಂತ್ರಿಕವಾಗಿ ಎಂಜಿನಿಯರ್‌ಗಳು ಇದಕ್ಕೆ ರೂಪ ನೀಡಿದರು. ಚಿತ್ರಮಂದಿರದ ಸೌಂಡ್ ಸಿಸ್ಟಂ, ಅರಾಮದಾಯಕ ಕುರ್ಚಿ ವ್ಯವಸ್ಥೆ ಆಗಿನ ಪ್ರೇಕ್ಷಕರನ್ನು ಹುಬ್ಬೇರುವಂತೆ ಮಾಡಿತು ಎಂದು ನಿರ್ಮಾಣ ಹಿಂದಿನ ರೋಚಕತೆಯನ್ನು ವಿವರಿಸುತ್ತಾರೆ ರಾಮು.

ಆ ಕಾಲಕ್ಕೆ ಸರ್ವಶ್ರೇಷ್ಠ, ಸುಸಜ್ಜಿತ, ವೈಶಿಷ್ಟ್ಯಪೂರ್ಣವಾಗಿ ನಿರ್ಮಾಣಗೊಂಡ ಚಿತ್ರಮಂದಿರ ಜನವರಿ 20, 1968ರಂದು ಅಂದಿನ ಉಪ ಪ್ರಧಾನಿ ಮೊರಾರ್ಜಿ ದೇಸಾಯಿ, ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರಿಂದ ಉದ್ಘಾಟನೆಗೊಂಡಿತು.

ಈಗ ₹150 ಕೋಟಿ ಬೆಲೆ ಬಾಳುವ ಜಾಗದಲ್ಲಿರುವ ಚಿತ್ರಮಂದಿರವನ್ನು ಕೆಡವಾಲಾಗುತ್ತದೆ. ಆ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕನ್ನಡಿಗರ ‍ಪಾಲಿಗೆ ‘ಕಪಾಲಿ’ ಇನ್ನುಮುಂದೆ ನೆನಪಾಗಿ ಮಾತ್ರ ಉಳಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry