3

ನೂರರ ಇಂದಿರಾಗೆ ಇಂತಿ ನಮಸ್ಕಾರ

ಸುಧೀಂದ್ರ ಬುಧ್ಯ
Published:
Updated:
ನೂರರ ಇಂದಿರಾಗೆ ಇಂತಿ ನಮಸ್ಕಾರ

ಪ್ರಿಯ ಇಂದು,

ಬಾಲ್ಯದ ದಿನಗಳನ್ನು ನೇರವಾಗಿ ನಿಮ್ಮ ಸ್ಮೃತಿಗೆ ತರಲು ಹೀಗೆ ಆರಂಭಿಸುವುದೇ ಸೂಕ್ತವಲ್ಲವೇ? ನಿಮ್ಮ ತಂದೆ ಪಂಡಿತ್ ಜವಾಹರಲಾಲರು ನಿಮ್ಮನ್ನು ಕರೆಯುತ್ತಿದ್ದದ್ದು ಹೀಗೆಯೇ. ಪಕ್ಕದಲ್ಲಿ ಕೂತು ಕತೆಗಳ ಜೊತೆ ಲೋಕವಾರ್ತೆಯನ್ನೂ ಹೇಳುತ್ತಿದ್ದ ಅಪ್ಪ, ಬರಬರುತ್ತಾ ರಾಜಕೀಯದಲ್ಲಿ ಮಗ್ನರಾದರು. ಸಭೆ, ಭಾಷಣ, ಬರವಣಿಗೆಯ ಜೊತೆ ದೇಶ ಸಂಚಾರ. ಇತ್ತ ಅಮ್ಮ ಕಮಲಾ ನೆಹರೂ ಹಾಸಿಗೆ ಹಿಡಿದಿದ್ದರು. ಆನಂದ ಭವನದಂತಹ ಅರಮನೆಯಲ್ಲಿ ನೀವು ಒಂಟಿ. ಮನೆಯಲ್ಲೇ ಪಾಠ ಪ್ರವಚನ ಆಗುತ್ತಿತ್ತು. ನಂತರ ಟ್ಯಾಗೋರರ ಶಾಂತಿನಿಕೇತನದ ಪ್ರವೇಶವಾಯಿತು. ಅಲ್ಲೇ ರವೀಂದ್ರರು ನಿಮ್ಮ ಹೆಸರಿಗೆ ಪ್ರಿಯದರ್ಶಿನಿ ಎಂಬ ಉಳಿದರ್ಧವನ್ನು ಸೇರಿಸಿದ್ದು. ಅದಾದ ಕೆಲ ವರ್ಷಗಳಲ್ಲಿ ಅಮ್ಮ ತೀರಿಕೊಂಡರು. ನೀವು ಆಕ್ಸ್‌ಫರ್ಡ್‌ನತ್ತ ನಡೆದಿರಿ. ಇತಿಹಾಸ ನಿಮ್ಮ ಇಷ್ಟದ ವಿಷಯವಾಗಿತ್ತು.

ಬಹುಶಃ ನಿಮಗೆ ಇತಿಹಾಸದ ಬಗ್ಗೆ ಆಸ್ಥೆ ಬೆಳೆಯಲು ನಿಮ್ಮ ತಂದೆಯೇ ಕಾರಣ. ಅವರು ನಿಮಗೆ ಬರೆದ ಮೊದಲ ಪತ್ರದಲ್ಲಿ ‘ಪ್ರಿಯ ಇಂದು, ನಾವಿಬ್ಬರೂ ಜೊತೆಯಲ್ಲಿರುವಾಗ ನೀನು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದೆ. ನಾನು ಉತ್ತರಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಇದೀಗ ನೀನು ಮಸೂರಿಯಲ್ಲಿ ಮತ್ತು ನಾನು ಅಹಮದಾಬಾದ್‌ನಲ್ಲಿ ಇದ್ದೇವೆ. ಪತ್ರಗಳ ಮೂಲಕ ನಮ್ಮ ಸಂಭಾಷಣೆಯನ್ನು ಮುಂದುವರೆಸೋಣ’ ಎಂದು ಬರೆದಿದ್ದರು. ಹಾಗೆ ಆರಂಭವಾದ ನಿಮ್ಮ ಮತ್ತು ನೆಹರೂರ ಪತ್ರಸಂಭಾಷಣೆಯಲ್ಲಿ ಏನೆಲ್ಲಾ ಪ್ರಸ್ತಾಪವಾದವು! ಸೃಷ್ಟಿ ಪ್ರಕ್ರಿಯೆಯಿಂದ ಹಿಡಿದು, ಜೀವ ವಿಕಸನ, ಪ್ರಾಣಿ ಪಕ್ಷಿ, ಆದಿಮಾನವನ ಆಹಾರ, ಜೀವನಕ್ರಮ, ನಾಗರಿಕತೆ ಬೆಳೆದ ಪರಿ, ವಿವಿಧ ಭಾಷೆಗಳು ಬಳಕೆಗೆ ಬಂದ ಬಗೆ, ದೇಶ ವಿದೇಶಗಳ ಸಂಗತಿ ಹೀಗೆ ಪುರಾಣದ ಕತೆಯನ್ನೂ, ಪ್ರಾಪಂಚಿಕ ಜ್ಞಾನವನ್ನೂ ನೆಹರೂ ನಿಮಗೆ ದಾಟಿಸಲು ಯತ್ನಿಸಿದರು. ಈ ವಿಷಯದಲ್ಲಿ ನೆಹರೂರಂತಹ ತಂದೆ ಎಲ್ಲರಿಗೂ ಸಿಕ್ಕರೆ ಎಷ್ಟುಚೆನ್ನ ಎನಿಸುತ್ತದೆ.

ಇಂಗ್ಲೆಂಡಿನಲ್ಲಿದ್ದಾಗ ನಿಮಗೆ ಸೌಖ್ಯವಿರಲಿಲ್ಲ. ಅರ್ಧಕ್ಕೇ ಓದು ಬಿಡಬೇಕಾಯಿತು. ಅಲ್ಲೇ ಅಲ್ಲವೇ ನಿಮಗೆ ಫಿರೋಜ್ ಗಾಂಧಿಯವರಲ್ಲಿ ಪ್ರೇಮ ಅಂಕುರಿಸಿದ್ದು? ಫಿರೋಜ್ ಅವರನ್ನು ವರಿಸಿದ ನಂತರ ನಿಮ್ಮ ಹೆಸರಿಗೆ ಗಾಂಧಿ ಎಂಬ ಕುಲನಾಮ ಅಂಟಿಕೊಂಡಿತು. ರಾಜೀವ್, ಸಂಜಯ್ ಬೆಳೆದರು. ವೈವಾಹಿಕ ಜೀವನದಲ್ಲಿ ಆದರ್ಶಗಳೇನೂ ಇರಲಿಲ್ಲ. ನೀವು ತಂದೆಯೊಟ್ಟಿಗೆ ದೇಶ ವಿದೇಶಗಳನ್ನು ಸಂಚರಿಸಿದಿರಿ. ನಿಮ್ಮಲ್ಲಿ ರಾಜಕೀಯ ಆಕಾಂಕ್ಷೆಯ ಕನಸು ಚಿಗುರಿದ್ದು, ಅಧಿಕಾರದ ರುಚಿ ಹತ್ತಿದ್ದು ಆ ಕಾಲಘಟ್ಟದಲ್ಲೇ ಅಲ್ಲವೇ?

ಇಂದಿರಮ್ಮ, ನೀವು ಖಾನ್‌ ಅಬ್ದುಲ್ ಗಫಾರ್ ಖಾನರ ತೆಕ್ಕೆಯಲ್ಲಿರುವ, ಗಾಂಧೀಜಿಗೆ ಒರಗಿ ಕುಳಿತ, ಟ್ಯಾಗೋರರ ಬಗಲಲ್ಲಿ ನಿಂತ ಭಾವಚಿತ್ರಗಳನ್ನು ನೋಡುವಾಗೆಲ್ಲಾ ಈ ಮುಗ್ಧ ಮುಖದ, ಮೌನ ಧರಿಸಿದ್ದ ಯುವತಿಯಲ್ಲಿ ಅಷ್ಟೆಲ್ಲಾ ಜಾಣ್ಮೆ, ಛಲ, ಸ್ಥೈರ್ಯವಿತ್ತೇ ಎಂದು ಅಚ್ಚರಿಯಾಗುತ್ತದೆ. ಪತ್ರಕರ್ತ ಇಂದರ್ ಮಲ್ಹೋತ್ರ ನಿಮ್ಮ ಬಗ್ಗೆ ಬರೆಯುತ್ತಾ ‘ಭಾರತ ಇಂದಿರಾರ ಎರಡು ಗುಣಸ್ವಭಾವವನ್ನು ಮರೆಯಲಾರದು. ಒಂದು, ರಾಷ್ಟ್ರದ ಏಕತೆ, ಸರ್ವಾಭೌಮತ್ವ, ಘನತೆಯ ವಿಷಯ ಬಂದಾಗ ಅವರು ಎಂದಿಗೂ ರಾಜಿಯಾಗಲಿಲ್ಲ. ಎರಡು, ಬಡವರ ಬಗ್ಗೆ ಅವರಿಗೆ ಕಾಳಜಿಯಿತ್ತು’ ಎಂದಿದ್ದಾರೆ. ಈ ಎರಡರ ಜೊತೆ ‘ಪುತ್ರ ವ್ಯಾಮೋಹ, ಅಧಿಕಾರ ಲಾಲಸೆಯಿಂದ ಜನಪ್ರಿಯತೆಯಷ್ಟೇ, ಅಪಕೀರ್ತಿಯನ್ನೂ ಗಳಿಸಿದರು’ ಎಂದು ಸೇರಿಸಿದರೆ ನಿಮ್ಮ ವ್ಯಕ್ತಿತ್ವವನ್ನು ಪೂರ್ತಿ ಹಿಡಿದಂತಾಗುತ್ತದೆ.

ಹಾಗೆ ನೋಡಿದರೆ, ನೀವು ಪ್ರಧಾನಿಯಾಗುವ ಹೊತ್ತಿಗೆ ಕಾಂಗ್ರೆಸ್ ಪಕ್ಷದೊಳಗೆ ಹಿರಿಯರ ‘ಸಿಂಡಿಕೇಟ್’ ಪ್ರಾಬಲ್ಯ ಸಾಧಿಸಿತ್ತು. ನಿಮಗೆ ಪೈಪೋಟಿ ನೀಡಲು ಮೊರಾರ್ಜಿ ದೇಸಾಯಿ ಇದ್ದರು. ಆದರೂ ಅವರ ಲೆಕ್ಕಾಚಾರಗಳನ್ನು ಮಣಿಸಿ ನಾಯಕತ್ವ ಉಳಿಸಿಕೊಂಡಿರಿ, ಪ್ರಧಾನಿಯಾದಿರಿ. ನಿಮ್ಮ ರಾಜಕೀಯ ಚಾಣಾಕ್ಷತೆಯನ್ನು ರಾಷ್ಟ್ರಪತಿ ಚುನಾ

ವಣೆಯಲ್ಲಿ ತೋರಿಸಿದಿರಿ. ‘ಆತ್ಮಸಾಕ್ಷಿಗೆ ಅನುಗುಣವಾಗಿ ಮತ’ ಎಂದು ಕಾಂಗ್ರೆಸ್ಸಿಗರು ಅಡ್ಡ ಮತದಾನ ಮಾಡಿದಾಗ, ‘ಸಿಂಡಿಕೇಟ್’ ಹಿರಿಯರೆಲ್ಲರೂ ಸೇರಿ ನಿಲ್ಲಿಸಿದ್ದ ಅಭ್ಯರ್ಥಿ ಸೋತರು. ನಿಮ್ಮ ಆಣತಿಯಿಲ್ಲದೇ ಏನೂ ನಡೆಯದು ಎಂದು ನೀವು ತೋರಿಸಿದ್ದಿರಿ. ನಂತರದ ಚುನಾವಣೆ ಗೆಲ್ಲುವುದು ಕಷ್ಟವಾಗಲಿಲ್ಲ. ವಿರೋಧದ ನಡುವೆಯೂ ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿಗೆ ಸುಗ್ರೀವಾಜ್ಞೆ, ಸಂವಿಧಾನ ತಿದ್ದುಪಡಿ ಆಯಿತು. ನಿಮ್ಮ ವಿರೋಧಿಗಳು ‘ಇಂದಿರಾ ಹಟಾವೊ’ ಎಂದದ್ದಕ್ಕೆ ನೀವು ‘ಗರೀಬಿ ಹಟಾವೊ’ ಎಂದಿರಿ.

ಇಂದಿರಮ್ಮ, ಭಾರತ ಅಣುಬಾಂಬ್ ಹೊಂದುವತ್ತ ಅಡಿಯಿಟ್ಟದ್ದನ್ನು ನೆನಪಿಸಿಕೊಳ್ಳಲೇಬೇಕು. 1964ರ ಅಕ್ಟೋಬರ್ 16ರಂದು ನೆರೆಯ ಚೀನಾ, ಅಣ್ವಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಸಹಜವಾಗಿಯೇ ಭಾರತದ ಎದೆಬಡಿತ ಹೆಚ್ಚಿತು. ಅಣ್ವಸ್ತ್ರ ಯೋಜನೆಯ ಹೊಣೆಗಾರಿಕೆಯನ್ನು ಡಾ. ಹೋಮಿ ಜೆ. ಭಾಭಾ ಅದಾಗಲೇ ಹೆಗಲೇರಿಸಿಕೊಂಡಿದ್ದರು. ಆದರೆ 1966ರ ಜನವರಿಯಲ್ಲಿ ವಿಮಾನ ಅಪಘಾತದಲ್ಲಿ ಅವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. 1972ರಲ್ಲಿ ನಿಕ್ಸನ್ ಮತ್ತು ಮಾವೊ ಜಿಡಾಂಗ್ ಹಸ್ತಲಾಘವ ಮಾಡಿ ಅಪ್ಪಿಕೊಂಡಾಗ, ನೀವು ಭಾರತೀಯ ವಿಜ್ಞಾನಿಗಳ ಸಭೆಯಲ್ಲಿ ಅಣ್ವಸ್ತ್ರ ಪರೀಕ್ಷೆಯ ಸಿದ್ಧತೆಯನ್ನು ತೀವ್ರಗೊಳಿಸುವಂತೆ ಆದೇಶ ನೀಡಿದಿರಿ. ಪಶ್ಚಿಮ ದೇಶಗಳ ವಿರೋಧ ಮತ್ತು ಕಣ್ಗಾವಲ ನಡುವೆ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ.

ಇನ್ನು, ಬಾಂಗ್ಲಾ ವಿಮೋಚನಾ ಕದನ! ಪಾಕಿಸ್ತಾನವು ಈಶಾನ್ಯ ಭಾರತದಲ್ಲಿ ವಿಭಜನೆಯ ಬೀಜ ಬಿತ್ತುತ್ತಿದ್ದಕ್ಕೆ ಪ್ರತಿಯಾಗಿ ಭಾರತ, ಪಶ್ಚಿಮ ಪಾಕಿಸ್ತಾನದ ಅಳಲಿಗೆ ಕಿವಿ ಕೊಡುವ ಕೆಲಸ ಮಾಡಿತು. 1970ರ ಚುನಾವಣೆಯಲ್ಲಿ ಶೇಖ್‌ ಮುಜಿಬುರ್ ರೆಹಮಾನ್ ಪಶ್ಚಿಮ ಪಾಕಿಸ್ತಾನದಲ್ಲಿ ಮೇಲುಗೈ ಸಾಧಿಸಿದರು. ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿ ನಡುವಿನ ತಿಕ್ಕಾಟ ಉಲ್ಬಣಿಸಿತು. ಹತ್ಯಾಕಾಂಡ ನಡೆಯಿತು. ಭೀತಿಯಿಂದ ಬಂಗಾಳಿ ಹಿಂದೂಗಳು ಸಾಗರೋಪಾದಿಯಲ್ಲಿ ಭಾರತದತ್ತ ವಲಸೆ ಬಂದರು. ಯುದ್ಧಕ್ಕೆ ಮುಂದಾಗದೇ ಬೇರೆಯ ಆಯ್ಕೆಗಳಿರಲಿಲ್ಲ. ಆದರೆ ನೀವು ನಿಮ್ಮ ತಂದೆಯಂತೆ ಆತುರಕ್ಕೆ ಮೂಗು ಕೊಯ್ದುಕೊಳ್ಳಲಿಲ್ಲ. 1971ರ ಮಾರ್ಚ್ ತಿಂಗಳು ಯುದ್ಧಕ್ಕೆ ಸೂಕ್ತವಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಮಾಣೆಕ್ ಷಾ ಹೇಳಿದರು, ನವೆಂಬರ್-ಡಿಸೆಂಬರ್ ತನಕ ಯುದ್ಧವನ್ನು ಮುಂದೂಡುವುದು ಒಳಿತು, ಚಳಿಗಾಲದಲ್ಲಾದರೆ ಪಾಕಿಸ್ತಾನಕ್ಕೆ ಚೀನಾ ನೆರವಾಗುವುದು ಕಷ್ಟವಾಗುತ್ತದೆ ಎಂಬ ಮೌಲಿಕ ಸಲಹೆ ಇತ್ತರು. ನೀವು ಆಲಿಸಿದಿರಿ. ಅಮೆರಿಕ, ಯುರೋಪು ದೇಶಗಳನ್ನು ಸುತ್ತಿ ರಾಜತಾಂತ್ರಿಕ ಬೆಂಬಲ ಪಡೆಯಲು ಪ್ರಯತ್ನಿಸಿದಿರಿ. ಯುದ್ಧ ಗೆದ್ದಾಗ. ಪಾಕಿಸ್ತಾನ ಹೋಳಾಗಿತ್ತು. ವಾಜಪೇಯಿ ‘Indira not only changed history but geography as well’ ಎಂದಿದ್ದರು.

ಯುದ್ಧ ಗೆದ್ದದ್ದೇನೋ ಖರೆ, ಆದರೆ ನಿಮ್ಮ ಮುಂದೆ ಸವಾಲುಗಳು ಸರತಿಯಲ್ಲಿ ನಿಂತಿದ್ದವು. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

ಜಿಗಿದಿದ್ದವು. ‘ನವ ನಿರ್ಮಾಣ ಆಂದೋಲನ’ ಗುಜರಾತಿನಾದ್ಯಂತ ಹಬ್ಬಿತ್ತು. ಮೊರಾರ್ಜಿ ದೇಸಾಯಿ ಗುಜರಾತ್ ವಿಧಾನಸಭೆ ವಿಸರ್ಜನೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಕುಳಿತರು. ಅತ್ತ ಬಿಹಾರದಲ್ಲಿ ಹಬ್ಬಿದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಜಯಪ್ರಕಾಶ ನಾರಾಯಣ್ (ಜೆ.ಪಿ) ಬೆಂಬಲ ವ್ಯಕ್ತಪಡಿಸಿ ‘ಸಂಪೂರ್ಣ ಕ್ರಾಂತಿ’ಗೆ ಕರೆಕೊಟ್ಟರು. ಇತ್ತ ಮುಂಬೈಯಲ್ಲಿ ರೈಲ್ವೆ ಕಾರ್ಮಿಕರ ಬೃಹತ್ ಚಳವಳಿ ಆರಂಭವಾಗಿತ್ತು. ಅದರ ನೇತೃತ್ವವನ್ನು ಜಾರ್ಜ್ ಫರ್ನಾಂಡಿಸ್ ವಹಿಸಿದ್ದರು. ಜೆ.ಪಿ, ಜಾರ್ಜ್, ಮೊರಾರ್ಜಿ ಅವರಂತಹ ಘಟಾನುಘಟಿಗಳನ್ನು ಏಕಕಾಲಕ್ಕೆ ಸಂಭಾಳಿಸುವುದು ಸುಲಭವಿರಲಿಲ್ಲ. ಇದೇ ವೇಳೆಗಲ್ಲವೇ ಲೋಕಬಂಧು ರಾಜ್ ನಾರಾಯಣ್ ನಿಮ್ಮ ವಿರುದ್ಧ ಹೂಡಿದ್ದ ಅಧಿಕಾರ ದುರುಪಯೋಗ ಪ್ರಕರಣದ ತೀರ್ಪು ಬಂದದ್ದು. ಅಲಹಾಬಾದ್ ಹೈಕೋರ್ಟ್‌ ಆಗ ನಿಮ್ಮ ಲೋಕಸಭಾ ಸದಸ್ಯತ್ವವನ್ನು ಅಸಿಂಧುಗೊಳಿಸಿ, ಆರು ವರ್ಷಗಳ ಕಾಲ ಚುನಾವಣಾ ಸ್ಪರ್ಧೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿತು.

ಸಂಜಯ್ ಗಾಂಧಿ, ‘ನನ್ನ ತಾಯಿ ಒಂದೇ ಒಂದು ದಿನದ ಮಟ್ಟಿಗೂ ಅಧಿಕಾರದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ’ ಎಂದರು. ತಮ್ಮ ಆತುರ ಮತ್ತು ಅವಿವೇಕದ ನಡೆಗಳಿಂದ ಸಮಸ್ಯೆಗೆ ಸಿಲುಕಿದ್ದ ಸಂಜಯ್ ಗಾಂಧಿಯವರಿಗೆ, ನೀವು ಪ್ರಧಾನಿ ಪಟ್ಟದಲ್ಲಿ ಇರಲೇಬೇಕಾದ ಅವಶ್ಯಕತೆಯಿತ್ತು. ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ನಿದ್ದೆಗಣ್ಣಿನಲ್ಲಿ

ತುರ್ತುಪರಿಸ್ಥಿತಿಯ ಆದೇಶಕ್ಕೆ ಅಂಕಿತ ಹಾಕಿದರು. ಅಂದಿನಿಂದ ಮುಂದಿನ 21 ತಿಂಗಳ ಕಾಲ ದೇಶ ನಲುಗಿತು.

ತುರ್ತುಪರಿಸ್ಥಿತಿಯ ವೇಳೆ ಸಂಜಯ್ ಕಿಚನ್ ಕ್ಯಾಬಿನೆಟ್ ಹೆಚ್ಚು ಸಕ್ರಿಯವಾಗಿತ್ತು. ಅದರಲ್ಲಿ ಅವರ ಪತ್ನಿ ಮೇನಕಾ, ಅತ್ತೆ (ಮೇನಕಾ ತಾಯಿ) ಇದ್ದರು. ಮೊಹಮದ್ ಯೂನಸ್ ನವೀನ್ ಚಾವ್ಲಾ, ಕಿಶನ್ ಚಂದ್, ಸ್ಲಂ ನಿರ್ಮೂಲನೆಯ ಹೊಣೆಹೊತ್ತ ಜಗಮೋಹನ್, ಕಾವಿಧಾರಿ ಧೀರೇಂದ್ರ ಬ್ರಹ್ಮಚಾರಿ, ಬನ್ಸಿಲಾಲ್, ಅಂಬಿಕಾ ಸೋನಿ, ರುಕ್ಸಾನಾ ಸುಲ್ತಾನ ಕೂಡ ಇದ್ದರು. ಮಗನ ನಿಲುವುಗಳನ್ನು ನೀವು ತುಟಿಕಚ್ಚಿ ಸಹಿಸಿಕೊಂಡಿರಿ. ಜನ ನಿಮ್ಮನ್ನು ಸೋಲಿಸಿದರು. ಆದರೆ ಒಂದು ಅವಧಿಗೆ ದೇಶವನ್ನು ಸಂಭಾಳಿಸಲಾಗದ ವಿಪಕ್ಷಗಳ ಅವಾಂತರಗಳನ್ನು ನೋಡಿ ಮಗದೊಮ್ಮೆ ನಿಮ್ಮನ್ನೇ ಕುರ್ಚಿಯಲ್ಲಿ ಕುಳ್ಳಿರಿಸಿದರು.

ದೇಶ ವಿಭಜನೆಯ ಬಳಿಕ ಭಾರತವನ್ನು ಮುರಿಯಲು ಪಾಕಿಸ್ತಾನ ಮೂರ್ನಾಲ್ಕು ಮಾರ್ಗಗಳಿಂದ ಪ್ರಯತ್ನಿಸಿತ್ತು. ಕಾಶ್ಮೀರದಲ್ಲಿ ಅಶಾಂತಿ ಚಿರಾಯುವಾಗುವಂತೆ ನೋಡಿಕೊಳ್ಳುವುದು ಒಂದು ಉದ್ದೇಶವಾದರೆ, ನಾಗಾಲ್ಯಾಂಡಿನಲ್ಲಿ ನಾಗಾಗಳಲ್ಲಿ ಪ್ರತ್ಯೇಕತಾ ಬೀಜ ಬಿತ್ತುವುದು, ಮಿಜೋರಾಂನಲ್ಲಿ ಮಿಜೋ ಪ್ರತ್ಯೇಕತಾ ಆಂದೋಲನವನ್ನು ಪೋಷಿಸುವ ಕೆಲಸವನ್ನು ಪಾಕಿಸ್ತಾನ ಮಾಡಿತ್ತು. ನಾಗಾಲ್ಯಾಂಡ್, ತ್ರಿಪುರ ಅಥವಾ ಕಾಶ್ಮೀರದ ಪ್ರತ್ಯೇಕತಾವಾದವನ್ನು ಸಂಭಾಳಿಸುವುದು ಭಾರತಕ್ಕೆ ಸವಾಲು ಎನಿಸಲಿಲ್ಲ. ಆದರೆ ಪಂಜಾಬಿನಲ್ಲಿ ಬೆಳೆದ ಪ್ರತ್ಯೇಕ ಖಲಿಸ್ತಾನದ ಹೋರಾಟ ರಾಷ್ಟ್ರಿಯ ಏಕತೆಗೆ ಭಂಗತರುವ ಪ್ರಯತ್ನವಾಗಿತ್ತು. ಮೊದಲಿಗೆ ಸಿಖ್ ಪ್ರತ್ಯೇಕತಾವಾದವನ್ನು ಪೋಷಿಸಿದ್ದು ನಿಮ್ಮ ಪಕ್ಷದ ಕೆಲವು ಮುಖಂಡರೇ. ಹಾಗಾಗಿ ಅದೊಂದು ಸ್ವಯಂಕೃತ ಅಪರಾಧವಾಗಿತ್ತು.

ಆದರೆ ಖಲಿಸ್ತಾನದ ಹೋರಾಟ ಚಿಗುರಿ ಬೆಳೆಯತೊಡಗಿದಂತೆ ಅದನ್ನು ಬಾಹ್ಯ ಶಕ್ತಿಗಳು ಉಪಯೋಗಿಸಿಕೊಂಡವು. ಭಾರತದ ಗೂಢಚರ ಸಂಸ್ಥೆ ‘ರಾ’ದಲ್ಲಿ ಕೆಲಸ ನಿರ್ವಹಿಸಿದ್ದ ಬಿ.ರಮಣ್ ತಮ್ಮ ಪುಸ್ತಕ ‘The Cowboys of R&AW’ ಕೃತಿಯಲ್ಲಿ, ಖಲಿಸ್ತಾನ ಹೋರಾಟವನ್ನು ಬೆಳೆಸುವಲ್ಲಿ ಅಮೆರಿಕ-ಪಾಕಿಸ್ತಾನ-ಬ್ರಿಟನ್ ಕೈ ಜೋಡಿಸಿದ್ದವು ಎಂಬ ಸಂಗತಿಯನ್ನು ವಿವರಿಸಿದ್ದಾರೆ. ಆದರೆ ಆ ಕಾರ್ಯತಂತ್ರವನ್ನು ವಿಫಲಗೊಳಿಸುವಲ್ಲಿ ನೀವು ಯಶಸ್ವಿಯಾದಿರಿ. ಸ್ವರ್ಣ ಮಂದಿರ ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರವಾದ್ದರಿಂದ ಅದನ್ನು ಸೇನೆ ಸುತ್ತುವರಿದು, ಕಾರ್ಯಾಚರಣೆ ನಡೆಸಬಹುದು ಎಂದು ಊಹಿಸುವುದು ಅಸಾಧ್ಯವಾಗಿತ್ತು. ನಿಮ್ಮ ಹೊರತು ಅಂತಹ ನಿರ್ಣಯವನ್ನು ಬೇರಾರೂ ತೆಗೆದುಕೊಳ್ಳಲಿಕ್ಕೆ ಸಾಧ್ಯವಿರಲಿಲ್ಲವೇನೋ! ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಪ್ರಶ್ನೆ ಎದುರಾದಾಗ ನೈತಿಕವಾಗಿ ಪೆಡಸು ನಿರ್ಧಾರ ತಳೆಯಬೇಕಾಗುತ್ತದೆ ಎಂಬುದನ್ನು ನೀವು ತೋರಿಸಿದಿರಿ. ಆ ನಿರ್ಣಯ ನಿಮ್ಮ ಪ್ರಾಣಕ್ಕೇ ಕಂಟಕವಾಯಿತು.

ಅಬ್ಬಾ! ನಿಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಸವಾಲು, ಸಂದಿಗ್ಧ, ಗೆಲುವು, ವಿಷಾದ. ಲೋಹಿಯಾ ನಿಮ್ಮನ್ನು ಮೂಕಗೊಂಬೆ ಎಂದು ಕರೆದರು. ದುರ್ಗೆ ಎನ್ನಿಸಿಕೊಳ್ಳುವ ಕೆಲಸವನ್ನು ಮಾಡಿದಿರಿ. ಇಂದುವಿನಿಂದ ಇಂದಿರಾ ಗಾಂಧಿಯಾಗಿ, ‘ಇಂದಿರಾ ಈಸ್ ಇಂಡಿಯಾ’ ಎನ್ನುವಷ್ಟರ ಮಟ್ಟಿಗೆ ಬೆಳೆದದ್ದು ಅಸಾಧಾರಣವೇ. ಪಿ.ಎನ್. ಹಕ್ಸರ್, ಎಚ್.ವೈ.

ಶಾರದಾಪ್ರಸಾದ್ ಅಂಥವರು ನಿಮ್ಮ ಸುತ್ತಲಿದ್ದಷ್ಟು ದಿನ ನೀವು ಹತ್ತಿದ್ದೆಲ್ಲವೂ ಏಣಿಯೇ ಆಗಿತ್ತು. ಬದಲಾದ ವರ್ತುಲವು ಪತನಕ್ಕೆ ಕಾರಣವಾಯಿತು. ಇಂದಿನ ರಾಜಕಾರಣಿಗಳಿಗೆ ಅದು ಪಾಠ. ಇತ್ತೀಚಿನ ‘ಸರ್ಜಿಕಲ್ ಸ್ಟ್ರೈಕ್’ ಬಗ್ಗೆ ಎದೆಯುಬ್ಬಿಸಿ ಮಾತನಾಡುವುದನ್ನು ಕಂಡಾಗ, ನೀವು ಪಾಕಿಸ್ತಾನಕ್ಕೇ ಸರ್ಜರಿ ಮಾಡಿ, ಅಣ್ವಸ್ತ್ರವನ್ನು ಬತ್ತಳಿಕೆಗೆ ತುಂಬಿ, ಖಲಿಸ್ತಾನದ ಕನಸಿಗೆ ಭಂಗ ತಂದು ಮಾಡಿದ ಸಾಹಸ ಎಷ್ಟು ದೊಡ್ಡದಲ್ಲವೇ ಎನಿಸುತ್ತದೆ. ಇನ್ನು ನಿಮ್ಮ ಪಕ್ಷದ ವಿಷಯ ಬಿಡಿ, ತೀರಿಕೊಂಡು 33 ವರ್ಷವಾದರೂ ನಿಮ್ಮ ಹೆಸರೇ ಇಂದಿಗೂ ಕಾಂಗ್ರೆಸ್ಸಿಗೆ ಪ್ರಾಣವಾಯು. ಯಾವುದೇ ನಾಯಕರ ವರ್ಚಸ್ಸು, ಸಾಧನೆ ಮಸುಕಾದಾಗ, ಚುನಾವಣೆ ಸಮೀಪಿಸಿದಾಗ ಜಾಹೀರಾತು ಫಲಕಗಳಲ್ಲಿ ನೀವೇ ಕಾಣುತ್ತೀರಿ. ಬೀದಿ, ಬಂದರು, ಉದ್ಯಾನ, ಕೊನೆಗೆ ಕ್ಯಾಂಟೀನಿಗೂ ನಿಮ್ಮದೇ ಹೆಸರು. ಇಂದಿರಮ್ಮ, ತಂದೆ ಬರೆದ ಪತ್ರಗಳನ್ನು ಓದುತ್ತಲೇ ಬೆಳೆದವರು ನೀವು. ಜನ್ಮಶತಾಬ್ದಿಯ ನೆಪದಲ್ಲಿ ಪತ್ರದ ಮೂಲಕವೇ ಪ್ರಣಾಮ ಸಲ್ಲಿಸಿದರೆ ಚೆನ್ನಲ್ಲವೇ ಎನಿಸಿ ಇಷ್ಟು ಬರೆಯಬೇಕಾಯಿತು. ಅಂದಹಾಗೆ ಸ್ವರ್ಗದಲ್ಲೆಲ್ಲರೂ ಸೌಖ್ಯವೇ? ಮೊರಾರ್ಜಿ, ಜೆ.ಪಿ, ಕಾಮರಾಜ್ ಖುಷಿಯಿಂದಿದ್ದಾರಾ?

ವಂದನೆಗಳು

ಸುಧೀಂದ್ರ ಬುಧ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry